ಭಾರತೀಯ ಸಂಸ್ಕೃತಿಗೆ ಜಾನಪದವೇ ಅಡಿಪಾಯ: ಡಾ. ಪೆರ್ಲ

Upayuktha
0


ಕಲಬುರಗಿ: ಭಾರತೀಯ ಸಂಸ್ಕೃತಿ ವಿಶ್ವ ಮಟ್ಟದಲ್ಲಿ ಮೇರು ಸ್ಥಾನದಲ್ಲಿ ನಿಲ್ಲಲು ಅದಕ್ಕೆ ಮೂಲ ಅಡಿಪಾಯ ಜಾನಪದ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಡಾ. ಸದಾನಂದ ಪೆರ್ಲ ಹೇಳಿದರು.


ನಗರದ ಕನ್ನಡ ಭವನದಲ್ಲಿ ಪ್ರಿಯದರ್ಶಿನಿ ಸಂಗೀತ, ಸಾಂಸ್ಕೃತಿಕ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಗ್ರಾಮೀಣ ಜಾನಪದ ಕಲಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.


ಅನಕ್ಷರಸ್ಥ ಗ್ರಾಮೀಣ ಜನರಿಂದ ಹುಟ್ಟಿಕೊಂಡ ಜನಪದ ಸಾಹಿತ್ಯ ಮತ್ತು ಕಲಾ ಪ್ರಕಾರಗಳು ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದು ಭಾರತೀಯ ಸಂಸ್ಕೃತಿಗೆ ಗಟ್ಟಿ ಅಡಿಪಾಯವಾಗಿ ನಿಂತಿದೆ. ಅದರ ತಳಹದಿಯಲ್ಲಿ ಜೀವನ ಮೌಲ್ಯ ಮತ್ತು ಆದರ್ಶಗಳನ್ನು ಚಿರಕಾಲ ಉಳಿಯುವಂತೆ ಮಾಡಿದೆ. ಆಧುನಿಕ ಯುಗದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಬೆಳವಣಿಗೆಯ ನಾಗಾಲೋಟದಲ್ಲಿ ಮಾನವೀಯ ಮೌಲ್ಯಗಳು ಮತ್ತು ಮನುಷ್ಯ ಸಂಬಂಧಗಳು ದೂರಾಗುತ್ತಿವೆ. ಈ ಸಂದರ್ಭದಲ್ಲಿ ಜನಪದ ಕಲೆ, ಸಾಹಿತ್ಯ, ಸಂಗೀತ ವೈದ್ಯ ಪದ್ಧತಿ ಹೀಗೆ ಜನಪದದ ನಾನಾ ಪ್ರಕಾರಗಳನ್ನು ಮುಂದಿನ ಜನಮಾನಸಕ್ಕೆ ಅದರಲ್ಲೂ ಮುಖ್ಯವಾಗಿ ಯುವಜನತೆಗೆ ಮುಟ್ಟಿಸುವ ದೊಡ್ಡ ಕೆಲಸವನ್ನು ಸ್ವಯಂಸೇವಾ ಸಂಸ್ಥೆಗಳು ಕೈಗೊಳ್ಳಬೇಕಾದ ಅಗತ್ಯವಿದೆ ಎಂದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್. ಧನ್ನಿ ಅವರು ಅಧ್ಯಕ್ಷತೆ ವಹಿಸಿ, ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದರ ಪಾತ್ರ ಹಿರಿದು, ವಿಜ್ಞಾನ ಮತ್ತು ತಾಂತ್ರಿಕ ಯುಗದಲ್ಲಿ ಜನಪದ ಕಲೆಗಳು ನಶಿಸಿ ಹೋಗುತ್ತಿವೆ. ಅವುಗಳ ಉಳುವಿಗಾಗಿ ಕಲಾವಿದರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.


ಸಂಸ್ಥೆಯ ಮುಖಂಡ ಶಿವಶಂಕರ ಬಿಳಾಲಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಅಖಿಲ ಕರ್ನಾಟಕ ಸರಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾಧ್ಯಕ್ಷೆ ರೇಣುಕಾ ಡಾಂಗೆ, ಪ್ರಿಯದರ್ಶಿನಿ ಸಂಗೀತ ಸಾಂಸ್ಕೃತಿಕ ಸೇವಾ ಸಂಸ್ಥೆ ಅಧ್ಯಕ್ಷ ರವಿಕುಮಾರ ಪಿ. ಕಾರ್ಯದರ್ಶಿ ರೇಖಾ ಎಸ್.ಬಿ. ನಿವೃತ್ತ ಶಿಕ್ಷಕರಾದ ಶಿವಮೂರ್ತಿ ಹಡಗಿಲಕರ, ಹೆಚ್.ಎಸ್. ಬರಗಾಲಿ, ಉಪನ್ಯಾಸಕ ಕಾಶಿನಾಥ ಮುಖರ್ಜಿ, ಕಲಾವಿದೆ ಅಕ್ಕಮಹಾದೇವಿ ಅಡಕಿ, ಮಲ್ಲಿಕಾರ್ಜುನ ದೊಡ್ಡಿ, ಶಿವಕುಮಾರ ಕಟ್ಟಿ ಸೇರಿದಂತೆ ಇತರ ಗಣ್ಯರು ಪಾಲ್ಗೊಂಡಿದ್ದರು.


ನಂತರ ಖ್ಯಾತ ಕಲಾವಿದರಾದ ಶಿವಶಂಕರ ಬಿರಾದಾರ, ರೇವಣಸಿದ್ದಪ್ಪ ಹೊಸಮನಿ, ಹುಲಿಕಂಠರಾಯ ಯಡ್ರಾಮಿ, ಶಿವಮೂರ್ತಿ ಬಲಿ ಚಕ್ರವರ್ತಿ, ಸಿದ್ದಣ್ಣ ಗುಡ್ಡ, ಭೀಮರಾಯ ಗೌಡ ಭಾಸ್ಥಿ, ಶಶಿರೇಖಾ, ಚಂದಮ್ಮ ಪಿ. ಅವರು ಜಾನಪದ, ಭಕ್ತಿಗೀತೆ, ಜೋಗುಳ ಪದ, ಸೋಬಾನ ಪದ ಹಾಗೂ ಸುಗಮ ಸಂಗೀತ ಹಾಡುಗಳನ್ನು ಹಾಡಿದರು. ಜನಪದ ನಾದಕ್ಕೆ ಪ್ರೇಕ್ಷಕರು ತಲೆದೂಗಿ ಸಂತಸಪಟ್ಟರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top