ಹೃದಾನ್ ಸುಮಾರು 20 ವರ್ಷದ ಒಬ್ಬ ಯುವಕ. ಈಗತಾನೆ ತನ್ನೆಲ್ಲಾ ಬಾಲ್ಯದ ದಿನಗಳನ್ನು ಮುಗಿಸಿ ಒಂದಷ್ಟು ನೆನಪುಗಳ ಬುತ್ತಿ ಹಿಡಿದು ಜೀವನದ ಹಾದಿಯಲ್ಲಿ ಮುನ್ನಡೆಯುತ್ತಾ ಇರುತ್ತಾನೆ. ಈತನ ಮನಸ್ಸಿನಲ್ಲಿ ಒಂದಷ್ಟು ಯೋಚನೆಗಳು, ಒಂದಷ್ಟು ಗೊಂದಲಗಳು ! ಸಮುದ್ರದ ಅಲೆಗಳಂತೆ ಅಪ್ಪಳಿಸುತ್ತಿರುತ್ತದೆ. ತನ್ನೆಲ್ಲಾ ಭಾವನೆಗಳು ಹೇಳಿಕೊಳ್ಳಲು ತನಗೊಂದು ಗೆಳೆತನದ ಅವಶ್ಯಕತೆ ಇದೆಯೇ ಅಥವಾ ತನ್ನನ್ನು ಅರ್ಥ ಮಾಡಿಕೊಳ್ಳುವಂತಹ ಸಂಗಾತಿಯ ಅವಶ್ಯಕತೆ ಇದೆಯೇ ಎನ್ನುವುದು ಹೃದಾನ್ ನ ಸದ್ಯದ ಗೊಂದಲವಾಗಿದೆ.
ಹೃದಾನ್ ಒಳ್ಳೆ ಮಾತುಗಾರ. ಪರಿಚಯದ ವ್ಯಕ್ತಿಗಳು ಯಾರನ್ನೇ ಕಂಡರೂ... ದೈನ್ಯತೆಯಿಂದ ಮಾತನಾಡಿಸುತ್ತಿದ್ದ. ತನ್ನೊಳಗೆ ಯಾವುದೇ ಅಹಂಕಾರ ಇಟ್ಟುಕೊಂಡು ಇರಲಿಲ್ಲ. ಸದಾ ನಗು ನಗುತ್ತಲೇ ಇರುವ ಸ್ವಭಾವ ಎಂಥದ್ದೇ ಸಂದರ್ಭ ಬಂದರು ಒಂದಿಷ್ಟು ಕೋಪ ತೋರದೆ ಶಾಂತ ಸ್ವಭಾವದಿಂದಲೇ ವರ್ತಿಸುತ್ತಿದ್ದ.
ಹೃದಾನ್ ಒಬ್ಬ ವಿದ್ಯಾರ್ಥಿ. ಈತನಿಗೆ ಒಂದಷ್ಟು ಜನ ಗೆಳೆಯರಿದ್ದರೂ ಏನೋ ಒಂಥರಾ ಒಬ್ಬಂಟಿತನ ಮನಸನ್ನ ಕಾಡ್ತಾ ಇತ್ತು. ಒಬ್ಬೊಬ್ನೆ ಕೂತ್ಕೊಳ್ತ ಇದ್ದ. ಅಳಬೇಕು ಅಂತ ಅನ್ನಿಸ್ತಾ ಇದ್ರೂ ಯಾಕೋ ಗೊತ್ತಿಲ್ಲ ಸುಮ್ನೆ ನಗ್ತಾ ಇದ್ದ. ಒಬ್ಬೊಬ್ನೆ ಮಾತಾಡ್ತಾ ಇದ್ದ.ಈ ಮೊದಲೇ ಹೇಳಿದ ಹಾಗೆ ನನ್ನ ಭಾವನೆಗಳನ್ನು ಹೇಳ್ಕೊಳ್ಳಿಕೆ ಈತನಿಗೆ ಯಾವ ಗೆಳೆಯರು ಇರ್ಲಿಲ್ಲ. ಗೆಳೆಯರಿದ್ರೂ ಈತನ ಭಾವನೆಗಳಿಗೆ ಬೆಲೆ ಕೊಡ್ತಾ ಇರ್ಲಿಲ್ಲ.
ಇಷ್ಟು ಹೊತ್ತಿಗೆ ನಮ್ಮ ಹೃದಾನ್ ನ ಜೀವನಕ್ಕೆ ಒಬ್ಬಳ ಆಗಮನ ಆಗ್ತದೆ. ಹೃದ್ಯಾ.. ಒಬ್ಳು ಸರಳ, ಸಹೃದಯಿ. ನೂರಾರು ಜನರ ನಡುವೆಯೂ ಆಕೆಯೊಬ್ಬಳನ್ನೇ ನೋಡಬೇಕೆನ್ನಿಸುವ ಹೊಳಪು ಅವಳದ್ದು. ಹೃದಾನ್ ತಾನು ಓದುತ್ತಿದ್ದ ಕಾಲೇಜ್ ನಲ್ಲಿ ಹೃದ್ಯಾಳನ್ನು ಭೇಟಿ ಮಾಡುತ್ತಾನೆ. ಆಕೆಯ ಜೊತೆ ಮಾತನಾಡುತ್ತಾನೆ. ಆಕೆ ತನ್ನದೇ ತರಗತಿಯಲ್ಲಿ ಓದುತ್ತಿದ್ದ ಯುವತಿ ಎಂದು ತಿಳಿದು ಸಂತೋಷ ಪಡುತ್ತಾನೆ. ಆಕೆಯ ಜೊತೆ ಸ್ವಲ್ಪ ಸಲಿಗೆಯನ್ನು ಬೆಳೆಸಿಕೊಳ್ತಾನೆ. ತನ್ನ ಜೀವನದ ಹಾದಿಯಲ್ಲಿ ಸಿಕ್ಕಂತಹ ಮುದ್ದಾದ ತುಂಬಾ ಆಕರ್ಷಣೆಯುಳ್ಳ ಗುಲಾಬಿ ಹೂವು ಅಂದುಕೊಳ್ತಾನೆ. ಆಕೆಯ ಜೊತೆ ಪ್ರತಿ ದಿನ ಸಂಭಾಷಣೆ ನಡೆಸುತ್ತಿರುತ್ತಾನೆ. ತನ್ನೆಲ್ಲಾ ವಿಚಾರಗಳನ್ನು ಹಂಚಿಕೊಳ್ತಾನೆ. ಆಕೆಯು ಕೆಲವು ಭಾರಿ ಆಕೆಯ ದಿನದಲ್ಲಾದ ಘಟನೆಗಳನ್ನು ಹಾಗೂ ಒಂದಿಷ್ಟು ಗುಪ್ತ ವಿಚಾರಗಳನ್ನು ಹಂಚಿಕೊಳ್ತಿದ್ದಳು.
ಹೃದಾನ್ ನ ಮನಸಿನ್ನಗೆ ಈಗ ಸ್ವಲ್ಪ ನಿರಾಳ ಎನ್ನುವ ಭಾವನೆ ದಿನವಿಡೀ.. ತಾನು ಒಬ್ಬಂಟಿ ಎಂದು ಯೋಚಿಸುತ್ತಿದ್ದ ಈತ ಈಗ ಹೃದ್ಯಾ ಜೊತೆಗಿನ ಸಂಭಾಷಣೆಯ ಬಗ್ಗೆ, ಆಕೆಯ ಜೊತೆ ಇನ್ನಷ್ಟು ಮಾತನಾಡಬೇಕು ಎನ್ನುವ ಕನಸು ಕಾಣಲು ಶುರು ಮಾಡ್ತಾನೆ.
ಆದರೆ ಹೃದ್ಯಾಳ ಜೀವನದಲ್ಲಿ ಹೃದಾನ್ ಮಾತ್ರವಲ್ಲದೆ ಆಕೆಗೆ ಇನ್ನೂ ಹಲವಾರು ಗೆಳೆಯ ಮತ್ತು ಗೆಳತಿಯರು ಇದ್ದರು. ಆಕೆಗೆ ಒಬ್ಬಂಟಿತನ ಎನ್ನುವ ಯಾವ ಭಾವನೆಯೂ ಇದುವರೆ ಕಾಡಿಲ್ಲ.ಪಾಪ ಹೃದಾನ್ ತನ್ನ ಜೀವನದಲ್ಲಿ ಇದುವರೆಗೆ ನಡೆದ ಎಲ್ಲಾ ಖುಷಿ ವಿಚಾರಗಳನ್ನು ಬೇಜಾರನ್ನು ಆಕೆಯ ಬಳಿ ಹಂಚಿಕೊಳ್ಳುತ ಇದ್ದ,ಆದರೆ ಹೃದ್ಯಾ..! ಹೃದಾನ್ ನ ಎಲ್ಲಾ ಭಾವನೆಗಳನ್ನು ಕೇವಲ ಮನೋರಂಜನೆಗೆ ಮಾತ್ರ ಬಳಸಿಕೊಳ್ತ ಇದ್ದಳು. ಹೃದಾನ್ ನ ನೋವನ್ನು ತನ್ನ ಇನ್ನುಳಿದ ಗೆಳತಿಯಾರಲ್ಲಿ ಹಂಚಿಕೊಂಡು ಗೇಲಿಮಾಡಿ ನಗ್ತಾ ಇದ್ದಳು. ಹೃದಾನ್ ತನ್ನ ಮುಗ್ಧತೆಯಿಂದ ಹೃದ್ಯಾಳನ್ನು ಗುಲಾಬಿ ಹೂವಿನ ತರ ಕಾಣ್ತಾ ಇದ್ರೆ ಆಕೆ ಅದೇ ಗುಲಾಬಿಯ ಬುಡದಲ್ಲಿ ಇರುವ ಮುಳ್ಳಂತೆ ವರ್ತಿಸುತ್ತಿದ್ದಳು. ಕ್ರಮೇಣ ಹೃದಾನ್ ಜೊತೆ ಮಾತನಾಡೋದು ಕಡಿಮೆ ಮಾಡ್ತಾಳೆ.
ಹೃದಾನ್‌ಗೆ ಏನೋ ಸರಿಯಾಗಿಲ್ಲ ಅನ್ನೋ ಅನುಮಾನ ನಿಧಾನವಾಗಿ ಮನಸ್ಸಿನಲ್ಲಿ ಬೇರು ಬಿಟ್ಟಿತು. ಒಂದು ಕಾಲದಲ್ಲಿ ದಿನವಿಡೀ ಮಾತಾಡುತ್ತಿದ್ದ ಹೃದ್ಯಾ ಈಗ “busy” ಅನ್ನೋ ಒಂದು ಪದದ ಹಿಂದೆ ಮರೆತು ಹೋಗುತ್ತಿದ್ದಳು. ಅವಳಿಂದ ಬರುತ್ತಿದ್ದ ಉತ್ತರಗಳು ಕಡಿಮೆಯಾಗುತ್ತಾ… ಅವನೊಳಗಿನ ಖಾಲಿತನ ಮತ್ತೆ ತಲೆ ಎತ್ತಿತು.
ಒಂದು ದಿನ, ತನ್ನ ಬಗ್ಗೆ ಮಾತನಾಡಿದ ಮಾತುಗಳು, ತನ್ನ ನೋವನ್ನು ನಗೆಯ ವಿಷಯವನ್ನಾಗಿ ಮಾಡಿದ ಕ್ಷಣಗಳು… ಅವನ ಕಿವಿಗೆ ಬಿದ್ದವು. ಆ ಕ್ಷಣ ಹೃದಾನ್ ಒಳಗೆ ಏನೋ ಒಡೆದು ಹೋಯಿತು. ಕೋಪವೂ ಇಲ್ಲ, ಕಣ್ಣೀರೂ ಇಲ್ಲ… ಕೇವಲ ಒಂದು ಭಾರವಾದ ಮೌನ.
ಆ ದಿನದ ನಂತರ ಹೃದಾನ್ ಬದಲಾದನು. ಅವನು ಮತ್ತೆ ಯಾರಿಗಾದರೂ ತನ್ನ ಮನಸ್ಸು ತೆರೆದು ಹೇಳೋದು ಬಿಟ್ಟ. ಕಾಲೇಜಿನ ಗದ್ದಲದಲ್ಲೂ, ಸ್ನೇಹಿತರ ನಡುವೆ ಇದ್ದರೂ… ಅವನು ಒಳಗಿನಿಂದ ದೂರವಾಗ್ತ ಹೋದ .ನಗು ಇನ್ನೂ ಅವನ ಮುಖದಲ್ಲಿತ್ತು… ಆದರೆ ಅದು ಈಗ ನಿಜವಾಗಿರಲಿಲ್ಲ.
ಸಂಜೆಯ ವೇಳೆಗೆ ಅವನು ಒಬ್ಬನೇ ಕುಳಿತುಕೊಳ್ಳುತ್ತಿದ್ದ. ಸಮುದ್ರದ ಅಲೆಗಳಂತೆ ಬರುತ್ತಿದ್ದ ಯೋಚನೆಗಳು ಈಗ ನಿಧಾನವಾಗಿ ಶಾಂತವಾಗುತ್ತಿದ್ದವು… ಆದರೆ ಆ ಶಾಂತಿಯಲ್ಲಿ ಒಂಥರಾ ನೋವು ಮಿಶ್ರಿತವಾಗಿತ್ತು.
“ಬಹುಶಃ… ನಾನು ಒಬ್ಬನೇ ಇರೋಕೆ ಹುಟ್ಟಿದ್ದೀನೋ…” ಅನ್ನೋ ಯೋಚನೆ ಅವನ ಮನಸ್ಸಿನಲ್ಲಿ ನೆಲೆಸಿತು. ಹೃದ್ಯಾ ಅವನ ಜೀವನದಲ್ಲಿ ಒಂದು ಅಧ್ಯಾಯವಾಗಿ ಉಳಿದಳು… ಆದರೆ ಹೃದಾನ್ ಜೀವನದ ಪುಸ್ತಕದಲ್ಲಿ ಆ ಅಧ್ಯಾಯದ ನಂತರ ಪುಟಗಳು ಖಾಲಿಯಾಗಿಯೇ ಉಳಿದವು.
ಕೊನೆಗೆ, ಜನರ ಮಧ್ಯೆ ಇದ್ದರೂ…
ಮನಸ್ಸಿನಲ್ಲಿ ಮಾತುಗಳು ತುಂಬಿದರೂ…
ಹೃದಾನ್ ಒಬ್ಬನೇ ನಡೆದುಕೊಂಡು ಹೋದನು…
ಅವನ ಕಥೆ ಇನ್ನೂ ಮುಂದುವರೆಯುತ್ತಿತ್ತು…
ಆದರೆ ಆ ಕಥೆಯಲ್ಲಿ ಅವನ ಜೊತೆ ಯಾರೂ ಇರಲಿಲ್ಲ.
- ಈಶಕೃಷ್ಣ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



