ಬೆಂಗಳೂರು: ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭವು ಭಕ್ತಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ ವಾತಾವರಣದಲ್ಲಿ ಬೆಂಗಳೂರಿನ ಬಸವನಗುಡಿಯ ಗೋವರ್ಧನಗಿರಿ ಉಡುಪಿ ಶ್ರೀ ಪುತ್ತಿಗೆ ಮಠದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಸುರೇಶ ಭೀ ಪಾಟೀಲ ಅವರು ಮಹಿಳಾ ಹರಿದಾಸ ಸಾಹಿತ್ಯದ ಬೆಳವಣಿಗೆಗೆ ಇಂತಹ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು. ಮಹಿಳೆಯರ ಭಕ್ತಿ, ಜ್ಞಾನ ಮತ್ತು ಸಾಮಾಜಿಕ ಕೊಡುಗೆಯನ್ನು ವಿಶೇಷವಾಗಿ ಉಲ್ಲೇಖಿಸಿದ ಅವರು, ಮಹಿಳಾ ದಾಸ ಸಾಹಿತ್ಯದ ಪ್ರೋತ್ಸಾಹ ಹಾಗೂ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ಈ ಸಂದರ್ಭದಲ್ಲಿ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಅವರ ‘ಸಾಧನ’ ಹಾಗೂ ಡಾ. ಸುಧಾ ನರಸಿಂಗರಾವ್ ದೇಶಪಾಂಡೆ ಅವರ ‘ಭಾಗವತಮೃತ ಸುಳಾದಿಗಳು’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಕೃತಿಗಳ ವೈಶಿಷ್ಟ್ಯವನ್ನು ಡಾ. ಶೈಲಜಾ ಕೊಪ್ಪರ ಪರಿಚಯಿಸಿದರು.
ವಿದುಷಿ ಮೃದುಲ ವಿಜಯೀಂದ್ರ ಅವರು ಜ್ಞಾನ, ಭಕ್ತಿ ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯಗಳ ಕುರಿತು ಉಪನ್ಯಾಸ ನೀಡಿ, ಇಂದಿನ ಸಮಾಜದಲ್ಲಿ ಮೌಲ್ಯ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಿದರು. ಶ್ರೀ ಮುಕುಂದ ಗಂಗೂರ ಅವರು ಟ್ರಸ್ಟ್‌ಗಾಗಿ ರಚಿಸಿದ ವಿಶೇಷ ಕೃತಿಯನ್ನು ಪ್ರಸ್ತುತಪಡಿಸಿ ಶುಭ ಹಾರೈಸಿದರು.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ. ವೃಂದಾ ಸಂಗಮ್ ಅವರು ಪ್ರಾಸ್ತಾವಿಕ ನುಡಿಗಳಲ್ಲಿ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಟ್ರಸ್ಟ್ ವತಿಯಿಂದ ಆರುಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲಾಗಿದ್ದು, 80ಕ್ಕೂ ಹೆಚ್ಚು ಸದಸ್ಯರು ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು. ಮಹಿಳಾ ಹರಿದಾಸ ಸಾಹಿತ್ಯದ ಸಂರಕ್ಷಣೆ, ಪ್ರಚಾರ ಹಾಗೂ ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ತಲುಪಿಸುವ ಸಂಕಲ್ಪದೊಂದಿಗೆ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸುಧಾ ದೇಶಪಾಂಡೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗೀತಾ ಜೋಶಿ, ರೇಖಾ ಮುತಾಲಿಕ್, ಮಾನಸ ಕುಲಕರ್ಣಿ, ಸರಸ್ವತಿ ರಾಘವೇಂದ್ರ ಕುಲಕರ್ಣಿ, ವೀಣಾ ವಾದಿರಾಜ ಬರಗಿ, ಅಖಿಲಾ ವಿಜಯ ಕುರಂದವಾಡ, ಪ್ರಿಯಾ ಪ್ರಾಣೇಶ ಹರಿದಾಸ, ಡಾ. ರೇಖಾ ಕಾಖಂಡಕಿ, ಡಾ. ಶೈಲಜಾ ಕೊಪ್ಪರ, ಡಾ. ಜಯಲಕ್ಷ್ಮಿ ಮಂಗಳಮೂರ್ತಿ, ಡಾ. ವನಜಾ ಉಪೇಂದ್ರ ನರಸಾಪುರ, ಡಾ. ಶೀಲಾ ದಾಸ್ ಹಾಗೂ ನಿರ್ಮಲ ಗುರುರಾಜ ದೇಶಪಾಂಡೆ ಸೇರಿದಂತೆ ಹಲವಾರು ಸಾಧಕಿಯರನ್ನು “ಮೈತ್ರೇಯಿ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು.
ಮಧ್ಯಾಹ್ನ ನಡೆದ ಗೋಷ್ಠಿಯಲ್ಲಿ ಡಾ. ಶಾಂತಾ ರಘೋತ್ತಮಾಚಾರ್ ಅಧ್ಯಕ್ಷತೆ ವಹಿಸಿದ್ದು, ನೀತಾ ಕುಲಕರ್ಣಿ, ಭಾರ್ಗವಿ ಗೋಪಾಲಾಚಾರ್ ಹಾಗೂ ನಿರುಪಮಾ ದೇಸಾಯಿ ಅವರು ಪ್ರಬಂಧಗಳನ್ನು ಮಂಡಿಸಿದರು. ವಿದ್ಯಾಶ್ರೀ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
ಸುರೇಖಾ ಕುಲಕರ್ಣಿ ಅವರ ನಿರ್ದೇಶನದ “ಮಹಾನ್ ಚೇತನ ಮೈತ್ರೇಯಿ” ರೂಪಕ ಹಾಗೂ ದಾಸವಾಣಿ ಕರ್ನಾಟಕ ತಂಡದ ಗೋಷ್ಠಿಗಾಯನ ಕಾರ್ಯಕ್ರಮಗಳು ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು. ಮಹಿಳಾ ಹರಿದಾಸ ಸಾಹಿತ್ಯದ ಪ್ರಚಾರ-ಪ್ರಸಾರ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಸಂವರ್ಧನೆಗೆ ಬದ್ಧತೆಯನ್ನು ಪುನರುಚ್ಚರಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.


