ಇಸ್ಲಾಮಾಬಾದ್ ಸಂಧಾನಕ್ಕೆ ಇರಾನ್ ಬರಲಿಲ್ಲ. ಆದ್ದರಿಂದ ಇಸ್ಲಾಮಾಬಾದ್ ಸಂಧಾನ ಸಭೆ ಮತ್ತೊಮ್ಮೆ ವಿಫಲವಾಯಿತು. ಅಮೇರಿಕಾ ಈಗ ಮತ್ತೊಮ್ಮೆ ಯುದ್ಧವಿರಾಮ ವಿಸ್ತರಿಸಿಕೊಂಡು ಕಾಯುವ ಪರಿಸ್ಥಿತಿ ಬಂದಿದೆ.
ಇರಾನ್ ನಿಲುವು ಏನು ಹಾಗಿದ್ದರೆ? ಓದಿರಿ.
ವಿಶೇಷ ಲೇಖನ: ಗೋಪಾಲಕೃಷ್ಣ ಕುಂಟಿನಿ
ಅಮೇರಿಕಾ,
ನಾವು ತಲೆ ತಗ್ಗಿಸಿಕೊಂಡು ಬರುವವರಲ್ಲ. ನಾವು ನಮ್ಮ ಶಕ್ತಿ ಸಾಮರ್ಥ್ಯ ಹೊತ್ತುಕೊಂಡೇ ಮಾತುಕತೆಗೆ ಬರುವವರು. ಅದರಲ್ಲಿ ಯಾವ ರಿಯಾಯಿತಿಯೂ ಇಲ್ಲ. ನಾವು ರಣರಂಗದಲ್ಲಿ ಗೆದ್ದವರು. ಶರತ್ತುಗಳನ್ನು ಹೇಳಬೇಕಾದವನು ಗೆದ್ದವನು.
ನೀವು ಪ್ರಭುತ್ವ ಬದಲಾವಣೆ ಮಾಡುತ್ತೇವೆ, ಪರಮಾಣು ಶಕ್ತಿಯನ್ನು ಧ್ವಂಸ ಮಾಡುತ್ತೇವೆ. ಸೇನಾಬಲವನ್ನು ಪುಡಿಗೈಯುತ್ತೇವೆ ಎಂದು ಹೇಳಿಕೊಂಡು ಯುದ್ಧಕ್ಕೆ ಬಂದವರು. ನಿಮ್ಮಿಂದ ಏನೆಂದರೆ ಏನೂ ಮಾಡಲಿಕ್ಕಾಗಲಿಲ್ಲ. ನಲುವತ್ತು ದಿನಗಳ ಹೋರಾಟದಲ್ಲಿ ನಾವು ಬರೀ ಬದುಕುಳಿದುದಷ್ಟೇ ಅಲ್ಲ, ಮತ್ತಷ್ಟು ಬಲಗೊಂಡಿದ್ದೇವೆ,ಮತ್ತಷ್ಟು ಒಗ್ಗಟ್ಟಾಗಿದ್ದೇವೆ ಮತ್ತು ವಿರೋಧಿಗಳಿಗೆ ಹೆಚ್ಚೆಚ್ಚು ನೋವುಣ್ಣಿಸುವುದನ್ನು ಮಾಡಿದ್ದೇವೆ.
ನಮ್ಮ ವಿಜಯವು ನಾಲ್ಕು ಸ್ತಂಭಗಳ ಮೇಲೆ ಇದೆ
1. ಹೊರ್ಮುಜ್ ಜಲಸಂಧಿಯ ನಿಯಂತ್ರಣದ ಮೂಲಕ ಜಾಗತಿಕ ಶಕ್ತಿ ಸಂಪತ್ತಿನ ಮೇಲೆ ನಾವು ಸಾಧಿಸಿದ ಹಿಡಿತ.
2. ನಮ್ಮ ಪ್ರಜೆಗಳು ಇರುಳು ಹಗಲೆನ್ನದೆ ದೇಶದ ಬೀದಿಬೀದಿಗಳಲ್ಲಿ ನಿಂತು ಜನಾಂದೋಲನದ ಮೂಲಕ ತಮ್ಮ ದೇಶದ ಸೈನ್ಯಕ್ಕೆ, ಪ್ರಭುತ್ವಕ್ಕೆ ತೋರಿದ ನಿಷ್ಠೆ.
3. ಅನೇಕ ಹಿರಿಯ ನಾಯಕರು, ಅಧಿಕಾರಿಗಳ ಸಾವಿನಲ್ಲೂ ಕೊಂಚವೂ ಅಳುಕದೇ ನಮ್ಮ ಯೋಧರು ತೋರಿಸಿದ ಅಚಲ ಪರಾಕ್ರಮ.
4. ಜಗತ್ತು ನಮಗೆ ಕೊಟ್ಟ ನೈತಿಕ ಬೆಂಬಲ.
ನಿಮ್ಮಲ್ಲೀಗ ಯಾವ ಚೈತನ್ಯವೂ ಇಲ್ಲ. ಅದಕ್ಕೆ ನೀವೀಗ ಮಾತುಕತೆಗೆ ಬನ್ನಿ ಎಂದು ಕರೆಯುತ್ತಿದ್ದೀರಿ, ನಿಮ್ಮ ಕರೆಯ ಹಿಂದೆ ಸದ್ಭಾವನೆ ಏನೂ ಇಲ್ಲ. ನಿಮಗೆ ಮಾತುಕತೆಯ ಅಗತ್ಯ ತುಂಬಾ ಇದೆ, ಅದಕ್ಕೆ ಕರೆಯುತ್ತಿದ್ದೀರಿ.
ಏನು ಮಾತುಕತೆ? ಮಾತುಕತೆ ಅಂದರೆ ತ್ಯಜಿಸುವುದಲ್ಲ, ಸಂಪಾದಿಸುವುದು. ನೀವು ಹೇಳುತ್ತೀರಿ ಎಂದು ನಾವು ಯಾವುದನ್ನೂ ಏನನ್ನೂ ಬಿಟ್ಟುಬಿಡುವವರಲ್ಲ. ಮಾತುಕತೆಯ ಉದ್ದೇಶ ಉಭಯತರೂ ಒಟ್ಟಾಗಿ ಘನಸ್ತಿಕೆಯಿಂದ ಶಾಶ್ವತವಾಗಿ ಯುದ್ಧವನ್ನು ನಿಲುಗಡೆ ಮಾಡುವುದಾಗಿರಬೇಕು. ನಿಮಗೆ ಆ ಉದ್ದೇಶ ಇದೆಯಾ?
ನಮ್ಮ ವಾದದಲ್ಲಿ ಯಾವುದೇ ಜಟಿಲತೆ ಇಲ್ಲ ಮತ್ತು ಅದು ಸ್ಪಷ್ಟವಾಗಿಯೇ ಇದೆ. ನಾವು ಯುದ್ಧ ಆರಂಭಿಸಲಿಲ್ಲ. ನೀವು ಅಮೇರಿಕಾದವರು ಮತ್ತು ಇಸ್ರೇಲಿಗರು ಯುದ್ಧವನ್ನು ನಮ್ಮ ಮೇಲೆ ಹೇರಿದವರು. ಜಿನೆವಾದಲ್ಲಿ ಮಾತುಕತೆ ನಡೆಯುತ್ತಿದ್ದಾಗಲೇ ಇಲ್ಲಿ ನಮ್ಮ ಮೇಲೆ ದಾಳಿ ಮಾಡಿದವರು ನೀವುಗಳು.
ಈಗ ರಣಭೂಮಿಯಲ್ಲಿ ಮೌನ ಇದೆ ಎಂದರೆ ಅದು ಯುದ್ಧ ಮುಗಿಯಿತು ಎಂದೇನಲ್ಲ. ನಮ್ಮ ಶಕ್ತಿ ಸಾಮರ್ಥ್ಯವನ್ನು ಹುಟ್ಟಡಗಿಸಿ ಶಾಂತಿ ಸಾಧಿಸಬೇಕು, ಯುದ್ಧ ನಿಲ್ಲಿಸಬೇಕು ಎಂಬ ನಿಮ್ಮ ಉದ್ದೇಶ ಎಂದೂ ಈಡೇರುವುದಿಲ್ಲ.
ನಾವು ಶಾಶ್ವತವಾಗಿ ಯುದ್ಧ ನಿಲ್ಲಿಸಲು ಸಿದ್ಧ. ಆದರೆ ಶರತ್ತುಗಳು ಅನ್ವಯ. ಹೊರ್ಮುಜ್ ಜಲಸಂಧಿ ಮೇಲೆ ನಮಗೆ ಶಾಶ್ವತ ನಿಯಂತ್ರಣ ಬೇಕು, ಯುದ್ಧದಲ್ಲಾದ ನಷ್ಟವನ್ನು ನೀವು ತುಂಬಿಕೊಡಬೇಕು, ನಮ್ಮ ಮೇಲಿರುವ ಎಲ್ಲಾ ನಿರ್ಬಂಧಗಳನ್ನೂ ತೆರವು ಮಾಡಬೇಕು, ಇರಾನ್ ವಿರುದ್ಧ ಅಂಗೀಕರಿಸಲಾದ ಎಲ್ಲಾ ನಿರ್ಣಯಗಳನ್ನೂ ಹಿಂತೆಗೆಯಬೇಕು ಮತ್ತು ಇನ್ನೆಂದೂ ಯಾವತ್ತೂ ನಮ್ಮ ಮೇಲೆ ದಂಡೆತ್ತಿ ಬರುವುದಿಲ್ಲ ಎಂದು ವಾಗ್ದಾನ ಮಾಡಬೇಕು.
ಇದು ಕೊಡು-ಕೊಳ್ಳುವ ಸಮೀಕರಣ. ಇದಕ್ಕಿಂತ ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ.
ಮಾತುಕತೆಯಲ್ಲಿ ನಮ್ಮ ಕ್ಷಿಪಣಿ ಕಾರ್ಯಯೋಜನೆಗಳು, ನಮ್ಮ ರಕ್ಷಣಾ ತಂತ್ರಗಳು ಮತ್ತು ನಮ್ಮ ನ್ಯೂಕ್ಲಿಯರ್ ಯೋಜನೆಗಳ ಕುರಿತು ಒಂದು ಮಾತೂ ಆಡುವಂತಿಲ್ಲ. ಅದರಿಂದ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅವಷ್ಟೂ ಚರ್ಚಾರಹಿತ ನಮ್ಮ ಆಸ್ತಿ, ಅಸ್ಮಿತೆ ಮತ್ತು ನಮ್ಮ ಸಾರ್ವಭೌಮತೆಯ ವಿಚಾರಗಳು. ಯಾವ ದೇಶವೂ ತನ್ನ ನೆಲ ಮತ್ತು ಗಡಿಯನ್ನು ಸಂಧಾನಕ್ಕೆ ಪಣವೊಡ್ಡುವುದಿಲ್ಲ. ಅಂದಮೇಲೆ ನೀವದನ್ನು ನಮ್ಮಿಂದ ಬಯಸುವಂತಿಲ್ಲ.
ಎರಡೆರಡು ಬಾರಿ ನೀವುಗಳು ನಮ್ಮ ಮೇಲೆ ದಾಳಿ ಮಾಡಿದಿರಿ, ನಮ್ಮನ್ನು ಬೆತ್ತಲೆಗೊಳಿಸಲು ನೋಡಿದಿರಿ, ಕೊನೆಗೂ ನಿಮ್ಮಿಂದ ಅದು ಸಾಧ್ಯವಾಗಲಿಲ್ಲ. ನೀವು ಅದೆಷ್ಟೋ ವರ್ಷಗಳಿಂದ ನಮ್ಮ ಮೇಲೆ ಬೇರೆಬೇರೆ ದಿಗ್ಬಂಧನಗಳನ್ನು ಹಾಕಿ ನಮ್ಮನ್ನು ಮುದ್ದೆ ಮಾಡಿಡಲು ಪ್ರಯತ್ನಿಸಿದಿರಿ, ಆದರೆ ನಾವು ದಿನದಿಂದ ದಿನಕ್ಕೆ ಬಲವತ್ತರವಾಗುತ್ತಾ ಹೋದೆವು.
ಹಾಗಿದ್ದ ಮೇಲೆ ನಾವೇಕೆ ನಿಮಗೆ ಶರಣಾಗಬೇಕು?
ನೀವು ನಮ್ಮನ್ನು ಯುದ್ಧ, ಯುದ್ಧವಿರಾಮ, ಮಾತುಕತೆ, ವಿನಾಯಿತಿ ಮತ್ತೊಮ್ಮೆ ಯುದ್ಧ ಹೀಗೆ ಚಕ್ರವ್ಯೂಹದಲ್ಲಿ ಸಿಲುಕಿಸಲು ನೋಡುತ್ತಿದ್ದೀರಿ. ಇನ್ನೊಮ್ಮೆ ನಿಮ್ಮ ಸುಳಿಗೆ ನಾವು ಬೀಳುವವರಲ್ಲ. ಇನ್ನೊಮ್ಮೆ ನೀವು ನಮಗೆ ಪಾಠ ಹೇಳುವ ಅಗತ್ಯವಿಲ್ಲ, ಇರಾನ್ ಅದನ್ನು ಚೆನ್ನಾಗಿ ಕಲಿತಿದೆ.
ಇನ್ನೊಮ್ಮೆ ಮತ್ತೊಮ್ಮೆ ಹೇಳುತ್ತಿದ್ದೇವೆ, ನಾವು ಯುದ್ಧ ನಿಲ್ಲಿಸಲು ಬದ್ಧರಿದ್ದೇವೆ. ನಿಯತ್ತಿನ ಮಾತುಕತೆಗೆ ನಾವು ಸಿದ್ಧರಿದ್ದೇವೆ.
ಚೆಂಡು ನಿಮ್ಮ ಅಂಗಣದಲ್ಲಿದೆ, ಆದರೆ ಆಟದ ನಿಯಮಗಳನ್ನು ಇರಾನ್ ಬರೆಯುತ್ತದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

