ಕತ್ತೆಯು ಕಾಡಿನ ರಾಜನಾದ ಕಥೆ

Upayuktha
0



ಒಂದು ದಟ್ಟವಾದ ದೊಡ್ಡ ಕಾಡು, ಅಲ್ಲಿ ಅತ್ಯಂತ ಅಪಾಯಕಾರಿಯಾದ ವನ್ಯ ಜೀವಿಗಳೇ ವಾಸಿಸುತ್ತಿದ್ದವು. ಆ ಕಾಡಿನಲ್ಲಿ  ರಾಜನ ಸ್ಥಾನವನ್ನು ಪಡೆದುಕೊಂಡು ಒಂದು ಸಿಂಹ ವಾಸಿಸುತಿತ್ತು. ಆ ಸಿಂಹವು ಕಾಡಿನಲ್ಲಿ ಒಂದು ಘನತೆಯನ್ನು ಪಡೆದುಕೊಂಡು ಜೀವನವನ್ನು ಸಾಗಿಸುತಿತ್ತು ಹಾಗೂ ಉಳಿದ ಕಾಡಿನ ಪ್ರಾಣಿಗಳು ಕೂಡಾ ಕಾಡಿನ ರಾಜನ ಆಜ್ಞೆಯನ್ನು ಪಾಲಿಸುತ್ತಾ, ಸಿಂಹದ ಮಾತಿಗೆ ಬದ್ಧವಾಗಿ ನಡೆಯುತ್ತಿದ್ದವು.


ಕಾಲಗಳು ಉರುಳಿದಂತೆ ಸಿಂಹಕ್ಕೆ ಕಾಡಿನ ಅಧಿಕಾರವನ್ನು ಮುಂದುವರೆಸಲು ಸಾಮರ್ಥ್ಯ ಕುಗ್ಗುತ್ತ ಬಂತು, ಹೀಗಿದ್ದರೂ ಸಿಂಹದ ಮಾತುಗಳೇ ಕಾಡಿನ ಪ್ರಾಣಿಗಳಿಗೆ ವೇದ ವಾಕ್ಯವಾಗಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಸಿಂಹ ಕಣ್ಮರೆಯಾಯಿತು.15 ದಿನಗಳಾದರೂ ಸಿಂಹ ಯಾವ ಪ್ರಾಣಿಗಳಿಗೂ ಕಾಣ ಸಿಗಲಿಲ್ಲ, ಕಾಡಿನ ಎಲ್ಲಾ ಪ್ರಾಣಿಗಳು ಗೊಂದಲದಲ್ಲೇ ಜೀವನ ನಡೆಸುತ್ತಿತ್ತು, ಕಾಡಿನ ರಾಜ ಸಿಂಹ ಎಲ್ಲಿಗೆ ಹೋಯಿತು ಎಂದು ಚಿಂತೆಯಿಂದಲೇ ಪ್ರಾಣಿಗಳು ವಾಸಿಸುತ್ತಿದ್ದವು. ಹೀಗೇ ಒಂದು ದಿನ ಕತ್ತೆಗಳ ಒಂದು ದೊಡ್ಡ ಗುಂಪಿನಿಂದ ಒಂದು ಕತ್ತೆ "ನಾನು ಏಕಾಂಗಿಯಾಗಿ ಬದುಕಿ ಕತ್ತೆಗಳ ಗುಂಪಿನ ರಾಜನಾಗಬೇಕು" ಎಂದು ಯೋಚಿಸಿ ಪಕ್ಕದ ಕಾಡಿಗೆ ತನ್ನ ಪಯಣವನ್ನು ಮುಂದುವರೆಸಿತು.


ಆಗ ಕಾಡಿನ ಮಧ್ಯದಲ್ಲಿ ಆ ಕತ್ತೆಯು ನಡೆದುಕೊಂಡು ಹೋಗುವಾಗ, ದೂರದಲ್ಲಿ ಯಾವುದೋ ಒಂದು ಪ್ರಾಣಿ ಸತ್ತು ಬಿದ್ದಿರುವುದು ಕಣ್ಣಿಗೆ ಬಿದ್ದಿತು. ಹತ್ತಿರಕ್ಕೆ ಹೋಗಿ ನೋಡಿದರೆ ಒಮ್ಮೆಲೇ ಕತ್ತೆಗೆ ಆಶ್ಚರ್ಯವಾಯಿತು! ಯಾಕೆಂದರೆ ಅದು ಕಾಡಿನ ರಾಜ ಸಿಂಹವಾಗಿತ್ತು. ಸತ್ತು ಸುಮಾರು ದಿನಗಳಾಗಿರುವುದರಿಂದ ಸಿಂಹದ ಚರ್ಮದ ಭಾಗಗಳು ಮಾತ್ರ ಉಳಿದಿದ್ದವು. ಈ ವಿಷಯವನ್ನು ಕಾಡಿನ ಪ್ರಾಣಿಗಳಿಗೆ ತಿಳಿಸಬೇಕು ಎಂದು ಯೋಚಿಸಿ, ಸಿಂಹದ ಚರ್ಮವನ್ನು ಅದರ ಮೈ- ಮೇಲೆ ಹಾಕಿಕೊಂಡು ಹೋಯಿತು. ಕಾಡಿನ ಮಧ್ಯೆ ನಡೆದುಕೊಂಡು ಹೋಗುವಾಗ ಕಾಡಿನ ಪ್ರಾಣಿಗಳೆಲ್ಲ ಕತ್ತೆಯನ್ನು ನೋಡಿ ಹೆದರಿ ಓಡಿಹೋಗಲು ಪ್ರಾರಂಭಿಸಿದವು. ಕತ್ತೆಗೆ ಈ ಪ್ರಾಣಿಗಳೆಲ್ಲ "ನನ್ನ ನೋಡಿ ಯಾಕೆ ಹೀಗೆ ಹೆದರಿ ಹೋಗುತ್ತಿವೆ" ಎಂದು ಮನಸ್ಸಿಗೆ ಬಂದರು ಸಹಾ... ಕಾಡಿನಲ್ಲಿ ನಡೆದು ಬಹಳ ದಣಿದಿದ್ದ ಜೀವಕ್ಕೆ ಎಲ್ಲಾದ್ರೂ ಸ್ವಲ್ಪ ನೀರು ಸಿಕ್ಕರೆ ಸಾಕು ಎಂದನಿಸಿತ್ತು.


ನಾಲ್ಕು ಹೆಜ್ಜೆ ಇಡುವಷ್ಟರಲ್ಲಿ ಒಂದು ಸಣ್ಣ ಹಳ್ಳ ಕಂಡಿತು. ನೀರು ಕಂಡ ಖುಷಿಗೆ ಒಮ್ಮೆಲೇ ನೀರಿನ ಬಳಿಗೆ ಓಡಿ ಹೋಯಿತು. ಅದೇ ವೇಗದಲ್ಲಿಯೇ ಮತ್ತೆ ಹಿಂದಕ್ಕೆ ಬಂದಿತು. ಒಂದು ಸಲ ಕತ್ತೆಗೆ ಕೂಡ ಆಶ್ಚರ್ಯವಾಯಿತು! ಯಾಕೆಂದರೆ "ನೀರಿನಲ್ಲಿ ಕಂಡ ಛಾಯೆ ನನ್ನದೆಯಾ ಎಂದು" ಆದರೂ ಹೆದರಿಕೊಂಡು ಮತ್ತೆ ಅದೇ ನೀರಿನ ಬಳಿಗೆ ಮೆಲ್ಲನೆ ಒಂದೊಂದೇ ಹೆಜ್ಜೆಯನ್ನಿಡುತ್ತಾ ಹೋಯಿತು. ಆಗ ಕತ್ತೆಗೆ ತಿಳಿಯಿತು "ನಾನು ಸಿಂಹದ ಚರ್ಮವನ್ನು ಮೈ ಮೇಲೆ ಹಾಕಿಕೊಂಡಿದ್ದೇನೆ. ಬಹುಶಃ ಇದೇ ಕಾರಣಕ್ಕೆ ಕಾಡಿನ ಪ್ರಾಣಿಗಳೆಲ್ಲ ನನ್ನನ್ನು ನೋಡಿ ಹೆದರಿಕೊಂಡದ್ದಿರಬಹುದು" ಎಂದು ಯೋಚಿಸಿತು. ಸ್ವಲ್ಪ ಹೊತ್ತು ಕತ್ತೆಯು ಅದೇ ಹಳ್ಳದ ದಂಡೆಯ ಮೇಲೆ ಕುಳಿತು ಯೋಚಿಸುತ್ತಿತ್ತು.


"ಏಕಾಂಗಿಯಾಗಿ ಬದುಕಿ ಕತ್ತೆಗಳ ಗುಂಪಿನ ರಾಜನಾಗಬೇಕು ಎಂದು ಯೋಚಿಸಿದ ನನಗೆ, ಸಿಂಹದ ಚರ್ಮವೇ ಬ್ರಹ್ಮಾಸ್ತ್ರವಾಯಿತು. ಇನ್ನು ನಾನು ಕತ್ತೆಗಳ ಗುಂಪಿನ ರಾಜ ಅಲ್ಲ, ಇಡೀ ಕಾಡಿನ ರಾಜ" ಎಂದು ಹೇಳುತ್ತಾ ಕತ್ತೆಯ ಬುದ್ಧಿಯು ದುರಾಸೆಯ ಕಡೆಗೆ ತಿರುಗಿತು. ಸಿಂಹದ ಚರ್ಮದಿಂದ ಕತ್ತೆಯನ್ನು ನೋಡಿ ಎಲ್ಲಾ ಪ್ರಾಣಿಗಳು ಗೌರವವನ್ನು ನೀಡುವುದರ ಜೊತೆಗೆ ಕತ್ತೆಯ ಆಜ್ಞೆಯನ್ನು ಪಾಲಿಸುತಿದ್ದವು. ಕತ್ತೆಗೆ ಯಾವ ರೀತಿಯಾಗಿ  ಬೇಕೋ ಆ ರೀತಿಯಲ್ಲಿ ಪ್ರಾಣಿಗಳ ಮೇಲೆ ಅಹಂಕಾರ ತೋರಿಸುತ್ತಿತ್ತು. ಹೀಗೆ ಸುಮಾರು 2 ವರ್ಷ ಕತ್ತೆಯ ದುರಹಂಕಾರದ ಆಡಳಿತವೇ ನಡದವು. ಕತ್ತೆಯ ಅಹಂಕಾರ ಹೆಚ್ಚಾದಂತೆ "ತಾನು ಕತ್ತೆ" ಎಂಬುದೇ ಮರೆತುಹೋಗಿತ್ತು. ಕತ್ತೆಯು ಬಹಳ ರಾಜ ಗಾಂಭೀರ್ಯದಿಂದ ಕಾಡಿನಲ್ಲಿ ನಡೆದು ಹೋಗುತ್ತಿರುವಾಗ, ಒಂದು ಸಣ್ಣ ಪ್ರದೇಶದಲ್ಲಿ ಕತ್ತೆಗಳ ಗುಂಪೊಂದು ಕಂಡಿತು. ಕಂಡ ಕೂಡಲೇ ಸಣ್ಣ- ಸಣ್ಣ ಹಸಿರು ಬಳ್ಳಿಯ ಮಧ್ಯದಿಂದ ಇಣುಕಿತು. ಕತ್ತೆಗಳನ್ನು ನೋಡಿದ ಖುಷಿಗೆ ತಾನು ಕಾಡಿನ ರಾಜನಾಗಿ ಪಾತ್ರ ನಿಭಾಯಿಸುತ್ತಿದ್ದೇನೆ ಎಂಬುದನ್ನು ಮರೆತು ಜೋರಾಗಿ ಕೂಗಿತು. ಕೂಗಿದ ತಕ್ಷಣ ಕತ್ತೆಗಳು ಮಾತ್ರವಲ್ಲದೆ, ಅಲ್ಲೇ ಆಸುಪಾಸಿನಲ್ಲಿದ್ದ ಪ್ರಾಣಿಗಳೆಲ್ಲಾ ತಿರುಗಿ ನೋಡಿದವು. ಆಗ ಇದು ಸಿಂಹ ಅಲ್ಲ ಕತ್ತೆ ಎಂಬ ವಿಷಯ ಕಾಡಿನ ಎಲ್ಲಾ ಪ್ರಾಣಿಗಳಿಗೆ ತಿಳಿಯಿತು. ನಂತರ ಕತ್ತೆಗಳ ಗುಂಪಿಗೆ ಸಹ ಅದನ್ನು ಸೇರಿಸಲಿಲ್ಲ, ಕಾಡಿನ ಯಾವ ಪ್ರಾಣಿಗಳೂ ಮಾತನಾಡುತ್ತಿರಲಿಲ್ಲ. ಕೊನೆಗೆ ಎಲ್ಲಾ ಪ್ರಾಣಿಗಳು ಸೇರಿ ಒಂದು ನಿರ್ಧಾರಕ್ಕೆ ಬಂದು, ಕಾಡಿನ ರಾಜನಾಗಿ ಆನೆಯನ್ನು ನೇಮಿಸಿ, ಕತ್ತೆಯನ್ನು ಕಾಡಿನಿಂದಲೇ ಬಹಿಷ್ಕಾರ ಮಾಡಲಾಗುತ್ತದೆ.


ನೀತಿ: ಅತಿಯಾದ ಆಸೆ, ಎಲ್ಲವನ್ನು ಕಳೆದುಕೊಳ್ಳುವ ಹಾಗೆ ಮಾಡುತ್ತದೆ.


- ವಿದ್ಯಾಶ್ರೀ ನಾರಾಯಣ್


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top