ಪುತ್ತೂರು: ವಿದ್ಯಾರ್ಥಿಗಳಲ್ಲಿ ಜ್ಞಾನ, ಸಂಸ್ಕಾರ ಮತ್ತು ಏಕಾಗ್ರತೆಯನ್ನು ವೃದ್ಧಿಸುವ ಉದ್ದೇಶದಿಂದ ಹೊಸ ಶೈಕ್ಷಣಿಕ ವರ್ಷದ ಆರಂಭದ ಪ್ರಯುಕ್ತ ಪುತ್ತೂರಿನಲ್ಲಿ ಜೂನ್ 7ರಂದು ಬೃಹತ್ “ಸಾಮೂಹಿಕ ಸರಸ್ವತೀ ವಂದನೆ” ಮತ್ತು “ವಿದ್ಯಾ ಸಂಕಲ್ಪ” ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬೆಳಗ್ಗೆ 9:00 ರಿಂದ 11:00 ರ ವರೆಗೆ ಹಮ್ಮಿಕೊಳ್ಳಲಾಗಿದೆ.
ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ (ಪುತ್ತೂರು ತಾಲೂಕು ಮತ್ತು ಗ್ರಾಮಾಂತರ) ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರ ಜಂಟಿ ಆಯೋಜನೆ ಹಾಗೂ ಪುತ್ತೂರಿನ ವಿವಿಧ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಕೇಂದ್ರಗಳ ಸಹಯೋಗದೊಂದಿಗೆ ಈ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೊಂಡಿದೆ.
ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ದೇವಳದ ವೈದಿಕರ ನೇತೃತ್ವದಲ್ಲಿ ವಿಶೇಷ 'ಸರಸ್ವತೀ ಸೂಕ್ತ ಹವನ' ಜರುಗಲಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದಲೇ 'ವಿದ್ಯಾ ಸಂಕಲ್ಪ' ಹಾಗೂ ತಾವು ತಂದ ಪುಸ್ತಕಗಳಿಗೆ ಮಕ್ಕಳಿಂದಲೇ 'ಪುಷ್ಪಾರ್ಚನೆ' (ಪುಸ್ತಕ ಪೂಜೆ) ನೆರವೇರಲಿದೆ. ನಿತ್ಯ ಕರಸೇವಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲಿದ್ದಾರೆ.
ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ:
ಶಿಶು ಮಂದಿರದ ಮಕ್ಕಳಿಂದ ಹಿಡಿದು ಸ್ನಾತಕೋತ್ತರ ಪದವಿ (PG) ವರೆಗಿನ ಎಲ್ಲಾ ಸಾರ್ವಜನಿಕ ವಿದ್ಯಾರ್ಥಿಗಳು ಈ ಜ್ಞಾನ ದಾಸೋಹದಲ್ಲಿ ಭಾಗವಹಿಸಬಹುದಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಮಕ್ಕಳು ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಗೆಯಲ್ಲೇ ಬರಬೇಕು. ತಮ್ಮೊಂದಿಗೆ ಒಂದು ಶಾಲಾ ಪಠ್ಯಪುಸ್ತಕ ಅಥವಾ ಸುಜ್ಞಾನ ದೀಪಿಕೆ ಪುಸ್ತಕವನ್ನು ತರಬೇಕು. ಪೂಜೆಗಾಗಿ ಮನೆಯಲ್ಲೇ ಬೆಳೆದ ಒಂದು ಬೊಗಸೆ ಹೂವನ್ನು ತರಲು ಕೋರಲಾಗಿದೆ.
ತಾಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಜ್ಞಾನದೇವತೆಯ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿ ಪ್ರಕಟಣೆಯಲ್ಲಿ ವಿನಂತಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


