ಶಾಂತಿ, ಅಹಿಂಸೆ ಸಾರಿದ ಬುದ್ಧನ ನಾಡು ಭಾರತ: ಮುಂಡರಗಿ ನಾಗರಾಜ್

Upayuktha
0


 

ಬಳ್ಳಾರಿ: ಭಾರತವು ಬುದ್ಧನ ನಾಡು. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟ್ರವಲ್ಲ, ಬದಲಾಗಿ ಶಾಂತಿ ಮತ್ತು ಅಹಿಂಸೆಯನ್ನು ಸಾರಿದ ಬುದ್ಧನ ನಾಡಾಗಿದೆ ಎಂದು ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸದ ಉಲ್ಲೇಖದಂತೆ ಕ್ರಿಸ್ತಪೂರ್ವ 563ರಲ್ಲಿ ಬುದ್ಧನು ದೇಶದಲ್ಲಿ ಜನಿಸಿ ಬೌದ್ಧ ಧರ್ಮವನ್ನು ಸ್ಥಾಪಿಸಿದನು. ಇಂದು ಬೌದ್ಧ ಧರ್ಮವು ವಿಶ್ವದ ಮೂರನೇ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಿದೆ ಎಂದು ಅವರು ಸ್ಮರಿಸಿದರು.

ಗೌತಮ ಬುದ್ಧನು ಯುದ್ಧಕ್ಕಿಂತ ಶಾಂತಿಯೇ ಮೇಲು ಎಂಬ ತತ್ವವನ್ನು ಅಳವಡಿಸಿಕೊಂಡಿದ್ದರು. ಶಾಕ್ಯ ರಾಜ್ಯದ ಸಿದ್ಧಾರ್ಥನಾಗಿದ್ದಾಗ, ನದಿ ನೀರಿನ ವಿವಾದದ ಕುರಿತು ನಡೆದ ಸಂಘದ ಚರ್ಚೆಯಲ್ಲಿ ಯುದ್ಧದ ಬದಲು ಶಾಂತಿ ಮಾತುಕತೆಗೆ ಒತ್ತು ನೀಡಿದ್ದರು. ಅವರ ಶಾಂತಿ ಮಂತ್ರವು ಇಂದಿನ ಜಾಗತಿಕ ಯುದ್ಧಗಳ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಹಾನಗರ ಪಾಲಿಕೆಯ ಮಹಾಪೌರ ಪಿ.ಗಾದೆಪ್ಪ ಮಾತನಾಡಿ, ಗೌತಮ ಬುದ್ಧನು ಕೇವಲ ಒಬ್ಬ ವ್ಯಕ್ತಿಯಲ್ಲ, ಆತ ಅಹಿಂಸೆ ಮತ್ತು ಶಾಂತಿಯ ಜಾಗತಿಕ ಸಂಕೇತ. ತನ್ನ 29ನೇ ವಯಸ್ಸಿನಲ್ಲೇ ರಾಜ್ಯಭೋಗ, ಪತ್ನಿ, ಮಗು ಮತ್ತು ವೈಭವದ ಜೀವನವನ್ನು ತ್ಯಜಿಸಿ ಸಮಾಜದ ಶಾಂತಿಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ಚೇತನ ಎಂದು ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಕೆ..ಚಿದಾನಂದಪ್ಪ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಗಾಂಧೀಜಿಯವರು ಸಮಾಜದ ವಿವಿಧ ಕಾಲಘಟ್ಟಗಳಲ್ಲಿ ಶೋಷಣೆ ಮುಕ್ತ ಹಾಗೂ ಸಮಾನತೆಯ ಸಮಾಜಕ್ಕಾಗಿ ಶ್ರಮಿಸಿದ ಮಹಾನ್ ಚೇತನಗಳು. ಅವರ ವಿಚಾರಧಾರೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಅಭಿಪ್ರಾಯಪಟ್ಟರು.

ಬಳ್ಳಾರಿಯ ಎಸ್ಎಸ್ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೋಮನಾಥ್ ಸಿ.ಹೆಚ್ ಅವರು ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಿರುಗುಪ್ಪ ದಳವಾಯಿ ಅಂಬಣ್ಣ ತಂಡ ಬುದ್ಧ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಜಯಂತಿ ಅಂಗವಾಗಿ ಸಂಜೆ ಬಳ್ಳಾರಿ ನಗರದ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭಗೊಂಡು ಗಡಿಗೆ ಚನ್ನಪ್ಪ ವೃತ್ತ, ಡಾ.ರಾಜ್ ಕುಮಾರ್ ರಸ್ತೆ, ಇಂದಿರಾ ವೃತ್ತ ಮಾರ್ಗವಾಗಿ ಸಾಂಸ್ಕೃತಿಕ ಸಮುಚ್ಚಯದ ಸಭಾಂಗಣದವರೆಗೆ ಮೆರವಣಿಗೆ ನಡೆಯಿತು.

ಸಂದರ್ಭದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕಮಲರತ್ನ ಬಂತೇಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮಾಜದ ಹಿರಿಯ ಮುಖಂಡರು, ಬುದ್ಧ ಅನುಯಾಯಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.

 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top