"ಅಣ್ಣಾಮಲೈ" ಎಂಬ ಹೆಸರು ಅವರ ತವರು ನಾಡು ತಮಿಳುನಾಡಿಗಿಂತ ಕರ್ನಾಟಕದಲ್ಲಿಯೇ ಹೆಚ್ಚು ಪ್ರಚಲಿತವಾಗಿದೆ. ಇದು ಅವರಿಗೆ ತಮಿಳುನಾಡಿನಲ್ಲಿ ಹಿನ್ನಡೆಯಾಗಲು ಪ್ರಮುಖ ಕಾರಣ ಎನ್ನುವುದು ಅಷ್ಟೇ ಸತ್ಯ. ಅವರು ಕರ್ನಾಟಕದಲ್ಲಿ ಜಿಲ್ಲಾ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಯಾಗಿ ಸಾಕಷ್ಟು ಹೆಸರು ಗಳಿಸಿ, ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಅವರಿಗೊಂದು ರಾಜಕೀಯದ ಮಹತ್ವಾಕಾಂಕ್ಷೆ ಚಿಗುರೊಡೆಯಿತು. ಯಾವುದೇ ಅರ್ಹತೆ ಇಲ್ಲದ ರಾಜಕೀಯ ವ್ಯಕ್ತಿಗಳಿಂದ ದಿನನಿತ್ಯ ಪಾಠ ಕೇಳಿಸಿಕೊಳ್ಳುವುದಕ್ಕಿಂತ, ತಾವೇ ಪಾಠ ಹೇಳುವ ರಾಜಕೀಯ ಸ್ಥಾನಕ್ಕೆ ಏರಿದರೆ ಹೇಗೆ ಎಂಬ ಹಿರಿಯಾಸೆ ಅವರಲ್ಲಿ ಮೂಡಿರಬೇಕು. ಇದಕ್ಕೆ ಕರ್ನಾಟಕ ಬಿಜೆಪಿಯ ಕೆಲವು ಪ್ರಮುಖ ರಾಜಕೀಯ ಧುರೀಣರೇ ಕಾರಣಕರ್ತರು ಎನ್ನುವುದನ್ನು ಸ್ವತಃ ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಹಾಗಾಗಿಯೇ, ಕೇವಲ ಹತ್ತು ವರ್ಷಗಳ ಐ.ಪಿ.ಎಸ್. ಸೇವೆಯ ನಂತರ ಸ್ವಯಂ ನಿವೃತ್ತಿ ಘೋಷಿಸಿದ ಅವರು, ಬಿಜೆಪಿಯತ್ತ ಒಲವು ತೋರಿದರು. ಅಲ್ಲದೆ, ಪಕ್ಷದ ರಾಷ್ಟ್ರೀಯ ನಾಯಕರೊಂದಿಗೂ ನಿಕಟ ಒಡನಾಟ ಬೆಳೆಸಿಕೊಂಡರು.
"ಅಣ್ಣಾಮಲೈ" ಎಂಬ ಹೆಸರು ತಮಿಳುನಾಡಿನ ಮಣ್ಣಿನದ್ದೇ ಆಗಿದೆ. ಹೊಸ ರಕ್ತ, ಹೊಸ ಶಕ್ತಿ ಮತ್ತು ಹೊಸ ಚಿಂತನೆಗಳ ಯುವಶಕ್ತಿಯನ್ನು ತಮಿಳುನಾಡಿನಲ್ಲಿ ಬಿಜೆಪಿಯ ಹೊಸ ಅಸ್ತ್ರವಾಗಿ ಬಳಸಬಹುದು ಎಂಬ ದೂರಾಲೋಚನೆಯೊಂದಿಗೆ ಹೈಕಮಾಂಡ್ ಅವರನ್ನು ಒಮ್ಮೆಲೇ ತಮಿಳುನಾಡು ರಾಜಕಾರಣದ ಮುಂಚೂಣಿ ನಾಯಕತ್ವದ ಪೀಠಕ್ಕೆ ತಂದು ಕೂರಿಸಿತು. ಅದಾಗಲೇ ತಮಿಳುನಾಡಿನಲ್ಲಿ ಬಲವಾಗಿ ಬೇರುಬಿಟ್ಟಿರುವ ಡಿ.ಎಂ.ಕೆ ಮತ್ತು ಎ.ಐ.ಎ.ಡಿ.ಎಂ.ಕೆ ಪಕ್ಷಗಳ ಬೇರುಗಳನ್ನು ಅಲುಗಾಡಿಸಬೇಕಾದರೆ ಅಣ್ಣಾಮಲೈ ಅವರಂತಹ ವ್ಯಕ್ತಿಯೇ ಅನಿವಾರ್ಯ ಎಂಬ ತೀರ್ಮಾನಕ್ಕೆ ಬಿಜೆಪಿ ವರಿಷ್ಠರು ಬಂದರು.
ಇದರ ಮೊದಲ ಪ್ರಯೋಗವಾಗಿ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾಮಲೈ ಅವರು ಕೊಯಮತ್ತೂರು ಕ್ಷೇತ್ರದಲ್ಲಿ ಸ್ಪರ್ಧಿಸಿದರು. ಆದರೆ, 'ಪ್ರಥಮ ಚುಂಬನದಲ್ಲೇ ದಂತಭಂಗ' ಎಂಬಂತೆ ಮೊದಲ ಚುನಾವಣೆಯಲ್ಲೇ ಸೋಲಿನ ಕಹಿ ಅನುಭವಿಸುವಂತಾಯಿತು. ಆದರೂ ಧೃತಿಗೆಡದ ಅವರು, ತಮಿಳುನಾಡಿನಲ್ಲಿ ಬಿಜೆಪಿಗೆ ಜೀವ ತುಂಬುವ ಭರವಸೆಯೊಂದಿಗೆ ಪಕ್ಷದಲ್ಲಿ ಮುಂದುವರಿದರು. ಹಲವು ಸಂದರ್ಭಗಳಲ್ಲಿ ಅವರಿಗೆ ಪಕ್ಷದ ಆಂತರಿಕ ನಿರ್ಧಾರಗಳಿಂದ ಮನಸ್ಸಿಗೆ ನೋವಾಗುವ ಅನುಭವವೂ ಆಯಿತು. ಆದರೂ ಎಲ್ಲವನ್ನೂ ಸಹಿಸಿಕೊಂಡಿದ್ದ ಅಣ್ಣಾಮಲೈ ಅವರಿಗೆ ತೀವ್ರ ನಿರಾಶೆ ಮೂಡಿಸಿದ್ದು ಇತ್ತೀಚಿನ ಚುನಾವಣಾ ಬೆಳವಣಿಗೆಗಳು. ಬಿಜೆಪಿ ಮತ್ತೆ ಎ.ಐ.ಎ.ಡಿ.ಎಂ.ಕೆ ಜೊತೆ ಮೈತ್ರಿ ಮಾಡಿಕೊಂಡದ್ದು ಅಣ್ಣಾಮಲೈ ಅವರ ವೈಯಕ್ತಿಕ ಕನಸುಗಳನ್ನು ನುಚ್ಚುನೂರು ಮಾಡಿತು ಎನ್ನುವುದು ಕಟು ಸತ್ಯ.
ಈ ಎಲ್ಲಾ ಸರಣಿ ಬೆಳವಣಿಗೆಗಳಿಂದ ಮನನೊಂದ ಅಣ್ಣಾಮಲೈ ಅವರು ಸದ್ಯ ಬಿಜೆಪಿಗೆ ಗುಡ್‌ಬೈ ಹೇಳಿ, ಹೊಸ ಪಕ್ಷ ಕಟ್ಟುವ ಹುರುಪಿನೊಂದಿಗೆ ತಮಿಳುನಾಡಿನಲ್ಲಿ ಹೊಸ ರಾಜಕೀಯ ಪ್ರಯೋಗಕ್ಕೆ ಅಡಿಗಲ್ಲು ಹಾಕಿದ್ದಾರೆ.
ಹಾಗಾದರೆ, ಈ ಸ್ಫೂರ್ತಿಯ ಚಿಲುಮೆಯಿಂದ ಎದ್ದು ಬಂದಿರುವ ಅಣ್ಣಾಮಲೈ ಅವರ ಹೊಸ ರಾಜಕೀಯ ಪ್ರಯೋಗ ಮುಂದೆ ಯಶಸ್ಸು ಕಾಣುವುದೇ? ಎಂಬ ಯಕ್ಷಪ್ರಶ್ನೆ ಈಗ ನಮ್ಮ ಮುಂದಿದೆ. ತಮಿಳುನಾಡಿನಲ್ಲಿ ಬಿಜೆಪಿಗೆ ಸ್ವಂತ ಸಾಮರ್ಥ್ಯದಿಂದ ತಲೆ ಎತ್ತುವುದು ಸದ್ಯಕ್ಕೆ ಕಷ್ಟಸಾಧ್ಯ ಎಂಬ ಸಂದೇಶವನ್ನು ಅಣ್ಣಾಮಲೈ ಅವರು ತಮ್ಮ ರಾಜೀನಾಮೆಯ ಮೂಲಕ ಪಕ್ಷದ ವರಿಷ್ಠರಿಗೆ ಎಚ್ಚರಿಸಿದಂತಿದೆ.
ಕೇವಲ ಒಂದೂವರೆ ವರ್ಷಗಳ ರಾಜಕೀಯ ಹೋರಾಟದ ಸಂಕಲ್ಪದಿಂದಲೇ ನಟ ವಿಜಯ್ ಅವರ 'ಟಿ.ವಿ.ಕೆ' ಪಕ್ಷ ಕೇವಲ ಅವರ ಹೆಸರಿನಲ್ಲೇ ಪವಾಡ ಸೃಷ್ಟಿಸಿದೆ ಎಂದಮೇಲೆ, "ಇದು ನನ್ನಿಂದ ಏಕೆ ಸಾಧ್ಯವಿಲ್ಲ?" ಎಂಬ ಒಳಗಿನ ಧೈರ್ಯ ಅಣ್ಣಾಮಲೈ ಅವರಲ್ಲಿ ಹೊಸ ಸ್ಫೂರ್ತಿ ತುಂಬಿರಬೇಕು.
ಆದರೆ ಒಂದಂತೂ ಸತ್ಯ; ತಮಿಳುನಾಡಿನ ಮತದಾರರು ತೀವ್ರ ಪ್ರಾದೇಶಿಕ ಮನೋಭಾವದ ಜನರು ಎನ್ನುವುದನ್ನು ಅಲ್ಲಿನ ರಾಜಕೀಯ ಇತಿಹಾಸವೇ ದಾಖಲಿಸಿದೆ. ಅವರ ನೆಲ, ಜಲ, ಭಾಷೆ ಮತ್ತು ಪ್ರಾದೇಶಿಕ ನಾಯಕತ್ವದ ಪ್ರೇಮ ಅತ್ಯಂತ ಗಟ್ಟಿಯಾದದ್ದು. ಇದರ ಜೊತೆಗೆ ಸಿನಿಮಾ ಗೀಳು ಅಂಟಿಕೊಂಡಿರುವುದರಿಂದ, ಬೆಳ್ಳಿತೆರೆಯ ಡೈಲಾಗ್‌ಗಳೇ ತಮಿಳುನಾಡಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಿಬಿಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅಣ್ಣಾಮಲೈ ಅವರಂತಹ ಒಬ್ಬ ಸುಶಿಕ್ಷಿತ, ಮಾಜಿ ಅಧಿಕಾರಿಯನ್ನು ತಮಿಳುನಾಡಿನ ಜನಸಾಮಾನ್ಯರು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತಾರೆ ಎನ್ನುವುದು ಸದ್ಯದ ದೊಡ್ಡ ಪ್ರಶ್ನೆ.
ಕೇವಲ ಒಂದೇ ದಿನದಲ್ಲಿ ಹದಿನೈದು ಲಕ್ಷಕ್ಕೂ ಹೆಚ್ಚು ಜನರು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಬೆಂಬಲಿಸಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ, ಈ ಬೆಂಬಲಿಗರಲ್ಲಿ ತಮಿಳುನಾಡಿನವರು ಎಷ್ಟು ಜನ ಮತ್ತು ಕನ್ನಡಿಗರು ಎಷ್ಟು ಜನ ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ. ಅಣ್ಣಾಮಲೈ ಅವರಂತಹ ರಾಷ್ಟ್ರೀಯವಾದಿ ಚಿಂತಕರು ತಮಿಳುನಾಡಿನಲ್ಲಿ ರಾಜಕೀಯವಾಗಿ ಗಟ್ಟಿಯಾಗಿ ನೆಲೆನಿಲ್ಲಬೇಕಾದರೆ, ಅವರು ತಮ್ಮ ಸಂಪೂರ್ಣ ಅಸ್ತಿತ್ವ ಮತ್ತು ಉಸಿರನ್ನು ತಮಿಳುನಾಡಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾದರೂ ಆಶ್ಚರ್ಯ ಪಡಬೇಕಾಗಿಲ್ಲ.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


