ಪ್ರತಿ ವರ್ಷ ಮೇ ತಿಂಗಳ
ಮೊದಲ ಭಾನುವಾರದಂದು ವಿಶ್ವ ನಗು ದಿನ
ಎಂದು ಆಚರಿಸಲಾಗುತ್ತದೆ. ಈ ದಿನದಂದು
ಎಲ್ಲಾ ಜಾತಿ, ಧರ್ಮದ ಜನರು
ಯಾವುದೇ ಮತಭೇದವಿಲ್ಲದೆ, ಲಿಂಗ ಭೇದವಿಲ್ಲದೆ, ವಯಸ್ಸಿನ
ನಿರ್ಬಂಧವಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸೇರಿ
ಮನ ಬಿಚ್ಚಿ ನಗುತ್ತಾರೆ.
ನಿಷ್ಕಲ್ಮಶವಾಗಿ ಮತ್ತು ವ್ಯಾಪಾರೀಕರಣವಿಲ್ಲದೆ ಮನ
ಬಿಚ್ಚಿ ನಕ್ಕು ವಿಶ್ವಭ್ರಾತೃತ್ವ, ಸಹೋದರತ್ವ
ಮತ್ತು ಶಾಂತಿಯ ಸಂಕೇತವಾಗಿ ಎಲ್ಲರೂ
ಒಟ್ಟಾಗಿ ನಗುವುದರಿಂದ ಮನಸ್ಸನ್ನು ಹಗುರಾಗಿಸಲು ಪ್ರಯತ್ನಿಸಲಾಗುತ್ತದೆ.
ಈ ಆಚರಣೆ ಜನವರಿ 11, 1998 ರಂದು
ಭಾರತ ದೇಶದ ಬಾಂಬೆ ನಗರದಲ್ಲಿ
ಆರಂಭವಾಯಿತು. ಸುಮಾರು 12,000 ಮಂದಿ ಒಟ್ಟಾಗಿ ಸೇರಿ
ನಕ್ಕಿದ್ದರು. ಭಾರತದ ಡಾ|| ಮದನ್
ಕಟಾರಿಯಾ ಅವರು ಈ ನಗು
ಯೋಗ ಆಂದೋಲನದ ರೂವಾರಿಯಾಗಿದ್ದು,
ವೃತ್ತಿಯಲ್ಲಿ ವೈದ್ಯರಾಗಿರುವ ಅವರು 1995ರಿಂದಲೇ ಈ
ನಗು ಆಂದೋಲನವನ್ನು ನಡೆಸುತ್ತಿದ್ದಾರೆ.
ಸಾವಿರಾರು ನಗು ಕ್ಲಬ್ಗಳನ್ನು
ಆರಂಭಿಸಿ ಜನರಲ್ಲಿ ನಗೆಯ ಮಹತ್ವದ
ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇವರ
ಈ ನಗೆ ಆಂದೋಲನದ
ಕೊಡುಗೆಯನ್ನು ಲಂಡನ್ ಟೈಮ್ಸ್ ಪತ್ರಿಕೆ
ಗುರುತಿಸಿ ಅವರಿಗೆ “ಗುರು ಆಫ್
ಗಿಗ್ಲಿಂಗ್” ಎಂಬ ಬಿರುದು ನೀಡಿದೆ.
ಒಟ್ಟಿನಲ್ಲಿ,
ನಗುವಿನಿಂದ ಜನರ ದೈಹಿಕ ಮತ್ತು
ಮಾನಸಿಕ ಆರೋಗ್ಯದಲ್ಲಿ ಉಂಟಾಗುವ ಧನಾತ್ಮಕ ಪರಿಣಾಮಗಳ
ಬಗ್ಗೆ ಅರಿವು ಮೂಡಿಸಿ, ಜನರು
ಹೆಚ್ಚು ಹೆಚ್ಚು ನಗುವಂತೆ ಮಾಡುವ
ಸದುದ್ದೇಶವೇ ಈ ಆಚರಣೆ
ಹಿಂದೆ ಇದೆ.
ನಕ್ಕರೆ
ಅದುವೇ ಸ್ವರ್ಗ
ಈಗಿನ ಯಾಂತ್ರಿಕ ಬದುಕಿನಲ್ಲಿ ನಗು
ಎನ್ನುವುದು ಕೂಡಾ ಒಂದು ಹಣ
ಸಂಪಾದನೆಯ ಮಾರ್ಗವಾಗಿದೆ ಎಂಬ ಸತ್ಯ ಹಲವರಿಗೆ
ಅರ್ಥವಾಗಲು ಕಷ್ಟವಾಗಬಹುದು. ನಿಷ್ಕಲ್ಮಶವಾಗಿ, ಹೃದಯತುಂಬಿ ನಕ್ಕರೆ ಮನುಷ್ಯನಿಗೆ
ಯಾವುದೇ ರೋಗ ಬರಲಿಕ್ಕಿಲ್ಲ ಎಂದು
ತಿಳಿದವರು ಹೇಳುತ್ತಾರೆ. ಜಗತ್ತಿನಲ್ಲಿ ಉಚಿತವಾಗಿ ಸಿಗುವ ಅತ್ಯಮೂಲ್ಯವಾದ
ವಸ್ತು ಎಂದರೆ ಅದು ನಗು.
ನಗು ಸಾಂಕ್ರಾಮಿಕ ಸ್ವಭಾವ
ಹೊಂದಿದ್ದು, ಒಬ್ಬ ವ್ಯಕ್ತಿ ನಗಿದರೆ
ಸುತ್ತಮುತ್ತಲವರಿಗೂ ಆ ಸಂತೋಷ
ಹರಡುತ್ತದೆ. ಇದು ಪರಸ್ಪರ ಅನ್ಯೋನ್ಯತೆಯನ್ನು
ಬೆಳೆಸುತ್ತದೆ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ.
ನಾವು ಯಾಕಾಗಿ ನಗಬೇಕು?
- ನಗು ನಮ್ಮ ಮನಸ್ಸಿಗೆ
ಉಲ್ಲಾಸ, ಸಂತಸ ಮತ್ತು ಸಮಾಧಾನ
ನೀಡುತ್ತದೆ.
- ನಗುವಿನಿಂದ ಶ್ವಾಸಕೋಶದ ಪ್ರಕ್ರಿಯೆ ಸುಗಮವಾಗುತ್ತದೆ.
- ಮಾನಸಿಕ ತಳಮಳ, ಭಯ, ಆತಂಕ ಮತ್ತು
ವ್ಯಾಕುಲತೆಯನ್ನು ಕಡಿಮೆ ಮಾಡುತ್ತದೆ.
- ಧೈರ್ಯ ಮತ್ತು ಸದೃಢತೆಯನ್ನು ನೀಡುತ್ತದೆ.
- ಧನಾತ್ಮಕ ದೃಷ್ಟಿಕೋನವನ್ನು ಬೆಳೆಸಲು ಸಹಾಯ ಮಾಡುತ್ತದೆ.
- ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತದೆ.
- ನೋವಿನ ಸಂದರ್ಭದಲ್ಲಿಯೂ ಮನಸ್ಸಿಗೆ ಧೈರ್ಯ ನೀಡುತ್ತದೆ.
- ದೇಹದ ಗ್ರಂಥಿಗಳಿಂದ ಆರೋಗ್ಯಕರ
ದ್ರವ್ಯಗಳು ಸ್ರವಿಸಿ ಜೀವಕೋಶಗಳಿಗೆ ಚೈತನ್ಯ ನೀಡುತ್ತದೆ.
- ಬದುಕಿಗೆ ಹೊಸ ಆಯಾಮ ಮತ್ತು
ಬೆಳಕು ನೀಡುತ್ತದೆ.
- ಸಂಬಂಧಗಳನ್ನು ಸದೃಢಗೊಳಿಸಿ, ವೈಮನಸ್ಸುಗಳನ್ನು ಕಡಿಮೆ ಮಾಡುತ್ತದೆ.
ವೈಜ್ಞಾನಿಕ
ದೃಷ್ಟಿಯಿಂದ ನಗು
ನಗುವಿನ ಪರಿಣಾಮಗಳ ಬಗ್ಗೆ ಅನೇಕ
ಸಂಶೋಧನೆಗಳು ನಡೆದಿವೆ. ಒಮ್ಮೆ ಹಾಯಾಗಿ
ನಕ್ಕರೆ ಸುಮಾರು 30 ನಿಮಿಷಗಳ ಕಾಲ
ಸ್ನಾಯುಗಳು ಸಡಿಲಗೊಳ್ಳುತ್ತವೆ. ಇದರಿಂದ ರಕ್ತ ಸಂಚಾರ
ಸುಗಮವಾಗಿ, ಹೃದಯದ ಕಾರ್ಯಕ್ಷಮತೆ ಉತ್ತಮವಾಗುತ್ತದೆ.
ನಗುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದಲ್ಲದೆ,
ರೋಗ ನಿರೋಧಕ ಶಕ್ತಿಯೂ
ಹೆಚ್ಚುತ್ತದೆ. ಆದ್ದರಿಂದಲೇ “ನಗುವಿನಲ್ಲಿದೆ ಸ್ವರ್ಗ” ಎಂದು ಹೇಳಲಾಗುತ್ತದೆ.
ನಗು – ಒಂದು ಕಲೆ
ನಗು ಎನ್ನುವುದು ಒಂದು ಕಲೆ.
ಈ ಕಲೆ ಎಲ್ಲರಿಗೂ
ಸುಲಭವಾಗಿ ಸಿದ್ಧಿಸುವುದಿಲ್ಲ. ಧನಾತ್ಮಕ ಚಿಂತನೆಯುಳ್ಳವರು ನಗುವಿನಲ್ಲೇ
ತಮ್ಮ ದೈಹಿಕ ಮತ್ತು ಮಾನಸಿಕ
ಆರೋಗ್ಯವನ್ನು ಕಂಡುಕೊಳ್ಳುತ್ತಾರೆ. ಅಂತಹವರ ಜೊತೆ ಸಮಯ
ಕಳೆಯುವುದರಿಂದ ನಮ್ಮಲ್ಲೂ ಧನಾತ್ಮಕ ಚಿಂತನೆಗಳು
ಮೂಡಿ ಬರುತ್ತವೆ ಮತ್ತು ನಾವು
ಕೂಡ ಸಂತೋಷದಿಂದ ಬದುಕಲು
ಸಾಧ್ಯವಾಗುತ್ತದೆ.
ನಾವು ಬದುಕುತ್ತಿರುವ ಇಂದಿನ ಲೆಕ್ಕಾಚಾರದ ಜಗತ್ತಿನಲ್ಲಿ
ನಗುವುದಕ್ಕೂ ಕೂಡ ವ್ಯಾಪಾರೀಕರಣದ ಸ್ಪರ್ಶ
ಬಂದಿದೆ. ಆದರೆ ಜೀವನ ಒಂದು
ದೀರ್ಘ ಪ್ರಯಾಣವಾಗಿದ್ದು, ಸಮಸ್ಯೆಗಳು ಸಹಜ. ಆದರೆ
ನಗುನಗುತ್ತಾ ಬದುಕನ್ನು ಎದುರಿಸಿದರೆ ಯಾವುದೇ
ಕಷ್ಟವನ್ನೂ ಸುಲಭವಾಗಿ ಎದುರಿಸಬಹುದು. ನಗುವು
ನಮ್ಮ ಬದುಕಿಗೆ ಹೊಸ ಚೈತನ್ಯವನ್ನು
ನೀಡುತ್ತದೆ. ಆದ್ದರಿಂದಲೇ ಹೇಳುತ್ತಾರೆ: “ನಕ್ಕರೆ ಅದುವೇ ಸ್ವರ್ಗ…
ನಗಬಾರದೇಕೆ?”
ಡಾ|| ಮುರಲೀ ಮೋಹನ್ ಚೂಂತಾರು
9845135787
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


