ಕೆ.ಆರ್.ಪುರ: ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು ಸ್ವಾವಲಂಬಿ ಜೀವನದತ್ತ ಹೆಜ್ಜೆ ಹಾಕಬೇಕು ಎಂದು ನಂದನಾ ಹೊಟೇಲ್ ಸಮೂಹದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೆಶಕರಾದ ಡಾ. ರವಿಚಂದ್ರ ವಿ ಅವರು ಇಂದಿಲ್ಲಿ ಕರೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪುರಂನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ಕಾಲೇಜು ಅವರಣದಲ್ಲಿ ಏಪ್ರಿಲ್ 30ರಂದು ಏರ್ಪಡಿಸಿದ್ದ 'ಆಹಾರ ಮೇಳ' ಮತ್ತು ಉದ್ಯಮಶೀಲತೆಯ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿ ಮಾತನಾಡಿದರು.
ಇಂದಿನ ಯುವಕರು ಉದ್ಯೋಗಕ್ಕಾಗಿ ಕಾಯುವುದಕ್ಕಿಂತ ಉದ್ಯೋಗ ಸೃಷ್ಟಿಸುವತ್ತ ದೃಢ ಹೆಜ್ಜೆ ಇಡಬೇಕು ಮತ್ತು ತಮ್ಮಲ್ಲಿರುವ ಕೌಶಲ್ಯ ಬಳಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಡಾ. ರವಿಚಂದ್ರ ಹೇಳಿದರು.
ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿ ಬೇಕಾಗಿದೆ. ಪ್ರಾಯೋಗಿಕ ಜ್ಞಾನವು ಮುಂದಿನ ಭವಿಷ್ಯ ರೂಪಿಸಲು ಸಹಕಾರಿಯಾಗಲಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ನಳಿನಿ ಆರ್ ಹೇಳಿದರು.
ನಂದನಾ ಪ್ಯಾಲೆಸ್‌ನ ಮುಖ್ಯ ಬಾಣಸಿಗ ಪ್ರವೀಣ್ ಅವರು ಮಾತನಾಡಿ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಉದ್ಯಮ ಆರಂಭಿಸಬೇಕಾದರೆ ಪೂರ್ವಸಿದ್ಧತೆ ಅಗತ್ಯ. ಅಲ್ಲದೆ ಪ್ರಾಯೋಗಿಕ ಅನುಭವ ಬೇಕೆ ಬೇಕು ಎಂದು ವಿಶೇಷ ಅಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಂದನಾ ಪ್ಯಾಲೇಸ್‌ನ ಮೇಲ್ವಿಚಾರಕರಾದ ವೆಂಕಟಕೃಷ್ಣ ನೆಕ್ಕಲಪುಡಿ ಹೇಳಿದರು. ಉದ್ಯಮ ಆರಂಭಿಸಲು ಅಗತ್ಯವಾದ ಮೂಲಭೂತ ತತ್ವಗಳು ಮತ್ತು ಪ್ರಾಯೋಗಿಕ ಅನುಭವದ ಮಹತ್ವವನ್ನು ಅವರು ವಿವರಿಸಿದರು.
ವಿದ್ಯಾರ್ಥಿಗಳು ಸಂಘಟಿತರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ತುಂಬಾ ಖುಷಿಯ ವಿಚಾರ. ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಲು ಇದು ಸಹಕಾರಿಯಾಗಲಿ ಎಂದು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಲಕ್ಷ್ಮೀ ಅವರು ಹಾರೈಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ಟಿ. ಅಶ್ವತ್ ನಾರಾಯಣ ಅವರು ಕಾರ್ಯಕ್ರಮದ ರೂಪುರೇಷೆ ಮತ್ತು ಅದರ ಅಗತ್ಯ ಕುರಿತಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ಮತ್ತು ನಿರ್ವಹಣಾ ಸಹ ಪ್ರಾಧ್ಯಾಪಕರಾದ ಡಾ. ಸುಬ್ರಮಣ್ಯ, ಡಾ. ಶ್ರೀನಿವಾಸ್ ಎಂ. ಡಾ. ವಿವೇಕ್ ಸರಿಕಾರ್, ಡಾ. ಗಣೇಶ್, ಬಿ, ಡಾ. ಮಂಜುಳಾ, ಡಾ. ವಿಜಯಾ ಬಿ, ಡಾ. ವಜ್ಜಲ ನೀಲಾವೇಣಿ, ಅಶೋಕ್ ಎ.ಎಸ್, ಅಶೋಕ್ ಕೆ.ಎಲ್ ಸೇರಿದಂತೆ ವಾಣಿಜ್ಯ ವಿಭಾಗದ ಎಲ್ಲಾ ಪ್ರಾಧ್ಯಾಪಕರುಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ವಿವಿಧ ರೀತಿಯ ಆಹಾರ ಮಳಿಗೆಗಳನ್ನು ತೆರೆದು ತಮ್ಮ ಉದ್ಯಮ ಕೌಶಲ್ಯವನ್ನು ಪ್ರದರ್ಶಿಸಿದರು. ರುಚಿಕರವಾದ ತಿಂಡಿಗಳು, ಸಾಂಪ್ರದಾಯಿಕ ಹಾಗೂ ಆಧುನಿಕ ಪದಾರ್ಥಗಳು ಎಲ್ಲರ ಗಮನ ಸೆಳೆದವು. ಈ ಮೇಳವು ವಿದ್ಯಾರ್ಥಿಗಳಿಗೆ ವ್ಯಾಪಾರ ಕೌಶಲ್ಯ, ತಂಡ ಕಾರ್ಯಾಚರಣೆ ಮತ್ತು ನಿರ್ವಹಣಾ ಸಾಮರ್ಥ್ಯ, ಉದ್ಯಮಶೀಲತೆ, ಸೃಜನಶೀಲತೆ ಮತ್ತು ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಯಿತು. ಆಹಾರ ಮೇಳದ ತೀರ್ಪುಗಾರರಾಗಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕರಾದ ಹರ್ಷಕುಮಾರ್, ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕರಾದ ಸೌಮ್ಯಾ ಶರ್ಮಾ ಮತ್ತು ಅಲೀಸ್ ಚೆರಿಯನ್ ಭಾಗವಹಿಸಿದ್ದರು. ವಿದ್ಯಾರ್ಥಿಗಳಲ್ಲಿ ಹೊಸ. ಚೈತನ್ಯ ಮೂಡಿಸಿ, ಭವಿಷ್ಯದ ಉದ್ಯಮಿಗಳಾಗಿ ಬೆಳೆವ ದಾರಿಯನ್ನು ತೆರೆದ ಮಹತ್ವದ ವೇದಿಕೆಯಾದ ಈ ಆಹಾರ ಮೇಳದಲ್ಲಿ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


