ಕಡಬ: ಪಿಎಂ-ಜನ್‌ಮನ್ ಯೋಜನೆಯಡಿ 2.75 ಕೋಟಿ ವೆಚ್ಚದಲ್ಲಿ ಕೊರಗ ಕಾಲೊನಿಯಲ್ಲಿ ಅಭಿವೃದ್ಧಿಗೊಂಡ ರಸ್ತೆ ಉದ್ಘಾಟನೆ

Upayuktha
0

 


ಕಡಬ: ಕೇಂದ್ರ ಸರ್ಕಾರದ ಪಿಎಂ-ಜನ್‌ಮನ್ ಯೋಜನೆಯಡಿ ಕಡಬ ತಾಲೂಕಿನ ರಾಮಕುಂಜ, ಪೆರಾಬೆ, ಅಲಂಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಕ್ಕಾಲು ಕೊರಗ ಕಾಲೊನಿಯಲ್ಲಿ 2.75 ಕೋಟಿ ರೂ. ಅನುದಾನದಡಿ ಅಭಿವೃದ್ದಿಪಡಿಸಿದ ರಸ್ತೆಯನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸುಳ್ಯದ ಶಾಸಕಿ ಕು. ಭಾಗೀರಥಿ ಮುರುಳ್ಯ ಹಾಗೂ ಕೊರಗ ಸಮುದಾಯ ಹಿರಿಯ ಮಹಿಳೆ ಚೋಮು ಅವರೊಂದಿಗೆ ಜತೆಯಾಗಿ ಉದ್ಘಾಟಿಸಿದ್ದಾರೆ.

ಈ ವೇಳೆ ಮಾತನಾಡಿದ ಸಂಸದ ಕ್ಯಾ. ಚೌಟ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್'  ಮಂತ್ರದೊಂದಿಗೆ ಮುನ್ನಡೆಯುತ್ತಿದ್ದು, ದೇಶದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಡವರ್ಗದ ಶೋಷಿತ ಹಾಗೂ ಬುಡಕಟ್ಟು ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ 2023ರಲ್ಲಿ 'ಪಿಎಂ ಜನ್‌ಮನ್' ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ ಮಾರ್ಗಸೂಚಿ ಆಧರಿಸಿ  ಜೇನು ಕುರುಬ ಮತ್ತು ಕೊರಗ ಸಮುದಾಯಗಳು ಹೆಚ್ಚಿರುವ ಪ್ರದೇಶಗಳನ್ನು ಸಮೀಕ್ಷೆ ಮೂಲಕ ಗುರುತಿಸಿ, ಆ ಪ್ರದೇಶಗಳ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅದರಂತೆ ಇದೀಗ ಪರಕ್ಕಾಲು ಕೊರಗ ಕಾಲೊನಿಯಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪ್ರಧಾನಮಂತ್ರಿ ಜನ್‌ಮನ್‌ ಯೋಜನೆ ಒಂದು ಅದ್ಭುತ ಪರಿಕಲ್ಪನೆಯಾಗಿದ್ದು, ಬುಡಕಟ್ಟು ಸಮುದಾಯದ ಪ್ರತಿಯೊಬ್ಬ ಸದಸ್ಯರೂ ಸರ್ಕಾರಿ ಯೋಜನೆಗಳಿಂದ ಪ್ರಯೋಜನ ಪಡೆಯುವಂತಾಗುವುದು ಪ್ರಧಾನಮಂತ್ರಿ ಮೋದಿ ಸರ್ಕಾರದ ಆಶಯ ಹಾಗೂ ಗುರಿಯಾಗಿದೆ. ಈ ಹಿಂದೆ ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಲೆಕ್ಕಾಚಾರದಡಿ ಅಭಿವೃದ್ಧಿ ಕೆಲಸಗಳು ಸಾಮಾನ್ಯವಾಗಿ ನಡೆಯುತ್ತಿದ್ದವು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಯಾವುದೇ ತಾರತಮ್ಯವಿಲ್ಲದೆ ಸಮಾಜದ ಕಟ್ಟಕಡೆಯ ಶೋಷಿತ ಜನರ ಅಭಿವೃದ್ಧಿಯನ್ನೇ ಮುಖ್ಯ ಗುರಿಯಾಗಿಸಿಕೊಂಡು ಹತ್ತಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top