ಇಂದು ತೀರ್ಥಹಳ್ಳಿಯ ಗಾಯತ್ರಿ ಭವನದಲ್ಲಿ ನಡೆದ ಮದುವೆ ಒಂದು ಉತ್ತಮ ಮಾದರಿ. ಹುಡುಗಿ ಕಡೆಯವರು ಕೊಣಂದೂರು, ಹುಡುಗನ ಕಡೆಯವರು ಬಸುರಿಕಟ್ಟೆ. ನಿನ್ನೆ ಸಂಜೆ ತಿಂಡಿ, ರಾತ್ರಿ ಸುಮಾರು 300–400 ಜನರಿಗೆ ಊಟ; ಇಂದು ಬೆಳಿಗ್ಗೆ ತಿಂಡಿ, ಮಧ್ಯಾಹ್ನಕ್ಕೆ 800ಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ. ಮಧ್ಯಾಹ್ನ ಬಾಯಾರಿಕೆಗೆ ಶರಬತ್ತು.
ಈ ಎಲ್ಲದಲ್ಲೂ ಗಮನ ಸೆಳೆದ ಸಂಗತಿ — ಎಲ್ಲೆಡೆ ಪ್ಲಾಸ್ಟಿಕ್ ಅಥವಾ ಪೇಪರ್ ಕಪ್‌ಗಳ ಸುಳಿವಿಲ್ಲ. ಸ್ಟೀಲ್ ಲೋಟಗಳಲ್ಲಿ ನೀರು, ಸಿಹಿ ಕೊಡಲು ಹಾಳೆ ದೊಣ್ಣೆ ಮತ್ತು ಮರದ ಚಮಚ, ಅಪ್ಪೆ–ಸಾರಿಗೆ ಲೋಟ, ಸಿಹಿ ಬಾಕ್ಸ್ ಬದಲು ಪೇಪರ್ ಬಾಕ್ಸ್‌ನಲ್ಲಿ ಡ್ರೈಫ್ರೂಟ್ಸ್. ಹೆಂಗಸರಿಗೆ ಗಿಫ್ಟ್ ಆಗಿ ದೇವರ ಪೀಠವನ್ನು ಅಂದವಾದ ಬಟ್ಟೆ ಕವರ್‌ನಲ್ಲಿ ಪ್ಯಾಕ್ ಮಾಡಲಾಗಿದೆ. ಫಲತಾಂಬೂಲಕ್ಕೂ ಬಟ್ಟೆ ಚೀಲಗಳ ಬಳಕೆ. ಇದೇ ರೀತಿಯಲ್ಲಿ ಎಂಗೇಜ್ಮೆಂಟ್ ಕಾರ್ಯಕ್ರಮವೂ ನಡೆಸಿದ್ದ ವಿದ್ಯಾನಂದ ಜೋಯ್ಸ್ ಕುಟುಂಬ, “ಮನಸ್ಸಿದ್ದರೆ ಸಾಧ್ಯವಿದೆ” ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ.
ಇದರಲ್ಲಿ ಆಯೋಜಕರ ಜೊತೆಗೆ ಅಡುಗೆ ನಿರ್ವಾಹಕರ ಪಾತ್ರವೂ ಮಹತ್ವದ್ದು. “ಇದು ಹೇಳೋದು ಸುಲಭ, ತೊಳೆಯೋರು ಯಾರು?” ಎಂಬ ಪ್ರಶ್ನೆಗಳು ಸಾಮಾನ್ಯ. ಆದರೆ ಪರ್ಯಾಯ ಮಾರ್ಗಗಳನ್ನು ಕಂಡು ಹಿಡಿದು, ಉತ್ಪಾದನೆ ಕಡಿಮೆ ಮಾಡುವ ದಿಕ್ಕಿನಲ್ಲಿ ನಡೆದ ಈ ಪ್ರಯತ್ನ ಶ್ಲಾಘನೀಯ. ಇಂದಿನ ಕಾಲದಲ್ಲಿ ಮನೆಗೆ 10 ಜನರು ಬಂದರೂ ಪೇಪರ್ ಕಪ್–ಪ್ಲೇಟ್‌ಗಳನ್ನು ಬಳಸುವುದು ಸಾಮಾನ್ಯವಾಗಿರುವಾಗ, ಇಂತಹ ಪ್ರಯೋಗ ದೊಡ್ಡ ಸಂದೇಶ ನೀಡುತ್ತದೆ.
ವಿದ್ಯಾನಂದ ಜೋಯ್ಸ್ ಕುಟುಂಬ ಹಾಗೂ ಅಡುಗೆ ನಿರ್ವಾಹಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಎಲ್ಲರಿಗೂ ಮಾದರಿಯಾಗಲಿ.
ಆದರೆ, ಕಲ್ಯಾಣ ಮಂಟಪದೊಳಗೆ, ವಿಶೇಷವಾಗಿ ಊಟದ ಹಾಲ್‌ಗೆ ಚಪ್ಪಲಿ ಹಾಕಿಕೊಂಡು ಹೋಗುವ ಅವಕಾಶ ಇರುವುದು ಕೆಲವರಿಗೆ ಅಸಮಾಧಾನ ತಂದಿದೆ. ಈ ಬಗ್ಗೆ ಮಂಟಪದ ವ್ಯವಸ್ಥಾಪಕರು ಗಮನ ಹರಿಸಿದರೆ ಉತ್ತಮ.
ಇಂತಹ ಸಣ್ಣ–ಸಣ್ಣ ಬದಲಾವಣೆಗಳು ನಿಧಾನವಾಗಿ ಸಮಾಜದಲ್ಲಿ ಗಾಳಿ ಬೀಸಿದರೆ, ಮುಂದಿನ ಪೀಳಿಗೆಗೆ ನಾವು ಕೊಡುವ ದೊಡ್ಡ ಆಸ್ತಿ ಅದಾಗುತ್ತದೆ. ಸಮಾಜದ ಒಳಿತಿಗಾಗಿ ಸದಾ ಆಶಿಸೋಣ.
- ಗಣಿತವನ ಶಿವಶಂಕರ್
ಪ್ಲಾಸ್ಟಿಕ್ ಮಿತಗೊಳಿಸಿ ಆಂದೋಲನದ ಪರವಾಗಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


