ಶಿಕ್ಷಣ ಬದುಕನ್ನು ರೂಪಿಸುವ ಮಾಧ್ಯಮ: ಡಾ.ನರಸಿಂಹ ಮೂರ್ತಿ
ಪುತ್ತೂರು: ಶಿಕ್ಷಣ ನಮ್ಮ ಬದುಕನ್ನು ರೂಪಿಸುವ ಮಾಧ್ಯಮವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತನ್ನದೇ ಆದ ಕಲಿಕೆಯ ಸಾಮರ್ಥ್ಯ ಇದೆ. ಹುಟ್ಟುತ್ತಾ ಮಕ್ಕಳಾಗಿ, ಬೆಳೆಯುತ್ತಾ ಈ ದೇಶದ ಪ್ರಜೆಗಳಾಗಿ ರೂಪುಗೊಳ್ಳುವಲ್ಲಿ ಕಲಿಕೆಯ ಪಾತ್ರ ದೊಡ್ಡದು. ವಿದ್ಯಾರ್ಥಿಗಳು ಈ ದೇಶದ ನಿಜವಾದ ಶಕ್ತಿ ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಭಾರತೀಯ ವಿದೇಶಾಂಗ ವ್ಯವಹಾರಗಳ ವಿಭಾಗದ ಪ್ರಾಧ್ಯಾಪಕ ಡಾ. ನರಸಿಂಹ ಮೂರ್ತಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಪ್ರವರ್ತಿತ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರೇರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೋಮವಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪಿಯುಸಿ ಎಂಬುದು ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಸಮಯ. ಈ ಹಂತದಲ್ಲಿ ಸರಿಯಾದ ಮಾರ್ಗದರ್ಶನ ಸಿಗಬೇಕು. ಕಲಿಯಬೇಕು, ಒಳ್ಳೆಯ ಸ್ಥಾನವನ್ನು ಗಳಿಸಬೇಕು ಎಂಬ ಗುರಿ ಇರಿಸಿಕೊಂಡವನಿಗೆ ಸಾಧನೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದದೆ ತಮ್ಮ ಜೀವನಕ್ಕಾಗಿ ಓದಬೇಕು. ಒಳ್ಳೆಯ ಆಲೋಚನೆ ವಿಭಿನ್ನ ಚಿಂತನೆಗಳ ಮೂಲಕ ಕಲಿಯಲು ಮುಂದಾದಾಗ ಬದುಕು ಸಾರ್ಥಕವಾಗುತ್ತದೆ. ಉತ್ತಮವಾದ ಕನಸನ್ನು ಕಾಣುತ್ತಾ ಆ ಕನಸನ್ನು ನನಸು ಮಾಡುವಲ್ಲಿ ಸತತವಾಗಿ ಪ್ರಯತ್ನ ಮಾಡಿದರೆ ಯಶಸ್ಸನ್ನು ಪಡೆಯಲು ಸಾಧ್ಯ ಎಂದರು.
ಇನ್ನೊರ್ವ ಮುಖ್ಯ ಅತಿಥಿ ಬೆಂಗಳೂರಿನ ವೇದಾಂಶ್ ಅಕಾಡೆಮಿಯ ಸ್ಥಾಪಕರಾದ ನವೀನ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಮಾಹಿತಿ ನೀಡಿ ಪಿಯುಸಿ ಹಂತ ಮುಗಿದ ನಂತರ ವಿದ್ಯಾರ್ಥಿಗಳಿಗೆ ವಿಪುಲವಾದ ಅವಕಾಶಗಳಿವೆ. ಜೆಇಇ, ನೀಟ್, ಕೆ ಸೆಟ್, ನಾಟ, ಎನ್‌ಡಿಎ, ಕೃಷಿ ಕ್ಷೇತ್ರ, ವೈದ್ಯಕೀಯ ಕ್ಷೇತ್ರ ಅಲ್ಲದೆ ಇನ್ನೂ ಅನೇಕ ರೀತಿಯಲ್ಲಿ ಜೀವನವನ್ನು ನಡೆಸಲು ಅನುಕೂಲವಾಗುವ ಕೋರ್ಸ್ಗಳು ಇವೆ. ಆದರೆ ನಮ್ಮಲ್ಲಿ ಮಾಹಿತಿಯ ಕೊರತೆಯನ್ನು ಕಾಣುತ್ತಿದ್ದೇವೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ವೃತ್ತಿ ಪರ ಕೋರ್ಸ್ಗಳಿದ್ದು ಉದ್ಯೋಗವನ್ನು ಪಡೆಯುವಲ್ಲಿ ಸಹಕಾರಿಯಾಗಿವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಬೆಂಗಳೂರು ದೃಶ್ಯ ಕಾವ್ಯ ಅಕಾಡೆಮಿಯ ಭರತ್, ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕ ವಿಷ್ಣು ಪ್ರದೀಪ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


