ಉಡುಪಿಯಲ್ಲಿ ನಾಲ್ಕನೆಯ 'ನುಡಿಸಂಭ್ರಮ': ಮೂವರಿಗೆ 'ನುಡಿಭೂಷಣ' ಗೌರವ, ಆರು ಮೌಲಿಕ ಕೃತಿಗಳ ಲೋಕಾರ್ಪಣೆ

Upayuktha
0

 



ಉಡುಪಿ: "ಕೇವಲ ಪ್ರಶಸ್ತಿ ಅಥವಾ ಮನ್ನಣೆಯ ಆಸೆಯಿಂದ ಬರೆಯುವ ಕಥೆಗಾರ ಎಂದಿಗೂ ಉತ್ತಮ ಸಾಹಿತಿಯಾಗಲಾರ. ಬರೆಯುವಾಗ ಸಿಗುವ ಆನಂದವೇ ಸಾಹಿತ್ಯದ ಮೂಲ ಧ್ಯೇಯವಾಗಿರಬೇಕು" ಎಂದು ಹಿರಿಯ ಸಾಹಿತಿ ಹಾಗೂ ಅಂತರರಾಷ್ಟ್ರೀಯ ವಿದ್ಯಮಾನಗಳ ತಜ್ಞರಾದ ಡಾ. ಪ್ರೇಮಶೇಖರ ಅಭಿಪ್ರಾಯಪಟ್ಟರು.


ಇಲ್ಲಿನ ಪವಿತ್ರ ಕ್ಷೇತ್ರ ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ ‘ನುಡಿತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗ’ ಹಮ್ಮಿಕೊಂಡಿದ್ದ "ನುಡಿಸಂಭ್ರಮ-'26" ರಾಜ್ಯ ಮಟ್ಟದ ನಾಲ್ಕನೆಯ ವಾರ್ಷಿಕ ಸಮಾವೇಶ ಹಾಗೂ ಅಕ್ಷರ ಜಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ತಮ್ಮ ಉದ್ಘಾಟನಾ ಭಾಷಣದಲ್ಲಿ ಸಾಹಿತ್ಯದ ವಿವಿಧ ಘಟ್ಟಗಳನ್ನು ವಿಶ್ಲೇಷಿಸಿದ ಡಾ. ಪ್ರೇಮಶೇಖರ, "ಇಂದಿನ ಸಾಹಿತ್ಯವು ಸ್ಪರ್ಧೆ ಮತ್ತು ಅಜೆಂಡಾಗಳ ಕಾಲವಾಗಿದೆ. ಕನ್ನಡ ಸಾಹಿತ್ಯ ವಲಯದಲ್ಲಿ ಕೆಲವು ನಕಾರಾತ್ಮಕ ಶಕ್ತಿಗಳೂ ಇವೆ. ಹಾಗಾಗಿ, ಮಹಿಳಾ ಲೇಖಕಿಯರು ಪ್ರಚಾರ ಹಾಗೂ ಪ್ರಸಾರದ ಆಸೆಗೆ ಬಿದ್ದು ಮೋಸಗಾರರ ಜಾಲಕ್ಕೆ ಸಿಲುಕದೆ, ತಮ್ಮತನವನ್ನು ಉಳಿಸಿಕೊಂಡು ಜೋಪಾನವಾಗಿರಬೇಕು" ಎಂದು ಎಚ್ಚರಿಸಿದರು. ಅಲ್ಲದೆ, ಪತ್ರಿಕೆಗಳನ್ನು ಕೊಂಡು ಓದುವ ಮೂಲಕ ಸಮಾಜಕ್ಕೆ ಸಾಹಿತ್ಯಿಕ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.




ಇದೇ ಸಂದರ್ಭದಲ್ಲಿ ನಾಡಿನ ಮೂವರು ಪ್ರಸಿದ್ಧ ಲೇಖಕಿಯರಿಗೆ ಪ್ರತಿಷ್ಠಿತ 'ನುಡಿಭೂಷಣ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ತೆಲುಗು ಮತ್ತು ಉರ್ದು ಭಾಷೆಯ 29ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ತಂದ ಬೆಂಗಳೂರಿನ ಶ್ರೇಷ್ಠ ಅನುವಾದಕಿ ಶ್ರೀಮತಿ ರಾಧಾ ಟೇಕಲ್, 'ಚಿತ್ರದುರ್ಗದ ಅಪರ್ಣಾ' ಎಂದೇ ಖ್ಯಾತರಾದ ನಿವೃತ್ತ ಆಂಗ್ಲ ಉಪನ್ಯಾಸಕಿ ಹಾಗೂ ವಾಗ್ಮಿ ಶ್ರೀಮತಿ ಶೈಲಾ ಜಯಕುಮಾರ್ ಮತ್ತು 4000 ಭಾಮಿನಿ ಷಟ್ಪದಿಗಳ 'ಶೋಭಾ ರಾಮಾಯಣ' ಗ್ರಂಥ ರಚಿಸಿದ ಉಡುಪಿಯ ಛಂದೋಬದ್ಧ ಕಾವ್ಯ ಸಿದ್ಧಹಸ್ತೆ ಶ್ರೀಮತಿ ಶೋಭಾ ಹರಿಪ್ರಸಾದ್ ಅವರು ಈ ಬಾರಿಯ ಪ್ರಶಸ್ತಿಗೆ ಭಾಜನರಾದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪುರಸ್ಕೃತರು, ನುಡಿತೋರಣ ಬಳಗದ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಲೇಖಕಿ ಶೋಭಾ ಹರಿಪ್ರಸಾದ್ ಅವರು ತಾವು ಪ್ರಸ್ತುತ ಬೃಹತ್ 'ಮಹಾಭಾರತ' ಕಾವ್ಯ ರಚನೆಯಲ್ಲಿ ತೊಡಗಿರುವುದಾಗಿ ಪ್ರಕಟಿಸಿದರು.


ಸಾಧಕಿಯರ ಸನ್ಮಾನದ ಬೆನ್ನಲ್ಲೇ ವೇದಿಕೆಯಲ್ಲಿದ್ದ ಗಣ್ಯರು ಒಟ್ಟಾಗಿ ನಾಡಿನ ಆರು ಮೌಲಿಕ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು. ಶ್ರೀಕಾಂತ ಪತ್ರೆಮರ ಅವರ ಕವನ ಸಂಕಲನ 'ವ್ಯಕ್ತ ಪತ್ರೆಗಳು', ಶ್ರೀಮತಿ ಮಧು ವಸ್ತ್ರದ ಅವರ 'ಚೈತ್ರದ ಚಿಗುರು', ಶ್ರೀಮತಿ ವಿಜಯ ನಿರ್ಮಲ ಅವರ 'ಕನ್ನಡದ ಆಧುನಿಕ ಸಾಧಕಿಯರು', ಜಯಶ್ರೀ ರಾಜು ಸಂಪಾದಕತ್ವದ ಕಥಾ ಸಂಕಲನ 'ನುಡಿಕಥಾಮಾಲಾ' ಹಾಗೂ ಕಿರಣ್ ಹಿರಿಸಾವೆ ಅವರ 'ಆ ಐದು ನಿಮಿಷಗಳು' ಮತ್ತು ಅದರದ್ದೇ ಅನುವಾದಿತ ಕೃತಿಯಾದ 'ವೋ ಪಾಂಚ್ ಮಿನಟ್' ಪುಸ್ತಕಗಳು ಅಕ್ಷರ ಜಾತ್ರೆಯ ಸಭಿಕರ ಸಮ್ಮುಖದಲ್ಲಿ ಬಿಡುಗಡೆಗೊಂಡವು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ  ಎ. ಎಸ್. ಎನ್. ಹೆಬ್ಬಾರ್ ಮಾತನಾಡಿ, "ಆಂಗ್ಲ ಭಾಷೆಯ ಪ್ರಾಬಲ್ಯವನ್ನು ಕಡಿಮೆ ಮಾಡಲು ಸಾಧ್ಯವಿರುವ ಕಡೆಗಳಲ್ಲೆಲ್ಲಾ ನಾವು ಕನ್ನಡದಲ್ಲೇ ಮಾತನಾಡಬೇಕು ಮತ್ತು ಬರೆಯಬೇಕು. ತಂದೆ-ತಾಯಿಯರು ಮನೆಯಲ್ಲಿ ಮಕ್ಕಳೊಂದಿಗೆ ಕಡ್ಡಾಯವಾಗಿ ಕನ್ನಡದಲ್ಲೇ ಮಾತನಾಡಿದರೆ ಮಾತ್ರ ಭಾಷೆ ಉಳಿಯಲು ಸಾಧ್ಯ. ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸುವಂತಹ ಸತ್ವಭರಿತ ಸಾಹಿತ್ಯ ಸೃಷ್ಟಿಯಾಗಬೇಕು" ಎಂದರು.


ಇದಕ್ಕೂ ಮುನ್ನ ಕಾರ್ಯಕ್ರಮವು ನಾಡಗೀತೆ ಹಾಗೂ ಶ್ರೀಮತಿ ಪರಿಮಳ ಮಹೇಶ್ ರಾವ್ ಅವರ ಪ್ರಾರ್ಥನಾ ನೃತ್ಯದೊಂದಿಗೆ ವಿದ್ಯುಕ್ತವಾಗಿ ಆರಂಭವಾಯಿತು. ಅಶ್ವಿಜ ಶ್ರೀಧರ್ ಮತ್ತು ಶ್ರೀವಿದ್ಯಾ ತಂಡದವರು ನುಡಿತೋರಣ ಧ್ಯೇಯಗೀತೆಯನ್ನು ಪ್ರಸ್ತುತಪಡಿಸಿದರು. ಛಾಯಾ ಭಾಗ್ಯವತಿ ಕಾರ್ಯಕ್ರಮ ನಿರೂಪಿಸಿದರೆ, ಡಾ. ಸರೋಜಾ ಜಿ.ಎಸ್. ಅವರು ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಬಳಗದ ಸಂಚಾಲಕ ಹಾಗೂ ಕೆನರಾ ಬ್ಯಾಂಕ್‌ನ ನಿವೃತ್ತ ವರಿಷ್ಠ ಪ್ರಬಂಧಕ ಶ್ರೀ ಶ್ರೀಕಾಂತ ಪತ್ರೆಮರ ಆಶಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಗಣ್ಯರಾದ ರಾಸು ವೆಂಕಟೇಶ್, ವೆಂಕಟೇಶ್ ಶೇಷಾದ್ರಿ ಹಾಗೂ ನೀಲಾವರ ಸುರೇಂದ್ರ ಅಡಿಗರು ಉಪಸ್ಥಿತರಿದ್ದರು.


- ವರದಿ: ಮಾಧುರಿ ದೇಶಪಾಂಡೆ, ಬೆಂಗಳೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top