ವಿಜ್ಞಾನ ಮುಂದುವರೆಯುತ್ತಿದ್ದರೂ ಮೌಲ್ಯಗಳು ಕುಸಿಯುತ್ತಿವೆ : ಶಾಲಿನಿ ಆತ್ಮಭೂಷಣ್
ಪುತ್ತೂರು: ಇಂದು ನಮ್ಮ ದೇಶದಲ್ಲಿ ವಿಜ್ಞಾನ - ತಂತ್ರಜ್ಞಾನಗಳ ಬೆಳವಣಿಗೆಯಾಗುತ್ತಿದೆ. ಆದರೆ ಮೌಲ್ಯಗಳ ಅಧ:ಪತನವಾಗುತ್ತಿದೆ. ಇಂತಹ ಸಮಸ್ಯೆಗಳ ನಿವಾರಣೆಗೆ ಸಹ ಪಠ್ಯ ಚಟುವಟಿಕೆಗಳು ದಾರಿಯಾಗಿವೆ. ಅವುಗಳು ಒತ್ತಡವನ್ನು ನಿವಾರಿಸಿ ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ಅಲ್ಲದೆ ಯಶಸ್ಸು ಸಾಧಿಸಲು ಅವಕಾಶ ಮಾಡಿಕೊಡುತ್ತವೆ. ಶಾಲೆಯಲ್ಲಿ ಸಿಗುವ ಅವಕಾಶ ಸದ್ವಿನಿಯೋಗವಾಗಿ ಭಾರತದ ಸಂಸ್ಕೃತಿ ಜಗತ್ತಿನಾದ್ಯಂತ ಹರಡುವಂತಾಗಬೇಕು ಎಂದು ಪುತ್ತೂರಿನ ನೃತ್ಯೋಪಾಸನ ಕಲಾ ಅಕಾಡೆಮಿಯ ನಿರ್ದೇಶಕಿ ವಿದುಷಿ ಶಾಲಿನಿ ಆತ್ಮಭೂಷಣ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಆಯೋಜಿಸಲಾದ ಸಹಪಠ್ಯ ಚಟುವಟಿಕೆ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಮಾತನಾಡಿ ಭಾರತೀಯ ಕಲೆಗಳು ನಿಧಾನಕ್ಕೆ ಅರಳುವ ಹೂವಿನ ಹಾಗೆ. ಪ್ರತಿಯೊಂದು ಕಲೆಗಳೂ ನಮ್ಮ ಜೀವನವನ್ನು ಅರಳಿಸುವಂತಹದ್ದೇ ಆಗಿವೆ. ಇಂತಹ ಕಲೆಗಳನ್ನು ಒಳಗೊಂಡ ಪಠ್ಯೇತರ ಚಟುವಟಿಕೆಗಳು ನಮ್ಮ ದೈಹಿಕ - ಮಾನಸಿಕ ಬೆಳವಣಿಗೆಯನ್ನು ಬೆಳೆಸುವುದರ ಜೊತೆಗೆ ಸಂ¸ಸ್ಕೃತಿಯನ್ನು ಉಳಿಸುವ ಕೆಲಸವನ್ನು ಮಾಡುತ್ತವೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರತಿಭೆಯನ್ನು ಅಭಿವೃದ್ಧಿ ಪಡಿಸುವಂತಹ ಚಟುವಟಿಕೆಗಳನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಕಲೆಯು ದೇವರು ಮನುಷ್ಯನಿಗೆ ಕೊಟ್ಟ ಒಂದು ವರದಾನ. ಪ್ರತಿಯೊಂದು ಮಗುವಿನಲ್ಲಿ ಸುಪ್ತವಾಗಿ ಅಡಗಿರುವ ಕಲೆಯನ್ನು ಗುರುತಿಸುವ ಕೆಲಸವನ್ನು ಶಾಲೆಗಳು ಮಾಡಬೇಕು. ಜೀವನಕ್ಕೆ ಬೇಕಾದ ಮೂಲಭೂತವಾದ ವಿದ್ಯೆಗಳನ್ನು ಕಲಿಯುವಂಥದ್ದು ಅತಿ ಅಗತ್ಯ. ಜೀವನದಲ್ಲಿ ಬರುವ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಕ್ಷಾತ್ರ ತೇಜಸ್ಸು ನಮ್ಮಲ್ಲಿರಬೇಕು. ಸಂಗೀತ, ನೃತ್ಯ, ಚದುರಂಗ, ಯಕ್ಷಗಾನ ಮುಂತಾದ ಕಲೆಗಳು ಭಾರತದ ಸಂಸ್ಕೃತಿಯೊಂದಿಗೆ ಮಿಳಿತಗೊಂಡಿವೆ. ಅವುಗಳ ಮೂಲಕ ಭಾರತದ ಸಂಸ್ಕೃತಿಯನ್ನು ಎತ್ತರಿಸುವ ಕಾರ್ಯ ನಮ್ಮದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶೀಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ, ಯಕ್ಷಗಾನ ಮತ್ತು ಸ್ಕೌಟ್ಸ್ ತರಬೇತುದಾರ ಸತೀಶ್ ಇರ್ದೆ, ಕರಾಟೆ ತರಬೇತುದಾರ ಶಿವಪ್ರಸಾದ್, ಚದುರಂಗ ತರಬೇತುದಾರ ಸುರೇಶ್ ಕಾಮತ್, ಅಬಕಾಸ್ ತರಬೇತುದಾರ ಗುರುರಾಜ್, ಈಜು ಮತ್ತು ಸ್ಕೇಟಿಂಗ್ ತರಬೇತುದಾರ ಸುಶಿತ್ ಕುಮಾರ್, ಭರತನಾಟ್ಯ ತರಬೇತುದಾರೆ ಪ್ರಿಯಾಶ್ರೀ ಕೆ ಎಸ್, ಸಂಗೀತ ತರಬೇತುದಾರೆ ಸಹನಾ ಎಸ್, ಗೈಡ್ಸ್ ತರಬೇತುದಾರೆ ಚಂದ್ರಕಲಾ ಉಪಸ್ಥಿತರಿದ್ದರು.
ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿನಿಯರಾದ ಅನುಶ್ರೀ, ನಿನಾದ, ಲಾವಣ್ಯ ಪ್ರಾರ್ಥಿಸಿದರು. ಆದ್ಯ ಶೆಣೈ ಸ್ವಾಗತಿಸಿದರು. ನಿದಾ ಫಾತಿಮಾ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಾಯಿ ಲಕ್ಷ್ಮಿ ಯವರು ನಿರ್ವಹಿಸಿದರು.


