ಬೆಂಗಳೂರು: ವಿದ್ಯಾರಣ್ಯಪುರದ ರಂಗಚರಿತ ಕಲಾ ಚಾವಡಿ ವತಿಯಿಂದ ಏಪ್ರಿಲ್ 06ರಿಂದ 26ರವರೆಗೆ 7ನೇ ವರ್ಷದ ‘ರಂಗ ವಸಂತ–2026’ ಬೇಸಿಗೆ ಶಿಬಿರವನ್ನು ಸಂಸಿಧ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಮಕ್ಕಳಿಗಾಗಿ ವಿಶೇಷವಾಗಿ ಯಕ್ಷಗಾನ ಮತ್ತು ರಂಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು 30 ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.
ಖ್ಯಾತ ಯಕ್ಷಗಾನ ಕಲಾವಿದ ಹಾಗೂ ಯಕ್ಷ ಕಲಾ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕರಾದ ಶ್ರೀ ಕೃಷ್ಣಮೂರ್ತಿ ತುಂಗಾ ಅವರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲಾಯಿತು. ಜೊತೆಗೆ ಶ್ರೀ ನಾಗರಾಜ್ ಶಿವಷಿಂಪಿ ಅವರ ನಿರ್ದೇಶನದಲ್ಲಿ ನಾಟಕ ತರಬೇತಿಯೂ ನೀಡಲಾಯಿತು. ಶಿಬಿರದಲ್ಲಿ ಯಕ್ಷಗಾನ ಮತ್ತು ನಾಟಕದ ಜೊತೆಗೆ ಹಾಡು, ಭಾಷಣ ಕಲೆ, ಮೂಕಾಭಿನಯ, ಮುಖವಾಡ ತಯಾರಿಕೆ ಮುಂತಾದ ವೈವಿಧ್ಯಮಯ ಚಟುವಟಿಕೆಗಳನ್ನು ಪರಿಚಯಿಸಲಾಯಿತು. ಅಲ್ಲದೇ ವಿವಿಧ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿತ್ತು.
ಏಪ್ರಿಲ್ 26ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಂದ ‘ಬಬ್ರುವಾಹನ ಕಾಳಗ’ ಯಕ್ಷಗಾನ ಪ್ರಸಂಗ ಹಾಗೂ ‘ಮಂಥರೆ ಮೋಕ್ಷ’ ನಾಟಕ ಪ್ರದರ್ಶನಗೊಂಡು ಸಭಿಕರಿಂದ ಭಾರಿ ಮೆಚ್ಚುಗೆ ಪಡೆದವು. ಕೇವಲ 17 ದಿನಗಳಲ್ಲಿ ಯಕ್ಷಗಾನವನ್ನು ಕಲಿತು ವೇದಿಕೆಯಲ್ಲಿ ಪ್ರದರ್ಶಿಸಿದ ಸಾಧನೆ, ಬೆಂಗಳೂರು ಉತ್ತರ ಭಾಗದಲ್ಲಿ ಪ್ರಥಮವಾಗಿದ್ದು, ಶಿಬಿರದ ವಿಶೇಷ ಸಾಧನೆಯಾಗಿ ಗುರುತಿಸಲ್ಪಟ್ಟಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹವ್ಯಾಸಿ ರಂಗಭೂಮಿ ಕಲಾವಿದೆ ಹಾಗೂ ಕಿರುತೆರೆ-ಬೆಳ್ಳಿತೆರೆಯ ಜನಪ್ರಿಯ ನಟಿ ಶ್ರೀಮತಿ ವಿದ್ಯಾಮೂರ್ತಿ, ಶ್ರೀ ಕೃಷ್ಣಮೂರ್ತಿ ತುಂಗಾ, ಶ್ರೀಮತಿ ಗೀತಾಬಾಲಿ ಮತ್ತು ಶ್ರೀ ನಾಗರಾಜ್ ಶಿವಷಿಂಪಿ ಉಪಸ್ಥಿತರಿದ್ದರು. ಸಮಾರೋಪದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

