ಬೆಂಗಳೂರು: ಸಂಸ್ಕೃತ ಸಾಹಿತ್ಯ, ದ್ವೈತ ವೇದಾಂತ ಹಾಗೂ ಶಾಸ್ತ್ರ ಸಂಶೋಧನಾ ಕ್ಷೇತ್ರದ ಮಹನೀಯರಾದ ದಿವಂಗತ ಪ್ರೊ. ಕೆ.ಟಿ. ಪಾಂಡುರಂಗಿ ಹಾಗೂ ವಿದ್ವಾನ್ ಗುರುರಾಜಾಚಾರ್ಯ ಪಾಂಡುರಂಗಿ ಅವರ ಜನ್ಮಶತಮಾನೋತ್ಸವವನ್ನು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಯಿತು.
ಪರಮಪೂಜ್ಯ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಮುಖ್ಯ ಅತಿಥಿಯಾಗಿ ಭಾರತೀಯ ತತ್ವಚಿಂತನೆ ಮತ್ತು ಸಂಶೋಧನಾ ಪರಿಷತ್ (ICPR), ನವದೆಹಲಿ ಸದಸ್ಯ ಕಾರ್ಯದರ್ಶಿ ಪ್ರೊ. ಸಚ್ಚಿದಾನಂದ ಮಿಶ್ರಾ ಹಾಗು ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ಅಧ್ಯಕ್ಷರಾದ ಪ್ರೊ. ಸಚ್ಚಿದಾನಂದ ಉಡುಪ , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಮಲ್ಲೇಪುರಂ ಜಿ ವೆಂಕಟೇಶ ಹಾಗು ವಿದ್ವಾನ್ ಎ ಹರಿದಾಸ ಭಟ್ ಉಪಸ್ಥಿತರಿದ್ದರು .
ಎರಡು ದಿನಗಳ ಅವಧಿಯಲ್ಲಿ ನಡೆದ ಶಾಸ್ತ್ರಗೋಷ್ಠಿಗಳಲ್ಲಿ ಅನೇಕ ವಿದ್ವಾಂಸರು ಭಾಗವಹಿಸಿ, ಕೆ.ಟಿ. ಪಾಂಡುರಂಗಿ ಹಾಗೂ ಗುರುರಾಜಾಚಾರ್ಯ ಪಾಂಡುರಂಗಿಯವರ ಶಾಸ್ತ್ರಸೇವೆ, ಹಸ್ತಪ್ರತಿ ಸಂರಕ್ಷಣೆ, ಗ್ರಂಥಸಂಪಾದನೆ, ಸಂಶೋಧನೆ, ಜ್ಞಾನಪ್ರಸಾರ, ಶಿಷ್ಯಪೋಷಣೆ ಹಾಗೂ ಸರಳ ವ್ಯಕ್ತಿತ್ವವನ್ನು ಸ್ಮರಿಸಿದರು. ಪಾಂಡುರಂಗಿ ಕುಟುಂಬವು ದ್ವೈತ ಸಾಹಿತ್ಯ ಮತ್ತು ಸಂಸ್ಕೃತ ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದರು .
ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ್ವೈತದರ್ಶನದ ಗ್ರಂಥಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕೆ.ಟಿ. ಪಾಂಡುರಂಗಿಯವರ ಪಾತ್ರವನ್ನು ವಿಶೇಷವಾಗಿ ಉಲ್ಲೇಖಿಸಲಾಯಿತು. ಇದೇ ಸಂದರ್ಭದಲ್ಲಿ ಜೀತಂತೇಸ್ತೋತ್ರ, ಗೀತಾವಿವೃತಿ, ಗುರುಕೃಪಾ ಹಾಗೂ ವ್ಯುತ್ಪತ್ತಿವಾದವಿಮರ್ಶ ಸೇರಿದಂತೆ ಹಲವು ಗ್ರಂಥಗಳನ್ನು ಲೋಕಾರ್ಪಣೆ ಮಾಡಲಾಯಿತು.
ಎರಡನೇ ದಿನ ಹಸ್ತಪ್ರತಿ ಸಂರಕ್ಷಣೆ, ಸಂಶೋಧನೆ ಹಾಗೂ ಗ್ರಂಥಪ್ರಕಟಣೆಯಲ್ಲಿ ಕೆ.ಟಿ. ಪಾಂಡುರಂಗಿಯವರ ಅಪೂರ್ವ ಸಾಧನೆಯನ್ನು ವಿದ್ವಾಂಸರು ವಿವರಿಸಿದರು. ಭಂಡಾರಿಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಅವರಿಗೆ ಪ್ರದತ್ತವಾದ “ಸೂರಿಸಾರಂಗ” ಹಾಗೂ “ಉಪೋದ್ಘಾತ ಪ್ರವೀಣ” ಬಿರುದುಗಳನ್ನು ಸ್ಮರಿಸಿದರು.
ಇದೆ ಸಂದರ್ಭದಲ್ಲಿ ಪೂರ್ಣಪ್ರಜ್ಞ ಸಂಶೋಧನಾ ಮಂದಿರ ನಿರ್ಮಿಸಿದ “ಆನಂದಮಕರಂದ” ಜಾಲತಾಣವನ್ನು ಉದ್ಘಾಟಿಸಲಾಯಿತು. ಈ ಜಾಲತಾಣದಲ್ಲಿ ಆಚಾರ್ಯರ ಸರ್ವಮೂಲ ಗ್ರಂಥಗಳು ಸಂಸ್ಕೃತ, ಕನ್ನಡ, ಇಂಗ್ಲಿಷ್ ಸೇರಿದಂತೆ ವಿವಿಧ ಭಾಷಾ ಲಿಪಿಗಳಲ್ಲಿ ಲಭ್ಯವಿದೆ .
ಸಮಾರೋಪ ಸಮಾರಂಭದಲ್ಲಿ ಪರಮಪೂಜ್ಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಪೂರ್ಣಪ್ರಜ್ಞ ವಿದ್ಯಾಪೀಠದ ಬೆಳವಣಿಗೆಯಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಜೊತೆಗೆ ಕೆ.ಟಿ. ಪಾಂಡುರಂಗಿ, ಗುರುರಾಜಾಚಾರ್ಯ ಪಾಂಡುರಂಗಿ ಹಾಗೂ ಅನೇಕ ವಿದ್ವಾಂಸರ ಪರಿಶ್ರಮ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಡಾ. ಜಯತೀರ್ಥ ಮೇವುಂಡಿಯವರ ಸಂಗೀತ ಕಾರ್ಯಕ್ರಮದೊಂದಿಗೆ ಎರಡು ದಿನಗಳ ಜನ್ಮಶತಮಾನೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡವು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


