ನ್ಯೂ ಜೆರ್ಸಿ, ಅಮೆರಿಕಾ: ಇತ್ತೀಚೆಗೆ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪುರ ಪ್ರವೇಶ ಮತ್ತು ಪೌರ ಸನ್ಮಾನ ಇಲ್ಲಿನ ಎಡಿಸನ್ ಶ್ರೀ ಕೃಷ್ಣ ವೃಂದಾವನದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಶ್ರೀ ಸುಗುಣೇಂದ್ರ ತೀರ್ಥರಿಗೆ ತಮ್ಮ ಎರಡು ವರ್ಷ ಪರ್ಯಾಯಾವಧಿಯನ್ನು ಪೂರೈಸಿದ ಬಳಿಕದ ಮೊದಲ ಅಮೆರಿಕಾ ಭೇಟಿ ಇದಾಗಿದೆ. ಇಲ್ಲಿಗೂ ಮುನ್ನ ಶ್ರೀಗಳು ಲಂಡನ್ ಹಾಗೂ ಕೆನಡಾದ ಟೊರಂಟೋದಲ್ಲಿರುವ ತಮ್ಮ ಮಠಗಳಿಗೆ ಭೇಟಿಯಿತ್ತರು.
ಅಧಿಕ ಮಾಸದ ಪರ್ವ ಕಾಲದಲ್ಲಿ ಅಮೆರಿಕಾದ ಪೂರ್ವ ಕರಾವಳಿಯ ಭಕ್ತರು ಶ್ರೀಗಳ ಭೇಟಿಯನ್ನು ತೀವ್ರ ಕಾತರದಿಂದ ಎದುರು ನೋಡುತ್ತಿದುದಕ್ಕೆ ಶ್ರೀಗಳ ಭೇಟಿ ಭಕ್ತರ ಸಂತಸವನ್ನು ಇಮ್ಮಡಿಗೊಳಿಸಿದುದಕ್ಕೆ ನೆರೆದಿದ್ದ ಸುಮಾರು ಐದುನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಭಕ್ತರೇ ಸಾಕ್ಷಿ.
ಯತಿಕುಲ ಚಕ್ರವರ್ತಿ ಎಂದು ನಾಮಾಂಕಿತಗೊಂಡ ಶ್ರೀಗಳಿಗೆ ಎಡಿಸನ್ ನಗರದ ಹೃದಯ ಭಾಗದಲ್ಲಿರುವ ರಸ್ತೆಗಳಲ್ಲಿ ಕುದುರೆ ಸಾರೋಟು, ಪೂರ್ಣ ಕುಂಭ, ಸ್ಯಾಕ್ಸೋಫೋನ್, ಕೊಳಲು, ಡೋಲಕ, ಕೋಲಾಟ ನೃತ್ಯ ಮತ್ತು ವೇದ ಘೋಷದೊಂದಿಗೆ ಶ್ರೀ ಕೃಷ್ಣ ವೃಂದಾವನದ ಆವರಣಕ್ಕೆ ಕರೆದುಕೊಂಡು ಬಂದಿತು. ಶಿಲಾರೂಪಿ ಶ್ರೀ ಕೃಷ್ಣನನ್ನು ದರ್ಶನ ಮಾಡಿ ಕೃಷ್ಣನಿಗೆ ಆರತಿ ಬೆಳಗಿದ ಬಳಿಕ ಶ್ರೀಗಳನ್ನು ಪ್ರಸನ್ನಾಚಾರ್ಯರು ಮತ್ತು ಯೋಗೀಂದ್ರ ಭಟ್ಟರು ಕೈಹಿಡಿದು ಆನಂದತೀರ್ಥ ಮಂಟಪದಲ್ಲಿರುವ ವೇದಿಕೆಗೆ ಕರೆದೊಯ್ದು ಸಿಂಹಾಸನದಲ್ಲಿ ಕುಳ್ಳಿರಿಸಿದರು.
ನ್ಯೂ ಜೆರ್ಸಿಯ ಮೊಂಟುಗೊಮೆರಿ ಪಟ್ಟಣದ ಮೇಯರ್ ನೀನಾ ಸಿಂಗ್ ಮತ್ತು ಪತಿ ಪರಂಜಿತ್ ಸಿಂಗ್ ವಿಶೇಷ ಅತಿಥಿಗಳಾಗಿಸಿದ್ದರು. ಡಾ ಸುಧೀಂದ್ರ, ಪೂರ್ಣಿಮಾ, ಉದ್ಯಮಿ ಸುರೇಶ ವಸಿಷ್ಠ, ಮೀನಾ ವಸಿಷ್ಠ, ಚೇತನ್ ಭರ್ಗಿರಿ ಶ್ರೀಗಳಿಗೆ ಸನ್ಮಾನ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಂದ ವೇದಘೋಷ ಮತ್ತು ಮಠದ ಯುವತಂಡದ ಸದಸ್ಯರಿಂದ ಉಡುಪಿಯ ಕಂಡೀರಾ ಕೃತಿಯ ಅಕಪೆಲ್ಲ ಶೈಲಿಯ ಪ್ರಸ್ತುತಿನಡೆಯಿತು.
ಶ್ರೀವತ್ಸ ಬಲ್ಲಾಳ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಯೋಗೀಂದ್ರ ಭಟ್ ಸ್ವಾಗತಿಸಿದರು. ನಮಹೇಶ್ ಹಾವೂರ್ ಶ್ರೀಗಳ ಪೌರ ಸನ್ಮಾನದ ಪ್ರಸ್ತಾವನೆಯನ್ನು ಮುಂದಿಟ್ಟು, ಶ್ರೀಗಳ ಸಾಧನೆಯನ್ನು ಕೊಂಡಾಡಿದರು. ಶ್ರೀಮಠದ ಶಿಷ್ಯರೂ ಮಹಾದಾನಿಗಳೂ ಆದ ಚೇತನ್ ಭರ್ಗಿರಿ ಅವರು ಯಜ್ಞಶಾಲೆಯ ಪ್ರಗತಿ ಪತ್ರ ಮಂಡಿಸಿ ಇಲ್ಲಿಯವರೆಗೂ ನಡೆದ ಮತ್ತು ಮುಂದೆ ನಡೆಯಬೇಕಾದ ಕೆಲಸದ ಬಗ್ಗೆ ಚಿತ್ರ ಸಹಿತ ವರದಿಯನ್ನು ಸಲ್ಲಿಸಿದರು. ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ವಂದನಾರ್ಪಣೆಗೈದರು.
ತನ್ನ ಚತುರ್ಥ ಪರ್ಯಾವಧಿಯಲ್ಲಿ ಪಡೆದ, ಕ್ರೋಡೀಕರಿಸಿದ ಪುಣ್ಯವನ್ನೆಲ್ಲ ಇದೀಗ ಜಗತ್ತಿನ್ನೆಲ್ಲೆಡೆ ಇರುವ ಕೃಷ್ಣ ಭಕ್ತರಿಗೆ ಹಂಚಲು ಬಂದಿದ್ದೇನೆ, ಭಕ್ತಿಯನ್ನು ಇತ್ತು ಭಕ್ತಿಯನ್ನು ಪಡೆಯಿರಿ ಎನ್ನುವ ವಿಶೇಷ ಸಂದೇಶವನ್ನು ಕೂಡ ಶ್ರೀಗಳು ನೀಡಿದರು. ಗೀತೆಯ ಮಹತ್ವವನ್ನು ಮನದಟ್ಟುಗೊಳಿಸುತ್ತಾ ಶ್ರೀಗಳು ತಮ್ಮ ಕೋಟಿ ಗೀತಾ ಲೇಖನ ಯಜ್ಞವನ್ನು ತಮ್ಮ ಪಂಚಮ ಪರ್ಯಾಯಾವಧಿಯವರೆಗೂ ಮುಂದುವರಿಸುವುದಾಗಿ ತಿಳಿಸಿ, ಹೇಗೆ ಹಲವಾರು ಭಕ್ತರು ಗೀತಾ ಲೇಖನದಿಂದ ತಮ್ಮ ಜೀವನದ ಪಥವನ್ನೇ ಬದಲಿಸಿಕೊಂಡಿರುವುದಾಗಿ ಉದಾಹರಿಸಿ ನೆರೆದಿದ್ದ ಭಕ್ತರನ್ನೆಲ್ಲ ಭಕ್ತಿಯ ಕಡಲಲ್ಲಿ ಮಿಂದೇಳುವಂತೆ ಮಾಡಿದರು.
- ಪೂಜ್ಯ ಪುತ್ತಿಗೆ ಶ್ರೀ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


