ಸಮಿತಿ ಅಧ್ಯಕ್ಷರಾಗಿ ಅಲೋಕ್ ಕುಮಾರ್ ನಿಯುಕ್ತಿ
ಉಡುಪಿ: ಇದೇ ಪ್ರಥಮವೆಂಬಂತೆ ಉಡುಪಿಯ ಪೇಜಾವರ ಮಠದ ಯತಿಯೊಬ್ಬರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ಬಾರಿಯ ಚಾತುರ್ಮಾಸ್ಯ ವ್ರತವನ್ನು ನಡೆಸುತ್ತಿದ್ದಾರೆ.
ಅಯೋಧ್ಯಾ ರಾಮಮಂದಿರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ 39 ನೇ ಚಾತುರ್ಮಾಸ್ಯ ವ್ರತವನ್ನು ನವದೆಹಲಿಯ ತಮ್ಮ ಶಾಖಾ ಮಠದಲ್ಲಿ ನಡೆಸಲು ಸಂಕಲ್ಪಿಸಿದ್ದಾರೆ.
ಈ ನಿಮಿತ್ತ ಪೂರ್ವಭಾವಿ ಸಮಾಲೋಚನಾ ಸಭೆಯು ಗುರುವಾರ ಸಂಜೆ ನವದೆಹಲಿ ವಸಂತ್ ಕುಂಜ್ ನಲ್ಲಿರುವ ಪೇಜಾವರ ಮಠದಲ್ಲಿ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಿತು. ಸುಪ್ರೀ ಕೋರ್ಟ್ ನ್ಯಾಯವಾದಿಗಳೂ, ವಿಶ್ವಹಿಂದು ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶ್ರೀ ಅಲೋಕ್ ಕುಮಾರ್ ಜೀ, ಹಾಗೂ ಭಾರತೀಯ ಜನತಾಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿರುವ ತರುಣ್ ಛುಗ್ ಅವರು ಉಪಸ್ಥಿತರಿದ್ದು, ದಶಕಗಳ ನಂತರ ಇಡೀ ದೇಶದಲ್ಲಿ ಸನಾತನ ಧರ್ಮ ಸಂರಕ್ಷಣೆಯ ಜಾಗೃತಿ ಪ್ರಜ್ಞೆ ಹೊಸ ನವಚೈತನ್ಯವನ್ನು ಪಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಇದಕ್ಕಾಗಿ ಸುದೀರ್ಘ ಹಾದಿಯನ್ನು ಬಹಳ ಶ್ರಮ, ತ್ಯಾಗ ಹೋರಾಟಗಳಿಂದ ಸವೆಸಿದ ಸಾರ್ಥಕತೆ ಇದೆ.
ವಿಶ್ವಹಿಂದು ಪರಿಷತ್ತಿನ ಸ್ಥಾಪನೆಯಿಂದ ಮೊದಲ್ಗೊಂಡು ಈ ತನಕವೂ ಈ ಎಲ್ಲ ಹೆಜ್ಜೆಗಳಲ್ಲಿ ಉಡುಪಿಯ ಪೇಜಾವರ ಮಠದ ಅದರಲ್ಲೂ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಉತ್ಸಾಹಪೂರ್ಣ ಮಾರ್ಗದರ್ಶನ ಮತ್ತು ನೇತೃತ್ವ ಅವಿನಾಭಾವವಾಗಿದೆ. ವರ್ತಮಾನದಲ್ಲಿ ಕಾಣುತ್ತಿರುವ ಹಿಂದು ಪರ ಉತ್ಸಾಹಗಳಿಗೆ ಬಹಳ ದೊಡ್ಡ ವಿರೋಧಿ ಶಕ್ತಿಗಳ ಸವಾಲುಗಳೂ ಇವೆ. ಆದರೆ ಅವೆಲ್ಲವನ್ನೂ ಹಿಮ್ಮೆಟ್ಟಿಸಿ ಈ ಉತ್ಸಾಹವನ್ನು ಕಾಯ್ದುಕೊಂಡು ಬಹಳಷ್ಟನ್ನು ಸಾಧಿಸಬೇಕಾಗಿದೆ. ಅದಕ್ಕಾಗಿ ಪೇಜಾವರ ಮಠದ ಶ್ರೀಗಳೂ ಸೇರಿದಂತೆ ದೇಶದ ಸಂತಸಮಾಜದ ಪೂರ್ಣ ತಪಸ್ಸು ಮತ್ತು ಮಾರ್ಗದರ್ಶನ ಅತ್ಯಂತ ಅವಶ್ಯಕವಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಶ್ರೀ ಸ್ವಾಮೀಜಿಯವರು ನವದೆಹಲಿಲ್ಲಿ ಎರಡು ತಿಂಗಳ ಪೂರ್ಣ ಲಭ್ಯರಿದ್ದು ಚಾತುರ್ಮಾಸ್ಯ ವ್ರತದಂಥಹ ಪವಿತ್ರ ವ್ರತವನ್ನು ಸಂಕಲ್ಪಿಸಿರುವುದು ಅತ್ಯಂತ ಸಕಾಲಿಕವಾಗಿದೆ. ಇಡೀ ದೆಹಲಿಗೆ ಮಾತ್ರವಲ್ಲದೇ ಸಮಗ್ರ ಭಾರತ ದೇಶಕ್ಕೆ ಇದರ ಸಂಪೂರ್ಣ ಪ್ರಯೋಜನ ಲಭಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ವಿಶ್ವಾಸದ ಮಾತುಗಳನ್ನಾಡಿ ತಮ್ಮ ಪೂರ್ಣ ಸಹಕಾರದ ಭರವಸೆ ನೀಡಿದರು.
ಈ ವ್ರತವನ್ನು ಸಮಗ್ರ ಹಿಂದು ಸಮಾಜದ ಒಳಿತನ್ನು ಗಮನದಲ್ಲಿಟ್ಟುಕೊಂಡು ನಡೆಸುವ ಬಗ್ಗೆ ಚಿಂತಿಸಲಾಗಿದ್ದು ಅದರ ವಿವರಗಳನ್ನು ನವದೆಹಲಿ ಕೇಂದ್ರೀಯ ಸಂಸ್ಕೃತ ವಿವಿ ಉಪಕುಲಪತಿಗಳೂ ಸಮಿತಿ ಪ್ರಧಾನ ಕಾರ್ಯದರ್ಶಿಗಳೂ ಆಗಿರುವ ಡಾ ಶ್ರೀನಿವಾಸ ಆಚಾರ್ಯ ವರಖೇಡಿಯವರು ಪ್ರಸ್ತಾಪಿಸಿ ಸ್ವಾಗತಿಸಿದರು.
ನವದೆಹಲಿ ಪೇಜಾವರ ಮಠದ ವ್ಯವಸ್ಥಾಪಕರೂ ಶ್ರೀ ವೇದವ್ಯಾಸ ಗುರುಕುಲದ ಪ್ರಾಚಾರ್ಯರೂ ಆಗಿರುವ ಡಾ ವಿಠೋಬಾಚಾರ್ಯರು ಇದಂಪ್ರಥಮವೆಂಬಂತೆ ನಡೆಯುತ್ತಿರುವ ಶ್ರೀಗಳ ಈ ಚಾತುರ್ಮಾಸ್ಯ ವ್ರತವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಎಲ್ಲರ ಸಹಕಾರವನ್ನು ವಿನಂತಿಸಿದರು.
ನಿವೃತ್ತ ಐಎಎಸ್ ಅಧಿಕಾರಿಗೂ ಪೇಜಾವರ ಮಠದ ವಿಶೇಷ ಸೇವಾಸಕ್ತರೂ ಆಗಿರುವ ರಾಕೇಶ್ ಗೌರ್ ಈ ತನಕ ನಡೆಸಿದ ಚಟುವಟಿಕೆಗಳ ವಿವರ ನೀಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಅನೇಕರು ಸಲಹೆ ಸೂಚನೆಗಳನ್ನು ನೀಡಿದರು.
ಸಂದೇಶ ನೀಡಿದ ಪೇಜಾವರ ಶ್ರೀಗಳು, ಪೇಜಾವರ ಮಠ ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅನುಗ್ರಹಪೂರ್ಣ ಮಾರ್ಗದರ್ಶನದಲ್ಲಿ ಯಾವತ್ತೂ ಹಿಂದು ಸಮಾಜದ ಶ್ರೇಯಸ್ಸಿಗಾಗಿ ಚಿಂತಿಸುವುದರ ಜೊತೆಗೆ ಭಕ್ತರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿಕೊಂಡು ಬಂದಿದೆ. ಈ ಚಾತುರ್ಮಾಸ್ಯವೂ ಅದರ ಭಾಗವಾಗಬೇಕು. ಕೇವಲ ಸ್ವಾಮೀಜಿಯವರು ಬಂದರು; ವ್ರತ ನಡೆಸಿದರು ಅನ್ನೋದಕ್ಕೆ ಮಾತ್ರಸೀಮಿತವಾಗದೆ ಇದರ ಒಂದಲ್ಲ ಒಂದು ಸಣ್ಣ ಪ್ರಯೋಜನವಾದರೂ ಈ ಭಾಗದ ಭಕ್ತರಿಗೆ ಆಸ್ತಿಕ ಸಮಾಜಕ್ಕೆ ದೆಹಲಿಯ ಜನತೆಗೆ ಸಿಗುವಂತಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಧರ್ಮ ದೇಶಕ್ಕೆ ಒದಗಿರುವ ಸಮಸ್ಯೆಗಳ ಬಗೆಗೂ ಪ್ರಾಮಾಣಿಕ ಚಿಂತನೆ ಮಾಡೋಣ ಎಂದರು.
ಸರ್ವಾನುಮತದಿಂದ ಶ್ರೀಗಳ ಈ 39 ನೇ ಚಾತುರ್ಮಾಸ್ಯ ವ್ರತದ ಸಂಯೋಜನ ಸಮಿತಿಯ ಅಧ್ಯಕ್ಷರಾಗಿ ಶ್ರೀ ಅಲೋಕ್ ಕುಮಾರ್ ಅವರನ್ನು ನಿಯುಕ್ತಿಗೊಳಿಸಿ ಘೋಷಿಸಲಾಯಿತು.
ಅನೇಕ ಗಣ್ಯರು, ನೂರಾರು ಭಕ್ತರು ಭಾಗವಹಿಸಿದ್ದರು. ಭೂಪೇಂದ್ರ ಸಿಂಗ್ ಅವರ ಭಜನ್ ನೊಂದಿಗೆ ಆರಂಭಗೊಂಡು ಸುಮನ್ ಆಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ವಿದ್ವಾನ್ ವೀರನಾರಾಯಣ ಆಚಾರ್ಯ ಪಾಂಡುರಂಗಿಯವರು ವಂದನಾರ್ಪಣೆಗೈದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

