ಕಾಸರಗೋಡು: ಪುರಾಣ ಪ್ರಸಿದ್ಧ ಕೂಡ್ಲು ಕಾಳ್ಯಂಗಾಡ್ ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಈ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾದರು.
ಈ ಪುಣ್ಯ ಸಮಾರಂಭದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ), ಕಾಸರಗೋಡು ಸಂಸ್ಥೆಯ ವತಿಯಿಂದ “ಸಾಂಸ್ಕೃತಿಕ ಕಲಾ ವೈಭವ– ಕಲಾವಿದರ ಕಲರವ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಗುರುರಾಜ್ ಕಾಸರಗೋಡು ಅವರ ಸಂಯೋಜನೆ ಮತ್ತು ನಿರೂಪಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರತಿಭಾವಂತ ಕಲಾವಿದರಾದ ವರ್ಷಾ ಶೆಟ್ಟಿ, ನವ್ಯಶ್ರೀ ಕುಲಾಲ್, ನಿಶ್ಮಿತಾ, ದೀಕ್ಷಾ ಕುಲಾಲ್, ಹಂಶಿತ್ ಆಳ್ವ, ತ್ರಿಷಾ ಅಡಕಲಕಟ್ಟೆ, ಅನ್ಮೀತ ಶೆಟ್ಟಿ ಕೋಡಿಜಲ್, ತನ್ವಿ ಸಿ ಶೆಟ್ಟಿ ಹೇರೂರ್, ಅರ್ಚನಾ ಹೇರೂರ್, ರಮ್ಯಾ ಶಿವರಾಜ್, ಹರ್ಷಾ ಕುಲಾಲ್, ಭಾನ್ವಿ ಕುಲಾಲ್, ಪ್ರಮ್ಯ ಕುಲಾಲ್, ಜೀವಿಕಾ ಜೆ ಶೆಟ್ಟಿ, ತನುಶ್ರೀ, ವೈಷ್ಣವಿ, ರಿಷಿಕಾ, ಹರಿನಂದನ, ಅಕ್ಷತಾ, ಹರೀಶ್ ಪಂಜಿಕಲ್ಲು, ಅಕ್ಷತಾ ಪಿ,ತನ್ಮಯಿ ಲಕ್ಷ್ಮಿ, ಸಾಧನಾ ಎಸ್ ಶೆಟ್ಟಿ, ತನಿಷ್ಕ ಎಸ್, ನಿಧಿ ಶೆಟ್ಟಿ, ಅಶ್ವಿತಾ, ದಿವ್ಯ, ಸುಪ್ರೀತಾ, ತೇಜುಷಾ ಸೇರಿದಂತೆ ಅನೇಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೆಳೆದರು.
ಕಾರ್ಯಕ್ರಮದ ವಿಶೇಷವಾಗಿ, ಸಂಸ್ಥೆಯ ಸುಮಧುರ ಗಾಯಕ ಶ್ರೀ ಹರೀಶ್ ಪಂಜಿಕಲ್ಲು ಅವರನ್ನು “ಸ್ವರಗಾನ ಸಿರಿ 2026” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಸಮಿತಿಯ ಅಧ್ಯಕ್ಷ ಹಾಗೂ ಧಾರ್ಮಿಕ ಮುಂದಾಳು ಡಾ. ವೆಂಕಟರಮಣ ಹೊಳ್ಳ, ಸಮಾಜಸೇವಕ ಶ್ರೀ ಜಗದೀಶ್ ಕೂಡ್ಲು, ಸಂಸ್ಥೆಯ ಗೌರವಾಧ್ಯಕ್ಷ ಶ್ರೀ ಗಣೇಶ್ ಪ್ರಸಾದ್ ಆಳ್ವ, ಜೊತೆ ಕಾರ್ಯದರ್ಶಿ ಕುಮಾರಿ ವರ್ಷಾ ಶೆಟ್ಟಿ, ಸದಸ್ಯೆ ಶ್ರೀಮತಿ ಜಯಪ್ರಭಾ ವೈ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಈ ಗೌರವ ಪ್ರದಾನ ನಡೆಯಿತು. ಈ ಸಂದರ್ಭದಲ್ಲಿ ಹರೀಶ್ ಪಂಜಿಕಲ್ಲು ಅವರ ಮಕ್ಕಳಾದ ಅಕ್ಷತಾ ಪಿ, ಅಖಿಲೇಶ್ ಪಿ, ಅಜೀಶ್ ಪಿ ಮತ್ತು ಅನೀಶ್ ಪಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಸಂಸ್ಥೆಯ ಪ್ರೋತ್ಸಾಹಕಿ, ನೃತ್ಯ ಕಲಾವಿದೆ ಹಾಗೂ ನಿರ್ದೇಶಕಿ ಶ್ರೀಮತಿ ನಿಶ್ಮಿತಾ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರನ್ನೂ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.


