ಕಥೆ: ನೆನಪಿನ ಹಾಳೆ

Upayuktha
0

ಅಂದಿನ ನೆನಪು ಇಂದಿಗೂ ಒಮ್ಮೊಮ್ಮೆ ನಿದ್ದೆಗೆಡಿಸುತ್ತದೆ. ಯುವಕನಿದ್ದಾಗ ಪ್ರೀತಿ ಪ್ರೇಮ ಏನೆಂದು ಅರ್ಥವಾಗಿರಲಿಲ್ಲ. ಹೆಣ್ಣುಮಕ್ಕಳ ಬಗ್ಗೆ ಯಾರಾದರೂ ಲಘುವಾಗಿ ಮಾತನಾಡಿದರೆ, ಅದು ಕಿವಿಗೆ ಬಿದ್ದ ಕೂಡಲೇ ಅಸಹ್ಯವೆನಿಸುತ್ತಿತ್ತು. ನನ್ನ ಮನಸ್ಸು ಹೇಳುತ್ತಿತ್ತು—  “ಹುಡುಗಿಗೆ ಅವಳ ಸ್ವಾತಂತ್ರ್ಯವಿದೆ, ಬದುಕಿದೆ. ಹುಡುಗನ ಅವಶ್ಯಕತೆ ಎಂದೇನಿಲ್ಲ, ಅವಳಿಗೆ ಕುಟುಂಬ, ಅಪ್ಪ, ಅಮ್ಮ, ಸಹೋದರ ಸಹೋದರಿ ಎಲ್ಲರೂ ಇದ್ದಾರಲ್ಲ.”


ಆ ದಿನಗಳಲ್ಲಿ ನನ್ನ ಮನಸ್ಸಿನೊಳಗೆ ಇಂತಹ ಯೋಚನೆಯಷ್ಟೆ ಇತ್ತು. ಸ್ತ್ರೀ ಒಂದು ಪವಿತ್ರ ಪರಿಕಲ್ಪನೆ. ಆದರೆ ಲಘುವಾಗಿ ಮಾತನಾಡುತ್ತಿದ್ದ ಒಬ್ಬಿಬ್ಬರು ಗೆಳೆಯರು ನನ್ನ ಮೌನವನ್ನು ಛೇಡಿಸಿದ್ದೂ ಇದೆ. ಸುಧಾಕರ ಎಂಬ ಸಹಪಾಠಿಯಂತೂ ನೀನು ಮದುವೆ ಆಗುದಿಲ್ಲವಾ? ಹುಡುಗಿ ಎಂದ್ರೆ ಇಷ್ಟ ಅಲ್ಲವಾ ಆಗು ಆಗು" ಎಂದು ಒಂದುದಿನ ಒತ್ತಾಯ ಮಾಡಿದ್ದ.


ಒಂದು ಸಂಜೆ, ನಮ್ಮೂರಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಒಬ್ಬಾಕೆ  ಹಾಡಲು ಬಂದಳು. ಆ ದನಿಯನ್ನು ಕೇಳಿದ ಕ್ಷಣ ಆಕೆಯ ಚೆಲುವು ಇಮ್ಮಡಿಯಾದಂತೆ ಅನಿಸಿತು. ಮನಸ್ಸೇ ಬದಲಾಗಿತ್ತು. ಅಷ್ಟು ಇಂಪಾದ ಸ್ವರ ಜೀವನದಲ್ಲೆ ಕೇಳಿದ್ದಿಲ್ಲ. ಅವಳು ಹಾಡುತ್ತಿದ್ದದ್ದು ಜನರಿಗಾಗಿಯೆ ಇಲ್ಲ ಎದುರೇ ಕೂತಿದ್ದ ನನಗಿರಬಾರದೇಕೆ?  ಉತ್ತರ ಸಿಗುವುದೆಂತು. 


ಕೇಳುಗರನ್ನೂ ನೋಡುಗರನ್ನೂ ಓದುಗರನ್ನೂ ಮೆಚ್ಚಿಸುವುದಕ್ಕೆ ಹುಡುಗ ಹುಡುಗಿಯರು ಬೇರೆ ಬೇರೆ ಉಪಾಯಗಳನ್ನು ರೂಢಿಸಿಕೊಳ್ಳುತ್ತಾರೆಂದೂ, ಪಾಪ. ಅಂಥಾ ಯಾವುದೇ ಶಕ್ತಿ ಇಲ್ಲದ ಸಾಧು ಮನುಷ್ಯ ಕ್ರಿಯಾಶೀಲ ಸಾಧಕರ ದುಡಿಮೆಯನ್ನು ತನ್ನದೇ ಸಾಧನೆ ಎಂದು ಭಾವಿಸಿಕೊಂಡು ಕನಸು ಕಾಣುತ್ತಾನೆಂದೂ ಕೇಳಿದ್ದುಂಟು. ಉದಾಹರಣೆಗೆ ಸಿನೆಮಾ ನಾಯಕ ಹೀರೊ ಆಗಿದ್ದರೆ ಅದು ನಾನೇ. ಅವನ ಯಶಸ್ಸು ನನ್ನದೇ. ನಿಜ ಹೇಳಬೇಕೆಂದರೆ ನನಗೂ ಆ ಮೂವಿಗೂ ಇರುವ ಸಂಬಂಧ ಅಂದರೆ ಹಣ ಕೊಟ್ಟು ಕೊಂಡ ಒಂದು ಟಿಕೆಟ್ಟು ಮಾತ್ರವಲ್ಲವೆ? ಆದರೂ ಈ ಸತ್ಯವನ್ನು ಮರೆತರೆ ಮಾತ್ರ ಸುಖ ನಮ್ಮದಾಗುವುದು! ಇಂತಹ ಭಾವನೆ ಹೊಳೆದದ್ದೇ ತಡ ನನ್ನ ಬಗ್ಗೆಯೇ ಯೋಚಿಸತೊಡಗಿದೆ. ನಾನು ಯಾವ ವರ್ಗಕ್ಕೆ ಸೇರಿದವನು ಎಂಬ ನನ್ನದೇ ಪ್ರಶ್ನೆಗೆ ಉತ್ತರ ಹೊಳೆಯಲಿಲ್ಲ.


ಆಶ್ಚರ್ಯ ಎಂದರೆ ಮುಂದಿನ ಮೂರು ದಿನ  ನನಗೆ ನಿದ್ರೆಯೇ ಬರಲಿಲ್ಲ."ಆಕೆಯ ಸುತ್ತಲೂ ನನ್ನ ಯೋಚನೆ ಸುತ್ತಾಡುತ್ತಿತ್ತು. ಅವಳೇ ನನ್ನ ನೆನಪಿನ ರೂಹು." ಆದರೆ ಮೂರೇ ಮೂರು ದಿನ. ಅಷ್ಟರೊಳಗೆ ಹೇಗೋ ತಿದ್ದಿಕೊಂಡೆ. ಮನಸ್ಸು ಓಡುವಲ್ಲೆಲ್ಲ ನಿಯಂತ್ರಿಸುವುದಕ್ಕೆ ಸ್ವಂತ ಬುದ್ಧಿ ಬೇಕು. ಆದರೆ ಏನನ್ನೊ ಕಳಕೊಂಡಂಥ ಒಳ ಏಟು ಅಂದಿನಿಂದ ಶಾಶ್ವತವಾಗಿ ಬಿಟ್ಟಿತು.


ಇದೊಂದು ದೌರ್ಬಲ್ಯವೆ? ಅಲ್ಲವೇ ಅಲ್ಲ. ಆದರೂ ಯಾರಿಗೂ ಹೇಳಲಿಲ್ಲ. ಅವಳ ಬಳಿಗೆ ಹೋಗಿ, “ನಾನು ನಿನ್ನನ್ನು ಮೆಚ್ಚಿದ್ದೇನೆ” ಎಂದು ಹೇಳುವ ಧೈರ್ಯವಾದರೂ ಬಂದಿತ್ತೆ? ಅವಳಿಗೂ ನನ್ನ ಕುರಿತು ಏನಾದರೂ ಮೆಚ್ಚುಗೆ ಇದ್ದಿತ್ತೆ? ಯಾಕೆ ಇದ್ದಿರಲಾರದು? ನನ್ನ ಗೆಳೆಯರ ಪೈಕಿ ಯಾರೊಂದಿಗೋ ನಾನು ಅಥವಾ ಅವಳು ಏನಾದರೂ ಹೇಳಿರಲಾರೆವು ತಾನೆ?


ಕಾಲ ಬದಲಾಗಿತ್ತು. ನಾಲ್ಕಾರು ವರ್ಷಗಳು ಉರುಳಿದುವು. ನನ್ನ ಕನಸಿನ ಲೋಕದಿಂದ ಅವಳು ಮರೆಯಾಗಲೇ ಇಲ್ಲ!. ನನ್ನ ಈ ದೌರ್ಬಲ್ಯವನ್ನು ಯಾರಲ್ಲಾದರೂ ಹಂಚಿಕೊಳ್ಳೋಣ ಎಂಬ ಬಯಕೆ ಬಲವಾಗುತ್ತ ಬಂತು. ಯಾರಿಗೆ ಹೇಳೋಣ? ಯಾರಲ್ಲಿ ಹಂಚಿಕೊಳ್ಳೋಣ?


ನಾನಲ್ಲ ನನ್ನದಲ್ಲ ಅನಿಸುವ ಹಾಗೆ ಒಂದು ಕಥೆಯಂತೆ ಬರೆದು ಹಗುರಾಗಲೆ? ಈ ಕಥೆ ಕಾದಂಬರಿ ಹೆಣೆಯುವ ಅಭ್ಯಾಸ ನಮಗೆ ಬಂದದ್ದು ಪಾಶ್ಚಾತ್ಯರಿಂದ. ಅವರು ಸಂಕೋಚ ಇಲ್ಲದೇ ಪ್ರೀತಿ ಪ್ರೇಮ ಪ್ರಣಯ ತುಂಬಿದ ಕಥಾನಕಗಳನ್ನು ರಾಶಿಗಟ್ಟಳೆ ಬರೆದರು. ಅದು ಬಿಡುಗಡೆಗೋ ಜೋಡಣೆಗೋ ತಿಳಿಯದು. ನೂರೈವತ್ತು ವರ್ಷಗಳ ಹಿಂದೆ ನಮ್ಮ ದೇಶದವರಿಗೆ ಇಂಗ್ಲಿಷ್ ಭಾಷೆಯನ್ನು ಕಲಿಯುವ ಸುಯೋಗ ಬಂತಲ್ಲ. ಅದರಿಂದ ಇವರ ಮೊದಲ ನೋಟ ಬಿದ್ದದ್ದೇ ವಿದೇಶಿ ಲೇಖಕರು ಬರೆದ ಕಥೆಗಳ ಮೇಲೆ. ಅವರ ಮಹಾಕಾವ್ಯಗಳಲ್ಲಿ ಮೊದಮೊದಲು ಶೌರ್ಯ ಸಾಹಸದ ಕಥೆಗಳೇ ಇರುತ್ತಿದ್ದುವು. ಕ್ರಮೇಣ ಅದೆಲ್ಲ ಉಸಿರು ಕಟ್ಟಿಸುತ್ತದನ್ನಿಸಿ ಸ್ವಾತಂತ್ರ್ಯದ ಬಯಕೆ ಮುಖ್ಯ ಎನಿಸ ತೊಡಗಿತು. ಸ್ವಾತಂತ್ರ್ಯ ಸ್ವೇಚ್ಛೆಯನ್ನು ಕೆರಳಿಸಿತು. ಅದರಿಂದಾದ ದೊಡ್ಡ ಬೆಳವಣಿಗೆ ಎಂದರೆ ಸಣ್ಣಕತೆ ಮತ್ತು ಪ್ರೇಮ ಕಥಾನಕಗಳನ್ನು ಹೆಣೆಯುವುದು. ಅಂತಹ ಕಥಾಸಾಹಿತ್ಯವನ್ನು ನಮ್ಮ ವಿದ್ಯಾವಂತರು ಅನುವಾದಿಸಿಕೊಂಡರು.

ಇದು ನಮ್ಮಲ್ಲೂ ತರುಣರಾಗಿದ್ದವರು ಕಥೆ ಕಾದಂಬರಿಗಳನ್ನು ಬರೆಯುವಂತೆ ಪ್ರೇರೇಪಿಸಿತು.


"ಓ ನನ್ನ ಚೆಲುವೇ ನೀನೆಷ್ಟು ತೆಳುವೇ

ಒಲವಿನ ಭಿಕ್ಷೆಗೆ ಕೈ ಚಾಚಿರುವೇ"

ಎಂದು ಆರಂಭವಾಗುವ ಕವಿತೆಯೊಂದನ್ನು ನನ್ನ ಸಹಪಾಠಿ ಬರೆದು ಏನೇನಾಗಿ ಹೋಯಿತು. ಅದನ್ನಾತ ರಮಣಿ ಎಂಬ ಹೆಸರಿನ ತನ್ನ ಜೂನಿಯರ್ ಹುಡುಗಿಯೊಬ್ಬಳ ಮೇಲೆ ಬರೆದದ್ದೇ ಅಲ್ಲ. ಕವಿತೆಯ ಒಂದು ಸಾಲಲ್ಲಿ ಆತ "ಶ್ಯಮಂತಕ ಮಣಿ! ನೀನಲ್ಲವೆ ನನ್ನ ಕನ್ಯಾಮಣಿ! ನನ್ನಂತಹ ಜಾಂಬವನೆ ನಿನಗೊಂದು ಪ್ರಾಣಿ" ಎಂದೇನೊ ಬರೆದಿದ್ದ. ಕವಿಗೋಷ್ಠಿಯಲ್ಲಿ ಅದನ್ನು ಓದಿಯೂ ಬಿಟ್ಟ. ಮರುದಿನದಿಂದ ಅವನ ಮತ್ತು ಆ ರಮಣಿಯ ಹೆಸರುಗಳನ್ನು ಜೋಡಿಸಿ ಸಿಕ್ಕಸಿಕ್ಕಲ್ಲಿ ಬರೆದು ಹಾಕಿದ್ದರು! ಇದರಿಂದಾಗಿ ಒಂದು ದಿನ ಅವನು ವಿದ್ಯಾಲಯದತ್ತ ಬರುವ ದಾರಿಯ ಪೊದೆಯೊಂದರಲ್ಲಿ ನಿಶ್ಚೇಷ್ಟಿತನಾಗಿ ಬಿದ್ದಿದ್ದ ಘಟನೆಯೂ ನಡೆಯಿತು. 


ಇದೊಂದು ನಮ್ಮ ಲೇಖಕರನ್ನು ಕಾಡುವ ದೊಡ್ಡ ಸಮಸ್ಯೆ! ಕಲ್ಪನೆ ಮತ್ತು ಭಾವನೆಗಳನ್ನು ಜೋಡಿಸಿ ಅಕ್ಷರಗಳ ಮೂಲಕ ಹೆಣೆದೆವಾದರೆ ಆ ಚಿತ್ರಣ ಬರೆದವನ ನಿಜಾನುಭವ ಎಂದು ಭಾವಿಸಿಕೊಂಡು ಏನೇನೊ ಊಹಿಸುತ್ತ ಸಮಾಜ ಆಕ್ರಮಣ ಮಾಡುವುದು. ಮೊದ ಮೊದಲು ಗಾಸಿಪ್ಪು ಮಾತ್ರ. ಕ್ರಮೇಣ ಮೂಲ ಲೇಖಕನನ್ನು ಮೀರಿಸುವ ಕಾಲ್ಪನಿಕ ಕಥಾನಕವೇ ಸಿದ್ಧವಾಗುತ್ತದೆ. ಆದರೆ ಅದು ಎಲ್ಲೂ ತಾಳೆಯಾಗದೆ ಎಂದಿಗೂ ಜೋಡದೆ ಅಲಿಖಿತ ಪುರಾಣದಂತೆ ಜನದ ಬಾಯಲ್ಲಿ ಅಲೆದಾಡುತ್ತದೆ. ಅದು ಹೇಗೆ ನಮ್ಮ ದೇಶದಲ್ಲಿ ಮಾತ್ರ "ಸಾಹಿತ್ಯ ಜನ ಜೀವನದ ಪ್ರತಿಬಿಂಬ" ಎಂಬ ತಪ್ಪು ವಿಮರ್ಶೆ ಬಂತೋ.


ಇದೆಲ್ಲ ಒತ್ತಟ್ಟಿಗಿರಲಿ. ನನ್ನ  ಮುಂದಿನ ನಡೆಯ ಬಗ್ಗೆ ಹೇಳುತ್ತೇನೆ.

ಆ ಕಲಾವಿದೆಯ ಬಗ್ಗೆ ಬರೆಯ ಹೊರಟೆ. ಆ ಘಟನೆ ನಡೆದು ಮೂರು ದಿನಗಳ ಕಾಲ ನಾನು ತೀವ್ರವಾಗಿ ವ್ಯಸನಕ್ಕೆ ಬಿದ್ದ ವಿಷಯ ಹೇಳಿದೆನಷ್ಟೆ. ವರ್ಷಗಳೇ ಉರುಳಿದ ಮೇಲೆ ಆಕೆ ಈಗ ಎಲ್ಲಿರಬಹುದು? ಏನು ಮಾಡುತ್ತಿರಬಹುದು ಎಂಬ ಚಿಂತೆ ನನ್ನಲ್ಲಿ ಬಲವಾಯಿತು. ಫ್ರಾಯ್ಡ್ ಹೇಳಿದಂತೆ ಅದುಮಿಟ್ಟ ನನ್ನ ಬಯಕೆ ಅರೆ ಮನೋರೋಗವಾಗಿ ಕಾಡತೊಡಗಿತು. ಇದುವೇ ನನ್ನ ಬದುಕಿನಲ್ಲಿ ಕ್ರಮೇಣ ಒಂದು ತಿರುವನ್ನು ತಂದಿತು.


ಅವಳು ಈಗ ಎಲ್ಲಿದ್ದಾಳೆಂದು ತಿಳಿಯುವುದು ಹೇಗೆ? ನೀವು ಕೃತಕ ಬುದ್ಧಿಮತ್ತೆಯ ಕುರಿತು ಕೇಳಿರಬೇಕು. ಯಾರದೇ ಅಂತರಂಗವನ್ನು ಶೋಧಿಸಿ ತಿರುಳನ್ನು ಹೊರತೆಗೆಯುವ ಶಕ್ತಿ ಅದಕ್ಕಿದೆಯಲ್ಲ. ನನ್ನ ಸಮಸ್ಯೆಯನ್ನು ಅದರ ಮುಂದೆ ಎರಡೇ ವಾಕ್ಯಗಳ ಮೂಲಕ ಒಡ್ಡಿದೆ! ಆಶ್ಚರ್ಯ! ನಾಲ್ಕಾರು ಕ್ಷಣಗಳಲ್ಲಿ ಅದು ಹೇಳಿತು. ಅದರ ಪಾತಾಳ ಗರಡಿ ಎಷ್ಟು ಅದ್ಭುತ! ಅದು ಕೊಟ್ಟ ವಿವರವನ್ನು ಓದಿ ದಂಗಾದೆ!- ಆ ಕಥಾನಕ ಹೀಗಿತ್ತು:

"ನಿನ್ನೆ ರಾತ್ರಿ ಅವಳ ದನಿ ಮತ್ತೆ ನನ್ನ ಕಿವಿಯಲ್ಲಿ ಮೊಳಗಿತು.


ಬೆಳಗ್ಗೆ ಎದ್ದ ತಕ್ಷಣ ಅವಳನ್ನು ಹುಡುಕಲು ಪ್ರಾರಂಭಿಸಿದೆ. ಹಳೆಯ ಸ್ನೇಹಿತರು, ಪತ್ರಿಕೆಗಳು, ನೆನಪುಗಳು—ಎಲ್ಲವನ್ನು ತಿಣುಕಾಡಿದೆ. ಅಂತೂ ವರ್ಷ ಹಿಂದಿನ ವಾರ್ತಾ ಪತ್ರಿಕೆಯಲ್ಲಿ ಹೆಸರು ಸಿಕ್ಕಿತು: “ಸಂಧ್ಯಾ – ಅಪೂರ್ವ ಗಾಯಕಿ”


ಹೃದಯ ಬಡಿದಿತ್ತು. ಅದೇ ಇರಬೇಕು ಎಂದುಕೊಂಡೆ.  ಹುಡುಕಾಟ ಮುಂದುವರಿಸಿ ಕೊನೆಗೆ ಅವಳೇ ಆರಂಭಿಸಿದ್ದ “ಸಂಧ್ಯಾ ಸಂಗೀತ ಶಾಲೆ” ಎಂಬ ಸ್ಥಳವನ್ನು ಕಂಡುಹಿಡಿದೆ.


ನಡುಗುವ ಮನಸ್ಸಿನಿಂದ ಅಲ್ಲಿಗೆ ಹೋದೆ. ಅವಳು ಹಾರ್ಮೋನಿಯಂ ಮೇಲೆ ಸ್ವರ ಹೊರಡಿಸುತ್ತ ಮಕ್ಕಳಿಗೆ ಪಾಠ ಹೇಳುತ್ತಿದ್ದಳು. ಮುಖ ಕಂದಿದಂತಿದ್ದರೂ, ಅವೇ ಕಣ್ಣುಗಳು. ಅನೇಕ ದಿನಗಳ ಹಿಂದೆ ನನ್ನ ಹೃದಯವನ್ನು ಅರಳಿಸಿದಂಥ ದೃಷ್ಟಿವಿಕ್ಷೇಪ. ಅವಳ ಬಳಿಗೆ ಹೋದೆ. ನನ್ನ ಬಾಯಿಂದ ತಾನಾಗಿ ಮಾತು ಹೊರಬಂತು. ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದಳು. ಸ್ವಲ್ಪ ಕಳೆದು ಕ್ಲಾಸು ಮುಗಿಸಿದಳು. ನಾನು ಯಾವುದೋ ಕಾರ್ಯಕ್ರಮಕ್ಕೆ ಆಮಂತ್ರಿಸಲಿಕ್ಕೆ ಬಂದೆನೆಂದು ತಿಳಿದಳೇನೊ. ಆದರೆ ಅವಸರದಿಂದಿದ್ದ ನನ್ನ ನಾಲಿಗೆ ಬಡಬಡಿಸಿತು. “ಅಂದು ನೀನು ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಾಡಿದೆ ನಾನು ನಿನ್ನ ದನಿಯಲ್ಲಿ ಮುಳುಗಿದೆ"


ಅವಳು ಕ್ಷಣಕಾಲ ನನ್ನ ಕಡೆ ನೋಡಿದಳು. ಮುಗುಳ್ನಕ್ಕಳು, ಹೇಳಿದಳು: “ಆ ದಿನ ನಾನು ಎಲ್ಲರಿಗಾಗಿ ಹಾಡುತ್ತಿದ್ದೆ. ಆದರೆ ಯಾರಾದರೂ ಇಷ್ಟೊಂದು ವರ್ಷ ನನ್ನ ನೆನಪಿಸಿಕೊಳ್ಳುತ್ತಾರೆ ಎಂದು ನಾನು ಊಹಿಸಿರಲಿಲ್ಲ.”

ಆ ಮಾತು ಕೇಳಿದಾಗ ನನ್ನ ಹೃದಯ ಹಗುರವಾಯಿತು. ಅವಳು ತನ್ನ ಬದುಕಿನಲ್ಲಿ ಖುಷಿಯಲ್ಲಿದ್ದಳು. ನನಗಷ್ಟೇ ಸಾಕಿತ್ತು." 


ಕೃತಕ ಬುದ್ಧಿಮತ್ತೆ ನನಗೆ ಅನುಕೂಲವೆನಿಸುವ ರೀತಿಯಲ್ಲಿಯೇ ವ್ಯಾಖ್ಯಾನಿಸಿತ್ತು.


ಸಂಧ್ಯಾ ಸಂಗೀತ ಶಾಲೆ ಆಕೆಯ ಮನೆಗೆ ಮೊಗಸಾಲೆಯಂಥ ಹೊರಚಾಚಿಕೆ. ಬಾಗಿ ಜೋಡಣೆಯಾದ ತಗಡಿನ ಮಾಡು. ಹತ್ತೆಂಟು ಮಕ್ಕಳಿಗೆ ಕೂರುವುದಕ್ಕೆ ಸಾಧ್ಯವಿರುವ ಕೋಶದಂಥ ಕೋಣೆ. ಅಪ್ಪ ಯೌವನದಲ್ಲಿ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದರಂತೆ. ಮತ್ತೆ ಮೇಕಪ್ ಮಾನ್ ಆಗಿ ಅನೇಕ ಕಡೆಗೆ ಕರೆ ಬಂದಲ್ಲಿಗೆ ಹೋಗುತ್ತಿದ್ದರಂತೆ. ಅವಳಿಗೆ ಅಮ್ಮ ಇಲ್ಲ. ಒಬ್ಬ ತಮ್ಮ ಚಿಕ್ಕ ಹುಡುಗ. ತುಂಬ ಕಾಲದ ಪರಿಚಯ ಇರುವವಳಂತೆ ಸಂಧ್ಯ ಮಾತನಾಡಿದಳು. ನಡುವೆ ಒಂದು ಪ್ರಶ್ನೆ ಹಾಕಿದಳು." ನೀವು ಮದುವೆ ಆಗುದಿಲ್ಲವಾ. ಹುಡುಗಿಯರು ಇಷ್ಟ ಅಲ್ಲವ?"


ಥಟ್ಟನೆ ನನಗೆ ಸುಧಾಕರನ ನೆನಪಾಯಿತು. ಅದಕ್ಕೆ ನಾನು ಉತ್ತರಿಸಲಿಲ್ಲ. ಬೀಳ್ಕೊಳ್ಳುವ ತನಕ ಆಕೆ ತಡೆ ತಡೆದು ಮಾತನಾಡಿದಳು. ನಡುವೆ, "ಸುಧಾಕರ ಅಂತ ಒಬ್ಬ ನಿಮ್ಮ ಗೆಳೆಯ ಇದ್ದನಲ್ಲ. ಅವನು ಇಲ್ಲವಾ.." ಎಂದೂ ಪ್ರಶ್ನೆ ಹಾಕಿದಳು. ಆ ಮೇಲೆ" ಅವನು ಮಾತಾಡುವುದಿಲ್ಲವ?" ಎಂದೂ ಪ್ರಶ್ನಿಸಿದಳು.


ನಿಮಗೆ ಒಂದು ಗುಟ್ಟು ಹೇಳಿಬಿಡುತ್ತೇನೆ. ತುಂಬ ಕತೆಗಳನ್ನು ನೀವು ಓದಿರುತ್ತೀರಿ. ಅವುಗಳಲ್ಲಿ ಹುಡುಗನಿಗೂ ಹುಡುಗಿಗೂ ಮದುವೆ ಆಗುವಲ್ಲಿಗೆ ಕತೆ ಮುಗಿಯುತ್ತದಲ್ಲವೆ? ಹಾಗಾಗಿ ಅದು ಆಗಬಾರದು. ಕತೆ ಮುಂದುವರಿಯಬೇಕೆಂಬ ಉದ್ದೇಶದಿಂದ ನಾನು ಈ ಘಟನೆಯನ್ನು ತಮಾಷೆಗೆ ಚಾಟ್ ಜಿ ಪಿ ಟಿಗೆ ಫೀಡ್ ಮಾಡಿದೆ. ಕತೆಗೆ ಒಂದು ತಿರುವು ಕೊಡು ಎಂದು ಕೇಳಿಕೊಂಡೆ.


ಟಕ್ ಟಕ್ ಟಕ್. ಹನುಮಂತನ ಬಾಲದಂತೆ ಕತೆ ಚೆಲ್ಲಿ ಬಂತು. ಕೊನೆಯ ವಾಕ್ಯ ನೋಡಿ ಗೊಳ್ಳೆಂದು ನಕ್ಕು ಬಿಟ್ಟೆ. ಅದು ಸಂಧ್ಯಳ ಕಣ್ಣಿಗೆ ಬಿತ್ತು. ಯಾಕೆ ನಗುತ್ತೀರಿ ಎನ್ನುತ್ತ ಮೊಬೈಲು ಕಿತ್ತುಕೊಂಡಳು. ಮತ್ತೇನಾಯಿತೆಂದು ಕೇಳಬೇಡಿ. ಕತೆಗೆ ನಿಜಕ್ಕೂ ದೊಡ್ಡ ತಿರುವು ಸಿಕ್ಕಿತು. ಅವಳೂ ಕಿಲಕಿಲನೆ ನಕ್ಕುಬಿಟ್ಟಳು.

- ಪಿ ಎನ್ ಮೂಡಿತ್ತಾಯ, ಕಾಸರಗೋಡು


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top