ವಿವೇಕಾನಂದ ಕಾಲೇಜಿನಲ್ಲಿ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ
ಪುತ್ತೂರು, ಮೇ 2: ನಮ್ಮ ಸಂಸ್ಕೃತಿಗೆ ಭಾವನಾತ್ಮಕವಾಗಿ ಹತ್ತಿರವಾಗಿರುವ ಭಾಷೆ ನಮಗೆ ಮುಖ್ಯವಾಗಿರುತ್ತದೆ. ನಮ್ಮ ಆಚಾರ-ವಿಚಾರಗಳು, ನಾವು ಬಳಸುವ ವಸ್ತುಗಳನ್ನು ಇತ್ಯಾದಿ ಅನೇಕ ವಿಷಯಗಳನ್ನು ಸೂಕ್ತವಾದ ರೀತಿಯಲ್ಲಿ ಹೇಳಲು ಇದರಿಂದ ಸಾಧ್ಯ.ಭಾವನೆಗಳಿಗೆ ಅದರದ್ದೇ ಆದ ಶಕ್ತಿ ಇದೆ ಅಲ್ಲದೇ ಅವುಗಳ ಆಧಾರದ ಮೇಲೆ ನಮ್ಮ ಜೀವನ ಸಾಗುತ್ತದೆ. ಹೀಗಿರುವ ಭಾವನೆಗಳನ್ನು ಉಳಿಸಿಕೊಳ್ಳಲು ಹಾಗೂ ಮಹತ್ವವನ್ನು ತಿಳಿಸಲು ಭಾಷೆಗಳು ಅವಶ್ಯ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಭಟ್ ನುಡಿದರು.
ಇವರು ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರ, ಡಾ.ಕೆ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಮತ್ತು ಕನ್ನಡ ವಿಭಾಗದ ಸಹಯೋಗದೊಂದಿಗೆ ನಡೆದ 2026ನೇ ವರ್ಷದ ನಿರಂಜನ ಪ್ರಶಸ್ತಿ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ನಾವು ಬದುಕಲು ಸುತ್ತಮುತ್ತಲಿನ ಪರಿಸರ ಅವಶ್ಯವಾಗಿ ಬೇಕು. ಇಲ್ಲಿ ಜೀವ ಸಂಕುಲ, ಮರಗಿಡಗಳು ಇತ್ಯಾದಿಗಳು ಅಲ್ಲದೇ ನೀರಿನ ಒಂದೊಂದು ಬಿಂದು ಕೂಡಾ ತುಂಬಾ ಮುಖ್ಯವಾಗಿರುತ್ತದೆ. ಪರಿಸರ ವ್ಯವಸ್ಥೆ ಉಳಿಯಲು ನಾವು ಅವಕಾಶ ಮಾಡಿಕೊಡಬೇಕು. ಹಿರಿಯರು ನಮ್ಮನ್ನು ಹಾಗೂ ಮುಂದಿನ ಪೀಳಿಗೆಯನ್ನು ಎಚ್ಚರಿಸುವ ಕೆಲಸ ಮಾಡಬೇಕು. ನಾವು ಪ್ರಶ್ನೆಗಳನ್ನು ಕಂಡುಕೊಂಡು ಉತ್ತರವನ್ನು ಪಡೆದು ಒಳಿತು ಕಂಡರೆ ಅದರಂತೆ ನಡೆಯಬೇಕು ಎಂದರು.
ಸಾಹಿತಿ, ಹಿರಿಯ ಚಿಂತಕ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ನರೇಂದ್ರ ರೈ ದೇರ್ಲ ಅವರಿಗೆ ನಿರಂಜನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಂಕರ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ಮತ್ತು ವಿದ್ವಾಂಸ ವಿದ್ವಾನ್ ಜಗದೀಶ ಶರ್ಮಾ ಸಂಪ ಅವರಿಗೆ ನೀಡಿ ಪುರಸ್ಕರಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ನರೇಂದ್ರ ರೈ ದೇರ್ಲ ವಿದ್ಯಾಸಂಸ್ಥೆಗಳು ಬುದ್ಧಿಶಕ್ತಿ ಹಾಗೂ ಸಂವೇದನಾಶೀಲತೆಯನ್ನು ಬೆಳೆಸುವ ಕೇಂದ್ರಗಳಾಗಬೇಕು. ಒಂದು ಪ್ರಶಸ್ತಿಯನ್ನು ಅನೇಕ ವರ್ಷಗಳಿಂದ ನೀಡುತ್ತಿದ್ದರೆ ಅದರ ಪರಂಪರೆಗೆ ಒಂದು ಘನತೆ ಇದೆ. ಅದನ್ನು ನಾವು ಗೌರವಿಸಬೇಕಿದೆ. ಭೂಮಿ ಎನ್ನುವುದು ನಮ್ಮ ಮುಂದಿನ ಪೀಳಿಗೆಗೆ ಸಂಬಂಧಪಟ್ಟದ್ದು. ಅದನ್ನು ನಾವು ಸಂರಕ್ಷಿಸುವುದು ಬಹಳ ಮುಖ್ಯ ಎಂದರು.
ಶಂಕರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಜಗದೀಶ ಶರ್ಮಾ ಸಂಪ ಮಾತನಾಡಿ ಸಾಮಾನ್ಯರನ್ನು ಕೂಡಾ ಎತ್ತರಿಸುವ ಸಂಸ್ಕೃತಿ ಭಾರತದ್ದು. ವಿದ್ವಾಂಸರಾದರೂ ಸರಳವಾದ ರೀತಿಯಲ್ಲಿ ಬದುಕುವವರು ಹಲವರಿದ್ದಾರೆ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿದಾಗ ಅವರ ಪ್ರಶಸ್ತಿಯೊಂದಿಗೆ ಅವರ ಹೆಸರು ಕೂಡಾ ಜಗತ್ತಿಗೆ ತಿಳಿಯುವಂತಾಗುತ್ತದೆ. ಸಾಹಿತ್ಯಕ್ಕೆ ಸಮಾಜವನ್ನು ಮುನ್ನಡೆಸುವ ಹಾಗೂ ಬದಲಾವಣೆ ತರುವ ಸಾಮರ್ಥ್ಯವಿದೆ. ಹೊಸತನವನ್ನು ಒಳ್ಳೆಯ ರೀತಿಯಲ್ಲಿ ಜೀವನದಲ್ಲಿ ಅಳವಡಿಸಿಕೊಂಡು ಹಳೆಯ ಸಂಸ್ಕೃತಿಯನ್ನೂ ಮರೆಯದೇ ಮುಂದಿನ ಪೀಳಿಗೆಯನ್ನೂ ಸುಸಂಸ್ಕೃತವಾಗಿ ರೂಪಿಸಬೇಕು ಎಂದು ಆಶಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಅವರು ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿನಂದನೆಯ ನುಡಿಗಳನ್ನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ನಿರಂಜನ ಪ್ರಶಸ್ತಿ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯ ಬಗ್ಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪಡೀಲು ಶಂಕರ ಭಟ್ಟ ಸಂಸ್ಮರಣೆಯ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧನ್ವಿತಾ ಕಾರಂತ್ ಪ್ರಥಮ ಬಹುಮಾನವನ್ನು ಪಡೆದರು.
ದ್ವಿತೀಯ ಬಹುಮಾನವನ್ನು ಡಾ. ಎ.ವಿ ಬಾಳಿಗಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕುಮಟಾ ಇಲ್ಲಿನ ವಿದ್ಯಾರ್ಥಿ ವಿನಾಯಕ ರಮೇಶ ನಾಯ್ಕ ಹಾಗೂ ತೃತೀಯ ಸ್ಥಾನವನ್ನು ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ.ಕೆ ಅವರು ಗಳಿಸಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್, ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಉಪಸ್ಥಿತರಿದ್ದರು.
ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಪ್ರಮೋದ್ ಎಂ.ಜಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿವೇಕಾನಂದ ಸ್ನಾತಕೋತ್ತರ ವಿಭಾಗದ ಡೀನ್ ಹಾಗೂ ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ವಿಜಯಸರಸ್ವತಿ.ಬಿ ವಂದಿಸಿದರು.
ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ವಿಭಾಗದ ವಿಶೇಷಾಧಿಕಾರಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮನಮೋಹನ ಎಂ ಹಾಗೂ ಕನ್ನಡ ವಿಭಾಗದ ಉಪನ್ಯಾಸಕ ಮಧುಕುಮಾರ್ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


