ಪ್ರಶಸ್ತಿ ಪ್ರದಾನ, ಕೃತಿ ಲೋಕಾರ್ಪಣೆ, ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮ
ಬೆಂಗಳೂರು: ಕರ್ನಾಟಕದ ದಾಸಸಾಹಿತ್ಯ ಪರಂಪರೆಯಲ್ಲಿ ಮಹಿಳಾ ಹರಿದಾಸರ ಅಮೂಲ್ಯ ಕೊಡುಗೆಯನ್ನು ಗುರುತಿಸಿ, ಸಂರಕ್ಷಿಸಿ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವಾಕಾಂಕ್ಷೆಯ ಉದ್ದೇಶದಿಂದ ಸ್ಥಾಪಿತವಾಗಿರುವ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ.) ವತಿಯಿಂದ ಪ್ರಥಮ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ಜೂನ್ 20, 2026ರ ಶನಿವಾರ ಬೆಂಗಳೂರಿನ ಬಸವನಗುಡಿಯ ಗೋವರ್ಧನಗಿರಿ ಉಡುಪಿ ಶ್ರೀಪುತ್ತಿಗೆ ಮಠದಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿರುವ ಈ ಕಾರ್ಯಕ್ರಮವು ಮಹಿಳಾ ಹರಿದಾಸ ಪರಂಪರೆ, ದಾಸ ಸಾಹಿತ್ಯ, ಭಕ್ತಿ ಸಂಗೀತ, ಸಂಶೋಧನೆ ಹಾಗೂ ಮಹಿಳಾ ಸಬಲೀಕರಣದ ಅಪೂರ್ವ ಸಂಗಮವಾಗಲಿದೆ.
ಮಹಿಳಾ ಹರಿದಾಸ ಪರಂಪರೆಯ ಪುನರುಜ್ಜೀವನಕ್ಕೆ ಸಂಕಲ್ಪ
ಮಹಿಳಾ ಹರಿದಾಸರ ಸಾಧನೆಯನ್ನು ದಾಖಲಿಸುವುದು, ಅವರ ಕೃತಿಗಳನ್ನು ಸಂರಕ್ಷಿಸುವುದು ಹಾಗೂ ಸಮಾಜದ ಮುಖ್ಯವಾಹಿನಿಗೆ ತರುವುದು ಟ್ರಸ್ಟ್‌ನ ಪ್ರಮುಖ ಧ್ಯೇಯವಾಗಿದೆ. ಪ್ರಾಚೀನ ಮಹಿಳಾ ಹರಿದಾಸರ ಹೆಸರಿನಲ್ಲಿ ದತ್ತಿ ಸ್ಥಾಪನೆ, ಮಹಿಳಾ ಹರಿದಾಸ ಒಕ್ಕೂಟ ನಿರ್ಮಾಣ, ದಾಸ ಸಾಹಿತ್ಯದ ಅಧ್ಯಯನ-ಪ್ರಚಾರ, ಕಾರ್ಯಾಗಾರಗಳ ಆಯೋಜನೆ ಹಾಗೂ ಹೊಸ ಕೀರ್ತನೆಗಳಿಗೆ ಸಂಗೀತ ಸಂಯೋಜನೆ ಮಾಡುವಂತಹ ಯೋಜನೆಗಳನ್ನು ಟ್ರಸ್ಟ್ ರೂಪಿಸಿದೆ.
ಶುದ್ಧಪಾಠ, ಸುಳಾದಿ, ಉಗಾಭೋಗ, ಕೀರ್ತನೆ, ಗಮಕ ಹಾಗೂ ದಾಸ ಸಾಹಿತ್ಯದ ವಿವಿಧ ಪ್ರಕಾರಗಳ ಕುರಿತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಮಹಿಳಾ ಹರಿದಾಸರ ಕುರಿತು ಸಂಶೋಧನೆ, ಗ್ರಂಥ ಪ್ರಕಟಣೆ, ಛಾಯಾಚಿತ್ರ ಸಂಗ್ರಹಣೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದಾಸಸಾಹಿತ್ಯದ ಪ್ರಸಾರದ ಕಾರ್ಯಗಳನ್ನೂ ಟ್ರಸ್ಟ್ ಕೈಗೊಂಡಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸುಧಾ ದೇಶಪಾಂಡೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಖ್ಯಾತ ವಿದ್ವಾಂಸ ಡಾ. ಸುರೇಶ್ ಪಾಟೀಲ ಹಾಗೂ ಶ್ರೀಮತಿ ಮೃದುಲಾ ವಿಜಯೇಂದ್ರ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶ್ರೀ ಕೃಷ್ಣ ಹನಗುಂದ ಹಾಗೂ ಶ್ರೀ ಮಕುಂದ ಗಂಗೂರ ಉಪಸ್ಥಿತರಿರುವರು.
ವಾರ್ಷಿಕೋತ್ಸವದ ವಿಶೇಷ ಅಂಗವಾಗಿ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಅವರ "ಸಾಧನ" ಕೃತಿ ಹಾಗೂ ಡಾ. ಸುಧಾ ದೇಶಪಾಂಡೆ ಅವರ "ಭಾಗವತಾಮೃತ ಸುಳಾದಿಗಳು" ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.
ಮಧ್ಯಾಹ್ನ ನಡೆಯುವ ವಿಚಾರಗೋಷ್ಠಿಗೆ ಡಾ. ಶಾಂತಾ ರಘೋತ್ತಮಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಗೋಷ್ಠಿಯಲ್ಲಿ ನೀತಾ ಕುಲಕರ್ಣಿ, ಭಾರ್ಗವಿ ಗೋಪಾಲಾಚಾರ್ ಹಾಗೂ ನಿರುಪಮಾ ದೇಸಾಯಿ ಪ್ರಬಂಧ ಮಂಡಿಸಲಿದ್ದು, ಡಾ. ವಿದ್ಯಾಶ್ರೀ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಪ್ರತಿಷ್ಠಿತ "ಮೈತ್ರೇಯಿ ಪ್ರಶಸ್ತಿ" ನೀಡಿ ಗೌರವಿಸಲಾಗುವುದು. ಈ ಸಾಲಿನ ಪ್ರಶಸ್ತಿ ಪುರಸ್ಕೃತರಲ್ಲಿ ಗೀತಾ ಜೋಶಿ, ರೇಖಾ ಮುತಾಲಿಕ್, ಮಾನಸ ಕುಲಕರ್ಣಿ, ಸರಸ್ವತಿ ರಾಘವೇಂದ್ರ ಕುಲಕರ್ಣಿ, ವೀಣಾ ವಾದಿರಾಜ ಬರಗಿ, ಅಖಿಲಾ ವಿಜಯ ಕುರಂದವಾಡ, ಪ್ರಿಯಾ ಪ್ರಾಣೇಶ ಹರಿದಾಸ, ಡಾ. ರೇಖಾ ಕಾಖಂಡಕಿ, ಡಾ. ಶೈಲಜಾ ಕೊಪ್ಪರ, ಡಾ. ಜಯಲಕ್ಷ್ಮಿ ಮಂಗಳಮೂರ್ತಿ, ಡಾ. ವನಜಾ ಉಪೇಂದ್ರ ನರಸಾಪುರ, ಡಾ. ಶೀಲಾ ದಾಸ್ ಹಾಗೂ ನಿರ್ಮಲ ಗುರುರಾಜ ದೇಶಪಾಂಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕಿಯರು ಗೌರವಕ್ಕೆ ಪಾತ್ರರಾಗಲಿದ್ದಾರೆ.
ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಗಿ ಸುರೇಖಾ ಕುಲಕರ್ಣಿ ಅವರ "ಮಹಾನ್ ಚೇತನ ಮೈತ್ರೇಯಿ" ರೂಪಕ ಪ್ರದರ್ಶನಗೊಳ್ಳಲಿದೆ. ಜೊತೆಗೆ ದಾಸವಾಣಿ ಕರ್ನಾಟಕ ತಂಡದಿಂದ ಗೋಷ್ಠಿಗಾಯನ ಕಾರ್ಯಕ್ರಮವೂ ನಡೆಯಲಿದ್ದು, ದಾಸಸಾಹಿತ್ಯದ ಭಕ್ತಿ ವೈಭವವನ್ನು ಅನಾವರಣಗೊಳಿಸಲಿದೆ.
ಮಹಿಳಾ ಹರಿದಾಸರ ಸಾಧನೆ, ದಾಸ ಸಾಹಿತ್ಯದ ಪರಂಪರೆ ಹಾಗೂ ಕನ್ನಡ ಭಕ್ತಿಸಾಹಿತ್ಯದ ವೈಭವವನ್ನು ಸಮಾಜಕ್ಕೆ ತಲುಪಿಸುವ ಮಹತ್ವದ ಹೆಜ್ಜೆಯಾಗಿ ಈ ಕಾರ್ಯಕ್ರಮ ರೂಪುಗೊಂಡಿದ್ದು, ದಾಸಸಾಹಿತ್ಯಾಸಕ್ತರು, ಸಂಗೀತಪ್ರೇಮಿಗಳು, ಸಂಶೋಧಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಡಾ. ವೃಂದಾ ಸಂಗಮ್ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


