ಆತ್ಮಾವಲೋಕನದಿಂದ ಬದುಕು ಕಟ್ಟಿಕೊಳ್ಳಲು ಕರೆ
ಬೆಂಗಳೂರು, ಏ. 29: ಬಸವನಗುಡಿಯ ಬಿ.ಎಂ.ಎಸ್. ಮಹಿಳಾ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಮಾರಂಭ ‘ವೈಭವ–2026’ನ್ನು ಬುಧವಾರ ಬೆಳಿಗ್ಗೆ 11 ಗಂಟೆಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಬಿ.ಎಂ.ಎಸ್. ಶಿಕ್ಷಣ ದತ್ತಿಯ ದಾನಿ ಟ್ರಸ್ಟಿ ಹಾಗೂ ಸದಸ್ಯ ಕಾರ್ಯದರ್ಶಿ, ಕಾಲೇಜಿನ ಅಧ್ಯಕ್ಷೆ ಡಾ. ಬಿ.ಎಸ್. ರಾಗಿಣಿ ನಾರಾಯಣ್ ಅವರ ಶುಭಾಶಯಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಪ್ರಾಂಶುಪಾಲರಾದ ಡಾ. ರಘುಕುಮಾರ ಎನ್ ಅವರು ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ವಿಡಿಯೋ ರೂಪದಲ್ಲಿ ಮಂಡಿಸಲಾಯಿತು. 13 ವಿದ್ಯಾರ್ಥಿನಿಯರಿಗೆ ದತ್ತಿ ಪ್ರಶಸ್ತಿಗಳನ್ನು ಮುಖ್ಯ ಅತಿಥಿಗಳು ಪ್ರದಾನಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಪ್ರೊ. ಆಶಾದೇವಿ ಎಂ.ಎಸ್. ಅವರು ಮಾತನಾಡಿ, ಅಕ್ಕಮಹಾದೇವಿ, ನೀಲಮ್ಮ, ಆಂಡಾಳ್, ಲಲೇಶ್ವರಿ, ಪ್ರತಿಭಾ ರೈ ಮುಂತಾದ ಸಾಧಕಿಯರ ಉದಾಹರಣೆಗಳನ್ನು ಉಲ್ಲೇಖಿಸಿ, ಹೆಣ್ಣು ಮಕ್ಕಳು ಇತರರ ಪ್ರಭಾವಕ್ಕೆ ಒಳಗಾಗದೇ ಆತ್ಮಾವಲೋಕನದ ಮೂಲಕ ತಮ್ಮ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಚೀನ ಕಾಲದಿಂದಲೇ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಬೋಧಿಸುವ ಪರಂಪರೆ ಇದ್ದುದನ್ನು ಉಲ್ಲೇಖಿಸಿದ ಅವರು, ಗಾಂಧೀಜಿಯವರ ‘ಕೋಮುವಾದದಿಂದ ಹೊರಬರಲು ಮಹಿಳೆಯರ ನಾಯಕತ್ವ ಅಗತ್ಯ’ ಎಂಬ ಮಾತು ಪ್ರಸ್ತುತವಾಗಿಯೇ ಉಳಿದಿದೆ ಎಂದರು. ಹಿಲರಿ ಕ್ಲಿಂಟನ್, ಮೃಣಾಲ್ ಸೇನ್, ಸುಹಾಸಿನಿ ಮುಂತಾದ ಮಹಿಳಾ ಸಾಧಕಿಯರ ಉದಾಹರಣೆಗಳನ್ನು ನೀಡಿ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಶ್ಲಾಘನೀಯ ಎಂದು ಹೇಳಿದರು.
ಮಹಿಳಾ ಸಬಲೀಕರಣವು ಸಮಾಜದ ಸಮಸ್ಯೆಯಲ್ಲ, ಬದಲಾಗಿ ಪುರುಷರ ಮನೋಭಾವದಲ್ಲಿ ಬದಲಾವಣೆ ಅಗತ್ಯವೆಂದು ಅಭಿಪ್ರಾಯಪಟ್ಟ ಅವರು, ಹೊರಗಿನ ವ್ಯಕ್ತಿತ್ವಕ್ಕಿಂತ ಒಳಗಿನ ಮೌಲ್ಯಗಳನ್ನು ಗೌರವಿಸುವ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಝೀ ಸ ರೆ ಗ ಮ ಪ ಖ್ಯಾತಿಯ ಸಂಗೀತಗಾರ ಸುಪ್ರೀತ್ ಫಾಲ್ಗುಣ ಅವರು ಕನ್ನಡ ಗೀತೆಗಳನ್ನು ಹಾಡಿ ವಿದ್ಯಾರ್ಥಿನಿಯರನ್ನು ರಂಜಿಸಿದರು. ವಿದ್ಯಾರ್ಥಿನಿಯರಿಂದ ನೃತ್ಯ, ಪ್ಯಾಷನ್ ಶೋ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶೈಕ್ಷಣಿಕ ಡೀನ್, ಐಕ್ಯೂಎಸಿ ಸಂಚಾಲಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿ ಸಂಘದ ಅಧಿಕಾರಿ ಡಾ. ಪೂಜಾ ಪ್ರದೀಪ್ ಕರಣಿಯ ಅವರು ವಂದನಾರ್ಪಣೆ ಸಲ್ಲಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

