ನೀರ್ಚಾಲು: ನೀರ್ಚಾಲು
ಸಮೀಪದ ಬುರುಡಡ್ಕ ಎಂಬ ಬರಡು ನೆಲವನ್ನು ಹದಗೊಳಿಸಿ, ಕೃಷಿಭೂಮಿಯನ್ನಾಗಿ ಪರಿವರ್ತಿಸಿದ ಕಾಸರಗೋಡು
ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ. ರತ್ನಾಕರ ಮಲ್ಲಮೂಲೆ ಕೇರಳ ಸರಕಾರದ ಅರಣ್ಯ
ಇಲಾಖೆಯವರು ನೀಡುವ ಪ್ರತಿಷ್ಠಿತ ವನಮಿತ್ರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಮಲ್ಲಮೂಲೆಯವರು ಕೇವಲ
ಮೂರ್ನಾಲ್ಕು ವರ್ಷಗಳ ಕಠಿಣ ಪರಿಶ್ರಮದಿಂದ ಬನವಾಸಿ ಎಂಬ ಹೆಸರಿನಲ್ಲಿ ರೂಪಿಸಿದ ಈ ಸ್ಥಳವು ಈಗ ಹಸಿರಿನಿಂದ
ಕಂಗೊಳಿಸುತ್ತಿದ್ದು, ಪರಿಸರಜಾಗೃತಿಯ ಸ್ಥಳವಾಗಿ ರೂಪುಗೊಂಡಿದೆ. ಅದೇ ರೀತಿಯಲ್ಲಿ ಇವರ ಪರಿಸರಸ್ನೇಹಿ
ಮನೆಯು ಜನರ ಆಕರ್ಷಣೆಯ ಕೇಂದ್ರವಾಗಿದೆ. ದಿನನಿತ್ಯ ಈ ಸ್ಥಳವನ್ನು ನೋಡಲು ಶಾಲಾ – ಕಾಲೇಜು ಮಕ್ಕಳು
ಸೇರಿದಂತೆ ವಿವಿಧ ವಲಯದ ವ್ಯಕ್ತಿಗಳು ಬರುತ್ತಿದ್ದಾರೆ.
ಮಳೆನೀರನ್ನು ಅತ್ಯಂತ
ವ್ಯವಸ್ಥಿತ ವೈಜ್ಞಾನಿಕ ಮಾದರಿಯಲ್ಲಿ ಸಂಗ್ರಹಿಸುವ ಮಳೆಕೊಯ್ಲು ಕೊಳ, ಸೂರ್ಯಚೈತನ್ಯವನ್ನು ಸದುಪಯೋಗಪಡಿಸುವ
ಸೌರಶಕ್ತಿವ್ಯವಸ್ಥೆ, ಜಲಮರುಪೂರಣ ವ್ಯವಸ್ಥೆ, ಸಾಂಪ್ರದಾಯಿಕ ಬಾವಿಯ ಸಂರಕ್ಷಣೆಯ ಮೂಲಕ ಶುದ್ಧಜಲದ
ಸದುಪಯೋಗ, ಅಮೂಲ್ಯ ತಳಿಗಳ ಔಷಧೀಯ ತೋಟ, ವಿವಿಧ ಫಲಗಿಡಗಳ ಪೋಷಣೆ, ಕಂಗು, ತೆಂಗು, ಕರಿಮೆಣಸು, ವಿವಿಧ
ತರಕಾರಿ ಗಿಡಗಳು ಸೇರಿದಂತೆ ಬಹುವಿಧ ಕೃಷಿಯೋಜನೆಗೆ ಬನವಾಸಿಯು ಮಾದರಿಯಾಗಿದೆ.
ಕೆಂಪುಕಲ್ಲಿನ, ನೀರಿನ
ಸೆಲೆಯಿಲ್ಲದ ನೀರ್ಚಾಲಿನ ಎತ್ತರದ ಈ ಪ್ರದೇಶವನ್ನು ಬಯಲಿನ ರೂಪದಲ್ಲಿ ಪರಿವರ್ತನೆಗೊಳಿಸುವಲ್ಲಿ, ಮಲ್ಲಮೂಲೆಯವರ
ಅವಿರತ ಶ್ರಮ ಹಾಗೂ ಸುಸೂತ್ರವಾದ ವೈಜ್ಞಾನಿಕ ದೂರದೃಷ್ಟಿಕೋನಗಳಿವೆ. ಕೇಂದ್ರ ಮತ್ತು ರಾಜ್ಯಸರಕಾರಗಳು
ಪರಿಸರಜಾಗೃತಿ ಮೂಡಿಸುವ ಪಾಕೃತಿಕ ಚೈತನ್ಯ ಸಂಪನ್ಮೂಲಗಳ ಸದ್ಭಳಕೆಯ ಪ್ರತಿಯೊಂದು ಮಾದರಿಯನ್ನು ಬನವಾಸಿಯಲ್ಲಿ
ಕಾಣಬಹುದು.
ಶಾಲಾ– ಕಾಲೇಜು ಪಠ್ಯಕ್ರಮದಲ್ಲಿ
ಕಂಡುಬರುವ ಪರಿಸರ ಸಂಬಂಧಿ ವಿಷಯಗಳ ಯಥಾರೂಪಗಳನ್ನು ಖುದ್ದಾಗಿ ಕಾಣಲು ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳನ್ನು
ಬನವಾಸಿಗೆ ಕರೆದುಕೊಂಡು ಬರುತ್ತಿದ್ದಾರೆ. ಹೀಗೆ ಸಾಮಾಜಿಕ
ಜಾಗೃತಿಗಾಗಿ ಈ ಹಸಿರುಯೋಜನೆಯನ್ನು ತೆರೆದಿಟ್ಟ ಮಲ್ಲಮೂಲೆಯವರ ಹಸಿರುಪ್ರೀತಿಯನ್ನು ಸರಕಾರದ ವಿವಿಧ ಇಲಾಖೆಗಳು ವಿಶೇಷವಾಗಿ
ಪ್ರಶಂಸಿವೆ. ಕೇರಳ ಸರಕಾರದ ಅರಣ್ಯ ಇಲಾಖೆಯು ಈ ಸಲದ
ವನಮಿತ್ರ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


