ಉಡುಪಿ, ಮೇ 2: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಉಡುಪಿ ತಾಲೂಕು ಘಟಕದ ವತಿಯಿಂದ ಹದಿನಾರನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ಭೀಷ್ಮೋತ್ಸವ’ವನ್ನು ಮೇ 3ರಂದು ಭಾನುವಾರ ನಗರದಲ್ಲಿ ಆಯೋಜಿಸಲಾಗಿದೆ.
ಯಕ್ಷಗಾನ ಕಲಾರಂಗದ ಹವಾ ನಿಯಂತ್ರಿತ ಸಭಾಂಗಣದಲ್ಲಿ (ಐವೈಸಿ ಬಿಲ್ಡಿಂಗ್) ಬೆಳಿಗ್ಗೆ 8.30ರಿಂದ ಸಂಜೆ 8ರವರೆಗೆ ವಿವಿಧ ಸಾಹಿತ್ಯ, ಸಂಸ್ಕೃತಿ ಮತ್ತು ಕಲಾ ಕಾರ್ಯಕ್ರಮಗಳು ನಡೆಯಲಿವೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರಸಿದ್ಧ ವೈದ್ಯರು ಹಾಗೂ ಸಾಹಿತಿ ಡಾ| ಭಾಸ್ಕರಾನಂದ ಕುಮಾರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕಾರ್ಯಾಧ್ಯಕ್ಷರಾಗಿ ಇಂದ್ರಾಳಿ ಜಯಕರ್ ಶೆಟ್ರು ಹಾಗೂ ಕಸಾಪ ತಾಲೂಕು ಅಧ್ಯಕ್ಷರಾಗಿ ರವಿರಾಜ್ ಎಚ್.ಪಿ. ಇದ್ದಾರೆ.
ಸಮ್ಮೇಳನದ ಅಂಗವಾಗಿ ‘ಭೀಷ್ಮಪರ್ವ’ ಹೆಸರಿನಲ್ಲಿ 16 ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಾರದಾ ಮಂಟಪದಿಂದ ಯಕ್ಷಗಾನ ಕೇಂದ್ರದವರೆಗೆ ಮೆರವಣಿಗೆ, ಧ್ವಜಾರೋಹಣ, ಗಮಕ ಸೌರಭ, ದಿ. ರಾಮದಾಸ್ ನೆನಪಿನ ಪುಸ್ತಕ ಮಳಿಗೆ ಉದ್ಘಾಟನೆ, ಚಿತ್ರಮಯ ಉಡುಪಿ ಹಾಗೂ ಮ್ಯೂರಲ್ ಕಲಾಕೃತಿಗಳ ಪ್ರದರ್ಶನ ಪ್ರಮುಖ ಆಕರ್ಷಣೆಗಳಾಗಿವೆ.
ಇದೇ ವೇಳೆ ಸಮ್ಮೇಳನಾಧ್ಯಕ್ಷರ ಪರಿಚಯ ಚಿತ್ರ, ಉದ್ಘಾಟನಾ ಸಮಾರಂಭ ಮತ್ತು ಕಸಾಪ ಗೌರವ ಪುರಸ್ಕಾರ, ಗೀತ ಗಾಯನ, ಬಹುಮುಖಿ ಕನ್ನಡ ಕವಿ ಗೋಷ್ಠಿ, ನೃತ್ಯ ಸಿಂಚನ, ಹಾಸ್ಯ ಕಾರ್ಯಕ್ರಮ, ವಿಚಾರಗೋಷ್ಠಿ ಹಾಗೂ ಸಮ್ಮೇಳನಾಧ್ಯಕ್ಷರೊಂದಿಗೆ ಮಾತುಕತೆ ನಡೆಯಲಿವೆ.
ಸಮಾರೋಪ ಸಮಾರಂಭದಲ್ಲಿ ಶ್ರೇಷ್ಠರಿಗೆ ಸನ್ಮಾನ ನಡೆಯಲಿದ್ದು, ಪುಟ್ಟ ಮಕ್ಕಳಿಂದ ‘ಕತ್ತಲೆ ರಾಜ್ಯದ ಮರ್ಕಟ ರಾಜ’ ಎಂಬ ಕಿರು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಪೂರ್ತಿ ನಡೆಯುವ ಈ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಬೆಳಿಗ್ಗೆ ಕಾಫಿ–ತಿಂಡಿ, ಮಧ್ಯಾಹ್ನ ಊಟ ಹಾಗೂ ಸಾಯಂಕಾಲ ಕಾಫಿ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


