ಕನ್ಯಾನದಲ್ಲಿ ‘ಸ್ವಭಾಷಾ ಕನ್ನಡ ಸಂಘ’ ಉದ್ಘಾಟನೆ ಸಂಭ್ರಮ
ಕನ್ಯಾನ: ಇಲ್ಲಿನ ಗುರು ಎಜ್ಯುಕೇಶನ್ ಟ್ರಸ್ಟ್ (ರಿ.) ನಡೆಸುವ ಶ್ರೀ ಸರಸ್ವತಿ ವಿದ್ಯಾಲಯದಲ್ಲಿ ‘ಸ್ವಭಾಷಾ ಕನ್ನಡ ಸಂಘ’ದ ಉದ್ಘಾಟನಾ ಸಮಾರಂಭವು ಶನಿವಾರ ಬೆಳಗ್ಗೆ 10 ಗಂಟೆಗೆ ಸಂಭ್ರಮದಿಂದ ನೆರವೇರಿತು.
ಗುರು ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಈಶ್ವರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಖ್ಯಾತ ಕವಯಿತ್ರಿ, ಲೇಖಕಿ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಕಾರ್ಯದರ್ಶಿ ಶ್ರೀಮತಿ ಸಂಧ್ಯಾಗೀತಾ ಬಾಯಾರು ಅವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲೇಖಕ, ಸಾಹಿತಿ, ಪತ್ರಕರ್ತ ಜಯಾನಂದ ಪೇರಾಜೆ ಹಾಗೂ ವೈದ್ಯ, ಸಾಹಿತಿ, ಬರಹಗಾರ ಡಾ. ಸುರೇಶ್ ನೆಗಳಗುಳಿ ಅವರು ಮಾತನಾಡಿ, ಮಾತೃಭಾಷೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.
ಶ್ರೀಮತಿ ಸಂಧ್ಯಾಗೀತಾ ಬಾಯಾರು ಮಾತನಾಡಿ, "ಕನ್ನಡ ನಮ್ಮ ಅಸ್ಮಿತೆ. ತಂತ್ರಜ್ಞಾನ ಯುಗದಲ್ಲಿ ಇಂಗ್ಲಿಷ್ ಕಲಿಯುವುದು ಅನಿವಾರ್ಯವಾದರೂ, ನಮ್ಮ ಬೇರು ಕನ್ನಡದಲ್ಲಿದೆ. ಸ್ವಭಾಷೆಯಲ್ಲಿ ಯೋಚಿಸುವ ಮಗು ಹೆಚ್ಚು ಸೃಜನಶೀಲವಾಗಿರುತ್ತದೆ" ಎಂದು ಹೇಳಿದರು.
ಡಾ. ಸುರೇಶ್ ನೆಗಳಗುಳಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, "ಔಷಧ ಆರೋಗ್ಯ ಕೊಟ್ಟರೆ, ಭಾಷೆ ಸಂಸ್ಕೃತಿ ಕೊಡುತ್ತದೆ. ಕುವೆಂಪು ಅವರ ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ" ಎಂದು ಕರೆ ನೀಡಿದರು.
ಜಯಾನಂದ ಪೇರಾಜೆ ಅವರು, "ಕನ್ನಡ ಸಂಘ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೆ, ದಿನನಿತ್ಯದ ಚಟುವಟಿಕೆಯಾಗಬೇಕು. ಕಥೆ ಹೇಳುವುದು, ಪದ್ಯ ರಚನೆ, ವಾಕ್ ಸ್ಪರ್ಧೆ, ನಾಟಕಗಳ ಮೂಲಕ ಭಾಷೆ ಬೆಳೆಯುತ್ತದೆ" ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಈಶ್ವರ ಪ್ರಸಾದ್ ಅವರು, "ನಮ್ಮ ಶಾಲೆಯಲ್ಲಿ ಕನ್ನಡದ ವಾತಾವರಣ ನಿರ್ಮಿಸುವುದು ಈ ಸಂಘದ ಮುಖ್ಯ ಉದ್ದೇಶ. ಪ್ರತಿ ತಿಂಗಳು ಒಂದು ಕನ್ನಡ ಕಾರ್ಯಕ್ರಮ ಆಯೋಜಿಸಲಾಗುವುದು" ಎಂದು ಭರವಸೆ ನೀಡಿದರು.
ಇದೇ ವೇಳೆ ಡಾ ನೆಗಳಗುಳಿ ತಮ್ಮ ಸ್ವರಚಿತಾ ಕೃತಿಗಳಾದ ಕುವಲಯ ಗಝಲ್, ಜಯಕಿರಣ ಪ್ರಕಟಿತ ಕವನ ಸಂಕಲನ ಕಾವ್ಯಕಿರಣ ಮತ್ತು ತಮ್ಮ ಬದುಕು ಬರೆಹದ ಸಂಕಲನಗಳನ್ನು ಸಂಸ್ಥೆಯ ವಾಚನಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಆಡಳಿತಾಧಿಕಾರಿ ಮಧುರಾ ಈಶ್ವರ್ ಪ್ರಸಾದ್ ವಿದ್ಯಾರ್ಥಿ ಸಂಘದ ಪದಾಧಿಕಾರಗಳ ಘೋಷಣೆ ಮಾಡಿ ಪ್ರತಿಜ್ಞಾವಿಧಿ ಬೋಧಿಸಿದರು. ಕನ್ನಡ ಸಂಘದ ಅಧ್ಯಕ್ಷರಾಗಿ ಸಂತ್ರಪ್ತ ಭಟ್ ಐ ಕೆ, ಕಾರ್ಯದರ್ಶಿಯಾಗಿ ಸೃಷ್ಟಿ ಕೆ ಎಂ ಹಾಗೂ ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸಂತೃಪ್ತ ಭಟ್, ಶರ್ವ ಭಟ್, ಭವಿಷ್ ಟಿ, ದುರ್ಗಾಶ್ರೀ, ಪದ್ಮಾ ಚಿನ್ಮಯಿ, ಸೃಷ್ಟಿಯವರು ಸ್ವರಚಿತಾ ಕವನ ವಾಚನ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರಸ್ವತಿ, ಬೇಬಿ ಅಕ್ಷತಾ ಮತ್ತಿತರ ಶಿಕ್ಷಕ ವೃಂದ, ಪೋಷಕರು, ಊರಿನ ಗಣ್ಯರು ಉಪಸ್ಥಿತರಿದ್ದರು. ಕುಮಾರಿ ಪ್ರತೀಕ್ಷಾ ಸ್ವಾಗತಿಸಿ, ಕುಮಾರಿ ಶ್ರಾವ್ಯ ವಂದಿಸಿದರು. ಸೃಷ್ಟಿ ಕೆ ಎಂ ನಿರೂಪಣೆ ಮಾಡಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


