'ದೇವಲೋಕದಲ್ಲಿ
ದೇವರು ಕುಳಿತು ಭೂಲೋಕದಲ್ಲಿರುವ ಜನರಿಗೆ ಕೇವಲ ಅಸ್ತು ಮಾಡುವ
ಕಾರ್ಯನಿರ್ವಹಿಸಿದರೆ, ಆ ದೇವರಿಗೆ ಸೇವಕನಾಗಿ
ಭೂಮಂಡಲದಲ್ಲಿರುವ ಸಕಲ ಜೀವಿಗಳ ರಕ್ಷಣೆಗೆ
ಸದಾ ನಿಂತಿರುವುದು ದೈವ ಎಂಬ ಅಗಾಧ
ಶಕ್ತಿ' ಇದು ತುಳುನಾಡಿನ ಸರ್ವ
ಬಾಂಧವರ ಮನದಾಳದಲ್ಲಿರುವ ಅತಿ ದೊಡ್ಡ ಭಕ್ತಿಯುತ
ನಂಬಿಕೆ.
ತುಳುನಾಡು
ಎಂದ ತಕ್ಷಣ ನೆನಪಿಗೆ ಬರುವುದು ಅಲ್ಲಿನ ಸಾಂಸ್ಕೃತಿಕ ವೈಭವವನ್ನು ಎತ್ತಿ ಹಿಡಿಯುವ ಯಕ್ಷಗಾನ, ಶೌರ್ಯ ಮತ್ತು ಕೃಷಿ ಸಂಸ್ಕೃತಿಯ ಸಂಕೇತವಾದ
ಕಂಬಳ ಅಷ್ಟೇ ಅಲ್ಲದೆ ನಾಗರಾಧನೆ ಹೀಗೆಯೇ ಹಲವು ವಿಶಿಷ್ಟ ಆಚರಣೆಗಳು
ಒಂದು ಕಡೆಯಾದರೆ ಇದಕ್ಕಿಂತಲೂ ಒಂದು ಕೈ ಮೇಲೆ
ಎಂಬಂತೆ ಸಂಸ್ಕೃತಿಯನ್ನ ಎತ್ತಿ ಹಿಡಿಯುವ ಮೂಲಕ ತುಳುವರ ಭಯ
ಭಕ್ತಿಗೆ ಪಾತ್ರ ವಾಗುವ ಆಚರಣೆಯೇ ದೈವರಾಧನೆ. ಇದನ್ನ ತುಳುವಿನಲ್ಲಿ ಭೂತಾರಾಧನೆ ಎಂತಲೂ ಕರೆಯುವುದುಂಟು.
ತುಳುನಾಡಿನ
ರಕ್ಷಣೆಯ ಅವಿಭಾಜ್ಯ ಅಂಗ ಎಂದು ಕರೆಯಲ್ಪಡುವ
ದೈವವು ಅಲ್ಲಿನ ಜನರು ಪುರಾತನ ಕಾಲದಿಂದಲೂ
ಆರಾಧಿಸುತ್ತಾ ಬರುತ್ತಿದ್ದಾರೆ. ತುಳುನಾಡಿನ ಮಣ್ಣನ್ನು ಹಿಂದಿನ ಕಾಲದಲ್ಲಿ ಹಲವು ಅಸುರ ವ್ಯಕ್ತಿಗಳ
ಕೈಗೆ ಬಿಟ್ಟುಕೊಡುವ ಅವಕಾಶವನ್ನು ಮಾಡದೆ ಬಲು ಸುರಕ್ಷಿತ ರೀತಿಯಲ್ಲಿ
ಕಾಪಾಡಿಕೊಂಡು ಬಂದ ವೀರಶಕ್ತಿಗಳನ್ನೇ ಇಂದು
ಅವರು ದೈವವೆಂಬ ನಾಮರೂಪದಲ್ಲಿ ಪೂಜಿಸುತ್ತಿದ್ದಾರೆ. ಉದಾಹರಣೆಗೆ ಇಂದು ತುಳುನಾಡಿನಲ್ಲಿ ದೈವಗಳೆಂದೇ
ಕರೆಯಲ್ಪಡುವ ಕೋಟಿ-ಚೆನ್ನಯರೆಂಬ ಅವಳಿ
ಮಾನವರು ಹಲವು ಶತಮಾನಗಳ ಹಿಂದೆ
ಆ ನಾಡನ್ನು ತಮ್ಮ ಪ್ರಾಣವನ್ನು ಒತ್ತೆ
ಇಟ್ಟು ಯಾರಿಗೂ ಆ ಜಾಗವನ್ನು ಬಿಟ್ಟುಕೊಡದೆ
ಕಾಪಾಡಿಕೊಂಡು ಬಂದಿದ್ದರು.
ಸಾವಿರಕ್ಕೂ
ಹೆಚ್ಚಿನ ದೈವಗಳಿವೆ ಎಂಬುದು ತುಳುನಾಡಿನ ನಂಬಿಕೆಯಾಗಿದ್ದು ಅವುಗಳಲ್ಲಿ ಧರ್ಮದೈವ, ಕಲ್ಲುರ್ಟಿ ಪಂಜುರ್ಲಿ, ರಾಜನ್ ದೈವ, ಗುಳಿಗ, ಬಬ್ಬು
ಸ್ವಾಮಿ, ಪಿಲಿಚಾಮುಂಡಿ, ಧೂಮಾವತಿ ಹೀಗೆ ಬೇರೆ ಬೇರೆ
ಮಾನವ ರೂಪದ ಅಂತೆಯೇ ಪ್ರಾಣಿಗಳ ರೂಪದಲ್ಲಿರುವ ದೈವಗಳನ್ನು ಆರಾಧಿಸುತ್ತಾರೆ.
ದೇವರ
ವಿಗ್ರಹಗಳನ್ನು ಹೇಗೆ ಗುಡಿಯಲ್ಲಿಟ್ಟು ಪೂಜಿಸುತ್ತೇವೆಯೋ
ಅದೇ ರೀತಿಯಲ್ಲಿ ದೈವಗಳನ್ನು ಚಾವಡಿ, ತಾಣ ಹೀಗೆ ವಿಭಿನ್ನ
ಹೆಸರುಗಳಿಂದ ಕರೆಯಲ್ಪಡುವ ಗುಡಿಯಲ್ಲಿ ಅವುಗಳ ಮೂರ್ತಿ ಅಷ್ಟೇ ಅಲ್ಲದೆ ಮುಖವಾಡ, ಖಡ್ಗ, ಗುರಾಣಿ, ದೀಟಿಗೆ ಇಂತಹ ಸಂಬಂಧ ಪಟ್ಟ
ಪರಿಕರಗಳನ್ನು ಇಟ್ಟು ಪೂಜಿಸುತ್ತಾರೆ.
ತುಳುನಾಡಿನ
ಪ್ರತಿ ಕುಟುಂಬದಲ್ಲಿಯೂ ಒಂದು ದೈವಗಳ ಚಾವಡಿ
ಅಂತೂ ಇದ್ದೇ ಇರುತ್ತದೆ. ಅವರ ಪೂರ್ವಜರಿಂದಲೂ ನಂಬಿಕೊಂಡು
ಬಂದಂತಹ ದೈವಗಳನ್ನು ಮುಂದಿನ ಪೀಳಿಗೆಯು ಅವುಗಳನ್ನು ಆರಾಧಿಸಿಕೊಂಡು ಬರುತ್ತಿದ್ದು, ಇನ್ನೂ ಕೆಲವು ಸಂದರ್ಭದಲ್ಲಿ ಕುಟುಂಬದಲ್ಲಿ ಏನಾದರೂ ತೊಡಕುಂಟಾದರೆ ಜ್ಯೋತಿಷ್ಯರ ಬಳಿ ಹೋದ ಸಂದರ್ಭ'ನಿಮ್ಮ ಕುಟುಂಬದ ಜಾಗದಲ್ಲಿ ನೆಲೆಸಿದ ದೈವವನ್ನು ನೀವು ಕೈ ಬಿಟ್ಟಿದ್ದೀರಿ.
ನೀವು ಅದನ್ನೂ ನಿಮ್ಮ ದೈವಗಳ ಜೊತೆಗೆ ಸೇರಿಸಿಕೊಳ್ಳಬೇಕು'ಎಂದಾಗ ಅಂತೆಯೇ ಬೇರೆ ಬೇರೆ ಕಾರಣಗಳ
ಮೂಲಕ ಇನ್ನೂ ಕೆಲವು ದೈವಗಳು ತಾಣದೊಳಗೆ ಪ್ರತಿಷ್ಠಾಪನೆಗೊಂಡು ಬಿಡುತ್ತದೆ.
ಮುಖ್ಯವಾಗಿ
ದೈವಗಳು ತುಳುನಾಡ ಮಣ್ಣನ್ನು ಕಾಯುವ ದೂತರು ಎಂದು ಕರೆಯಲಾಗುತ್ತಿದ್ದು, ತಪ್ಪು ಮಾಡಿದ
ವ್ಯಕ್ತಿಗಳನ್ನ ರಕ್ತಕಾರಿಸಿ ಸಂಹರಿಸುವ ಮೂಲಕ ಎಲ್ಲರನ್ನು ರಕ್ಷಿಸುತ್ತದೆ
ಎಂದು ಅಲ್ಲಿನ ಜನರು ನಂಬುತ್ತಾರೆ.
ವರ್ಷಕ್ಕೊಂದು
ಬಾರಿ ದೀಪಾವಳಿ ಹಬ್ಬದ ನಂತರ ಅಂದರೆ ಕಾರ್ತಿಕ
ಮಾಸದ ಸಂದರ್ಭದಲ್ಲಿ ಎಳನೀರು, ಅವಲಕ್ಕಿ ಅಷ್ಟೇ ಅಲ್ಲದೆ ಬೇರೆ ಬೇರೆ ವಸ್ತುಗಳನ್ನ
ಸಮರ್ಪಿಸಿ 'ಪರ್ವ'ಅಥವಾ 'ತಂಬಿಲ'ಎಂಬ ಆಚರಣೆಯ ಮೂಲಕ
ಆರಾಧಿಸುತ್ತಿದ್ದು ಇನ್ನೂ ವಿಶೇಷವೇನೆಂದರೆ 'ಭೂತನೇಮ ಅಥವಾ ಕೋಲ'ಎನ್ನುವ
ಪೂಜಿಸುವ ಕಾರ್ಯಕ್ರಮವನ್ನು ಆಯಾ ಸಂಬಂಧ ಪಟ್ಟ
ನಿರ್ದಿಷ್ಟ ಜನಾಂಗದ ಗಂಡಸರು ಮುಖಕ್ಕೆ ಬಣ್ಣಗಳನ್ನು ಹಚ್ಚಿ, ಕಂಪನ್ನು ಸೂಸುವ ಮಲ್ಲಿಗೆ ಅಂತೆಯೇ ಇತರ ಹೂಗಳನ್ನು ಮಾಲೆಯಾಗಿ,
ತಲೆಗೆ ಬೆಳ್ಳಿಯ ಕಿರೀಟ ಅಷ್ಟೇ ಅಲ್ಲದೆ ಸೀರೆಯನ್ನು ತೊಟ್ಟುಕೊಂಡು ಮೈ ಮೇಲೆ ಆವೇಶ
ಬಂದು ದೈವಗಳೇ ಸ್ವತಃ ಆ ದೇಹದ ಮೂಲಕ
ಕುಟುಂಬಗಳ ನಡುವಿನಲ್ಲಿ ಏರ್ಪಟ್ಟ ಕಲಹಗಳನ್ನೆಲ್ಲ ಸಂಧಾನ ಮಾಡುತ್ತದೆ ಎಂಬ ನಂಬಿಕೆ ಇದೆ.
ದೇಹಕ್ಕೆ ಧರಿಸುವ ವೇಷಗಳು ಆಯಾ ಸಂಬಂಧಪಟ್ಟ ದೈವಗಳನ್ನು
ಅವಲಂಬಿಸಿರುತ್ತದೆ.
ಈ
ಭೂತರಾಧನೆಯಲ್ಲಿ 'ಪಾಡ್ದನ' ಅನ್ನುವಂಥದ್ದೂ ಅತಿ ಮುಖ್ಯ ಪಾತ್ರ
ವಹಿಸುತ್ತದೆ. ಈ ಪಾಡ್ದನ ಪುರಾತನ
ಕಾಲದಿಂದಲೂ ಜನರು ದೈವಗಳ ಮಹಿಮೆಯನ್ನು
ಹಾಡಿನ ಮೂಲಕ ವಿವರಿಸುವ ಪರಿಕಲ್ಪನೆಯಾಗಿದ್ದು,
ದೈವಗಳ ಕೋಲದ ಸಂದರ್ಭದ ಪೂರ್ವದಲ್ಲಿ
ಇದನ್ನ ಹೇಳುವ ಮುಖಾಂತರ ಪ್ರಾರಂಭಿಸಲಾಗುತ್ತದೆ.
ತುಳುನಾಡು
ಇದು ಪರಶುರಾಮನು ಸೃಷ್ಟಿಸಿರುವ ನಾಡೆಂದು ನಂಬಿಕೆ ಇದ್ದು, ಹಲವು ಸಂಸ್ಕೃತಿಗಳ ಆಚರಣೆಯಲ್ಲಿ
ಶ್ರೀಮಂತವಾಗಿದೆ. ಇಲ್ಲಿ ಕೇವಲ ದೇವ ಸ್ವರೂಪಕ್ಕೆ
ಭಕ್ತಿಯ ಭಾವಗಳನ್ನು ತೋರಿಸದೆ ದೈವವೆಂಬ ವಿಶಿಷ್ಟ ಶಕ್ತಿಯನ್ನು ವಿಶೇಷ ರೂಪದಲ್ಲಿ ಆರಾಧಿಸುತ್ತಾ ಬರುತ್ತಿದ್ದು, ಈ ಪದ್ಧತಿ ಸಂಪ್ರದಾಯಗಳನ್ನು
ಮುಂದಿನ ಪೀಳಿಗೆಗೂ ಶಾಶ್ವತವಾಗಿ ಉಳಿಸಿಕೊಳ್ಳುವ ಸಂಕಲ್ಪವನ್ನು ಪ್ರತಿಯೊಬ್ಬ ತುಳುವ ಜನರು ಮನಸ್ಸಿನಲ್ಲಿ ಇಡಬೇಕಾದ
ಅತಿ ಮುಖ್ಯ ಅಂಶವಾಗಿದೆ.
ಕೆ ಎನ್ ಧನುಷ್, ದಿಡುಪೆ
ಪ್ರಥಮ
ಪತ್ರಿಕೋದ್ಯಮ,
ಎಸ್
ಡಿ ಎಂ ಕಾಲೇಜು ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



