ಸಾಗರದಲೆಗಳ ಮೇಲೆ ಯಕ್ಷಲೋಕ ವಿಹಾರ
'ಎತ್ತ ನೋಡಿದರತ್ತ ಕತ್ತಲೆಯ ಮೊತ್ತ| ಕತ್ತೆತ್ತಿ ನೋಡಿದರೆ ಸಾಗರವೆ ಸುತ್ತ| ಅಪಾರ ಜಲರಾಶಿಯ ನಡುವೆ ನಮ್ಮ ಮೂವರ ಜನನ||'
'ದೇವೀ ಮಹಾತ್ಮೆ' ನೋಡಿದವರಿಗೆ ಈ ಮಾತುಗಳು ಬಾಯಿಪಾಠ. ನಮ್ಮ ನಮ್ಮ ಮನಸ್ಸಿನಲ್ಲೇ ಶರಧಿಯ ಮೇಲೆ ಹುಟ್ಟಿ ದಿಕ್ಕೆಟ್ಟು ಬಾಯ್ಬಿಡುವ ತ್ರಿಮೂರ್ತಿಗಳನ್ನು ನಾವಾಗ ಕಲ್ಪಿಸಿಕೊಳ್ಳಬೇಕಷ್ಟೇ! ಆದರೆ ಅದೇ ಯಕ್ಷಗಾನವನ್ನು ಸಮುದ್ರ ಮಧ್ಯದಲ್ಲೇ ಕುಳಿತು ಪ್ರೇಕ್ಷಕರೆಲ್ಲರೂ ನೋಡುವಂತಾದರೆ ಹೇಗೆ? ಅಸಾಧ್ಯ ತಾನೆ! ಆದರೆ ಅದನ್ನು ಸಾಧ್ಯವಾಗಿಸಿದ ಸಮುದ್ರಯಾನದ ಒಂದು ಸಾಹಸ ಗಾಥೆ ಇಲ್ಲಿದೆ.
ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಮತ್ತು ತಿರಂಗ ಸಂಗಮ ಮುಂಬಯಿ ಜೊತೆಯಾಗಿ 2026 ಜೂನ್ 1ರಿಂದ 5 ರವರೆಗೆ ಏರ್ಪಡಿಸಿದ್ದ 'ಸಮುದ್ರಯಾನ' ಯಕ್ಷಗಾನದ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮುಂಬಯಿಯಿಂದ 640 ಜನ ಪ್ರವಾಸಿಗರಿಗೆ ಅದೊಂದು ಅವಿಸ್ಮರಣೀಯ ಯಾತ್ರೆಯಾಗಿತ್ತು. ಹತ್ತು ಅಂತಸ್ತುಗಳಿರುವ 'ಕೊರ್ಡೇಲಿಯಾ ಕ್ರೂಸ್' ಎಂಬ ಐಷಾರಾಮೀ ಹಡಗಿನಲ್ಲಿ ಮುಂಬೈ ಪೋರ್ಟ್ ಪರಿಸರದ ಪಿಯರ್ಸ್ ನ ಅಲೆಕ್ಸಾಂಡರ್ ಗ್ರೀನ್ ಗೇಟ್ ಒಳಗಿರುವ ಇಂಟರ್ನ್ಯಾಷನಲ್ ಕ್ರೂಸ್ ಟರ್ಮಿನಲ್ ನಲ್ಲಿ ಜೂನ್ ಒಂದರಂದು ಹಡಗನ್ನೇರಿ ಲಕ್ಷದ್ವೀಪದ ಕಡೆಗೆ ಹೊರಟ ಪ್ರವಾಸಿ ತಂಡ ಅರಬ್ಬೀ ಸಮುದ್ರದ ಮುಖಾಂತರ ಲಕ್ಷದ್ವೀಪದ ಕಡೆಗೆ ಹೊರಟು ಹಿಂದಿರುಗುವ ನಡುವೆ ತೇಲುವ ಹಡಗಲಿ ಯಕ್ಷಲೋಕವನ್ನೇ ಸಾಕ್ಷಾತ್ಕರಿಸಿದ ಘಟನೆ ನಡೆಯಿತು.
ಸಮುದ್ರ ಮಧ್ಯೆ ಅಬ್ಬರಿಸಿದ ಮಹಿಷಾಸುರ:
ಪ್ರವಾಸೀ ಹಡಗಿನ ಐದನೇ ಮಹಡಿಯಲ್ಲಿ ಅತ್ಯಾಧುನಿಕ ವ್ಯವಸ್ಥೆಯ ದೊಡ್ಡ ಸಭಾಂಗಣವಿದ್ದು ದಿನಕ್ಕೆ ಮೂರು ಬಾರಿ ಅಲ್ಲಿ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿತ್ತು. ಹಿಂದಿ, ಇಂಗ್ಲಿಷ್, ಪಂಜಾಬಿ, ಮರಾಠಿ ಭಾಷೆಗಳಲ್ಲಿ ನೃತ್ಯ, ನಾಟಕ, ಜಾದೂ, ಫಿಲ್ಮಿ ಡ್ಯಾನ್ಸ್ ಗಳಿಗಷ್ಟೇ ಸೀಮಿತವಾಗಿದ್ದ ಆ ಸಭಾಂಗಣದಲ್ಲಿ ಮೊದಲ ಬಾರಿಗೆ ಕರಾವಳಿಯ ಚೆಂಡೆ - ಮದ್ದಳೆಗಳನ್ನು ಮೊಳಗಿಸಿದ ಕೀರ್ತಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಗೆ ಸಲ್ಲುತ್ತದೆ. ತೆಂಕುತಿಟ್ಟಿನ ಹೆಸರಾಂತ ಪಾವಂಜೆ ಮೇಳದ 13 ಮಂದಿ ಕಲಾವಿದರು ಸಮುದ್ರದಲೆಗಳ ಮೇಲೆ ಹೊಯ್ದಾಡುತ್ತಾ ಮುಂದೆ ಸಾಗುವ ಬೃಹತ್ ನೌಕೆಯ ವೇದಿಕೆಯನ್ನೇ ರಂಗಸ್ಥಳವನ್ನಾಗಿಸಿ ಎರಡು ಯಕ್ಷಗಾನ ಗಳನ್ನು ಪ್ರದರ್ಶಿಸಿದರು.
ಜೂನ್ 2ರಂದು ಹಡಗು ಸಮುದ್ರ ಮಧ್ಯದಲ್ಲಿರುವಾಗ ಪ್ರದರ್ಶನಗೊಂಡ 'ಶ್ರೀದೇವಿ ಮಹಾತ್ಮೆ' ಯಕ್ಷಗಾನ ಸುಮಾರು ಎರಡೂವರೆ ತಾಸು ಕಿಕ್ಕಿರಿದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ತ್ರಿಮೂರ್ತಿಗಳಿಗೆ ಆದಿಮಾಯೆ ಅಭಯ ನೀಡುವಲ್ಲಿಂದ ತೊಡಗಿ ದೇವಿ ಮಹಿಷಾರಸುರನನ್ನು ವಧಿಸುವವರೆಗಿನ ಕಥಾ ಭಾಗವನ್ನು ಕಲಾವಿದರು ಅತ್ಯುತ್ತಮವಾಗಿ ಅಭಿನಯಿಸಿದರು. ಮಹಿಷಾಸುರನ ಪಾತ್ರ ಸಭೆಯಿಂದಲೇ ಪ್ರವೇಶ ಮಾಡುವ ಪದ್ಧತಿ ಇಲ್ಲಿಯೂ ಸಾಕಾರಗೊಂಡಾಗ ಆ ಅಬ್ಬರಕ್ಕೆ ಊರವರೊಂದಿಗೆ ಹೊಸ ಪ್ರೇಕ್ಷಕರೂ ದಂಗಾಗಿ ಹೋದರು. ಕಡಲ ನಡುವೆ ಚಾಮುಂಡೇಶ್ವರಿ ಮೈದೋರಿದಾಗ ನೆರೆದ ದೇವಗಣದೊಂದಿಗೆ ತಾವೂ ಜಯ ಜಯವೆಂದರು. ಒಟ್ಟು ಪ್ರದರ್ಶನ ನಮ್ಮೂರಿನ ಬಯಲಾಟದಂತೆ ನಡೆದರೂ ನಾವು ಹೊರಾಂಗಣದಲ್ಲಿ ಬಳಸುವ ಬೆಂಕಿಯ ದೀವಟಿಗೆ ಮತ್ತು ಕಬ್ಬಿಣದ ಆಯುಧಗಳಿಗೆ ಅಲ್ಲಿ ಅವಕಾಶವಿರಲಿಲ್ಲ.
ಸಾಗರದಲ್ಲೇ ಸಮುದ್ರ ಮಥನ:
ಲಕ್ಷದ್ವೀಪದಲ್ಲಿ ವಿಹಾರ ಮಾಡಿ ಹಿಂದಿರುಗುವಾಗ ಜೂನ್ ನಾಲ್ಕರಂದು ಅದೇ ರಂಗಸ್ಥಳದಲ್ಲಿ ಮತ್ತೊಂದು ಯಕ್ಷಗಾನ ಪ್ರದರ್ಶನವಿತ್ತು. ಅದು ಸಾಗರದಲ್ಲಿ ನಡೆದ 'ಸಮುದ್ರ ಮಥನ' ಪ್ರಸಂಗ. ದೂರ್ವಾಸನ ಶಾಪದಿಂದ ಸಮುದ್ರ ಪಾಲಾದ ದೇವಲೋಕದ ಸಂಪತ್ತನ್ನು ಮರಳಿ ಪಡೆಯಲು ದೇವಾಸುರರು ಒಂದಾಗಿ ಸಮುದ್ರ ಮಥನ ಮಾಡುವ ಸನ್ನಿವೇಶದಲ್ಲಿ ಮಂದರ ಪರ್ವತವನ್ನು ಸುತ್ತು ಹಾಕಿದ ವಾಸುಕಿಯ ಮಾದರಿಯೊಂದನ್ನು ವೇಷಧಾರಿಗಳು ಸಭೆಯ ಮೂಲಕವೇ ಹೊತ್ತು ತಂದಿದ್ದು ವಿಶೇಷ ಆಕರ್ಷಣೆಗೆ ಕಾರಣವಾಯಿತು. ಲಕ್ಷ್ಮೀ ಸ್ವಯಂವರ, ಅಮೃತೋದ್ಭವ, ಮೋಹಿನೀ ವಿಲಾಸದ ದೃಶ್ಯಗಳಿಗೆ ಸಭೆಯಿಂದ ಶಿಲ್ಲೆ - ಚಪ್ಪಾಳೆಗಳ ಪ್ರತಿಕ್ರಿಯೆ ದೊರೆಯಿತು. 'ದೇವೀ ಮಹಾತ್ಮೆ' ಯಲ್ಲವತರಿಸಿದ ಶ್ರೀದೇವಿ ಮತ್ತು 'ಸಮುದ್ರ ಮಥನ'ದಲ್ಲುದಿಸಿದ ಸಿರಿದೇವಿ ತಮ್ಮ ಹಾವ ಭಾವ ನರ್ತನಗಳಿಂದ ಎಲ್ಲರ ಮನರಂಜಿಸುವಲ್ಲಿ ಸಫಲರಾದರು. ಹಾಸ್ಯ ಪಾತ್ರಧಾರಿಯ ಮಾತು - ಅಭಿನಯ ಕಡಲಲ್ಲಿ ಮತ್ತೊಂದು ನಗೆಗಡಲನ್ನು ನಿರ್ಮಿಸಿತ್ತು.
ಈ ಎರಡೂ ಪ್ರದರ್ಶನಗಳಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯಿತ್ತು. ಗುರುಪ್ರಸಾದ್ ಬೊಳಿಂಜಡ್ಕ ಮತ್ತು ಪ್ರಶಾಂತ ಶೆಟ್ಟಿ ವಗೆನಾಡು ಹಿಮ್ಮೇಳದಲ್ಲಿದ್ದರು. ವಿವಿಧ ಪಾತ್ರಗಳಲ್ಲಿ ಪಾವಂಜೆ ಮೇಳದ ಕಲಾವಿದರಾದ ದಿನೇಶ್ ಶೆಟ್ಟಿ ಕಾವಳಕಟ್ಟೆ (ಮಹಾವಿಷ್ಣು); ರಾಧಾಕೃಷ್ಣ ನಾವಡ ಮಧೂರು (ವಿದ್ಯುನ್ಮಾಲಿ/ಬಲಿ); ಶಶಿಕಾಂತ ಶೆಟ್ಟಿ ಕಾರ್ಕಳ (ಮಾಲಿನಿ/ಲಕ್ಷ್ಮಿ) ಮಾಧವ ಬಂಗೇರ ಕೊಳತ್ತಮಜಲು (ಬ್ರಹ್ಮ /ಈಶ್ವರ), ರಾಕೇಶ್ ರೈ ಅಡ್ಕ (ದೇವೇಂದ್ರ), ಮನೀಶ್ ಪಾಟಾಳಿ (ಮಹಿಷಾಸುರ), ರಾಜೇಶ್ ನಿಟ್ಟೆ (ಶ್ರೀದೇವಿ/ ಮೋಹಿನಿ); ಸಂದೇಶ್ ಮುಂದಾರ (ಹಾಸ್ಯ); ಲೋಕೇಶ್ ಮುಚ್ಚೂರು (ಯಕ್ಷ); ದಿವಾಕರ ಕಾಣಿಯೂರು (ದೇವತೆ) ಗಮನ ಸೆಳೆದರು. ಹವ್ಯಾಸಿ ಕಲಾವಿದರಾದ ಕದ್ರಿ ನವನೀತ ಶೆಟ್ಟಿ, ಸಂಜಯ ಕುಮಾರ್ ರಾವ್, ವಿನಯ ಆಚಾರ್ಯ ಹೊಸಬೆಟ್ಟು ಹಾಗೂ ಪೂರ್ಣಿಮಾ ಶಾಸ್ತ್ರಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು.
ಸಮುದ್ರದ ತೆರೆಗಳ ಏರಿಳಿತದಲ್ಲಿ ಹಡಗು ಉಯ್ಯಾಲೆಯಾಡುತ್ತಾ ಸಾಗುತ್ತಿರಬೇಕಾದರೆ ಒಳಗಿನ ವೇದಿಕೆಯಲ್ಲಿ ಕುಣಿಯುವ ಕಲಾವಿದರಿಗೆ ಕುಲುಕಾಟದ ಅನುಭವವಾಗುತ್ತಿತ್ತು. ರಂಗಸ್ಥಳದ ತಮ್ಮ ಸಂಭಾಷಣೆಯಲ್ಲಿ ಅದನ್ನವರು ವಿನೋದವಾಗಿ ಆಡಿ ತೋರಿಸಿದ್ದು ಸ್ವಾರಸ್ಯಕರವಾಗಿತ್ತು. ಕ್ರೂಸ್ ನ ಒಳಗಿನ ವೈಭವ, ಮನೋರಂಜನೆ, ವಿಶಾಲ ಸಾಗರದ ವಿಹಂಗಮ ನೋಟ, ವೈವಿಧ್ಯಮಯ ಊಟೋಪಚಾರ, ಮೋಜು-ಮಸ್ತಿ ಎಲ್ಲರಿಗೂ ಹಿತ ನೀಡಿತ್ತು. ಅದರೊಂದಿಗೆ ಕರಾವಳಿಯ ಯಕ್ಷಗಾನ ಪ್ರದರ್ಶನ ಹೊಸ ದಾಖಲೆ ಬರೆದದ್ದು ಸುಳ್ಳಲ್ಲ.
ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಸಮರ್ಥ ನಿರ್ದೇಶನದಲ್ಲಿ ಅವಳಿ ಯಕ್ಷಗಾನ ಪ್ರದರ್ಶನ ಅಪೂರ್ವ ಯಶಸ್ಸು ಕಂಡಿತು. ಪಟ್ಲ ಫೌಂಡೇಶನ್ ನ ಗೌರವಾಧ್ಯಕ್ಷ ಡಾ| ಸದಾಶಿವ ಶೆಟ್ಟಿ ಕನ್ಯಾನ, ಸಂಚಾಲಕ ಶಶಿಧರ ಶೆಟ್ಟಿ ಬರೋಡಾ, ಭವಾನಿ ಶಿಪ್ಪಿಂಗ್ ನ ಕುಸುಮೋದರ ಡಿ. ಶೆಟ್ಟಿ ಚೆಲ್ಲಡ್ಕ ಅವರು ಪ್ರವಾಸದುದ್ದಕ್ಕೂ ಜೊತೆಯಾದದ್ದು ಕಲಾವಿದರಲ್ಲಿ ವಿಶೇಷ ಹುರುಪು ಮೂಡಿಸಿತು. ಅಲ್ಲದೆ ಅವರಿಂದ ಒಂದಷ್ಟು ನಗದು ಪಾರಿತೋಷಕವೂ ಲಭಿಸಿದ್ದು ಕಲಾವಿದರ ಸಂತಸಕ್ಕೆ ಕಾರಣವಾಯಿತು. ಒಟ್ಟಾರೆಯಾಗಿ ಉದ್ಯಮಿ ಬರೋಡಾ ಶಶಿಧರ ಶೆಟ್ಟಿ ಅವರ ವಿಶಿಷ್ಟ ಪರಿಕಲ್ಪನೆಯ ಈ ಸಾಗರಯಾನಕ್ಕೆ ಸಂಯೋಜನೆಯಲ್ಲಿ ಸಹಕರಿಸಿದ ಮುಂಬೈ ಸಂಘಟಕ ಕರ್ನೂರು ಮೋಹನ್ ರೈ ಮತ್ತು ಮಂಗಳೂರಿನ ಪ್ರದೀಪ್ ಆಳ್ವ ಕದ್ರಿ ಅವರೊಂದಿಗೆ ಕೈಜೋಡಿಸಿದ ತ್ರಿರಂಗ ಸಂಗಮದ ಅಶೋಕ್ ಪಕ್ಕಳ, ನವೀನ್ ಶೆಟ್ಟಿ ಇನ್ನ ಅಭಿನಂದನಾರ್ಹರು.
- ಭಾಸ್ಕರ ರೈ ಕುಕ್ಕುವಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



