ಮಂಗಳೂರು: ಸಾಧಿಸಲೇ ಬೇಕೆಂಬ ಛಲ ಹೊಂದಿದವರಿಗೆ ಯಾವುದೇ ವಿಷಯ ತಡೆಯೊಡ್ಡಲಾರದು. ನಮ್ಮ ಸರಕಾರಿ ಶಾಲೆಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿವೆ. ಒಂದು ಕಡೆ ಮೂಲಭೂತ ಸೌಕರ್ಯಗಳ ಕೊರತೆಯಾದರೆ ಇನ್ನೊಂದು ಕಡೆ ಗಣನೀಯವಾಗಿ ಇಳಿಯುತ್ತಿರುವ ಮಕ್ಕಳ ದಾಖಲಾತಿ ಸಂಖ್ಯೆ. ಆದರೂ ಕೆಲವೊಂದು ಶಾಲೆಗಳು ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ವಿಷಯವಾಗಿದೆ.
ಸರಕಾರಿ ಪ್ರೌಢಶಾಲೆ ಮುಲ್ಲಕಾಡು ಸತತ ಮೂರನೇ ಬಾರಿ 100% ಪಾಲಿತಾಂಶದೊಂದಿಗೆ ಇಂತಹದೊಂದು ಸಾಧನೆ ಮಾಡಿದೆ. ಈ ಶಾಲೆಯ ಬಹುತೇಕ ಮಕ್ಕಳು ವಲಸೆ ಕಾರ್ಮಿಕರ ಮಕ್ಕಳಾಗಿದ್ದು ಶಾಲಾ ಮುಖ್ಯೋಪಾಧ್ಯಾಯರಾದ ಜಿ. ಉಸ್ಮಾನ್ ಹಾಗೂ ಶಿಕ್ಷಕರುಗಳಾದ ಹಿಲ್ಡಾ, ಧನಲಕ್ಷ್ಮೀ, ಕೃಪಾ, ಪ್ರಶವಂತಿ, ಮೀರಾ ಹಾಗೂ ಚೈತ್ರ ಇವರ ಸಹಕಾರದಿಂದ ಉನ್ನತವಾದುದ್ದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೃತ್ತಿ ಹಾಗೂ ಸೇವಾಭಾವದೊಂದಿಗೆ ಮಾಡುವ ವೃತ್ತಿಯ ನಡುವೆ ಬಹಳ ಅಂತರವಿದೆ. ಸಂಬಳಕ್ಕಾಗಿ ಯಾರು ಬೇಕಾದರೂ ದುಡಿಯಬಹುದು ಆದರೆ ಕರ್ತವ್ಯವೇ ದೇವರು ಎಂಬಂತೆ ಸಮರ್ಪಣಾ ಭಾವದೊಂದಿಗೆ ದುಡಿಯುವವರು ವಿಶೇಷ ಎಂಬಂತೆ ಗೋಚರಿಸುತ್ತಾರೆ.
ವಲಸೆ ಕಾರ್ಮಿಕರ ಮಕ್ಕಳೆಂದರೆ ಅವರದ್ದೇ ಆದ ನೈಜ ಕಾರಣಗಳಿಂದಾಗಿ ಶಿಕ್ಷಣದ ವಿಷಯದಲ್ಲಿ ಸಂಪೂರ್ಣವಾಗಿ ಶಾಲೆಯನ್ನೇ ಅವಲಂಬಿಸಿರುತ್ತಾರೆ. ಅಂತಹ ಮಕ್ಕಳನ್ನು ಶೂನ್ಯದಿಂದ ಸೂರ್ಯನೆತ್ತರಕ್ಕೆ ಏರಿಸುವ ಜವಾಬ್ದಾರಿ ಕೂಡ ಶಾಲೆಯ ಶಿಕ್ಷಕರದ್ದೇ ಆಗಿರುತ್ತದೆ. ಅಂತಹ ಕೆಲಸ ಮುಲ್ಲಕಾಡು ಸರಕಾರಿ ಪ್ರೌಢಶಾಲೆಯ ಶಿಕ್ಷಕರು ಮಾಡಿದ್ದಾರೆ. ಬೆಳ್ಳಗ್ಗೆ 5 ಗಂಟೆಗೆ ಮಕ್ಕಳ ಹೆತ್ತವರಿಗೆ ಕರೆ ಮಾಡಿ ಮಕ್ಕಳನ್ನು ಎಬ್ಬಿಸಿ ಓದಲು ಪ್ರೇರಣೆ ನೀಡುವುದರಿಂದ ಹಿಡಿದು ಪ್ರತಿ ದಿನ ಶಾಲಾ ಅವಧಿಯ ನಂತರ ಸಂಜೆ 4.30 ಯಿಂದ 6.30 ವರೆಗೆ ನಿಂತು ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡುವವರೆಗೆ ಬಹು ತಾಳ್ಮೆಯ ತ್ಯಾಗಪೂರ್ಣ ಕಾಯಕವನ್ನು ಮಾಡಿದ್ದಾರೆ. ಇದಕ್ಕೆ ಅವರಿಗೆ ಹೆಚ್ಚುವರಿ ಸಂಬಳವೇನು ಸಿಗುವುದಿಲ್ಲ ಅದಲ್ಲದೇ ತನ್ನ ಸಂಸಾರಕ್ಕೆ ತನ್ನ ಮಕ್ಕಳಿಗೆ ನೀಡಬೇಕಾದ ಅಮೂಲ್ಯ ಸಮಯವನ್ನು ಈ ಮಕ್ಕಳಿಗೆ ನೀಡುವಲ್ಲಿ ಬೇಸರಿಸದೆ ಮಕ್ಕಳ ಭವಿಷ್ಯ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಇವರು ಅಭಿನಂದನೆಗೆ ಅರ್ಹರು. ಶಿಕ್ಷಕರೊಂದಿಗೆ ಸಹಕರಿಸಿದ ಹೆತ್ತವರು, ದಾನಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಮಕ್ಕಳಿಗೆ ಸಂಜೆ ಫಲಹಾರದ ವ್ಯವಸ್ಥೆ ಮಾಡಿಕೊಟ್ಟು ಸಾಧನೆಯಲ್ಲಿ ಸಹಭಾಗಿಗಳಾಗಿದ್ದಾರೆ. 10 ಮಕ್ಕಳು ಉನ್ನತ ಶ್ರೇಣಿ, 14 ಮಕ್ಕಳು ಪ್ರಥಮ ಶ್ರೇಣಿ ಹಾಗೂ 4 ಮಕ್ಕಳು ದ್ವಿತೀಯ ಶ್ರೇಣಿ ಪಡೆಯುವುದರೊಂದಿಗೆ ತಮ್ಮ ಜವಾಬ್ದಾರಿಯನ್ನು ಅರಿತು ಶ್ರಮವಹಿಸಿ ಶಾಲೆಗೆ ಹೆಸರು, ಕೀರ್ತಿಯನ್ನು ತಂದುಕೊಟ್ಟಿದ್ದಾರೆ.
ದ.ಕ ಮತ್ತು ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಪ್ರತಿ ಬಾರಿಯೂ ಪ್ರಥಮ, ದ್ವಿತೀಯ ಸ್ಥಾನದಲ್ಲಿಯೇ ಗೋಚರಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯೇ ಆಗಿದೆ. ಬಹುತೇಕ ಸರಕಾರಿ ಶಾಲಾ ಕಾಲೇಜುಗಳಲ್ಲಿ ವಲಸೆ ಕಾರ್ಮಿಕರ ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳು ವ್ಯಾಸಂಗ ಮಾಡುತ್ತಿದ್ದರೂ ಶಿಕ್ಷಕರ ಪ್ರೀತಿ ಸಹಕಾರ ಸಹಯೋಗದಿಂದ ಶೈಕ್ಷಣಿಕವಾಗಿ ಸಾಧನೆಯನ್ನು ಮಾಡುತ್ತಾ ಉಭಯ ಜಿಲ್ಲೆಗಳಿಗೆ ಹೆಸರನ್ನು ತಂದು ಕೊಡುತ್ತಿದ್ದಾರೆ. ಈ ಭಾರಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಎಲ್ಲಾ ಮಕ್ಕಳಿಗೂ ಮತ್ತು ಅವರನ್ನು ತಿದ್ದಿ ತೀಡಿ ಸಾಧಕರನ್ನಾಗಿ ಮಾಡಿದ ಶಿಕ್ಷಕರಿಗೂ ಹಾಗೂ ಮಕ್ಕಳ ಭವಿಷ್ಯಕ್ಕೆ ಉನ್ನತವಾದುದ್ದನ್ನು ಬಯಸಿ ಹಗಲಿರುಳು ಶ್ರಮಿಸುತ್ತಿರುವ ಹೆತ್ತವರಿಗೂ ಗೌರವ ಪೂರ್ಣ ಅಭಿನಂದನೆಗಳು.
- ಗೀತಾ ಲಕ್ಷ್ಮೀಶ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


