ವೈದ್ಯರು ಎಂದರೆ ರೋಗಕ್ಕೆ ಔಷಧಿ ಕೊಡುವವರು ಎಂದು ನಾವು ಸಾಮಾನ್ಯವಾಗಿ ಭಾವಿಸುತ್ತೇವೆ. ಆದರೆ ಕೆಲವರು ಮಾತ್ರ ರೋಗವನ್ನಷ್ಟೇ ಅಲ್ಲ, ರೋಗಿಯ ಮನಸ್ಸಿನ ನೋವನ್ನೂ ಅರ್ಥಮಾಡಿಕೊಂಡು, ಆತ್ಮವಿಶ್ವಾಸ ತುಂಬಿ, ಬದುಕಿನ ಮೇಲೆ ಹೊಸ ಭರವಸೆ ಮೂಡಿಸುವವರಾಗಿರುತ್ತಾರೆ. ಅಂತಹ ಅಪರೂಪದ ವೈದ್ಯರಲ್ಲಿ ಡಾ. ಸಿಂಧು ಕೆ. ಗೌಡ ಅವರು ಪ್ರಮುಖರು.
ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನ, ಅನುಭವ ಮತ್ತು ಮಾನವೀಯತೆ ಒಂದೇ ಕಡೆ ಸೇರುವುದು ಅಪರೂಪ. ಆದರೆ ಗಂಗಾವತಿಯ ಖ್ಯಾತ ಚರ್ಮರೋಗ ಹಾಗೂ ಸೌಂದರ್ಯ ಚಿಕಿತ್ಸಾ ತಜ್ಞೆ ಡಾ. ಸಿಂಧು ಅವರಲ್ಲಿ ಈ ಮೂರೂ ಗುಣಗಳು ಅದ್ಭುತವಾಗಿ ಬೆರೆತಿವೆ. ಕೆಲವು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಅವರು, ಸಾವಿರಾರು ರೋಗಿಗಳ ವಿಶ್ವಾಸ ಗಳಿಸಿ, ಕೇವಲ ವೈದ್ಯೆಯಾಗಿ ಮಾತ್ರವಲ್ಲ, ಮನೆಯವರಂತೆಯೇ ಆತ್ಮೀಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಜ್ಞಾನ, ಸೇವಾ ಮನೋಭಾವ ಮತ್ತು ಸಾಮಾಜಿಕ ಕಾಳಜಿಯಿಂದ ಗುರುತಿಸಿಕೊಂಡಿರುವ ಡಾ. ಸಿಂಧು ಕೆ. ಗೌಡ ಅವರು ಚರ್ಮರೋಗ ತಜ್ಞರಾಗಿ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಎಂ.ಬಿ.ಬಿ.ಎಸ್, ಎಂ.ಡಿ. (ಡರ್ಮಟಾಲಜಿ) ಪದವಿಗಳ ಜೊತೆಗೆ ಎಫ್.ಆರ್.ಜಿ.ಯು.ಎಚ್.ಎಸ್. (ಅಸ್ತೆಟಿಕ್ ಡರ್ಮಟಾಲಜಿಯಲ್ಲಿ ಫೆಲೋಶಿಪ್) ಪದವಿಯನ್ನು ಪಡೆದಿದ್ದಾರೆ. ಶೈಕ್ಷಣಿಕ ಸಾಧನೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಅವರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಸ್ನಾತಕೋತ್ತರ ಪರೀಕ್ಷೆಯಲ್ಲಿ 8ನೇ ರ್‍ಯಾಂಕ್ ಪಡೆದು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಡಾ. ಸಿಂಧು ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳು ಹಾಗೂ ಪೋಸ್ಟರ್‌ಗಳನ್ನು ಮಂಡಿಸಿ ಮೆಚ್ಚುಗೆ ಗಳಿಸಿದ್ದಾರೆ. ಅಲ್ಲದೆ, ರಾಜ್ಯ ಮಟ್ಟದ ಸಿ.ಎಂ.ಇ. ಕಾರ್ಯಕ್ರಮಗಳು ಮತ್ತು ವೈದ್ಯಕೀಯ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಮ್ಮ ಜ್ಞಾನವನ್ನು ಹಂಚಿಕೊಂಡಿದ್ದಾರೆ.
2016ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವ ಸೌಂದರ್ಯ ಚರ್ಮರೋಗ ಸಮ್ಮೇಳನ ಹಾಗೂ 2019ರಲ್ಲಿ ಗದಗದಲ್ಲಿ ನಡೆದ ಕ್ಯೂಟಿಕಾನ್ ಕೆ.ಎನ್. ಶಾಖೆಯ ಸಮ್ಮೇಳನದ ಸಂಘಟನಾ ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸಿ ಯಶಸ್ವಿ ಆಯೋಜನೆಗೆ ಕೊಡುಗೆ ನೀಡಿದ್ದಾರೆ. ವೈದ್ಯಕೀಯ ಸೇವೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಉದ್ದೇಶದಿಂದ ಅವರು ವಿವಿಧ ಸರ್ಕಾರಿ ಶಾಲೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದ್ದು, ಅಗತ್ಯವಿರುವವರಿಗೆ ಉಚಿತ ಔಷಧಿಗಳನ್ನು ವಿತರಿಸುತ್ತಿದ್ದಾರೆ.
ಸಾಮಾಜಿಕ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸುತ್ತಿರುವ ಅವರು, ಪ್ರಸ್ತುತ ಭಾರತೀಯ ವೈದ್ಯಕೀಯ ಸಂಘದ (ಐ.ಎಮ್.ಎ ) ಗಂಗಾವತಿ ಶಾಖೆಯ ಮಹಿಳಾ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ, ಕೊಪ್ಪಳ ಮತ್ತು ಹೊಸಪೇಟೆ ಜಿಲ್ಲೆಯ ವಿವಿಧ ಬಾಲಕಿಯರ ಶಾಲೆಗಳಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಜಾಗೃತಿ ಕುರಿತ ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಯುವಜನರಲ್ಲಿ ಆರೋಗ್ಯ ಅರಿವು ಮೂಡಿಸುತ್ತಿದ್ದಾರೆ.
ವೈದ್ಯಕೀಯ ಪರಿಣತಿ, ಮಾನವೀಯ ಮೌಲ್ಯಗಳು ಮತ್ತು ಸಮಾಜಮುಖಿ ಚಿಂತನೆಯ ಸಮನ್ವಯವಾಗಿರುವ ಡಾ. ಸಿಂಧು ಕೆ. ಗೌಡ ಅವರು ಇಂದು ಸಾವಿರಾರು ರೋಗಿಗಳ ಭರವಸೆ ಮತ್ತು ನೆಮ್ಮದಿಯ ಹೆಸರಾಗಿದ್ದಾರೆ.
ಗಂಗಾವತಿಯ ಹೊಸಹಳ್ಳಿ ರಸ್ತೆಯಲ್ಲಿರುವ ಗ್ಲೋ ಸ್ಕಿನ್ ಅಂಡ್ ಹೇರ್ ಕೇರ್ ಕ್ಲಿನಿಕ್ ಇಂದು ಅನೇಕರಿಗೆ ಆಶಾಕೇಂದ್ರವಾಗಿದೆ. ಇಲ್ಲಿ ಚರ್ಮ, ಕೂದಲು ಮತ್ತು ಉಗುರುಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಆಧುನಿಕ ಹಾಗೂ ವೈಜ್ಞಾನಿಕ ಚಿಕಿತ್ಸೆಗಳು ಲಭ್ಯವಿವೆ. ಮೊಡವೆ, ಚರ್ಮದ ಅಲರ್ಜಿ, ಚರ್ಮದ ಸೋಂಕು, ಕೂದಲು ಉದುರುವಿಕೆ, ತಲೆಹೊಟ್ಟು, ಉಗುರುಗಳ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತದೆ.
ಅದರ ಜೊತೆಗೆ ಲೇಸರ್ ಹೇರ್ ರಿಡಕ್ಷನ್ ಮೂಲಕ ಅನಗತ್ಯ ಕೂದಲನ್ನು ಸುರಕ್ಷಿತವಾಗಿ ಕಡಿಮೆ ಮಾಡಲಾಗುತ್ತದೆ. ಲೇಸರ್ ಮೂಲಕ ಹಳೆಯ ಗಾಯದ ಗುರುತುಗಳು ಹಾಗೂ ಮೊಡವೆ ಕಲೆಗಳನ್ನು ಕಡಿಮೆ ಮಾಡುವ ಚಿಕಿತ್ಸೆ ನೀಡಲಾಗುತ್ತದೆ. ಪಿಗ್ಮೆಂಟೇಶನ್, ಮುಖದ ಕಪ್ಪು ಕಲೆಗಳು, ಸೂರ್ಯನ ಕಿರಣಗಳಿಂದ ಉಂಟಾಗುವ ಕಲೆಗಳನ್ನು ಕಡಿಮೆ ಮಾಡಲು ಸಹಕಾರಿ. ಸ್ಕಿನ್ ಟ್ಯಾಗ್ ಹಾಗೂ ಮಚ್ಚೆಗಳ ಸುರಕ್ಷಿತ ತೆರವು ಚಿಕಿತ್ಸೆಯೂ ಇಲ್ಲಿ ಲಭ್ಯವಿದೆ. ಈ ಚಿಕಿತ್ಸೆಗಳ ಪರಿಣಾಮವಾಗಿ ರೋಗಿಗಳ ಆತ್ಮವಿಶ್ವಾಸ ಹೆಚ್ಚುವುದರ ಜೊತೆಗೆ ಆರೋಗ್ಯಕರ ಮತ್ತು ಸುಂದರ ಚರ್ಮವನ್ನು ಪಡೆಯಲು ಸಹಕಾರಿಯಾಗುತ್ತದೆ.
ಡಾ. ಸಿಂಧು ಅವರು ನೋಡಲು ಮಾತ್ರ ಸುಂದರವಾಗಿಲ್ಲ, ಅವರ ಹೃದಯ, ಮಾತು ಮತ್ತು ಮಾನವೀಯತೆಯೂ ಅಷ್ಟೇ ಸುಂದರವಾಗಿದೆ. ವೈದ್ಯರ ಕೋಣೆಗೆ ಆತಂಕ, ನೋವು ಮತ್ತು ಪ್ರಶ್ನೆಗಳೊಂದಿಗೆ ಬರುವ ರೋಗಿಗಳು, ಅವರ ನಗುಮುಖದ ಸ್ವಾಗತ ಮತ್ತು ಆತ್ಮೀಯ ಮಾತುಗಳನ್ನು ಕೇಳಿದ ಕ್ಷಣವೇ ಅರ್ಧ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ. ರೋಗಿಯ ಪ್ರತಿಯೊಂದು ಮಾತನ್ನೂ ತಾಳ್ಮೆಯಿಂದ ಆಲಿಸಿ, ಸಮಸ್ಯೆಯ ಮೂಲವನ್ನು ಅರ್ಥಮಾಡಿಕೊಂಡು, ಅದಕ್ಕೆ ಸರಿಯಾದ ಪರಿಹಾರವನ್ನು ಸೂಚಿಸುವ ಅವರ ಗುಣ ನಿಜಕ್ಕೂ ವಿಶೇಷ. ಎಷ್ಟೇ ಪ್ರಶ್ನೆಗಳನ್ನು ಕೇಳಿದರೂ ಬೇಸರ ಮಾಡಿಕೊಳ್ಳದೆ, ಎಲ್ಲರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ವಿವರಿಸುತ್ತಾರೆ. ರೋಗಿಗಳೊಂದಿಗೆ ಸ್ನೇಹಿತೆಯಂತೆ ಬೆರೆಯುವ ಅವರು, ವೈದ್ಯೆ ಮತ್ತು ರೋಗಿಯ ನಡುವಿನ ಅಂತರವನ್ನೇ ಮರೆಸಿಬಿಡುತ್ತಾರೆ. ಅವರ ಆತ್ಮೀಯತೆ, ಕಾಳಜಿ ಮತ್ತು ನಗುಮುಖದ ಮಾತುಗಳು ಅನೇಕ ರೋಗಿಗಳಿಗೆ ಔಷಧಿಗಿಂತಲೂ ಹೆಚ್ಚಿನ ಧೈರ್ಯವನ್ನು ನೀಡಿವೆ. ಅದಕ್ಕಾಗಿಯೇ ಅನೇಕರು ಅವರನ್ನು ಕೇವಲ ವೈದ್ಯೆಯಾಗಿ ನೋಡುವುದಿಲ್ಲ ಮನೆಯವರಂತೆ, ಕಷ್ಟದ ಸಮಯದಲ್ಲಿ ಧೈರ್ಯ ತುಂಬುವ ಆತ್ಮೀಯ ವ್ಯಕ್ತಿಯಾಗಿ ಕಾಣುತ್ತಾರೆ.
ಅವರ ನಗುಮುಖದ ನುಡಿಗಳಲ್ಲೇ ಭರವಸೆಯಿದೆ, ಅವರ ಚಿಕಿತ್ಸೆಯಲ್ಲಿ ಪರಿಣತಿಯಿದೆ, ಅವರ ಹೃದಯದಲ್ಲಿ ಮಾನವೀಯತೆಯಿದೆ. ರೋಗಿಯ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸುವುದು, ನಗುಮುಖದಿಂದ ಮಾತನಾಡುವುದು ಹಾಗೂ "ಚಿಂತಿಸಬೇಡಿ, ಸರಿ ಆಗುತ್ತದೆ" ಎಂಬ ಭರವಸೆಯ ಮಾತುಗಳಿಂದ ಧೈರ್ಯ ತುಂಬುವುದು ಅವರ ವಿಶಿಷ್ಟ ಗುಣ. ಅನೇಕ ರೋಗಿಗಳು ಅವರ ಮಾತುಗಳೇ ಚಿಕಿತ್ಸೆಯಂತೆ ಕೆಲಸ ಮಾಡುತ್ತವೆ ಎಂದು ಹೇಳುತ್ತಾರೆ.
ಹೆಣ್ಣಿನ ಮುಖದ ಮೇಲಿನ ನೈಸರ್ಗಿಕ ಕಾಂತಿ, ಅವಳ ಚರ್ಮದ ಆರೋಗ್ಯ, ಅವಳ ಕೇಶದ ಸೊಬಗು ಇವುಗಳೇ ಅವಳ ನಿಜವಾದ ಆಭರಣಗಳು. ಅವಳು ಎಷ್ಟು ದುಬಾರಿ ಆಭರಣ ಧರಿಸಿದ್ದಾಳೆ ಎಂಬುದಕ್ಕಿಂತ, ಅವಳ ಮುಖದಲ್ಲಿ ಎಷ್ಟು ಆತ್ಮವಿಶ್ವಾಸವಿದೆ ಎಂಬುದೇ ಮುಖ್ಯ. ಹೆಣ್ಣಿಗೆ ಬಂಗಾರ ಅಲಂಕಾರವಾಗಬಹುದು, ರೇಷ್ಮೆ ಸೀರೆ ಶೋಭೆ ಹೆಚ್ಚಿಸಬಹುದು, ಆದರೆ ಅವಳ ಕೇಶವೇ ಅವಳ ಕಿರೀಟ, ಅವಳ ಚರ್ಮವೇ ಅವಳ ಆತ್ಮವಿಶ್ವಾಸ, ಅವಳ ನೈಸರ್ಗಿಕ ಸೌಂದರ್ಯವೇ ಅವಳ ಅತ್ಯಮೂಲ್ಯ ಆಭರಣ.
ಆದರೆ ಇತ್ತೀಚೆಗೆ ಕೂದಲು ಉದುರುವಿಕೆ, ಚರ್ಮದ ಸಮಸ್ಯೆಗಳು ಅಥವಾ ಮುಖದ ಕಲೆಗಳು ಅನೇಕ ಮಹಿಳೆಯರ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತಿವೆ. ಅಂತಹ ಸಂದರ್ಭದಲ್ಲಿ ಕೇವಲ ಚಿಕಿತ್ಸೆ ನೀಡುವುದಲ್ಲ, ಕಳೆದುಹೋದ ಆತ್ಮವಿಶ್ವಾಸವನ್ನು ಮರಳಿ ನೀಡುವ ಕೆಲಸವನ್ನು ಡಾ. ಸಿಂಧು ಅವರು ಮಾಡುತ್ತಿದ್ದಾರೆ. ತಮ್ಮ ಪರಿಣತಿ, ಕಾಳಜಿ ಮತ್ತು ಆಧುನಿಕ ಚಿಕಿತ್ಸೆಗಳ ಮೂಲಕ ಅನೇಕ ಮಹಿಳೆಯರಿಗೆ ಆರೋಗ್ಯಕರ ಕೇಶ, ಕಾಂತಿಯುತ ಚರ್ಮ ಹಾಗೂ ಹೊಸ ಆತ್ಮವಿಶ್ವಾಸವನ್ನು ನೀಡುತ್ತಿದ್ದಾರೆ. ಅವರ ಚಿಕಿತ್ಸೆಯಿಂದ ಬದಲಾಗುವುದು ಕೇವಲ ಮುಖದ ಕಾಂತಿ ಅಥವಾ ಕೂದಲಿನ ಆರೋಗ್ಯವಲ್ಲ, ಕನ್ನಡಿಯ ಮುಂದೆ ನಿಂತಾಗ ಮೂಡುವ ಸಂತೋಷ, ಜೀವನದ ಬಗ್ಗೆ ಬೆಳೆಯುವ ನಂಬಿಕೆ ಮತ್ತು ಮುಖದಲ್ಲಿ ಅರಳುವ ನಗು. ಅದಕ್ಕಾಗಿಯೇ ಅನೇಕ ರೋಗಿಗಳಿಗೆ ಡಾ. ಸಿಂಧು ಕೆ. ಗೌಡ ಅವರು ಕೇವಲ ವೈದ್ಯೆಯಲ್ಲ, ಆತ್ಮವಿಶ್ವಾಸವನ್ನು ಮರಳಿ ಕಟ್ಟಿಕೊಡುವ ಆಶಾಕಿರಣವಾಗಿದ್ದಾರೆ.
- ಸರಸ್ವತಿ ವಿಶ್ವನಾಥ್ ಪಾಟೀಲ್,
ಅಂಕಣಕಾರರು, ವಕೀಲರು
ಕಾರಟಗಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



