ಬಾಗಲಕೋಟೆ: ಸಡಗರ ಸಂಭ್ರಮದೊಂದಿಗೆ ಗೌರಿಶಂಕರ ರಥೋತ್ಸವ ಆಚರಣೆ

Upayuktha
0


ಬಾಗಲಕೋಟೆ: ಜಿಲ್ಲೆಯ ಬಾಗಲಕೊಟೆ ತಾಲೂಕಿನ ಕಿರಸೂರ ಗ್ರಾಮದ ಶ್ರೀ ಗೌರಿಶಂಕರ  ಮಹಾಸ್ವಾಮಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವವು ಕಿರಸೂರನಲ್ಲಿ ಶನಿವಾರ ಜರುಗಿತು.


ಮುಂಜಾನೆ 6 ಗಂಟೆಗೆ ಗೌರಿಶಂಕರ ಕೃರ್ತೃ ಗದ್ದಿಗೆಗೆ ಮಹಾರುದ್ರಾಭಿಷೇಕ, ಸಕಲವಾದ್ಯ ಮೇಳದೊಂದಿಗೆ ಉತ್ತಮ ಮೂಲಿನ ಪಾಲಿಕೆ ಕಳಸದ ಮೆರವಣಿಗೆಯು ಸುಮಂಗಲಿಯರಿ೦ದ ಕುಂಭಮೇಳ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿದವು.


ಪುಣ್ಯ ಸ್ಮರಣೆಯ ನಿಮಿತ್ಯ ಶ್ರೀಮಠದ ಲಿಂ. ಗೌರಿಶಂಕರ ಮಹಾಸ್ವಾಮಿಗಳು ತಮ್ಮ ಜೀವಂತ ಅವಧಿಯಲ್ಲಿ ಪ್ರಾರಂಭಗೊಂಡಿರುವ ಜಪಯಜ್ಷ ಕಾರ್ಯಕ್ರಮವನ್ನು ಅವರ ಶಿಷ್ಯ ಬಳಗದಿಂದ ಐದು ದಿನಗಳ ಪರ್ಯಾಂತ ಸಾಗಿ ಬಂದ  ಜಪಯಜ್ಷ ಕಾರ್ಯಕ್ರಮವನ್ನು ಮುತ್ತತ್ತಿಯ ಗುರುಲಿಂಗ ಶಿವಾಚಾರ್ಯರು ಹಾಗೂ ಗುಳೇದಗುಡ್ಡದ ಮರಡಿಮಠದ ಅಭಿನವ ಕಾಡ ಸಿದ್ದೇಶ್ವರ ಶ್ರೀಗಳು ಮುಂಜಾನೆ 10 ಘಂಟೆಗೆ ಮಂಗಲಗೊಳಿಸಿದ್ದರು. 


ಸಾಯಂಕಾಲ ಜರುಗಿದ ಮಹಾರಥೋತ್ಸವದಲ್ಲಿ ಮನ್ನಿಕಟ್ಟಿ ಗ್ರಾಮದ ಸದ್ಭಕ್ತರಿಂದ ತೇರಿನ ಕಳಸ, ಮುಗಳೊಳ್ಳಿ ಗ್ರಾಮದ ಸದ್ಭಕ್ತರಿಂದ ತೇರಿನ ಹಗ್ಗ, ಬದಾಮಿ ತಾಲೂಕಿನ ಸುಳ್ಳ ಮತ್ತು ಮುದೇನೂರ ಗ್ರಾಮದ ಸದ್ಭಕ್ತರಿಂದ ನಂದಿಕೋಲು ಹಾಗೂ ತೇರಿನ ರುದ್ರಾಕ್ಷಿಮಾಲೆ, ಭಗವತಿ ಗ್ರಾಮದ ಸದ್ಭಕ್ತರಿಂದ ಬಾಲೆಕಂದ ಮೆರವಣಿಗೆಯ ಮೂಲಕ ತಲುಪಿದವು.


ಇದಾದ ನಂತರ, ಗುಳ್ಳೇದಗುಡ್ಡ ಗ್ರಾಮದ ದಾನಿಗಳಾದ ಸದಾಶಿವಯ್ಯ ಎಸ್. ವಸ್ತ್ರದ ಅವರು ನಿರ್ಮಿಸಿ ಕೊಟ್ಟಿರುವ ಭವ್ಯವಾದ ರಥವನ್ನು ಮುತ್ತತ್ತಿ ಗುರುಲಿಂಗ ಶಿವಾಚಾರ್ಯರು ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಬಸವನ ಬಾಗೇವಾಡಿ ತಾಲೂಕಿನ ಇಟಗಿ ಗ್ರಾಮದ ಭೂಕೈಲಾಸ ಮೇಲ್ಗದ್ದುಗೆ ಹಿರೇಮಠ ಸಂಸ್ಥಾನದ ಡಾ. ಗುರು ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ದೂತರಗಾವ ಗ್ರಾಮದ ಪ್ರವಚನಪಟು ಶಿವಕುಮಾರ ಶಾಸ್ತ್ರಿಗಳು, ಹಿರೇಮಠ ಸಂಗೀತ ಕಲಾವಿದ ನೆಲೋಗಿಯ ಸಿದ್ದರಾಮ ಗವಾಯಿಗಳು, ಜೇವರ್ಗಿಯ ತಬಲಾ ಕಲಾವಿದ ಬಸವರಾಜ ಮೇಳಿ, ಗೌರಿಶಂಕರ ಮಠದ ಅರ್ಚಕ ಮನ್ನಿಕಟ್ಟಿಯ ಸಂಗಯ್ಯ ಹಿರೇಮಠ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಹಗ್ಗ ಎಳೆಯುವ ಮೂಲಕ ಸಡಗರ-ಸಂಭ್ರಮದಿಂದ ರಥೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದರು.


ರಥೋತ್ಸವದಲ್ಲಿ ಕಿರಸೂರ ಸೇರಿದಂತೆ ಭಗವತಿ, ಹಳ್ಳೂರ, ಬೇರಮಟ್ಟಿ, ಬೇವೂರ, ತಿಮ್ಮಾಪೂರ, ಹುನಗುಂದ, ಇಲ್ಲಕಲ್, ಮನ್ನಿಕಟ್ಟಿ, ಹೊನ್ನಾಕಟ್ಟಿ, ಶಿರೂರ, ಬಾಗಲಕೋಟೆ, ಕಮತಗಿ, ಮುಗಳೊಳ್ಳಿ, ಬದಾಮಿ ತಾಲೂಕಿನ ಸುಳ್ಳ ಮತ್ತು ಮುದೇನೂರ, ರಾಮದುರ್ಗ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಭಾಗವಹಿಸಿದರು.


Post a Comment

0 Comments
Post a Comment (0)
To Top