ಒಂದು
ಭಾನುವಾರದ ರಾತ್ರಿ ಎಂಟು ಗಂಟೆಯ ಸಮಯ.
ಊಟ ಮುಗಿಸಿದ ತಂದೆ ಕುಮಾರ್ ಮನೆಯ
ತಾರಸಿಯ ಮೇಲೆ ಕುರ್ಚಿಯಲ್ಲಿ ಕುಳಿತಿದ್ದರು.
ರಾತ್ರಿಯ ನೀಲಾಕಾಶ ಸ್ವಚ್ಛಂದವಾಗಿತ್ತು. ನಕ್ಷತ್ರಗಳು ಫಳಫಳನೆ ಹೊಳೆಯುತ್ತಿದ್ದವು. ತಣ್ಣನೆಯ ಗಾಳಿ ಬೀಸುತ್ತಿತ್ತು. ಮನಸ್ಸಿಗೆ
ಒಂದು ರೀತಿ ಹಿತವಾದ ಅನುಭವವಾಗುತ್ತಿತ್ತು.
ಇದೇ
ವೇಳೆಗೆ ಇಬ್ಬರು ಮಕ್ಕಳು ಮಾನ್ಯ ಮತ್ತು ಧನ್ಯ ಮನೆಯ ತಾರಸಿಯ
ಮೇಲೆ ಕುಳಿತ ತಂದೆಯ ಬಳಿ ಬಂದು ನಕ್ಷತ್ರಗಳನ್ನು
ನೋಡುತ್ತಾ ಕುಳಿತಿರುತ್ತಾರೆ. ಮಾನ್ಯ ಕೇಳುತ್ತಾಳೆ, "ಅಪ್ಪ, ಈ ಇಡೀ ಭೂಮಿ
ಹೇಗೆ ಕೆಲಸ ಮಾಡುತ್ತದೆ?" ಅಲ್ಲಿಂದ
ಅವರ ಜ್ಞಾನದ ಪಯಣ ಆರಂಭವಾಗುತ್ತದೆ. ಮಗಳ
ಈ ಪ್ರಶ್ನೆಯ ಮೂಲಕ ಅವರಲ್ಲಿದ್ದ ಕುತೂಹಲವನ್ನು
ಗಮನಿಸಿದ ತಂದೆ
ಕುಮಾರ್ ವಿವರಿಸುತ್ತಾರೆ: "ಮಕ್ಕಳೇ, ಈ ಭೂಮಿ ಒಂದು
ಈರುಳ್ಳಿಯಂತೆ, ಪದರ ಪದರಗಳಿಂದ ಕೂಡಿದೆ."
"ಭೂಮಿಯ ಮೇಲ್ಪದರು ತೊಗಟೆಯಾಗಿದೆ. ಇಲ್ಲಿಯೇ ನಾವು ವಾಸಿಸುತ್ತಿದ್ದೇವೆ. ಇದನ್ನು ಭೂ
ಕವಚ ಎಂದು ಕರೆಯಲಾಗುತ್ತದೆ. ಇನ್ನು
ಎರಡನೇ ಪದರು ಮ್ಯಾಂಟಲ್ ಆಗಿದೆ.
ಇದರಲ್ಲಿ ಕೊತಕೊತ ಕುದಿಯುವ ದ್ರವರೂಪದ ಲಾವಾ ಇದೆ. ಇದನ್ನೇ
ಮ್ಯಾಗ್ಮಾ ಎನ್ನಲಾಗುತ್ತದೆ. ಭೂಮಿಯ ಮೂರನೇ ಪದರು ಭೂಗರ್ಭ ಎನಿಸಿದೆ.
ಇದು ಘನಾಕೃತಿಯ ಗಟ್ಟಿ ಪದಾರ್ಥವಾಗಿದೆ. ಭೂಮಿಯ ಒಳಭಾಗದ ಶಾಖ ಮತ್ತು ಲಾವಾ
ಮತ್ತು ಕಬ್ಬಿಣದ ತಿರುಳಿನ ಬಗ್ಗೆ ಹೇಳುವಾಗ ಮಕ್ಕಳು ಬೆರಗಾಗುತ್ತಾರೆ.
ಧನ್ಯ
ಕೇಳುತ್ತಾಳೆ, "ಅಪ್ಪ, ಇಷ್ಟು ಎತ್ತರದ ಹಿಮಾಲಯ ಪರ್ವತಗಳು ಅಲ್ಲಿಗೆ ಹೇಗೆ ಬಂದವು?" ಹಿಮಾಲಯ
ಪರ್ವತ ಶ್ರೇಣಿಗಳು ಬಹಳ ಆಶ್ಚರ್ಯವಲ್ಲವೇ? " ಹೌದು ಮಗು,
ನಿನ್ನ ಪ್ರಶ್ನೆಗಳು ಸರಿಯಾಗಿವೆ " ಎನ್ನುತ್ತಾ ತಂದೆ ಕುಮಾರ್ ನಗುತ್ತಾ
ವಿವರಿಸುತ್ತಾರೆ, "ನೋಡು ಧನ್ಯ, ಎರಡು
ಬಲವಾದ ವಸ್ತುಗಳು ಪರಸ್ಪರ ಡಿಕ್ಕಿ ಹೊಡೆದಾಗ ಅವುಗಳ ಮಧ್ಯದ ಭಾಗ ಮೇಲೆ ಏಳುತ್ತದಲ್ಲವೇ?
ಹಾಗೆಯೇ, ಲಕ್ಷಾಂತರ ವರ್ಷಗಳ ಹಿಂದೆ ಈ ಭೂಮಿಯ ಅಂತರಾಳದಲ್ಲಿ
ತೇಲುವ ಪ್ಲೇಟ್ ಗಳು ಒಂದಕ್ಕೊಂದು ಜೋರಾಗಿ
ಡಿಕ್ಕಿ ಹೊಡೆಯುತ್ತಿರುತ್ತವೆ. ಭಾರತ ಮತ್ತು ಏಷ್ಯಾ
ಖಂಡದ ಭಾಗಗಳಲ್ಲಿ ಈ ಪ್ರಕ್ರಿಯೆ ನಡೆದಿರುವುದರಿಂದ
ಹಿಮಾಲಯ ಪರ್ವತಗಳು ಇಲ್ಲಿಯೇ ರೂಪುಗೊಂಡಿವೆ. ನೀನು ಹೇಳಿದಂತೆ ಹಿಮಾಲಯ
ಪರ್ವತಗಳು ಈ ಸೃಷ್ಟಿಯ ಅನನ್ಯ
ಅಚ್ಚರಿಯಾಗಿವೆ ಕಂದ. ಭೂಮಿಯ ಅಂತರಾಳದಲ್ಲಿ
ಪ್ಲೇಟ್ ಗಳು ಜೋರಾಗಿ ಡಿಕ್ಕಿ
ಹೊಡೆಯುವ ಪ್ರಕ್ರಿಯೆಯಲ್ಲಿ ಭೂಮಿ ಮಡಚಿಕೊಂಡು ಈ
ದೈತ್ಯ ಪರ್ವತಗಳು ಸೃಷ್ಟಿಯಾದವು. ಇವುಗಳನ್ನು ನಾವು 'ಮಡಿಕೆ ಪರ್ವತಗಳು' (Fold Mountains) ಎನ್ನುತ್ತೇವೆ. ಅಂದರೆ, ಇಂದಿಗೂ ಹಿಮಾಲಯ ಪ್ರತಿ ವರ್ಷ ಕೆಲವು ಮಿಲಿಮೀಟರ್ಗಳಷ್ಟು ಎತ್ತರ ಬೆಳೆಯುತ್ತಲೇ ಇದೆ!" ಎಂದು ಭೂ ವಿಜ್ಞಾನಿಗಳು
ಊಹಿಸುತ್ತಾರೆ. ಎಂದು ತಂದೆ ಹೇಳಿದಾಗ
ಮಕ್ಕಳು ಕುತೂಹಲದಿಂದ ಕೇಳುತ್ತಿರುತ್ತಾರೆ.
ಮನೆಯ
ಕೆಲಸಗಳನ್ನು ಮುಗಿಸಿ ತಾಯಿ ವೈಶಾಲಿ ತಾರಸಿಯ
ಮೇಲೆ ಬಂದು ಸೇರಿಕೊಳ್ಳುತ್ತಾಳೆ. ಏನೋ ಯೋಚನೆ
ಮಾಡುತ್ತಿದ್ದ ಮಾನ್ಯಳನ್ನು ಗಮನಿಸಿದ ತಂದೆ, "ಮಾನ್ಯ, ನೀನು ಏನು ಯೋಚ್ನೆ
ಮಾಡ್ತಾ ಇದ್ದೀಯಾ?" ಎನ್ನುತ್ತಾನೆ. ಕೂಡಲೇ ಮಾನ್ಯ ಕೇಳುತ್ತಾಳೆ, "ಸಮುದ್ರದ ಅಡಿಯಲ್ಲಿ ಏನಿದೆ ಅಪ್ಪ?" ತಂದೆ ಕುಮಾರ್ ಮಕ್ಕಳಿಗೆ
ಕಣ್ಣು ಮುಚ್ಚಿ ಕಲ್ಪಿಸಿಕೊಳ್ಳಲು ಹೇಳುತ್ತಾರೆ: "ಸಮುದ್ರದ ಅಡಿಯಲ್ಲಿ ಭೂಮಿಗಿಂತಲೂ ದೊಡ್ಡ ಪರ್ವತ ಶ್ರೇಣಿಗಳಿವೆ, ಆಳವಾದ ಕಂದಕಗಳಿವೆ. ಮರಿಯಾನಾ ಟ್ರೆಂಚ್ ಎನ್ನುವ ಕಂದಕ ಎಷ್ಟು ಆಳವಾಗಿದೆ
ಎಂದರೆ, ಅದರೊಳಗೆ ಮೌಂಟ್ ಎವರೆಸ್ಟ್ ಪರ್ವತವನ್ನು ಇಟ್ಟರೂ ಅದು ಮುಳುಗಿ ಹೋಗುತ್ತದೆ!
ಅಲ್ಲಿ ಸೂರ್ಯನ ಬೆಳಕು ತಲುಪುವುದಿಲ್ಲ, ವಿಚಿತ್ರವಾದ ಜೀವಿಗಳು ಸ್ವಯಂ ಪ್ರಕಾಶದೊಂದಿಗೆ ಬದುಕುತ್ತವೆ." ಎಂದು ಹೇಳಿದಾಗ, "ಹೌದಾ
ಅಪ್ಪಾ " ಎಂದು ಆಶ್ಚರ್ಯದಿಂದ ನೋಡುತ್ತಾರೆ.
ತಾನು
ಹೇಳುತ್ತಿರುವ ವಿಷಯವನ್ನು ಮುಂದುವರಿಸಿದ ತಂದೆ "ನೋಡಿ ಮಕ್ಕಳೇ, ನಾವು
ವಾಸಿಸುವ ಈ ಭೂಮಿಯ ಮೇಲಿನ
ಗಾಳಿ ಕೇವಲ ಉಸಿರಾಡಲಿಕ್ಕಷ್ಟೇ ಅಲ್ಲ,
ಅದು ನಮ್ಮ ರಕ್ಷಕ," ಎನ್ನುತ್ತಾರೆ
ತಂದೆ. ಈ ಭೂಮಿಯ ಮೇಲೆ
ಓಝೋನ್ ಪದರವಿದೆ. ಸೂರ್ಯನ ಹಾನಿಕಾರಕ ಅತಿನೇರಳೆ ಕಿರಣಗಳಿಂದ ನಮ್ಮನ್ನು ಕಾಪಾಡುವ ಛತ್ರಿಯಂತೆ ಹರಡಿದೆ. ಅದಲ್ಲದೇ ನಮ್ಮ ಭೂಮಿಗೆ ಗುರುತ್ವಾಕರ್ಷಣೆಯ
ಶಕ್ತಿ ಇದೆ. ಭೂಮಿ ತನ್ನ
ವಾತಾವರಣವನ್ನು ಹಿಡಿದಿಟ್ಟು ಕೊಂಡಿರುವುದರಿಂದಲೇ ನಾವು ವಾಸಿಸಲು ಅವಕಾಶ
ಮತ್ತು ಯೋಗ್ಯವೆನಿಸಿದೆ.
ತಕ್ಷಣ
ಮಧ್ಯ ಪ್ರವೇಶಿಸಿದ ಧನ್ಯ " ಅಪ್ಪಾ, ಸಮಯದ ಲೆಕ್ಕಾಚಾರ ಹೇಗೆ
ಮಾಡೋದು? ಅಕ್ಷಾಂಶ ಮತ್ತು ರೇಖಾಂಶಗಳು ಅಂದರೆ ಏನು? (Latitudes &
Longitudes) "ಒಂದು
ದೇಶ ಎಲ್ಲಿದೆ ಎಂದು ನಮಗೆ ಹೇಗೆ
ತಿಳಿಯುತ್ತದೆ?" ಎಂದು ಮಕ್ಕಳು ಕೇಳಿದಾಗ,
ತಂದೆ ಕುಮಾರ್ ಮಕ್ಕಳೇ, ಈ ಭೂಮಿಯ ಮೇಲೆ
ಸಮಭಾಜಕ ವೃತ್ತಕ್ಕೆ ಸಮಾನಾಂತರವಾಗಿ ಮತ್ತು ಲಂಬವಾಗಿ ನಾವು ಎಳೆದುಕೊಂಡಿರುವ ಕಾಲ್ಪನಿಕ
ಗೆರೆಗಳ ಬಗ್ಗೆ ವಿವರಿಸುತ್ತಾರೆ. ಮುಂದುವರಿದು ಸಮಭಾಜಕ ವೃತ್ತ (Equator) ಎಂದರೆ ಭೂಮಿಯನ್ನು ಉತ್ತರ ಮತ್ತು ದಕ್ಷಿಣವಾಗಿ ಹಂಚುವ ಮಧ್ಯದ ರೇಖೆಯಾಗಿದೆ. ಇಲ್ಲಿ ಸೂರ್ಯ ನೇರವಾಗಿ ಇರುವುದರಿಂದ ವಿಪರೀತ ಶಾಖವಿರುತ್ತದೆ. ಅಲ್ಲದೇ ದಿನ ರಾತ್ರಿಯ ಸಮಯದಲ್ಲಿ
ವ್ಯತ್ಯಾಸ ಕಂಡುಬರುತ್ತದೆ. ಭೂಮಿ ತಿರುಗುವ ವೇಗದಿಂದಾಗಿ
ಲಂಡನ್ನಲ್ಲಿ ಬೆಳಗಾಗುವಾಗ ನಮಗೆ ಮಧ್ಯಾಹ್ನವಾಗಿರುತ್ತದೆ. ಜಗತ್ತು ಒಂದೇ
ಆದರೂ ಸಮಯದ ಹಂಚಿಕೆ ಎಷ್ಟು
ವಿಭಿನ್ನ ಎಂದು ಅವರು ವಿವರಿಸುತ್ತಾರೆ.
ಅಲ್ಲದೇ ಮುಂದುವರಿದು ತಂದೆ ಹೇಳುತ್ತಾರೆ, "ಭೂಮಿ ನಮಗೆ
ಎಲ್ಲವನ್ನೂ ಕೊಟ್ಟಿದೆ, ಆದರೆ ಮನುಷ್ಯ ಅತಿ
ಆಸೆಯಿಂದ ಅದರ ಸಮತೋಲನ ತಪ್ಪಿಸುತ್ತಿದ್ದಾನೆ
" ಅಷ್ಟೇ ಅಲ್ಲದೆ, ಜಾಗತಿಕ ತಾಪಮಾನ ಹೆಚ್ಚುತ್ತಿದ್ದು ಕಾರ್ಬನ್ ಡೈಆಕ್ಸೈಡ್ ಹೆಚ್ಚಾಗಿ ಭೂಮಿ ಜ್ವರ ಬಂದಂತೆ
ಕಾಯುತ್ತಿದೆ. ಹಿಮನದಿಗಳ ಕರಗುವಿಕೆ: ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾದ ಮಂಜುಗಡ್ಡೆ ಕರಗಿ ಸಮುದ್ರದ ಮಟ್ಟ
ಏರುತ್ತಿದೆ.
ಅಂತಿಮವಾಗಿ
ಮಕ್ಕಳಿಗೆ ತಂದೆ ಕೊಡುವ ಸಂದೇಶವೇನೆಂದರೆ:
"ಭೂಗೋಳ ಎಂದರೆ ಕೇವಲ ಭೂತಕಾಲದ ಬಗ್ಗೆ
ತಿಳಿಯುವುದಲ್ಲ, ಅದು ಭವಿಷ್ಯವನ್ನು ಉಳಿಸಿಕೊಳ್ಳುವ
ದಾರಿ." ಎಂದಾಗ ಮಾನ್ಯ ಕೇಳುತ್ತಾಳೆ, "ನಾವು ಇದನ್ನು ಸರಿಪಡಿಸಬಹುದೇ
ಅಪ್ಪ?" ತಂದೆ ಕುಮಾರ್ ಆತ್ಮವಿಶ್ವಾಸದಿಂದ
ಹೇಳುತ್ತಾರೆ, "ಖಂಡಿತ. ಭೂಮಿಯ ಪ್ರತಿಯೊಂದು ಭಾಗವು ಹೇಗೆ ಕೆಲಸ ಮಾಡುತ್ತದೆ
ಎಂದು ನಾವು ಸರಿಯಾಗಿ ಅರ್ಥಮಾಡಿಕೊಂಡರೆ
ಮಾತ್ರ, ಅದನ್ನು ಹೇಗೆ ಉಳಿಸಬೇಕೆಂದು ನಮಗೆ
ತಿಳಿಯುತ್ತದೆ. ನೀವೇ ಮುಂದಿನ ತಲೆಮಾರಿನ
ಭೂಗೋಳ ರಕ್ಷಕರು ಮಕ್ಕಳೇ." ಎಂದಾಗ ಮಕ್ಕಳು " ಅಪ್ಪಾ , ತುಂಬಾ ವಿಷಯಗಳನ್ನು ತಿಳಿದೆವು. ಈ ಭೂಮಿಯ ರಕ್ಷಣೆ
ನಾವು ಮಾಡುತ್ತೇವೆ." ಎಂದರು.
ಕೆ. ಎನ್. ಚಿದಾನಂದ, ಹಾಸನ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


