ಸ್ತ್ರೀಕುಲದ ಕೀರ್ತಿ ಪತಾಕೆ: ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ

Upayuktha
0


ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕೇವಲ ಒಂದು ಸಮುದಾಯದ ಆಸ್ತಿಯಲ್ಲ; ಅವರು ಇಡೀ ಸ್ತ್ರೀಕುಲದ ಕೀರ್ತಿಯನ್ನು ಹೆಚ್ಚಿಸಿದ ಮಹಾನ್ ಚೇತನ. ಮೌನ ತಪಸ್ವಿನಿಯಾದ ಅವರ ಅಂತರಂಗ ದೈವೀ ಸಾಧನೆಯಿಂದ ಹದವಾಗಿತ್ತು. ಮೇ 10ರಂದು ಸರ್ಕಾರವು ಮಹಾಶರಣೆ ಮಲ್ಲಮ್ಮನವರ ಜಯಂತಿಯನ್ನು ಆಚರಿಸಲು ಕರೆ ನೀಡಿದೆ. ಕೇವಲ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದು ನಿಜವಾದ ಆಚರಣೆಯಲ್ಲ; ಬದಲಿಗೆ ಅವರ ಬದುಕಿನ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಜರುಗಬೇಕಿದೆ.


ಐತಿಹಾಸಿಕ ಹಿನ್ನೆಲೆ

ಭಾರತವು ಋಷಿಮುನಿಗಳ, ಶರಣ-ಸಂತರ ತಪೋಭೂಮಿ. ಆಂಧ್ರಪ್ರದೇಶದ ಸಮೃದ್ಧ ನಾಡಿನ ಶ್ರೀಶೈಲ ಕ್ಷೇತ್ರವು ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾಗಿದೆ. ಈ ಕ್ಷೇತ್ರದ ಅಧಿದೇವ ಮಲ್ಲಿಕಾರ್ಜುನನ ಪರಮ ಭಕ್ತೆ ಈ ಹೇಮರೆಡ್ಡಿ ಮಲ್ಲಮ್ಮ. ಮಲ್ಲಮ್ಮನ ಅಚಲ ಭಕ್ತಿಗೆ ಮೆಚ್ಚಿದ ಮಲ್ಲಯ್ಯ, ಅವಳನ್ನು ಅನೇಕ ಕಠಿಣ ಪರೀಕ್ಷೆಗಳಿಗೆ ಒಡ್ಡಿದರೂ, ಅಂತಿಮವಾಗಿ ತನ್ನಲ್ಲೇ ಐಕ್ಯ ಮಾಡಿಕೊಂಡ ಎಂಬುದು ಇತಿಹಾಸ.


ಬಾಗಲಕೋಟೆ ಜಿಲ್ಲೆಯ ಡಾ. ಮಲ್ಲಣ್ಣ ನಾಗರಾಳರ ಅಧ್ಯಯನದ ಪ್ರಕಾರ, ಕ್ರಿ.ಶ. 1326ರಲ್ಲಿ ಕಾಕತೀಯ ಸಾಮ್ರಾಜ್ಯದ ಪತನದ ನಂತರ ವೇಮರೆಡ್ಡಿ ಎಂಬ ಸೇನಾಪತಿ ಸ್ವತಂತ್ರನಾಗಿ 'ವಿನುಕೊಂಡ' ಪ್ರದೇಶವನ್ನು ಆಳಿದನು. ನಂತರ ಬಂದ ಅವನ ವಂಶಸ್ಥರು ಶ್ರೀಶೈಲ ಪರ್ವತಕ್ಕೆ ಸೋಪಾನಗಳನ್ನು ಕಟ್ಟಿಸಿ ಭಕ್ತರ ಅನುಕೂಲಕ್ಕೆ ನೆರವಾಗಿದ್ದರು. ಈ ಮನೆತನದ ಹಿನ್ನೆಲೆಯಲ್ಲಿಯೇ ಮಲ್ಲಮ್ಮನವರ ಬದುಕಿನ ಕಥೆ ಸಾಗುತ್ತದೆ.


ಜನನ ಮತ್ತು ಬಾಲ್ಯ

ಕ್ರಿ.ಶ. 15ನೇ ಶತಮಾನದಲ್ಲಿ ಶ್ರೀಶೈಲದ ದಕ್ಷಿಣ ಭಾಗದ ರಾಮಪುರದಲ್ಲಿ ಶಿವಭಕ್ತ ದಂಪತಿಗಳಾದ ನಾಗರೆಡ್ಡಿ ಮತ್ತು ಗೌರಮ್ಮ ವಾಸವಿದ್ದರು. ಮಲ್ಲಿಕಾರ್ಜುನನ ವರಪ್ರಸಾದವಾಗಿ ಕ್ರಿ.ಶ. 1422ರಲ್ಲಿ ಇವರಿಗೆ ಮಲ್ಲಮ್ಮ ಜನಿಸಿದಳು. "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬಂತೆ, ಮಲ್ಲಮ್ಮ ಬಾಲ್ಯದಿಂದಲೇ ದೈವಭಕ್ತೆಯಾಗಿದ್ದಳು. ಆಟವಾಡುವಾಗಲೂ ದೇವರಿಗೆ ನೈವೇದ್ಯ ಅರ್ಪಿಸುವುದು, ರೋಗಿಗಳಿಗೆ ಮತ್ತು ವೃದ್ಧರಿಗೆ ಸೇವೆ ಮಾಡುವುದು ಅವಳ ಸಹಜ ಗುಣವಾಗಿತ್ತು. ಒಮ್ಮೆ ಬಾಯಾರಿದ ವೃದ್ಧನಿಗೆ ನೀರು ನೀಡಿ ಆಶೀರ್ವಾದ ಪಡೆದ ಘಟನೆ ಅವಳಲ್ಲಿದ್ದ ಕರುಣೆಗೆ ಸಾಕ್ಷಿಯಾಗಿದೆ.


ಸಂಸಾರದಲ್ಲಿ ಸಮರಸ ಮತ್ತು ಸಾಧನೆ

ಗಿರಿರೆಡ್ಡಿ-ಪದ್ಮಾವತಿ ದಂಪತಿಗಳ ಪುತ್ರ ಬರಮರೆಡ್ಡಿಯೊಂದಿಗೆ ಮಲ್ಲಮ್ಮನ ವಿವಾಹ 1444ರಲ್ಲಿ ಜರುಗಿತು. ಅತ್ತೆ ಮನೆಯಲ್ಲಿ ಮಲ್ಲಮ್ಮ ದಕ್ಷತೆಯಿಂದ ಮನೆಗೆಲಸ ಮಾಡುತ್ತಿದ್ದರೂ, ಸವತಿಯರ ಮತ್ತು ಮಲತಾಯಿಯ ಮತ್ಸರಕ್ಕೆ ಗುರಿಯಾಗಬೇಕಾಯಿತು. ಸುಳ್ಳು ಆರೋಪಗಳನ್ನು ಹೊರಿಸಿ ಅವಳಿಗೆ ದನ ಕಾಯುವ ಕೆಲಸವನ್ನು ನೀಡಲಾಯಿತು. ಆದರೆ, ಮಲ್ಲಮ್ಮ ಅದನ್ನೂ 'ಮಲ್ಲಿಕಾರ್ಜುನನ ಸೇವೆ' ಎಂದೇ ಭಾವಿಸಿ ನಿಷ್ಠೆಯಿಂದ ನಿರ್ವಹಿಸಿದಳು.


ಒಮ್ಮೆ ಜಂಗಮ ರೂಪದಲ್ಲಿ ಬಂದ ಶಿವನನ್ನು ಅವಮಾನಿಸಿದ ಅತ್ತೆ-ಸೊಸೆಯರು ಐಶ್ವರ್ಯವನ್ನು ಕಳೆದುಕೊಂಡು ರೋಗಗ್ರಸ್ತರಾದಾಗ, ಮಲ್ಲಮ್ಮನೇ ತನ್ನ ಭಕ್ತಿಯ ಶಕ್ತಿಯಿಂದ ಅವರನ್ನು ಗುಣಪಡಿಸಿ ಕುಟುಂಬವನ್ನು ಕಾಪಾಡುತ್ತಾಳೆ.


ಪವಾಡಗಳು ಮತ್ತು ಸಂದೇಶಗಳು

ಮಲ್ಲಮ್ಮನ ಜೀವನ ಪವಾಡ ಸದೃಶ ಘಟನೆಗಳಿಂದ ತುಂಬಿದೆ:

  • ಬಿತ್ತುವ ಬೀಜವನ್ನು ಜಂಗಮರಿಗೆ ನೀಡಿ, ಮರಳನ್ನು ಬಿತ್ತಿ ಧಾನ್ಯದ ಫಸಲು ಪಡೆದದ್ದು.
  • ದುರ್ವ್ಯಸನಿಯಾಗಿದ್ದ ಮೈದುನ ವೇಮನರೆಡ್ಡಿಯನ್ನು ಕೃಷಿ ಕಾಯಕಕ್ಕೆ ಹಚ್ಚಿ ಯೋಗಿಯನ್ನಾಗಿ ಮಾಡಿದ್ದು.
  • ಶಿವದ್ರೋಹದಿಂದ ಕುರುಡನಾದ ಕಾಳಿದಾಸನಿಗೆ ದೃಷ್ಟಿ ನೀಡಿದ್ದು.
  • ಮಾವ ಹೇಮರೆಡ್ಡಿಗೆ ಸಾಕ್ಷಾತ್ ಮಲ್ಲಿಕಾರ್ಜುನನ ದರ್ಶನ ಮಾಡಿಸಿದ್ದು.


ಮಲ್ಲಮ್ಮ ತನ್ನ ಕುಲದವರಿಗೆ ನೀಡಿದ ಅತಿ ದೊಡ್ಡ ಸಂದೇಶವೆಂದರೆ: "ಬಂದ ಐಶ್ವರ್ಯಕ್ಕೆ ಹಿಗ್ಗಬೇಡಿ, ದಾನ ಮಾಡುವಲ್ಲಿ ಹಿಂದೆ ಬೀಳಬೇಡಿ." ತ್ಯಾಗ ಮತ್ತು ತಾಳ್ಮೆಯ ಪ್ರತೀಕವಾದ ಅವಳು 1474ರಲ್ಲಿ ಶ್ರೀಶೈಲದ ಲಿಂಗದಲ್ಲಿ ಲೀನವಾದಳು.


ಕಲೆ ಮತ್ತು ಸಾಹಿತ್ಯದಲ್ಲಿ ಮಲ್ಲಮ್ಮ

ಮಲ್ಲಮ್ಮನ ಚರಿತ್ರೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ದಾಖಲಾಗಿದೆ:

ನಾಟಕ: ಶ್ರೀಕಂಠಶಾಸ್ತ್ರಿಗಳು ರಚಿಸಿದ 'ಹೇಮರೆಡ್ಡಿ ಮಲ್ಲಮ್ಮ' ನಾಟಕ ಹೆಣ್ಣುಮಕ್ಕಳಿಗೆ ನೀತಿಬೋಧಕವಾಗಿದೆ.

ಚಲನಚಿತ್ರ: 1969ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಡಾ. ರಾಜ್‌ಕುಮಾರ್ ಮತ್ತು ಬಿ. ಸರೋಜಾದೇವಿ ನಟಿಸಿದ 'ಮಲ್ಲಮ್ಮನ ಪವಾಡ' ಸಿನಿಮಾ ಇಂದಿಗೂ ಜನಪ್ರಿಯ. ನಂತರ 1976 ಮತ್ತು 2005ರಲ್ಲಿಯೂ ಇವರ ಕುರಿತು ಚಲನಚಿತ್ರಗಳು ಮೂಡಿಬಂದಿವೆ.

ಜನಪದ: ಉತ್ತರ ಕರ್ನಾಟಕದ ಲಾವಣಿಗಳು, ಹಂತಿಯ ಹಾಡುಗಳು ಮತ್ತು ತ್ರಿಪದಿಗಳಲ್ಲಿ ಮಲ್ಲಮ್ಮನ ಭಕ್ತಿಯ ಶಕ್ತಿಯನ್ನು ಹಳ್ಳಿಯ ಜನರು ಇಂದಿಗೂ ಹಾಡುತ್ತಾರೆ.

ಪುರಾಣ: ದ್ಯಾಮಪುರದ ಚನ್ನಕವಿ (1922), ಡಾ. ಪುಟ್ಟರಾಜ ಗವಾಯಿಗಳು (1996) ಮತ್ತು ಚನ್ನಮಲ್ಲ ಶಿವಶರಣಶಾಸ್ತ್ರಿಗಳು ಮಲ್ಲಮ್ಮನ ಚರಿತ್ರೆಯನ್ನು ಪುರಾಣ ರೂಪದಲ್ಲಿ ಬರೆದು ಅಜರಾಮರಗೊಳಿಸಿದ್ದಾರೆ.


ಇಂದಿನ ವಿಭಕ್ತ ಕುಟುಂಬಗಳ ಕಾಲಘಟ್ಟದಲ್ಲಿ ಹೇಮರೆಡ್ಡಿ ಮಲ್ಲಮ್ಮನವರ ತಾಳ್ಮೆ, ಸಹನೆ ಮತ್ತು ಎಲ್ಲರನ್ನೂ ಪ್ರೀತಿಸುವ ಮನೋಭಾವ ಇಡೀ ಮನುಕುಲಕ್ಕೆ ಮಾದರಿಯಾಗಿದೆ. ಲೌಕಿಕ ಜೀವನದಲ್ಲಿದ್ದುಕೊಂಡೇ ಅಲೌಕಿಕ ಸಾಧನೆ ಮಾಡಿದ ಈ ಮಹಾಸಾಧ್ವಿಯ ಆದರ್ಶಗಳು ಸಾರ್ವಕಾಲಿಕ.


- ವೈ. ಬಿ. ಕಡಕೋಳ (ಶಿಕ್ಷಕರು)

ಮುನವಳ್ಳಿ, ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top