ಕ್ರಾಂತಿ ಪಥದ ಕಾಯಕ ಯೋಗಿ: ರಾಮ್ ಪ್ರಸಾದ್ ಬಿಸ್ಮಿಲ್

Upayuktha
0

(11 ಜೂನ್ 1897- 19 ಡಿಸೆಂಬರ್ 1927)




ಭಾರತದ ಸ್ವಾತಂತ್ರ್ಯ ಸಮರದ ಚರಿತ್ರೆಯಲ್ಲಿ ಕ್ರಾಂತಿಕಾರಿಗಳ ಅದಮ್ಯ ಕೊಡುಗೆ ಶತಮಾನಗಳು ಉರುಳಿದರೂ ಅವಿಸ್ಮರಣೀಯ. ಅವರು ಸಾಗಿದ ಮಾರ್ಗ ಹಾಗೂ ಮೆರೆದ ದೇಶ ಪ್ರೇಮವು ಪ್ರತಿಯೋರ್ವ ಭಾರತೀಯನಿಗೂ ಸ್ಪೂರ್ತಿಯ ಸೆಲೆ. ಅಂತಹವರಲ್ಲಿ ಎಲೆ ಮರೆಯ ಕಾಯಿಯಂತೆ ಸೆಣಸಿದ, ಕಾಕೋರಿ ಹಾಗೂ ಮೈನ್ಪುರ ಪಿತೂರಿಗಳಲ್ಲಿ ತೊಡಗಿಸಿಕೊಂಡ ರಾಮ್ ಪ್ರಸಾದ್ ಬಿಸ್ಮಿಲ್ ರವರು ಒಬ್ಬರು.

11 ಜೂನ್ 1897 ರಲ್ಲಿ ಜನ್ಮವಿತ್ತ ಇವರು ತಮ್ಮ ತಂದೆಯನ್ನು ವಿರೋಧಿಸಿ ಆರ್ಯ ಸಮಾಜವನ್ನು ಸೇರಿ ದೇಶಪ್ರೇಮಿ ಕವಿತೆ ಬರೆಯುವ ಪ್ರತಿಭೆಯನ್ನು ಮೆರೆದರು. ಪರಮಾನಂದ ಎಂಬವರಿಗೆ ಸಿಕ್ಕ ಮರಣದಂಡನೆಯ ಕುರಿತು ಕವಿತೆಯೊಂದನ್ನು ರಚಿಸಿ, ಶಿಕ್ಷಣದಿಂದ ಹೊರಬಂದು, ಲಕ್ನೋಗೆ ತೆರಳಿ ಅಂದೇ ಅವರು ಆಂಗ್ಲರನ್ನು ಹೊರದಬ್ಬುವ ಸಂಕಲ್ಪ ಕೈಗೆತ್ತಿಕೊಂಡರು.


ತೀವ್ರಗಾಮಿ ಸ್ವಾತಂತ್ರ್ಯ ಹೋರಾಟಗಾರರನ್ನು ಮಂದಗಾಮಿಗಳು ಸಮಾರಂಭ ಒಂದಕ್ಕೆ ನಿಷೇಧಿಸಿದಾಗ, ಅಮೆರಿಕ ಸ್ವಾತಂತ್ರ್ಯ ಹೋರಾಟದ ಕುರಿತು ಪುಸ್ತಕ ಒಂದನ್ನು ರಚಿಸಿ ಕಾಲ್ಪನಿಕ ವ್ಯಕ್ತಿಯ ಹೆಸರಿನಲ್ಲಿ ಇವರ ಗುಂಪು ಪ್ರಕಟಿಸಿತ್ತು.


ಬಿಸ್ಮಿಲ್ಲರು "ಮೈತ್ರಿವೇದಿ" ಎಂಬ ಕ್ರಾಂತಿಕಾರಿ ಸಂಘಟನೆಯ ಸಂಘಟಕರಾದರು. ಸೋಮದೇವ ಹಾಗೂ ಗೇಂಡ ಲಾಲ್ ದೀಕ್ಷಿತ್ ಇವರಿಗೆ ಸಾತು ಕೊಟ್ಟರು. ದೀಕ್ಷಿತ್ ರವರ ಶಿವಾಜಿ ಸಮಿತಿಯೂ ಇವರಿಗೆ ಸಾತು ಕೊಟ್ಟಿದ್ದಲ್ಲದೆ, ಅವರು "ಮೈನ್ಪುರ್ ಕಿ ಪ್ರತಿಜ್ಞಾ" ಎಂಬ ಕವಿತೆಯನ್ನು ಪುಸ್ತಕದ ಮೂಲಕ ಹಂಚಿದರು. 1918 ರಲ್ಲಿ 3 ಸಲ ಬ್ರಿಟಿಷ್ ಖಜಾನೆಯನ್ನು ಲೂಟಿ ಮಾಡಿಯೂ ಜಾಣತನದಿಂದ ಉಳಿದ ಪುಸ್ತಕಗಳೊಂದಿಗ ಪರಾರಿಯಾಗಿ, ದಿಲ್ಲಿಯಲ್ಲಿ ಹಂಚಿ, ಅಲ್ಲಿ ಸಿಕ್ಕಿ ಬಿದ್ದಾಗ ಯಮುನೆಯಲ್ಲಿ ಧುಮುಕಿ ಸಮರ್ಪಕವಾಗಿ ತಪ್ಪಿಸಿಕೊಂಡರು. ಇದನ್ನು ಮೈನ್ಪುರ ಪಿತೂರಿಯೆಂದು ಪರಿಗಣಿಸಿ ಕೋರ್ಟು ಶಿಕ್ಷೆ ನೀಡಿತ್ತಾದರೂ ಕ್ಷಮೆಯ ನಾಟಕವಾಡಿ, ಬಿಸ್ಮಿಲ್ಲರು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಇನ್ನಷ್ಟು ಮುನ್ನುಗ್ಗಿದರು.


ಅಲ್ಲಿಂದ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡು ತಿರುಗುತ್ತಿದ್ದ ಇವರು ಹಳ್ಳಿ ಹಳ್ಳಿಯಲ್ಲಿ ಸ್ವಾತಂತ್ರ್ಯದ ಕಿಚ್ಚು ಮೊಳಗಿಸಿದರು. ಮನ್ ಕಿ ಲಹರ್', ಸುಶೀಲ್ ಮಾಲಾ' ಕ್ರಾಂತಿ ಗೀತಾಂಜಲಿ' ಎಂಬೆಲ್ಲಾ ಪುಸ್ತಕಗಳನ್ನು ಸ್ವಂತ ಖರ್ಚಿನಲ್ಲಿ ಪ್ರಕಟಿಸಿ ಜಾಗೃತಿ ಮೊಳಗಿಸಿದರು.


1921 ರಲ್ಲಿ ಹಿರಿಯ ಕ್ರಾಂತಿಕಾರಿಗಳೊಂದಿಗೆ ಅಹಮದಾಬಾದ್ ಕಾಂಗ್ರೆಸ್ ಅಧಿವೇಶನಕ್ಕೆ ತೆರಳಿದ್ದ ಇವರು ಪೂರ್ಣ ಸ್ವರಾಜ್ಯದ ಹಾಗೂ ಕ್ರಾಂತಿಕಾರಿ ಮಾರ್ಗದ ಪ್ರಸ್ತಾಪವನ್ನು ಮುಂದಿಟ್ಟರು. ಇದಕ್ಕೆ ಸ್ಪಂದನೆ ದೊರೆಯದಾಗ ಅಹಿಂಸೆಯಿಂದ ಸ್ವಾತಂತ್ರ್ಯ ಸಾಧ್ಯವಿಲ್ಲವೆಂದು ಕಾಂಗ್ರೆಸ್ ನಿಂದ ಹೊರಬಂದು, ತಮ್ಮ ಹುಟ್ಟೂರಾದ ಶಹಜಹಾನ್ ಪುರಕ್ಕೆ ಹಿಂದಿರುಗಿ ಕ್ರಾಂತಿಕಾರಿ ಪಥದಲ್ಲಿ ಯುವಕರನ್ನು ಸಂಘಟಿಸಲು ಪರಿಶ್ರಮ ಗೈದರು. ಚೌರಿ ಚೌರಾ ಘಟನೆಯ ಬಳಿಕ ಅಸಹಕಾರ ಚಳುವಳಿಯನ್ನು ಗಾಂಧೀಜಿ ಹಿಂಪಡೆದುಕೊಂಡ ಸಂದರ್ಭದಲ್ಲಿ ಬಿಸ್ಮಿಲ್ಲರು ಇದನ್ನು ವಿರೋಧಿಸಿ ಯುವಕರು ಚೌರಿ ಚೌರದಲ್ಲಿ ಆಂಗ್ಲರನ್ನು ಸದೆಬಡಿದುದನ್ನು ಸಮರ್ಥಿಸಿದರು.


ಲಾಲಾ ಹರ್ ದಯಾಳ್ ಅವರ ಅನುಮತಿಯೊಂದಿಗೆ, ಬಿಸ್ಮಿಲ್ ಅವರು ಅಹಮದಾಬಾದ್ ಗೆ ತೆರಳಿದರು. ಅಲ್ಲಿ ಸಚೀಂದ್ರನಾಥ್ ಸಾನ್ಯಾಲ್ ಹಾಗು ಬಾಂಗ್ಲ ಕ್ರಾಂತಿಕಾರಿ ಜದುಗೊಪಾಲ್ ಚಟರ್ಜಿಯವರ ಸಹಾಯದಿಂದ 1923 ರಲ್ಲಿ ಸಂವಿಧಾನ ಪಾರ್ಟಿಯನ್ನು ಸಂಘಟಿಸಿದರು. ಹಳದಿ ಹಾಳೆಯ ಮೇಲೆ ಆ ಪಾರ್ಟಿಯ ಮುಖ್ಯ ಉದ್ದೇಶಗಳನ್ನು ಬರೆದರು. ನಂತರ ಸಚಿಂದ್ರ ನಾಥ್ ಅವರ ಅಧ್ಯಕ್ಷತೆಯಲ್ಲಿ ಮೊದಲನೆಯ ಸಭೆಯನ್ನು ಕಾನ್ಪುರದಲ್ಲಿ ನಡೆಸಿದರು.


ಉತ್ತರ ಪ್ರದೇಶದ ಕಾಕೋರಿ ಎಂಬಲ್ಲಿ ಆಂಗ್ಲರ ರೈಲೊಂದನ್ನು ಲೂಟಿ ಮಾಡುವ ಪ್ರಕರಣದಲ್ಲಿ ಇವರು ತೊಡಗಿದ್ದು, ಸಫಲರಾದರೂ ಮುಂದೆ ಇವರನ್ನು ಬಂಧಿಸಲಾಯಿತು. ಡಿಸೆಂಬರ್ 9, 1927 ರಲ್ಲಿ ಇವರಿಗೆ ಗಲ್ಲು ಶಿಕ್ಷೆಯಾಗುವುದರ ಮೂಲಕ ಕ್ರಾಂತಿಕಾರಿಯ ಈ ಜೀವಪುಷ್ಪ ಭಾರತ ಮಾತೆಯ ಪಾದಯುಗ್ಮಗಳಿಗೆ ಸಮರ್ಪಿತವಾಯಿತು.


ಹೀಗೆ ಅದೆಷ್ಟೋ ಕ್ರಾಂತಿಕಾರಿಗಳು ಭಾರತಮಾತೆಯ ನೈಜ ಸೇವೆಯಲ್ಲಿ ತೊಡಗಿ, ಸರ್ವವನ್ನು ಮಾತೆಯ ಪದತಲಕ್ಕೆ ಸಮರ್ಪಿಸಿ ಭಾರತೀಯರ ಸ್ವತಂತ್ರ ಮಣ್ಣಿನಲ್ಲಿ ಅಮರರಾಗಿದ್ದಾರೆ. ಆದರೆ ಇವರು ಮಾಡಿದ ಗುಪ್ತ ಕಾರ್ಯಗಳ ದಾಖಲೆಗಳು ದೊರೆಯದಿರುವುದೇ ದುರಂತ. ಆಂಗ್ಲರಿಗೆ ತಿಳಿಯದಂತೆ ಹಾಗೂ ದಾಖಲೀಕರಣ ಗೊಳ್ಳದಂತೆ ಮಮಕಾರ ಮರೆತು ಕೆಚ್ಚೆದೆಯಿಂದ ಹೋರಾಡುವುದೇ ಕ್ರಾಂತಿಕಾರಿಗಳ ಪಥವಾಗಿದ್ದ ಮೇಲೆ ಅಧ್ಯಯನ ಮಾಡಲು ದಾಖಲೆಗಳು ಹೇಗೆ ತಾನೇ ದೊರೆಯಬಲ್ಲವು?


- ಅಭಿಜ್ಞಾ ಉಪಾಧ್ಯಾಯ 

ಇತಿಹಾಸ ಪ್ರಾಧ್ಯಾಪಕಿ

ಎಸ್ ಡಿ ಎಂ ಕಾಲೇಜು ಉಜಿರೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top