ಪ್ರಕೃತಿಗೆ ಮರಳಿ ನೀಡದೆ ಪ್ರತಿಕ್ಷಣ ಬಳಸುತ್ತಿದ್ದೇವೆ: ಆರ್.ಕೆ. ನಾಯರ್

Upayuktha
0

ಮೂಡುಬಿದಿರೆ: ಪ್ರಕೃತಿಯ ಸಂಪನ್ಮೂಲಗಳ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗಿರುವ ಮಾನವ, ಅವುಗಳನ್ನು ನಿರಂತರವಾಗಿ ಬಳಸುತ್ತಿದ್ದರೂ ಪ್ರಕೃತಿಗೆ ತನ್ನ ಋಣವನ್ನು ತೀರಿಸುವ ಕಿಂಚಿತ್ತು ಪ್ರಯತ್ನ ಮಾಡುತ್ತಿಲ್ಲ ಎಂದು ‘ಗ್ರೀನ್ ಹೀರೋ ಆಫ್ ಇಂಡಿಯಾ’ ಖ್ಯಾತಿಯ ಆರ್.ಕೆ. ನಾಯರ್ ಅಭಿಪ್ರಾಯಪಟ್ಟರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ನಡೆದ “ಮೈ ಪ್ಲಾನೆಟ್, ಮೈ ಪ್ರೈಡ್” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಭಾರತದ ಭಾಷಾ ವೈವಿಧ್ಯತೆ ಮತ್ತು ಜೀವ ವೈವಿಧ್ಯತೆಯನ್ನು ಹೋಲಿಕೆ ಮಾಡಿದ ನಾಯರ್, ವಿವಿಧ ಭಾಷೆಗಳು ಹೇಗೆ ಪರಸ್ಪರ ಸಹಬಾಳ್ವೆಯಿಂದ ಬೆಳೆಯುತ್ತವೆಯೋ, ಅದೇ ರೀತಿ ಪರಿಸರ ವ್ಯವಸ್ಥೆಯೂ ವೈವಿಧ್ಯತೆ ಮತ್ತು ಪರಸ್ಪರ ಅವಲಂಬನೆಯ ಮೇಲೆ ನಿಂತಿದೆ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ಬೆಟ್ಟಗಳು, ನದಿಗಳು, ಕಾಡುಗಳು ಹಾಗೂ ಜೀವಜಗತ್ತು ಯಾವುದನ್ನೂ ಮಾನವ ಸೃಷ್ಟಿಸಿಲ್ಲ. ಇವೆಲ್ಲವೂ ಪ್ರಕೃತಿಯ ಕೊಡುಗೆಗಳು.


ತಮ್ಮ ಪರಿಸರ ಯೋಜನೆಗಳ ಅನುಭವ ಹಂಚಿಕೊAಡ ಅವರು, ತಮ್ಮ ಪರಿಸರ ಯೋಜನೆಗಳ ಯಶಸ್ಸಿನಿಂದ ಜನರು ತಮ್ಮನ್ನು ‘ಬಾಬಾ’ ಅಥವಾ ಪವಾಡಪುರುಷನಂತೆ ಕಾಣುವುದುಂಟು. ಆದರೆ ಯಾವುದೇ ಪವಾಡವಿಲ್ಲ; ಪ್ರಕೃತಿಯ ಶಕ್ತಿಯನ್ನು ಅರ್ಥಮಾಡಿಕೊಂಡು ಅದರೊಂದಿಗೆ ಕೆಲಸ ಮಾಡಿದಾಗ ಇಂತಹ ಫಲಿತಾಂಶಗಳು ಸಾಧ್ಯವಾಗುತ್ತವೆ ಎಂದರು.


ಸಮುದ್ರ ತೀರದ ಉಪ್ಪುಮಣ್ಣಿನ ಪ್ರದೇಶಗಳಂತಹ ಅತ್ಯಂತ ಸವಾಲಿನ ಪರಿಸರದಲ್ಲಿಯೂ ಮಿಯಾವಾಕಿ ಮಾದರಿಯ ಅರಣ್ಯಗಳನ್ನು ಯಶಸ್ವಿಯಾಗಿ ನಿರ್ಮಿಸಿರುವ ಅನುಭವವನ್ನು ಹಂಚಿಕೊಂಡ ಅವರು, ಆರಂಭದಲ್ಲಿ ಅಸಾಧ್ಯವೆಂದು ಪರಿಗಣಿಸಲ್ಪಟ್ಟ ಅನೇಕ ಯೋಜನೆಗಳು ಇಂದು ಪರಿಸರ ಪುನಶ್ಚೇತನದ ಯಶಸ್ವಿ ಮಾದರಿಗಳಾಗಿವೆ. ಗುಜರಾತಿನ ಸ್ಮೃತಿವನ ಯೋಜನೆಯನ್ನು ಉದಾಹರಿಸಿದ ಅವರು, ದೃಢಸಂಕಲ್ಪ, ಜನಸಹಭಾಗಿತ್ವ ಹಾಗೂ ದೂರದೃಷ್ಟಿಯ ಯೋಜನೆಯೊಂದಿಗೆ ಹಾಳಾಗಿರುವ ಭೂಭಾಗಗಳನ್ನೂ ಹಸಿರು ಸಂಪತ್ತಾಗಿ ಪರಿವರ್ತಿಸಬಹುದು ಎಂಬುದನ್ನು ಈ ಯೋಜನೆ ಸಾಬೀತುಪಡಿಸಿದೆ ಎಂದರು.

ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಸರ್ಕಾರ, ಅಧಿಕಾರಿಗಳು ಅಥವಾ ರಾಜಕಾರಣಿಗಳ ಜವಾಬ್ದಾರಿ ಮಾತ್ರವಲ್ಲ. ನಾಗರಿಕ ಪ್ರಜ್ಞೆ ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಬೇಕು ಬಟ್ಟೆ ಕೊಳೆಯಾದರೆ ಬದಲಾಯಿಸಬಹುದು. ಆದರೆ ಭೂಮಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಸ್ವಚ್ಛತೆ, ನಾಗರಿಕ ಪ್ರಜ್ಞೆ ಮತ್ತು ಪರಿಸರದ ಬಗ್ಗೆ ಗೌರವ ನಮ್ಮ ದೈನಂದಿನ ಬದುಕಿನ ಭಾಗವಾಗಬೇಕು ಎಂದು ಅವರು ಹೇಳಿದರು.


ಆಳ್ವಾಸ್ ಆವರಣದಲ್ಲಿ ಕಾಪಾಡಿಕೊಂಡಿರುವ ಹಸಿರು ಮತ್ತು ಸ್ವಚ್ಛ ವಾತಾವರಣವನ್ನು ಶ್ಲಾಘಿಸಿದ ಅವರು, ವಿದ್ಯಾರ್ಥಿಗಳು ಸುಸ್ಥಿರ ಜೀವನಶೈಲಿ ಅಳವಡಿಸಿಕೊಳ್ಳಬೇಕು, ನೀರು ಸಂರಕ್ಷಿಸಬೇಕು, ತ್ಯಾಜ್ಯವನ್ನು ಕಡಿಮೆ ಮಾಡಬೇಕು ಹಾಗೂ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಾಗರಿಕ ಪ್ರಜ್ಞೆಯನ್ನು ಯಾರೂ ಕಲಿಸಿಕೊಡಲು ಸಾಧ್ಯವಿಲ್ಲ; ಅದನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಿಸರ ಸಂರಕ್ಷಣೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ "ಗ್ರೀನ್ ವಾರಿಯರ್ಸ್"ಗಳನ್ನು ಸಮಾಜ ಗೌರವಿಸಬೇಕು. ಯಾರೂ ಇವರಿಗೆ ಈ ಜವಾಬ್ದಾರಿಯನ್ನು ನೀಡಿಲ್ಲ. ಸಮಾಜದ ಒಳಿತಿಗಾಗಿ ಅವರು ಸ್ವಯಂಪ್ರೇರಿತರಾಗಿ ಈ ಹೊಣೆ ಹೊತ್ತಿದ್ದಾರೆ. ಪಶ್ಚಿಮ ಘಟ್ಟ ಮತ್ತು ಅರಬ್ಬೀ ಸಮುದ್ರ ಎಂಬ ಅಮೂಲ್ಯ ಪ್ರಕೃತಿ ಸಂಪತ್ತನ್ನು ಹೊಂದಿರುವ ಕರಾವಳಿ ಕರ್ನಾಟಕ ಭಾಗದ ಜನರು ಅದೃಷ್ಟವಂತರು. ಈ ಸಂಪತ್ತನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.


ಜಾತಿ, ಧರ್ಮ ಮುಂತಾದ ವಿಷಯಗಳು ಸಾರ್ವಜನಿಕ ಚರ್ಚೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿರುವ ಸಂದರ್ಭದಲ್ಲಿ ಪರಿಸರದ ಧ್ವನಿ ಹಿಂಬದಿಗೆ ಸರಿಯುತ್ತಿರುವುದು ವಿಷಾದನೀಯ. ಪರಿಸರ ಸಂರಕ್ಷಣೆಯ ಪರವಾಗಿ ಸಮಾಜ ಒಗ್ಗಟ್ಟಿನ ಧ್ವನಿ ಎತ್ತಬೇಕಿದೆ. ಭಿನ್ನಾಭಿಪ್ರಾಯಗಳು ವ್ಯಕ್ತಿಗಳ ನಡುವೆ ಇರಬಹುದು, ಆದರೆ ಎಲ್ಲರ ಬದುಕಿಗೂ ಆಧಾರವಾಗಿರುವ ಪ್ರಕೃತಿಯ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಅಥವಾ ಅಸಡ್ಡೆ ಇರಕೂಡದು ಎಂದರು.


ಕಾರ್ಯಕ್ರಮದ ನಂತರ ಮಿಜಾರಿನ ಆಳ್ವಾಸ್ ಕ್ಯಾಂಪಸ್‌ನ ಹರೀಶ್ ಭಟ್ ವನದಲ್ಲಿ ಔಷಧೀಯ ಸಸ್ಯಗಳ ನೆಡುವ ಮೂಲಕ ಹಸಿರು ಅಭಿಯಾನಕ್ಕೆ ಚಾಲನೆ ನೀಡಿದರು.


ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ, ರೊರ‍್ಯಾಕ್ಟ್ ಸೌತ್ ಏಷ್ಯಾ ಅಧ್ಯಕ್ಷ ಡ್ಯಾರಲ್ ಡಿಸೋಜಾ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಅಧ್ಯಕ್ಷೆ ಡಾ. ದೀಪಾ ಕೊಠಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಇಡಿಸಿ ಮುಖ್ಯಸ್ಥ ಹಾಗೂ ಕಾರ್ಯಕ್ರಮ ಸಂಯೋಜಕ ವೇಣುರಾವ್‌ದೇವಾ ಉಪಸ್ಥಿತರಿದ್ದರು. ತೃಷಾ ಹೆಗ್ಡೆ ಕರ‍್ಯಕ್ರಮ ನಿರೂಪಿಸಿ ವಿತುಲಾ ಜೈನ್ ಸ್ವಾಗತಿಸಿ, ಡಾ ರುಚಿಕಾ ಸಹಕರಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top