ಹುಬ್ಬಳ್ಳಿ: ಇಲ್ಲಿನ "ಶ್ರೀ ಸುಧಾ ಭಜನಾ ಮಂಡಳಿ"ಯ ವತಿಯಿಂದ ಅಧಿಕ ಮಾಸದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ 32 ದಿನಗಳ ವಿಶೇಷ ಭಜನಾ ಸಂಕೀರ್ತನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಭಕ್ತಿಭಾವದಿಂದ ಯಶಸ್ವಿಯಾಗಿ ಸಂಪನ್ನಗೊಂಡವು.
ಅಧಿಕ ಮಾಸದ ಅಂಗವಾಗಿ ಮಂಡಳಿಯ ಸದಸ್ಯೆಯರ ಮನೆಗಳಲ್ಲಿ ಪ್ರತಿದಿನ ದಾಸರ 33 ಹೊಸ ಕೀರ್ತನೆಗಳು ಹಾಗೂ ಉಗಾಭೋಗಗಳೊಂದಿಗೆ ಸತತ 30 ದಿನಗಳ ಕಾಲ ಸಂಕೀರ್ತನೆಯ ಸೇವೆಯನ್ನು ಶ್ರದ್ಧೆಯಿಂದ ಸಲ್ಲಿಸಲಾಯಿತು.
ಕಾರ್ಯಕ್ರಮದ 31 ಮತ್ತು 32ನೇ ದಿನದ ಅಂಗವಾಗಿ ಶ್ರೀಮತಿ ಸವಿತಾ ಮುಂಡಗೋಡ ಅವರ ಸ್ವಗೃಹದಲ್ಲಿ ವಿಶೇಷ ಧಾರ್ಮಿಕ ಸಭೆ ಜರುಗಿತು. ಈ ಸಂದರ್ಭದಲ್ಲಿ ಸಾಂಗ್ಲಿಯ ಪ್ರಸಿದ್ಧ ವಿದ್ವಾಂಸರಾದ ಶ್ರೀ ಪಂ. ವಿಷ್ಣುಪಾದ ಆಚಾರ್ಯ ಅವರಿಂದ 'ಭಾಗವತ ಶ್ರವಣ' ಪ್ರವಚನ ಕಾರ್ಯಕ್ರಮ ನಡೆಯಿತು. ತದನಂತರ ಮುತ್ತೈದೆಯರಿಗೆ ಉಡಿ ತುಂಬುವ ಸಾಂಪ್ರದಾಯಿಕ ಕಾರ್ಯಕ್ರಮದೊಂದಿಗೆ ಈ ಸೇವೆಗೆ ಮಂಗಲ ಹಾಡಲಾಯಿತು.
ದಿನಾಂಕ 18ರಂದು ರಾಮಕೃಷ್ಣನಗರದ ಭಕ್ತಾದಿಗಳ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ (ರಾಯರ ಮಠ) ಮಂಡಳಿಯ ಎಲ್ಲಾ ಭಗಿನಿಯರು ತಮ್ಮ ಭಕ್ತಿ ಸೇವೆಯನ್ನು ರಾಯರ ಪಾದಾರವಿಂದಗಳಿಗೆ ಸಮರ್ಪಿಸಿದರು. ನಂತರ ತೀರ್ಥ ಪ್ರಸಾದ ಸ್ವೀಕರಿಸುವುದರೊಂದಿಗೆ ಅಧಿಕ ಮಾಸದ ಪವಿತ್ರ ವ್ರತವನ್ನು ಶ್ರದ್ಧಾಭಕ್ತಿಗಳಿಂದ ಸಂಪೂರ್ಣಗೊಳಿಸಲಾಯಿತು.
ಈ ಸುದೀರ್ಘ ಭಜನಾ ಸೇವೆಯಲ್ಲಿ ಮಂಡಳಿಯ ಪದಾಧಿಕಾರಿಗಳು, ಸದಸ್ಯೆಯರು ಹಾಗೂ ರಾಮಕೃಷ್ಣನಗರದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಹರಿ-ಗುರುಗಳ ಕೃಪೆಗೆ ಪಾತ್ರರಾದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


