ನೂತನ ಗರುಡ ದೇವಾಲಯ ಲೋಕಾರ್ಪಣೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವತ್ತ ಹೆಸರೂರು ಗ್ರಾಮ

Upayuktha
0



ಭಾರತದ ಧಾರ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ವಿಷ್ಣುವಿನ ವಾಹನವಾದ ಗರುಡ ದೇವನಿಗಾಗಿ ದೇವಾಲಯ ಕಟ್ಟಿದ್ದು ತುಂಬಾ ಅಪರೂಪ. ಸಾಮಾನ್ಯವಾಗಿ ವಿಷ್ಣುವಿನ ದೇವಾಲಯದಲ್ಲಿ ಗರುಡ ಉಪಾಸನೆಯ ಭಾಗವಾಗಿ ಕಾಣಿಸಿಕೊಂಡಿದ್ದಾನೆ. ಕರ್ನಾಟಕದಲ್ಲಿ ಕೋಲಾರ ನಗರ, ಮುಳಬಾಗಿಲಿನ ಕೋಲಾದೇವಿ (ಗ್ರಾಮ) ಬಿಟ್ಟರೆ, ಗದಗ ಜಿಲ್ಲೆ ಮುಂಡರಗಿ ತಾಲ್ಲೂಕು ಹೆಸರೂರು ಗ್ರಾಮದಲ್ಲಿದೆ. ಇಲ್ಲಿನ ಗರುಡ ದೇಗುಲ ವಿಶಿಷ್ಟ್ ಇತಿಹಾಸ ಮತ್ತು ಧಾರ್ಮಿಕ ಆಚರಣೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಕರ್ನಾಟಕದ ಪವಿತ್ರ ಭೂಮಿಯಲ್ಲಿ ಮಹತ್ವದ ಪರಂಪರೆ ಉಳಿಸಿಕೊಂಡ ಬೆರಳೆಣಿಕೆಯ ಕ್ಷೇತ್ರದಲ್ಲಿ ಹೆಸರೂರ ಗ್ರಾಮವು ಭಕ್ತಿಯ ಪ್ರತೀಕವಾಗಿ ಹೊಸ ಜ್ಯೋತಿಯನ್ನು ಬೆಳಗಿಸಲು ಸಜ್ಜಾಗಿದೆ.


ಹೆಸರೂರು ಬಾಂಬೆ ಸರ್ಕಾರ್, ಹೈದರಾಬಾದ ನಿಜಾಮನ ಆಡಳಿತ ಮತ್ತು ಮದ್ರಾಸ್ ಪ್ರೆಸಿಡೆನ್ಸ್‌ಗಳ ಸಂಗಮದ ಸ್ಥಳದಲ್ಲಿತ್ತು. ಮೈಸೂರು ಸಂಸ್ಥಾನ ಇಲ್ಲಿಂದ ಕೇವಲ 32.ಕಿ.ಮಿ. ದೂರದಲ್ಲಿತ್ತು. ಬ್ರಿಟೀಷ ಆಡಳಿತದ ಸಮಯದಲ್ಲಿ, ಮುಂಬಯಿ– ಮದ್ರಾಸ್ ಹೆದ್ದಾರಿಯಲ್ಲಿನ, ತುಂಗಭದ್ರ ನದಿ ದಂಡೆಯ ಪುಟ್ಟ ಹಳ್ಳಿ. ಆಗ ತುಂಗ ಭದ್ರಾ ನದಿಗೆ ಕಲ್ಲಿನ ಸೇತುವೆ ನಿರ್ಮಾಣವಾಗಿತ್ತು. ಈ ನದಿ ದಂಡೆಯಲ್ಲಿ ರಸ್ತೆ ಕರ ವಸೂಲಿಗಾಗಿ ಬ್ರಿಟಿಷ್ ಅಧಿಕಾರಿಗಳಿಗೆ ಬಂಗ್ಲೆ ನಿರ್ಮಾಣವಾಗಿದ್ದು, 5 ಕುದುರೆ ಮನೆಗಳು ಪಕ್ಕದಲ್ಲಿವೆ.


ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ತಕ್ಷಣ ಮೊದಲು ಜನರ ಹಸಿವು ನೀಗಿಸಬೇಕಿತ್ತು. ಅದಕ್ಕಾಗಿ ಅಂದಿನ ಸರ್ಕಾರ ಹಸಿರು ಕ್ರಾಂತಿಗೆ ನಾಂದಿ ಹಾಡಿತು. 1953 ರಲ್ಲಿ ಕೊಪ್ಪಳ ಜಿಲ್ಲೆಯ ಮುನಿರಾಬಾದನಲ್ಲಿ ನಿರ್ಮಾಣವಾದ ತುಂಗಭದ್ರಾ ಹಿನ್ನಿರಿನಲ್ಲಿ, ಹೆಸರೂರು ಗ್ರಾಮ ಮುಳುಗಡೆಯಾಗಿ, ಊರನ್ನು ಸ್ಥಳಾಂತರಿಸಲಾಯಿತು. ಅಲ್ಲಿಂದ ಊರು ಸ್ಥಳಾಂತರಗೊಂಡರೂ, ಗರುಡ ದೇವರ ಪೂಜೆ ಮತ್ತು ಜಾತ್ರೆ ಹಳೆ ಊರಿನಲ್ಲಿಯೇ ಇದುವರೆಗೂ ನಡೆದುಕೊಂಡು ಬಂದಿತ್ತು. ಈಗ ಸ್ಥಳಾಂತರಗೊಂಡ ಊರಿನಲ್ಲಿ ಗರುಡ ದೇವರ ನೂತನ ದೇವಾಲಯ ನಿರ್ಮಾಣವಾಗಿದೆ.


ಗರುಡ ದೇವರ ಜಾತ್ರೆ: ಶ್ರಾವಣದ ಕಡೆ ಸೋಮುವಾರದ ಹಿಂದಿನ ಶುಕ್ರವಾರ ದೇವರಿಗೆ ಕಂಕಣ ಕಟ್ಟುವ ಮೂಲಕ ಧಾರ್ಮಿಕ ಕಾರ್ಯಗಳು ಆರಂಭವಾಗುತಿದ್ದು, ಮುಂದಿನ ಬುಧವಾರದ ವರೆಗೆ ಊರಿನಲ್ಲಿ ಕುಟ್ಟುವುದು, ಬೀಸುವುದು, ಕೃಷಿ ಚಟುವಟಿಕೆಗಳನ್ನು ಮಾಡುವಂತಿಲ್ಲ. ಶನಿವಾರ ಕಟ್ಟಿಗೆ ತರುವುದು, ಭಾನುವಾರ ಬೆಳಿಗ್ಗೆ ಅಗ್ನಿ, ಸಂಜೆ ಹುಚ್ಚಯ್ಯನ ಮೆರವಣಿಗೆ, ಸೋಮುವಾರ ರಥೋತ್ಸವ, ಮಂಗಳವಾರ ಮುಳ್ಳಿನ ಮರವೊಂದನ್ನು ಪೂಜಾರಪ್ಪ ಬೇರು ಸಮೇತ ಕೀಳುವುದರ ಮೂಲಕ ಧಾರ್ಮಿಕ ಕಾರ್ಯಗಳಿಗೆ ತೆರೆಬೀಳುತ್ತದೆ. 



ಗರುಡ ದೇವ 

ವೈಷ್ಣವ ಪಂತದ ದೇವರಾದ ವಿಷ್ಣುವಿನ ವಾಹನ ಗರುಡ. ಗರುಡ ಶಕ್ತಿ, ವೇಗ ಮತ್ತು ಭಕ್ತಿಯ ಪ್ರತೀಕ. ಪುರಾಣಗಳ ಪ್ರಕಾರ, ಅವನು ನಾಗಗಳಿಗೆ ಶತ್ರುವಾಗಿದ್ದು, ಧರ್ಮದ ರಕ್ಷಕನಾಗಿ ಪರಿಗಣಸಲ್ಪಟ್ಟಿದ್ದಾನೆ. ಗರುಡನಿಗೆ ವಿಶೇಷವಾಗಿ ವೈಷ್ಣವ ಪಂತದ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ಹೆಚ್ಚಿನ ಸ್ಥಲದಲ್ಲಿ ಗರುಡನನ್ನು ಕೇವಲ ವಿಷ್ಣುವಿನ ವಾಹನವಾಗಿ ಮಾತ್ರ ಪೂಜೆಗೊಳ್ಳುತ್ತದೆ. ಅಪರೂಪದ ಕೆಲವು ಕಡೆ ಮಾತ್ರ ಸ್ವತಂತ್ರವಾಗಿ ಗುಡಿಗಳನ್ನು ನಿರ್ಮಿಸಿ ಪೂಜಿಸಲಾಗುತ್ತಿದೆ. ಅಂತಹ ಅಪರೂಪದ ಸ್ಥಳದಲ್ಲಿ ಹೆಸರೂರ ಗ್ರಾಮವು ಒಂದು.


ಇತಿಹಾಸದೊಂದಿಗೆ ಗರುಡ ದೇವ: 

ಈ ಊರಿನ ದೇವಾಲಯ ಕೇವಲ ಭಕ್ತಿಯ ಸಂಕೇತವಲ್ಲ, ಗ್ರಾಮದ ಐತಿಹಾಸಿಕ ನೆನಪುಗಳಿಗೂ ಜೀವ ತುಂಬುತ್ತದೆ. ಹಳೆಯ ಊರಿನಲ್ಲಿ ಅಪಾರ ಧನ ಕನಕ ಹೊಂದಿದ ವಿಷ್ಣುವಿನ ದೇವಸ್ಥಾನದ ಎದುರು ದೊಡ್ಡದಾದ ಗರುಡ ಕಂಬ ಇತ್ತಂತೆ, ಅದರ ಮೇಲೆ ಗರುಡ ದೇವರ ಮೂರ್ತಿಯನ್ನು ಸ್ಥಾಪಿಸಲಾಗಿತ್ತಂತೆ. ಗರುಡಗಂಬ ಈಗಲೂ ಇದೆ. ಹೈದರಾಲಿಯ ಸೈನ್ಯ ನುಗ್ಗಿ ಬರುವ ಮುನ್ಸೂಚನೆ ಮೊದಲೆ ತಿಳಿದ ಊರಿನ ಹಿರಿಯರು, ಬಂಗಾರ, ಬೆಳ್ಳಿಯ ಆಭರಣಗಳ ಜೊತೆ ವಿಷ್ಣುವಿನ ಮೂರ್ತಿಯನ್ನು ನೆಲದೊಳಗೆ ಮುಚ್ಚಿಟ್ಟರಂತೆ. ಆಗ ಹೈದರಾಲಿಯ ಸೈನ್ಯ ಊರಿಗೆ ನುಗ್ಗಿ ಬಂದಾಗ ಏನೂ ಸಿಗದೆ, ಕಂಬದ ಮೇಲಿದ್ದ ಮೂರ್ತಿಯನ್ನು ಕೆಡವಿ ಹೋದರಂತೆ. ಮುಂದೆ ಗರುಡ ದೇವರಿಗೆ ದೇವಾಲಯ ಕಟ್ಟಿಸಿ, ಗರುಡ ದೇವರನ್ನು ಗರ್ಭಗುಡಿಯಲ್ಲಿ ಸ್ಥಾಪನೆ ಮಾಡಿದರೆಂದು ಹಿರಿಯರು ಹೇಳಿದ ಮಾತನ್ನು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ. ಆದರೆ ಇಂದು ವಿಷ್ಣುವಿನ ದೇವಸ್ಥಾನದ ಯಾವ ಕುರುಹೂ ಊರಿನಲ್ಲಿ ಇಲ್ಲಾ. ಇಲ್ಲಿಗೆ ಸಮೀಪದ ಬಯಲು ಜಾಗೆಯಲ್ಲಿ ಹೈದರಾಲಿಯ ಸೈನ್ಯ ಬೀಡುಬಿಟ್ಟ ಸ್ಥಳವೀಗ “ಹೈದರ ನಗರ”( ಕೊಪ್ಪಳ ತಾಲ್ಲೂಕಿನ) ಗ್ರಾಮವಾಗಿದೆ.


ನೂತನ ದೇಗುಲದ ಲೋಕಾರ್ಪಣೆಯ ಅಂಗವಾಗಿ 7 ದಿನಗಳ ಕಾಲ, ಧಾರ್ಮಿಕ ಕಾರ್ಯಗಳು ಭಕ್ತಿಯಿಂದ ಜರುಗಲಿವೆ. ಎಪ್ರಿಲ್ 25 ರಂದು ಮೂರ್ತಿ ಪ್ರತಿಷ್ಠಾಪನೆ ಮತ್ತು 26 ರಂದು ಸಾಮೂಹಿಕ ವಿವಾಹಗಳ ಶುಭ ಸಂದರ್ಭದಲ್ಲಿ, ದೇಗುಲ ಭಕ್ತರ ದರುಶನಕ್ಕೆ ತೆರೆದುಕೊಳ್ಳಲಿದೆ.


ಈಗ ಹೆಸರೂರ ಗ್ರಾಮ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತದೆ. ಮನೆ ಮನಗಳಲ್ಲಿ ಭಕ್ತಿ ಭಾವದ ಧೂಪ ಹರಡಿದೆ. ಊರಿಗೆ ಊರೆ ಮದುಮಗನಂತೆ ಸಿದ್ಧಗೊಂಡು ಭಕ್ತಿ, ಸಂಸ್ಕೃತಿ ಮತ್ತು ಏಕತೆಯ ಸೊಬಗನ್ನು ಮೆರೆಯುತ್ತದೆ.


- ರವಿ ಸೋ. ದೇವರಡ್ಡಿ 

 ವಿಜ್ಞಾನ ಶಿಕ್ಷಕರು 

 ಸರಕಾರಿ ಪ್ರೌಢಶಾಲೆ ಹೆಸರೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top