ಅದು
1960ರ ಸಮಯ. ತನ್ನ ಪಾಲಕರ
ನಾಲ್ಕು ಜನ ಮಕ್ಕಳಲ್ಲಿ ಆಕೆಯೂ
ಒಬ್ಬಳು. ಉಡುಪಿಯ ಮೂಲದ ಆಕೆ ಹುಟ್ಟುವ ಹೊತ್ತಿಗೆ ಆಕೆಯ ಪಾಲಕರು ಬೆಂಗಳೂರಿಗೆ
ಬದುಕನ್ನು ಅರಸಿ ವಲಸೆ ಬಂದಿದ್ದರು.
ಪುಟ್ಟದೊಂದು ಉಡುಪಿ ಆಹಾರವನ್ನು ತಯಾರಿಸುವ ಹೋಟೆಲನ್ನು ಆರಂಭಿಸಿದ್ದ ಅವರಿಗೆ ಬದುಕಿನ ನಿರ್ವಹಣೆಯೇ ಕಷ್ಟಕರವಾಗಿತ್ತು.
ಅಂತಹ
ಸಮಯದಲ್ಲಿ ಇಡೀ ವಿಶ್ವದಾದ್ಯಂತ ವ್ಯಾಪಕ
ಪಿಡುಗಾಗಿ ಪರಿಣಮಿಸಿದ ಪೋಲಿಯೋ ರೋಗಕ್ಕೆ ಆ ಪುಟ್ಟ ಒಂದುವರೆ
ವರ್ಷದ ಮಗು ಈಡಾಗಿತ್ತು. ಕುತ್ತಿಗೆಯ
ಕೆಳಭಾಗ ಸಂಪೂರ್ಣವಾಗಿ ಚಲನೆ ಇಲ್ಲದ ರೀತಿಯಲ್ಲಿ
ಇದ್ದ ಮಗುವನ್ನು ನೋಡಿ ತಂದೆ ತಾಯಿ
ನೋವಿನಿಂದ ಒದ್ದಾಡುವುದನ್ನು ಬಿಟ್ಟರೆ ಮತ್ತೇನು ಮಾಡಲು ಸಾಧ್ಯವಿರಲಿಲ್ಲ. ಕುಟುಂಬದವರ ಕರುಣೆಯ ಕೂಸಾಗಿದ್ದ ಆಕೆಯನ್ನು ಹೇಗಾದರೂ ಮಾಡಿ ತನ್ನ ಕಾಲ
ಮೇಲೆ ನಿಲ್ಲುವಂತೆ ಮಾಡಬೇಕು ಎಂಬ ಅದಮ್ಯ ಆಶಯ
ಆಕೆಯ ತಾಯಿಯದಾಗಿತ್ತು. ಪರಿಚಯದವರ ಹೇಳಿಕೆಯ ಮೇರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎಲೆಕ್ಟ್ರಿಕ್ ಶಾಕ್ / ವಿದ್ಯುತ್ ಕಂಪನ ಚಿಕಿತ್ಸೆಯನ್ನು ನೀಡಿದರೆ
ಶಕ್ತಿಗುಂದಿದ ನರಗಳಲ್ಲಿ ಚೈತನ್ಯವನ್ನು ತುಂಬಲು ಸಾಧ್ಯವಾಗಬಹುದು ಎಂಬ ಕಾರಣಕ್ಕೆ ಆಕೆಯ
ತಾಯಿ ಪ್ರತಿದಿನ ತನ್ನ ಮನೆ ಕೆಲಸಗಳೆಲ್ಲವನ್ನು
ಪೂರೈಸಿ ಮಗುವನ್ನು ಹೊತ್ತು ನಡೆದುಕೊಂಡು ಹೋಗಲು ತುಸು ದೂರವೇ ಎನ್ನಿಸಬಹುದಾದಷ್ಟು
ದಾರಿಯನ್ನು ಪುಟ್ಟ ಮಗುವನ್ನು ಕಂಕುಳಲ್ಲಿ ಹೊತ್ತು ಸಾಗುತ್ತಿದ್ದಳು. ದಿನಕ್ಕೆ ಮೂರು ಬಾರಿ ಆ
ವಿದ್ಯುತ್ ಕಂಪನ ಚಿಕಿತ್ಸೆಗೆ ಒಳಗಾಗಬೇಕಿತ್ತು....
ಮಗುವಿನ ನರಗಳಲ್ಲಿ ಶಕ್ತಿ ಇಲ್ಲದ ಕಾರಣ ಆಕೆಗೆ ಆ
ನೋವಿನ ಅರಿವು ಆಗದೆ ಹೋದರೂ ತಾಯಿಯ
ಜೀವ ಚಿಕಿತ್ಸೆಯ ಕಾರಣದಿಂದ ತನ್ನ ಮಗು ಪಡಬಹುದಾದ
ಹಿಂಸೆಯನ್ನು ಖುದ್ದು ತಾನೇ ಅನುಭವಿಸುವಂತೆ ಒದ್ದಾಡುತ್ತಿದ್ದಳು.
ಮುಂಜಾನೆ,
ಮಧ್ಯಾಹ್ನ ಹಾಗೂ ಸಾಯಂಕಾಲದ ಎಲೆಕ್ಟ್ರಿಕ್
ಶಾಕ್ ಚಿಕಿತ್ಸೆಯ ನಂತರ ಮತ್ತೆ ಮಗುವನ್ನು
ಹೊತ್ತುಕೊಂಡು ಇಳಿಸಂಜೆಗೆ ಮನೆ ಸೇರುತ್ತಿದ್ದರು ಆಕೆಯ
ತಾಯಿ. ಸರಿ ಸುಮಾರು ಎರಡು
ವರ್ಷಗಳ ಕಾಲ ದಣಿವರಿಯದೆ ತನ್ನ
ಮಗಳಿಗಾಗಿ ತನ್ನ ಬದುಕನ್ನೇ ಆಕೆ
ಮುಡಿಪಾಗಿಟ್ಟಳು.
ಪರಿಣಾಮವಾಗಿ
ಕುತ್ತಿಗೆಯ ಕೆಳಗೆ ಸಂಪೂರ್ಣ ನಿಷ್ಕ್ರಿಯವಾಗಿದ್ದ ಆಕೆಯ ದೇಹದಲ್ಲಿ ತುಸು
ಚೈತನ್ಯ ಒಡಮೂಡಿತು. ತರಕಾರಿಯ ಮುದ್ದೆಯಂತೆ ಬಿದ್ದಲ್ಲೇ ಬಿದ್ದಿರುತ್ತಿದ್ದ ಆಕೆ ಇದೀಗ ಕೊಂಚ
ಮಟ್ಟಿಗೆ ತನ್ನ ಕಾಲ ಬಲದ
ಮೇಲೆ ನಿಧಾನವಾಗಿ ಎದ್ದು ನಿಲ್ಲುವಂತೆ ಆಯಿತು. ಆದರೆ ಇಷ್ಟಕ್ಕೆ ಮುಗಿಯಲಿಲ್ಲ.
ಮಗುವಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವ, ಶಸ್ತ್ರಚಿಕಿತ್ಸೆಯ ಮೂಲಕ ಆಕೆಯ ದೈಹಿಕ
ಪರಿಸ್ಥಿತಿಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಮದರಾಸಿನ ಒಂದು ಅತ್ಯಂತ ಕಡಿಮೆ
ಶುಲ್ಕವನ್ನು ವಿಧಿಸುವ ಸ್ಥಾನಿಕ ವಸತಿಯುತ ಆಸ್ಪತ್ರೆಗೆ ದಾಖಲು ಮಾಡುವಂತೆ ವೈದ್ಯರು ಸಲಹೆ ನೀಡಿದರು.
ನಾಲ್ಕು
ವರ್ಷ ಕೂಡ ತುಂಬದ ಪುಟ್ಟ
ಮಗುವನ್ನು ಕಾಣದ ದೂರದ ಊರಿನಲ್ಲಿ
ಅದು ಹೇಗೆ ಬಿಟ್ಟು ಬರಬೇಕು
ಎಂಬುದು ತಾಯಿಯ ಕಳವಳವಾದರೆ ತನ್ನ ಮಗಳು ಯಾರಿಗೂ
ಭಾರವಾಗಬಾರದು ತನ್ನ ಬದುಕನ್ನು ತಾನು
ಸಂಭಾಳಿಸಿಕೊಳ್ಳು ವಷ್ಟಾದರೂ
ಆಕೆ ದೈಹಿಕ ಆರೋಗ್ಯವನ್ನು ಹೊಂದಬೇಕು ಎಂಬುದು ತಂದೆಯ ಆಶಯವಾಗಿತ್ತು. ಅಂತಿಮವಾಗಿ ಮಗಳ ಭವಿಷ್ಯದ ದೃಷ್ಟಿಯಿಂದ
ಪಾಲಕರಿಬ್ಬರೂ ಒಪ್ಪಿ ಆಕೆಯನ್ನು ದೂರದ ಮದರಾಸು ನಗರದ
ವಸತಿ ಶಾಲೆಗೆ ದಾಖಲಿಸಿದರು. ವಾರವಿಡೀ ತಮ್ಮ ಉಡುಪಿ ಹೋಟೆಲಿನ
ಕೆಲಸದ ಒತ್ತಡದಿಂದ ದಣಿಯುತ್ತಿದ್ದ ತಂದೆ ರವಿವಾರ ಮುಂಜಾನೆಯ
ರೈಲಿಗೆ ಹೋಗಿ ಮಗಳನ್ನು ಮಾತಾಡಿಸಿಕೊಂಡು
ಮತ್ತೆ ಸಂಜೆಯ ರೈಲಿನಲ್ಲಿ ಮರಳುತ್ತಿದ್ದರು. ಗಂಡ ಹೆಂಡತಿ ಉಳಿದ
ಮೂರು ಜನ ಮಕ್ಕಳ ಬದುಕಿನ
ಬಂಡಿಯನ್ನು ಸಾಗಿಸಲು ಮರುದಿನ ಮುಂಜಾನೆ ಹೋಟೆಲ್ ಬಾಗಿಲು ತೆಗೆಯಲೇಬೇಕಾದ ಅನಿವಾರ್ಯತೆ ಅವರಿಗಿತ್ತು.
ತನ್ನ
ಮೂರನೇ ವಯಸ್ಸಿನಿಂದ 18ನೇ ವಯಸ್ಸಿನವರೆಗೆ ಸರಿಸುಮಾರು
15 ವರ್ಷಗಳ ಕಾಲ ಅಂಗವಿಕಲರಿಗಾಗಿಯೇ ಇದ್ದ
ಆ ಶಾಲೆಯಲ್ಲಿ ಸರಿ ಸುಮಾರು 34 ಶಸ್ತ್ರ
ಚಿಕಿತ್ಸೆಗಳಿಗೆ ಆಕೆ ಒಳಗಾದಳು.... ಪರಿಣಾಮವಾಗಿ
ಕೈಯಲ್ಲಿ ಊರುಗೋಲುಗಳನ್ನು ಹಿಡಿದು ನಡೆಯುವಷ್ಟರ ಮಟ್ಟಿಗೆ ಆಕೆ ತಯಾರಾದಳು. ಇದೆಲ್ಲದರ
ಮಧ್ಯದಲ್ಲಿ ಆಕೆಗೆ ನೆಮ್ಮದಿ ತರುತ್ತಿದ್ದದ್ದು ಆಕೆಯ ಪಠ್ಯ ಚಟುವಟಿಕೆ.
ಅಲ್ಲಿ ಲಭ್ಯವಿದ್ದ ತೆಲುಗು / ತಮಿಳು ಮಾಧ್ಯಮಗಳಲ್ಲಿ ಆಕೆ ತೆಲುಗು ಭಾಷೆಯನ್ನು
ಆಯ್ದುಕೊಳ್ಳಲು ಕಾರಣ ಅದು ಕನ್ನಡದ
ಲಿಪಿಗಳಿಗೆ ತುಂಬಾ ಹತ್ತಿರವಾಗುತ್ತದೆ ಎಂದು. ಅತ್ಯುತ್ತಮ ಅಂಕಗಳೊಂದಿಗೆ ಹತ್ತನೇ ತರಗತಿಯನ್ನು ಪಾಸಾದ ಆಕೆ ಮುಂದೆ ತನ್ನ
ಪಾಲಕರ ಬಳಿ ಬಂದಳು.
ಇದುವರೆಗೂ
ತನ್ನಂತೆಯೇ ಇದ್ದ ಅಂಗವಿಕಲರ ಪ್ರಪಂಚದಲ್ಲಿ
ಬದುಕಿದ್ದ ಆಕೆಗೆ ಇದೀಗ ನೀರಿನಿಂದ ಹೊರ
ಬಿದ್ದ ಮೀನಿನಂತಹ ಅನುಭವ.
ಕಾಲೇಜು
ಶಿಕ್ಷಣವನ್ನು ಮಗಳು ಪೂರೈಸಲಿ ಎಂದು
ಮನೆಗೆ ಹತ್ತಿರವಿದ್ದ ಕಾಲೇಜಿಗೆ ಮಗಳನ್ನು ದಾಖಲಿಸಿದರು. ಆದರೆ ಮೂರು ಅಂತಸ್ತಿನ
ಕಟ್ಟಡದಲ್ಲಿ ಆಕೆಯ ತರಗತಿಗಳು ಇದ್ದದ್ದು
ಮೂರನೇ ಅಂತಸ್ತಿನಲ್ಲಿ ತನ್ನ ಊರಿಗೋಲುಗಳ ಸಹಾಯದಿಂದ
ಹೆಗಲಿಗೆ ಒಂದು ಪುಟ್ಟ ಬ್ಯಾಗನ್ನು
ನೇತು ಹಾಕಿಕೊಂಡು ಆಕೆ ತರಗತಿಯನ್ನು ತಲುಪುವ
ವೇಳೆಗೆ ಆ ಅವಧಿಯ ಪಾಠ
ಮುಗಿದು ಹೋಗಿರುತ್ತಿತ್ತು ಕೆಲವೇ ದಿನಗಳಲ್ಲಿ ಇದರಿಂದ ಬೇಸತ್ತು ಹೋದ ಆಕೆ ಪ್ರಾಂಶುಪಾಲರನ್ನು
ಭೇಟಿಯಾಗಿ ಅತ್ಯಂತ ಗಟ್ಟಿಯಾದ ಧ್ವನಿಯಲ್ಲಿ ತನಗಾಗುತ್ತಿರುವ ತೊಂದರೆಯನ್ನು ಹೇಳಿಕೊಂಡು ಪರಿಹಾರವನ್ನು ಪಡೆದಳು. ಹೇಳದೆ ಹೋದರೆ ಯಾವ ಸಮಸ್ಯೆಗೂ ಪರಿಹಾರ
ದೊರೆಯುವುದಿಲ್ಲ. ನಿಮ್ಮಅಳಲನ್ನು ಕೇಳಲು, ಯಾರೂ ತಯಾರಿರುವುದಿಲ್ಲ ನಿಜ
ಆದರೆ ಹೇಳಲು ನೀವು ಖಂಡಿತವಾಗಿಯೂ ತಯಾರಿರಬೇಕು
ಎಂಬುದನ್ನು ಆಕೆ ತಾನು ಚಿಕ್ಕಂದಿನಿಂದ
ಇದ್ದ ವಸತಿ ಶಾಲೆಯಲ್ಲಿ ಕಲಿತಿದ್ದಳು.
ಮುಂದೆ
ಸಿಂಡಿಕೇಟ್ ಬ್ಯಾಂಕ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ ಮಾಲತಿ
ಹೊಳ್ಳ ಮ್ಯಾನೇಜರ್ ಆಗಿ ಕೆಲ ವರ್ಷಗಳ
ಕಾಲ ತಮ್ಮ ಹುದ್ದೆಯಲ್ಲಿ ಮುಂದುವರೆದು
ನಂತರ ಸ್ವಯಂ ನಿವೃತ್ತಿಯನ್ನು ಪಡೆದರು.
ಅದೊಂದು
ಬಾರಿ ಆಕೆ ಅಂಗವಿಕಲರಿಗೆ ಇರುವ
ಕ್ರೀಡಾಕೂಟಗಳಲ್ಲಿ ಭಾಗವಹಿಸಿದವರು ಮತ್ತೆ ಹಿಂತಿರುಗಿ ನೋಡಲಿಲ್ಲ. 397 ಚಿನ್ನದ ಪದಕಗಳು, ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಪಡೆದಿರುವ ಮಾಲತಿ ಅವರು ಭಾರತ ದೇಶದಲ್ಲಿ
ಕ್ರೀಡೆಗಾಗಿ ನೀಡಲಾಗುವ ಅರ್ಜುನ ಹಾಗೂ ದೇಶದ ಪರಮೋಚ್ಚ
ಗೌರವ ಪದ್ಮಶ್ರೀ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ದಕ್ಷಿಣ
ಕೊರಿಯಾ ಅಥೆನ್ಸ್ ಬಾರ್ಸಿಲೋನಾ ಮತ್ತು ಬೀಜಿಂಗ್ ಗಳಲ್ಲಿ ನಡೆದ ಪ್ಯಾರಾ ಒಲಂಪಿಕ್
ನಲ್ಲಿ ಭಾಗವಹಿಸಿರುವ ಆಕೆ ಬೀಜಿಂಗ್, ಕೌಲಾಲಂಪುರ್,
ಸೌತ್ ಕೊರಿಯಾ ಮತ್ತು ಬ್ಯಾಂಕಾಕ್ ದೇಶಗಳಲ್ಲಿ ನಡೆದ ಏಷ್ಯನ್ ಗೇಮ್ಸ್
ನಲ್ಲಿ ಕೂಡ ಭಾಗವಹಿಸಿದ್ದಾರೆ. ಡೆನ್ಮಾರ್ಕ್ ಮತ್ತು
ಆಸ್ಟ್ರೇಲಿಯಾಗಳಲ್ಲಿ ನಡೆದ ವರ್ಲ್ಡ್ ಮಾಸ್ಟರ್ ನಲ್ಲಿ ಭಾಗವಹಿಸಿದ ಆಕೆ ಆಸ್ಟ್ರೇಲಿಯಾದ ಕಾಮನ್
ವೆಲ್ತ್ ಗೇಮ್ ಗಳಲ್ಲಿ ಕೂಡ
ಭಾಗವಹಿಸಿದ್ದಾರೆ. ಬೆಲ್ಜಿಯಂ, ಕೌಲಾಲಂಪುರ ಮತ್ತು ಇಂಗ್ಲೆಂಡ್ನಲ್ಲಿ ನಡೆದ ಮುಖ್ಯ ಚಾಂಪಿಯನ್
ಶಿಪ್ಗಳಲ್ಲಿ ಕೂಡ ಅವರು ಭಾಗವಹಿಸಿದ್ದಾರೆ.
ಇಲ್ಲಿಯವರೆಗೂ
ಸರಿಸುಮಾರು 34 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿರುವ ಮಾಲತಿ ಅವರು ಈ ಸಾಧನೆ
ಮಾಡಿರುವುದು ಅವರ ಸ್ಪರ್ಧಾ ಮನೋಭಾವವನ್ನು
ತೋರುತ್ತದೆ. ತಮ್ಮ ಉಳಿದ ಸ್ನೇಹಿತರೊಂದಿಗೆ
2006 ರಿಂದ ಹೆಚ್ಎಎಲ್ ನ ವಸತಿಯಲ್ಲಿ ಮಾತೃ
ಫೌಂಡೇಶನ್ ಎಂಬ ಅಂಗವಿಕಲರಿಗಾಗಿ ವಿಶೇಷ
ಸಂಸ್ಥೆಯೊಂದನ್ನು ತೆರೆದಿರುವ ಅವರು ಇದೀಗ ಸರ್ಜಾಪುರದ
ಬಳಿ ಸ್ವಂತ ಕಟ್ಟಡವನ್ನು ನಿರ್ಮಿಸಿ ಸರಿಸುಮಾರು ಐವತ್ತಕ್ಕೂ ಹೆಚ್ಚು ಅವಕಾಶ ವಂಚಿತ ಅಂಗವಿಕಲರಿಗೆ ಆಶ್ರಯ ನೀಡಿದ್ದು ಅವರ ಭವಿಷ್ಯವನ್ನು ರೂಪಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಸಮಯ
ಮತ್ತು ಶ್ರದ್ದೆ ಯನ್ನು ಮೀಸಲಿಡುವ ಕಾರಣ ತಮ್ಮ ಬ್ಯಾಂಕ್
ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿರುವ ಮಾಲತಿ ಹೊಳ್ಳ ಅವರದು ಅತ್ಯದ್ಭುತ ಮಾತೃ ಹೃದಯ. ಕರ್ನಾಟಕ
ರಾಜ್ಯದಾದ್ಯಂತ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿನ ಅಂಗವಿಕಲ ಮಕ್ಕಳನ್ನು ತಾವೇ ಖುದ್ದಾಗಿ ಭೇಟಿಯಾಗಿ
ಅವರಿಗೆ ಮಾತೃ ಸಂಸ್ಥೆಯಲ್ಲಿ ಆಶ್ರಯ
ನೀಡಿ ಬದುಕನ್ನು ರೂಪಿಸಿಕೊಳ್ಳಲು ಸಹಾಯ ಹಸ್ತ ಚಾಚಿದ್ದಾರೆ.
2009 ಜುಲೈ
8ರಂದು 'ಎ ಡಿಫರಂಟ್ ಸ್ಪ್ರಿರಿಟ್
' ಎಂಬ ಆತ್ಮಕಥೆಯನ್ನು ಬರೆದು ಪ್ರಕಟಿಸಿರುವ ಅವರು ಕೇವಲ ತನ್ನ ಕಾಲುಗಳನ್ನು
ಕಸಿದುಕೊಂಡಿರುವ ದೇವರು ತನಗೆ ಅದ್ಭುತವಾದ ಆತ್ಮ
ಬಲವನ್ನು ಮತ್ತು ತುಸು ಹೆಚ್ಚೇ ಅದೃಷ್ಟವನ್ನು
ನೀಡಿದ್ದು ಇಲ್ಲಿಯವರೆಗೂ ತಾನು ಸಾಧಿಸಲು ಸಾಧ್ಯವಾಗಿದ್ದು
ಈ ಅಂಗವಿಕಲತೆಯಿಂದಲೇ ಎಂದು ಅತ್ಯಂತ ಹೆಮ್ಮೆಯಿಂದ
ಹೇಳುವ ಮಾಲತಿ ಹೊಳ್ಳ ಅವರ ಸಾಧನೆಗೆ ಒಂದು ದೊಡ್ಡ ಸೆಲ್ಯೂಟ್.
ವೀಣಾ ಹೇಮಂತಗೌಡ ಪಾಟೀಲ್
ಮುಂಡರಗಿ ಗದಗ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


