ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನೂರಾರು ಹೊಸ ಪ್ರತಿಭೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದೆ : ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್
ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕಳೆದ ಏಳೆಂಟು ವರ್ಷಗಳಿಂದ ನೂರಾರು ಉದಯೋನ್ಮುಖ ಪ್ರತಿಭೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.
ಅವರು ಹಾಸನ ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಚಿಕ್ಕಕೊಂಡಗುಳದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಎಚ್.ಎಸ್. ಭಾನುಮತಿ ನಿವಾಸದಲ್ಲಿ ಜನನಿ ಫೌಂಡೇಷನ್ ಪ್ರಾಯೋಜಕತ್ವದಲ್ಲಿ ನಡೆದ ೪೧ ನೇ ಮಾಸಿಕ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಾಸು ಸಮುದ್ರವಳ್ಳಿ ಒಬ್ಬ ಉತ್ತಮ ಬರಹಗಾರ ಹಾಗೆಯೇ ಒಳ್ಳೆಯ ಸಂಘಟಕ. ಹಾಸನ ಜಿಲ್ಲೆಯಲ್ಲಿ ವಾಸುರವರ ನೇತೃತ್ವದಲ್ಲಿ ವೇದಿಕೆ ವಿಭಿನ್ನವಾದ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನಮಾನಸವಾಗಿದೆ. ಕೇಂದ್ರ ಸಮಿತಿಯ ಟ್ರಸ್ಟಿಗಳಾದ ನಾಗರಾಜ ದೊಡ್ಡಮನಿ, ಎಚ್.ಎಸ್.ಬಸವರಾಜು, ದೇಸು ಆಲೂರು, ದಿವಾಕರ ನಾರಾಯಣರವರ ಸಹಕಾರದಲ್ಲಿ ಜಿಲ್ಲೆ ಹಾಗೂ ರಾಜ್ಯಾದ್ಯಂತ ವೇದಿಕೆ ಗುಣಾತ್ಮಕವಾಗಿ ಸಾಗುತ್ತಿದೆ. ಕಾವ್ಯ ರಚನೆ, ಗದ್ಯ ರಚನೆ, ಉಪನ್ಯಾಸ, ವಿಮರ್ಶೆ ಹೀಗೇ ತರಬೇತಿ ರೀತಿಯಲ್ಲಿ ಹೊಸ ಬರಹಗಾರರಿಗೆ ಅವಕಾಶಗಳನ್ನು ಕಲ್ಪಿಸುವುದರ ಮೂಲಕ ಸಾಹಿತ್ಯಿಕವಾಗಿ ತೊಡಗಿಕೊಳ್ಳುವಂತೆ ವೇದಿಕೆ ಮಾಡುತ್ತಿದೆ. ಎಚ್.ಎಸ್. ಭಾನುಮತಿಯವರು ಕೇವಲ ಸಂಘಟಕಿಯಲ್ಲ ಅವರು ಸಮಾಜ ಸೇವೆಯ ಜೊತೆಗೆ ಪರಿಸರ ಕಾಳಜಿ, ಮಹಿಳಾ ಸಬಲೀಕರಣ ಮುಂತಾದ ಚಳವಳಿಗಾರ್ತಿಯಾಗಿ ತೊಡಗಿಸಿಕೊಳ್ಳುವುದರ ಜೊತೆಗೆ ಉತ್ತಮ ಕವಯಿತ್ರಿಯೂ ಹೌದು. ನಮ್ಮ ವೇದಿಕೆ ಜೊತೆ ಪ್ರಾರಂಭದಿಂದಲೂ ಜೊತೆಯಾಗಿದ್ದಾರೆ. ಪ್ರಾರಂಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷರಾದ ಗಂಗೇಶ್ ಬಸವನಹಳ್ಳಿ ಮತ್ತವರ ಕ್ರಿಯಾಶೀಲ ತಂಡ ಅಡಿಪಾಯ ಹಾಕಿಕೊಟ್ಟ ಆನ್ಲೈನ್ ಕಾರ್ಯಕ್ರಮ ವೇದಿಕೆಗೆ ಮಾದರಿಯಾಗಿ ಇಡೀ ರಾಜ್ಯಾದ್ಯಂತ ಪಸರಿಸಲು ಸಹಕಾರಿಯಾಯಿತು. ನಮ್ಮ ಕವಿಗಳು ಇನ್ನೋರ್ವರ ಕವಿತೆಗಳನ್ನು ಆಲಿಸಬೇಕು ಹಾಗೂ ಓದಬೇಕು. ಇತ್ತೀಚಿನ ಕವಿಗಳು ಹೆಚ್ಚಿನ ಅಧ್ಯಯನ ಮಾಡದೇ ಬರೆಯುವುದೆಲ್ಲಾ ಕವಿತೆ ಎನ್ನುವ ಭ್ರಮೆಯಲ್ಲಿಯೇ ಬದುಕುತ್ತಿದ್ದಾರೆ. ಕಾವ್ಯ ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲಬೇಕು. ಸಮುದಾಯದ ತಲ್ಲಣಗಳ ಮೇಲೆ ಬೆಳಕು ಚೆಲ್ಲುವಂತಿರಬೇಕು ಎಂದರು.
ಕವಯಿತ್ರಿ ಚಂದ್ರಕಲಾ ಎಂ. ಆಲೂರು ಅವರು ಪದ್ಮಾವತಿ ವೆಂಕಟೇಶ್ ಅವರ “ಮತ್ತೆ ಚಿಗುರಿದ ಕನಸು” ಕೃತಿ ಕುರಿತು ಮಾತನಾಡಿ ಈ ಕೃತಿಯು ಸುಮಾರು ೩೮ ಕವಿತೆಗಳನ್ನು ಗರ್ಭೀಕರಿಸಿಕೊಂಡಿದೆ. ಇಲ್ಲಿನ ಕವಿತೆಗಳು ರಾಷ್ರಪ್ರೇಮ, ಪ್ರಕೃತಿಪ್ರೇಮ, ಬದುಕಿನ ಒಲವು-ನಲಿವು, ವ್ಯಕ್ತಿ ಚಿತ್ರಣದ ಜೊತೆ ಹೆಣ್ಣಿನ ತಳಮಳವನ್ನು ಭಾವನಾತ್ಮಕವಾಗಿ ಚಿತ್ರಿಸಿದ್ದಾರೆ. ಕವಿತೆಗಳೆಂದರೆ ಕವಿಯ ಭಾವನೆಯ ಚಿತ್ರಣಗಳನ್ನು ಓದುಗರಿಗೆ ಮತ್ತು ಶ್ರೋತೃಗಳ ಭಾವನೆಗಳೊಂದಿಗೆ ಬೆಸೆದು ರಸದೌತಣವನ್ನು ಉಣಬಡಿಸುವ ಮೃಷ್ಠಾನ್ನವಿದ್ದಂತೆ. ‘ಮತ್ತೆ ಚಿಗುರಿದ ಕನಸು’ ಪದ್ಮಾವತಿಯವರ ಚೊಚ್ಚಲ ಕವನ ಸಂಕಲನವಾದರೂ ಇಳಿವಯಸ್ಸಿನಲ್ಲಿಯೂ ಕಾವ್ಯ ರಚನೆಯ ಬಗ್ಗೆ ಆಸಕ್ತಿ, ಅಭಿರುಚಿ, ಹವ್ಯಾಸವನ್ನು ಬೆಳೆಸಿಕೊಂಡಿರುವುದು ಇವರಿಗಿರುವ ಸದಭಿರುಚಿಯ ಸಂಕೇತವಾಗಿದೆ. ಕವಿತೆಗಳೆಂದರೆ ಅಂತರಂಗದ ಮಿಡಿತ, ಭಾವೋದ್ವೇಗಗಳ ಭಾವಬಳ್ಳಿಯ ತುಡಿತ, ಪ್ರೀತಿ, ವಾತ್ಸಲ್ಯ, ಮಮಕಾರದ ಬಡಿತ, ಸಂಘರ್ಷಗಳ ಸೋಪಾನಗಳ ಸೆಳೆತ. ಇಲ್ಲಿನ ಕವಿತೆಗಳು ಎಷ್ಟೋ ಭಾವಗಳಿಗೆ ಗಾಂಭೀರ್ಯತೆಯನ್ನು ತಂದುಕೊಟ್ಟಿವೆ. ಕವಯಿತ್ರಿಯ ಜೀವನಾನುಭವಗಳನ್ನು ಅಕ್ಷರಗಳಲ್ಲಿ ಅರಳಿಸಿದ್ದಾರೆ. ಪದ್ಮಾವತಿಯವರ ಕವಿತೆಗಳು ವಯಸ್ಸಿನ ಅನುಭವಗಳ ಜೊತೆಗೆ ಕನಸುಗಳನ್ನು ಬಿತ್ತುವ ಉಲ್ಕೆಗಳಾಗಿವೆ ಎಂದರೆ ತಪ್ಪಾಗಲಾರದು ಎಂದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಎಲೆಮರೆ ಕಾಯಿಯಂತಹ ಸಾವಿರಾರು ಪ್ರತಿಭೆಗಳನ್ನು ಗುರುತಿಸಿ ಮುನ್ನೆಲೆಗೆ ತರುವ ಅಮೂಲ್ಯ ಕೆಲಸ ಮಾಡುತ್ತಾಬಂದಿದೆ. ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಇದೊಂದು ಸರ್ವಸಮತೆಯ ಸಮಾನ ಮನಸ್ಕರ ಸಾಹಿತ್ಯ ವೇದಿಕೆ. ಸದುದ್ದೇಶದಿಂದ ಜನಿಸಿದ ಸಂಸ್ಥೆ ಅದೇ ಪಥದಲ್ಲಿ ಅನೇಕ ಹಿರಿಯ ಸಾಹಿತಿಗಳ ಮಾರ್ಗದರ್ಶನದಲ್ಲಿ ಸಾಗಿ ಬರುತ್ತಿದೆ ಎಂದರು.
ವೇದಿಕೆಯಲ್ಲಿ ಪ್ರಾಯೋಜಕರಾದ ಎಚ್.ಎಸ್.ಭಾನುಮತಿ, ಅರಕಲಗೂಡು ತಾಲ್ಲೂಕು ಅಧ್ಯಕ್ಷ ಗಂಗೇಶ್ ಬಸವನಹಳ್ಳಿ, ಕೃತಿಕತೃ ಪದ್ಮಾವತಿ ವೆಂಕಟೇಶ್ ಮಾತನಾಡಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಭಾರತಿ ಹಾದಿಗೆ, ಟ್ರಸ್ಟಿಗಳಾದ ನಾಗರಾಜ್ ದೊಡ್ಡಮನಿ, ಎಚ್.ಎಸ್.ಬಸವರಾಜ್, ಕವಿಗಳಾದ ಶಿವಣ್ಣ ಕೆರೆಕೋಡಿ, ರಂಗನಾಥ್ ಅರಕಲಗೂಡು, ರವಿ, ಸಿ.ಎನ್. ನೀಲಾವತಿ, ಗಿರಿಜಾ ನಿರ್ವಾಣಿ, ಗಿರೀಶ್ ಕೋಣನೂರು, ಎಚ್.ಬಿ.ಚೂಡಾಮಣಿ, ಸಾವಿತ್ರಿ, ರಾಣಿ ಸಿ.ಚರಾಶ್ರೀ, ನೀಲಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯರಾದ ಶಿವಣ್ಣ, ಸ್ಕೌಟ್ ಗೈಡ್ ಸಂಸ್ಥೆಯ ಎಚ್.ಜಿ.ಕಾಂಚನಮಾಲ ಹಾಗೂ ಜನನಿ ಫೌಂಡೇಷನ್ನಿನ ಉಪಾಧ್ಯಕ್ಷರಾದ ಸುಂದ್ರಮ್ಮ, ಚಂದ್ರಮ್ಮ, ಪದಾಧಿಕಾರಿಗಳಾದ ಹರಿಣಿಕುಮಾರಿ, ಪುಷ್ಪ, ಸಾವಿತ್ರಿ, ಜ್ಯೋತಿ, ಅನಿತಾ, ಚೈತ್ರ, ಬಬೀತ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


