ಧರ್ಮಸ್ಥಳದಲ್ಲಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭ

Upayuktha
0



ಉಜಿರೆ: ಚತುರ್ವಿಧ ದಾನಪರಂಪರೆಯೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರು ಮಾನವ ಕಲ್ಯಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಡುತ್ತಿರುವ ಬಹುಮುಖಿ ಸೇವಾಕಾರ್ಯಗಳು ಆದರ್ಶ ಹಾಗೂ ಅನುಕರಣೀಯವಾಗಿವೆ ಎಂದು ಕೊಡಗು ವಿರಾಜಪೇಟೆಯ ಪೂಜ್ಯ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. 

ಧರ್ಮಸ್ಥಳದ ವತಿಯಿಂದ ಬದುಕಿಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಮತ್ತು ಸೌಲಭ್ಯಗಳನ್ನು ಒದಗಿಸಿ ಫಲಾನುಭವಿಗಳ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ, ಧರ್ಮಸ್ಥಳದವರು ಕಾರ್ಯ ಮಾಡದ ಸೇವಾ ಕ್ಷೇತ್ರವಿಲ್ಲ. ವ್ಯಸನಮುಕ್ತರು ದೃಢಸಂಕಲ್ಪದಿಂದ ಸಾರ್ಥಕ ಜೀವನ ನಡೆಸಬೇಕು. ಇದು ಅತ್ಯಂತ ಸಂತೋಷ ಮತ್ತು ಸಂಭ್ರಮದ ಸಮಾರಂಭವಾಗಿದ್ದು ವ್ಯಸನಮುಕ್ತರ ಮುಖದಲ್ಲಿರುವ ಮಂದಹಾಸ ಹಾಗೂ ತೃಪ್ತಿ ಆಶಾದಾಯಕವಾಗಿದೆ ಎಂದರು.

ನವಜೀವನ ಪ್ರಶಸ್ತಿ ಪ್ರದಾನ ಮಾಡಿದ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ವ್ಯಸನಮುಕ್ತರು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು, ತಮ್ಮ ಕೆಲಸವನ್ನು ಸಂತೋಷದಿಂದ ಮಾಡಿ ಗೌರವಯುತ ಹಾಗೂ ನೆಮ್ಮದಿಯ ಜೀವನ ನಡೆಸಬೇಕು ಎಂದು ಹೇಳಿದರು.

ವಾರ್ಷಿಕ ವರದಿ ಬಿಡಗಡೆಗೊಳಿಸಿದ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ ಮದ್ಯಪಾನದಂತಹ ದುಶ್ಚಟಗಳಿಂದ ಕೊಲೆ, ಅನ್ಯಾಯ, ಅತ್ಯಾಚಾರ ಹೆಚ್ಚಾಗುತ್ತದೆ. ಮಹಿಳೆಯರ ಜೀವನ ನರಕಯಾತನೆಯಾಗುತ್ತದೆ. ಮಾನವಜನ್ಮ ಶ್ರೇಷ್ಠವಾಗಿದ್ದು ಬುದ್ಧಿ, ವಿವೇಕ ಮತ್ತು ಶಕ್ತಿಯ ಸದುಪಯೋಗ ಮಾಡಿ ಸುಖ-ಶಾಂತಿ, ನೆಮ್ಮದಿಯ ಕುಟುಂಬ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ. ಅನಿಲ್ ಕುಮಾರ್ ಮಾತನಾಡಿ ಫಲಾನುಭವಿಗಳ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸಿದ ಯಶಸ್ವಿ ಕಾರ್ಯಕ್ರಮಗಳ ಮಾಹಿತಿ ನೀಡಿದರು.

“ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ” ಪ್ರಶಸ್ತಿ:

ಹೊನ್ನಾವರದ ಮಂಜುನಾಯ್ಕ, ನಂಜನಗೂಡು ಮಣಿಕಂಠ ಮತ್ತು ಗದಗ ಜಿಲ್ಲೆಯ ನವಲಗುಂದದ ಜಗದೀಶ ಮಲ್ಲಪ್ಪ ಬ್ಯಾಳಿ ಅವರಿಗೆ “ಜಾಗೃತಿ ಅಣ್ಣ” ಹಾಗೂ ಹುಬ್ಬಳ್ಳಿಯ ಸಿದ್ದಪ್ಪ ಕಲ್ಲಪ್ಪ ನೀಲರಗಿ, ಅಥಣಿಯ ಅಂದಾನಿ ದುರದುಂಡೆಪ್ಪ, ಶಿವಮೊಗ್ಗದ ರಮೇಶ್, ಎಸ್.ಎಲ್. ಗದಗದ ಶಿವಾನಂದ ಕುರಿ, ತುಮಕೂರಿನ ರವಿಕುಮಾರ್ ಮತ್ತು ವಿಜಯಪುರದ ಬಬಲೇಶ್ವರ ಸುಭಾಶ್ ಅವರಿಗೆ “ಜಾಗೃತಿ ಮಿತ್ರ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಪಾನಮುಕ್ತರ ಪರವಾಗಿ ಕೂಡ್ಲಿಗಿಯ ಸತೀಶ್ ಮತ್ತು ತುಮಕೂರಿನ ಮಂಜುಳಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವ್ಯಸನಮುಕ್ತರು ದೃಢಸಂಕಲ್ಪದಿಂದ ಇದ್ದು ಮುಂದೆ ಯಾವುದೇ ಆಮಿಷ, ಒತ್ತಡಕ್ಕೆ ಒಳಗಾಗಿ ಮತ್ತೆ ದುಶ್ಚಟಕ್ಕೆ ಬಲಿಯಾಗಬಾರದು. ತಾವು ಸಾರ್ಥಕ ಜೀವನ ನಡೆಸುವುದರೊಂದಿಗೆ, ಇತರ ಮದ್ಯವ್ಯಸನಿಗಳೂ ವ್ಯಸನಮುಕ್ತರಾಗುವಮತೆ ಪ್ರೇರಣೆ, ಸಹಕಾರ ನೀಡಬೇಕು ಎಂದರು.

ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಮಾತನಾಡಿ, ಈ ವರೆಗೆ 2062 ಮದ್ಯವರ್ಜನ ಶಿಬಿರಗಳ ಮೂಲಕ 1,38,000 ಮದ್ಯವ್ಯಸನಿಗಳನ್ನು ವ್ಯಸನಮುಕ್ತರಾಗಿ ಪರಿವರ್ತನೆ ಮಾಡಿದ್ದು ಇದಕ್ಕಾಗಿ 75 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ ಬಾದಾಮಿ ಧನ್ಯವಾದವಿತ್ತರು. ಯೋಜನಾಧಿಕಾರಿ ಗಣೇಶ್ ಅಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top