ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗವು 12ನೇ ಶತಮಾನ ಕ್ಕಿಂತ ಮುಂಚೆ ಯಿಂದಲೂ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುತ್ತಾ ಬಂದಿದ್ದು, ಈ ಭಾಗದ ಕಲಾವಿದರ ಹಾಗೂ ಸಂಗೀತಾಭಿಮಾನಿಗಳ ಹಿತದೃಷ್ಟಿಯಿಂದ ಸರ್ಕಾರವು ಪಂಡಿತ ಸಿದ್ದರಾಮ ಜಂಬಲದಿನ್ನಿ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಅಭಿಪ್ರಾಯಪಟ್ಟರು.
ಕಲಬುರಗಿಯ ಆದರ್ಶ ನಗರ ದಾನಮ್ಮದೇವಿ ದೇವಸ್ಥಾನದಲ್ಲಿ ಭಾಗ್ಯಜ್ಯೋತಿ ಜನಪದ ಸಂಗೀತ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಜೂನ್ 18 ರಂದು ಆಯೋಜಿಸಿದ್ದ “ಗಾನಸುಧೆ ಸಂಗೀತ ಸಂಭ್ರಮ” ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಂಗೀತವು ಮಾನವ ಜೀವನದ ಅವಿಭಾಜ್ಯ ಅಂಗವಾಗಿದ್ದು, 84 ಲಕ್ಷ ಜೀವಿಗಳಿಗೂ ಸಂಗೀತವನ್ನು ಆಲಿಸುವ ಸಹಜ ಹಂಬಲವಿದೆ. ಸಂಗೀತ ಹೃದಯವನ್ನು ಸ್ಪರ್ಶಿಸಿ ಮನಸ್ಸಿಗೆ ನೆಮ್ಮದಿ ನೀಡುವ ಅಪಾರ ಶಕ್ತಿ ಹೊಂದಿದೆ.
ಕಲ್ಯಾಣ ಕರ್ನಾಟಕ ಭಾಗವು ಅನೇಕ ಸಂಗೀತಗಾರರು, ವಾಗ್ಗೇಯಕಾರರು ಹಾಗೂ ಜನಪದ ಕಲಾವಿದರನ್ನು ದೇಶಕ್ಕೆ ನೀಡಿದೆ. ಈ ಭಾಗದ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸಲು ಸಂಗೀತ ವಿಶ್ವವಿದ್ಯಾಲಯದ ಸ್ಥಾಪನೆಯ ಅಗತ್ಯವಿದೆ.ಮೈಸೂರಿನಲ್ಲಿ ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಸ್ಥಾಪನೆಗೊಂಡಿದೆ.ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಸಂಗೀತ ವಿವಿ ತುರ್ತು ಅಗತ್ಯ ಎಂದು ಡಾ. ಪೆರ್ಲ ಅಭಿಪ್ರಾಯಪಟ್ಟರು.
ಕಲೆ ಸಂಗೀತ ಬೆಳವಣಿಗೆಗೆ ದೂರದರ್ಶನ ಕೇಂದ್ರ ಉಳಿಸಲು ಪ್ರಯತ್ನ ಅಗತ್ಯ: ರೇವಣಸಿದ್ದ ಶಿವಾಚಾರ್ಯರು
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಶ್ರೀನಿವಾಸ ಸರಡಗಿಯ ಡಾ. ರೇವಣಸಿದ್ದ ಶಿವಾಚಾರ್ಯರು ಮಾತನಾಡಿ ಸಂಗೀತ ಪರಂಪರೆ ಉಳಿಸಲು ಸಂಘ ಸಂಸ್ಥೆಗಳ ಪ್ರೋತ್ಸಾಹ ಅಗತ್ಯ .ಸಂಗೀತ ಕಲಾವಿದರು ಸಾಹಿತಿಗಳು ಬೆಳೆಯಲು ಸಂಸ್ಕೃತಿ ಇಲಾಖೆ, ಆಕಾಶವಾಣಿ, ದೂರದರ್ಶನ ಅಗತ್ಯ ಕೆಲಸ ಮಾಡಬೇಕಾಗಿದೆ. ಕಲಬುರಗಿ ದೂರದರ್ಶನ ಕೇಂದ್ರದ ಉಳಿವಿಗಾಗಿ ಎಲ್ಲರ ಪ್ರಯತ್ನ ಅಗತ್ಯ.ಕಲ್ಯಾಣ ಕರ್ನಾಟಕದ ಸಂಗೀತ ಪರಂಪರೆ ಬಹಳ ಶ್ರೀಮಂತವಾಗಿದ್ದು ಉತ್ತರ ಕರ್ನಾಟಕಕ್ಕೆ ಅವಕಾಶಗಳ ಕೊರತೆ ಮತ್ತು ತಾರತಮ್ಯ ಮಾಡುವುದನ್ನು ಬಿಟ್ಟು ಸರಕಾರ ಆದ್ಯತೆ ನೀಡಬೇಕು ಕಲಾವಿದರಿಗೆ ಸೂಕ್ತ ಸ್ಥಾನ ಮಾನ ಗೌರವ ಸಿಗಬೇಕು ಎಂದರು. ಮೂಡ್ನಾಳಶ್ರೀ ರೇವಣಸಿದ್ಧೇಶ್ವರ ಆಶ್ರಮದ ಸಿದ್ದಾನಂದ ಮಹಾ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಶರಣಗೌಡ, ಪುಸ್ತಕ ಪ್ರಾಧಿಕಾರದ ಸದಸ್ಯ ಬಿ ಎಚ್ ನಿರಗುಡಿ, ಸಾಮಾಜಿಕ ಕಾರ್ಯಕರ್ತೆ ಮಾಲಾ ಕಣ್ಣಿ ಮಾತನಾಡಿದರು. ಈರಯ್ಯ ನಂಜಯ್ಯ ಹಿರೇಮಠ ಪ್ರಾಸ್ತಾವಿಕ ಭಾಷಣ ಮಾಡಿದರು.
ಶರಣ ಗೌಡ ಪಾಳಾ, ರೇವಣಸಿದ್ದ ದುಖಾನ, ಭಾಗ್ಯಜ್ಯೋತಿ ಜನಪದ ಸಂಗೀತ ಸಂಸ್ಥೆಯ ಅಧ್ಯಕ್ಷರಾದ ನಿರ್ಮಲಾ ಕೋಣೆ, ದಾನಮ್ಮ ದೇವಿ ಆಡಳಿತ ಮಂಡಳಿ ಅಧ್ಯಕ್ಷ ಓಂಪ್ರಕಾಶ್ ವಸ್ತ್ರದ, ಅಂಬಾರಾಯ ಕೋಣೆ ಮತ್ತಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.
ಗಾನ ಸುಧೆ ಸಂಗೀತ ಸಂಭ್ರಮ
ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಕಲಾವಿದರು ಸುಗಮ ಸಂಗೀತ, ಭಕ್ತಿಗೀತೆ ಹಾಗೂ ಜನಪದ ತತ್ವಪದ ಗೀತೆಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಸಂಗೀತಾಸಕ್ತರು, ಕಲಾವಿದರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಾಗಲಿಂಗಯ್ಯ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


