- ಒಂದು ಕೆಮ್ಮು, ನೂರು ಆತಂಕ: ಕ್ಷಯ ಮುಕ್ತ ನಾಳೆಗಾಗಿ ಎಚ್ಚೆತ್ತುಕೊಳ್ಳೋಣ
- ಸದ್ದಿಲ್ಲದೆ ಕಾಡುವ ‘ಟಿಬಿ’ ಮಹಾಮಾರಿ: ಅರಿವು, ಚಿಕಿತ್ಸೆಯೊಂದೇ ಜೀವನಕ್ಕೆ ದಾರ
‘ಆರೋಗ್ಯವೇ ಭಾಗ್ಯ ಎಂಬ ಮಾತು ಹಳೆಯದಾದರೂ, ಒಂದು ಸಣ್ಣ ಅಸಡ್ಡೆ ಇಡೀ ಕುಟುಂಬದ ನೆಮ್ಮದಿಯನ್ನೇ ಕಸಿದುಕೊಳ್ಳಬಲ್ಲದು ಎಂಬುದು ಅಷ್ಟೇ ಸತ್ಯ. ಜಗತ್ತನ್ನೇ ನಡುಗಿಸಿದ ಎಷ್ಟೋ ಸಾಂಕ್ರಾಮಿಕ ರೋಗಗಳ ಮಧ್ಯೆ, ಶತಮಾನಗಳಿಂದ ಮನುಕುಲವನ್ನು ಸದ್ದಿಲ್ಲದೆ ಕಾಡುತ್ತಿರುವ ರೋಗವೆಂದರೆ ‘ಕ್ಷಯ’ ಅಥವಾ ಟಿಬಿ (Tuberculosis). ಒಂದು ಕಾಲದಲ್ಲಿ ಗುಣಪಡಿಸಲಾಗದ ಮಹಾಮಾರಿ ಎಂದು ಹಣೆಪಟ್ಟಿ ಹೊತ್ತಿದ್ದ ಈ ಕಾಯಿಲೆ, ಇಂದು ವೈದ್ಯಕೀಯ ಲೋಕದ ಮುನ್ನಡೆಯಿಂದ ಸಂಪೂರ್ಣ ಗುಣಪಡಿಸಬಹುದಾದ ಹಂತಕ್ಕೆ ತಲುಪಿದೆ.
ಇಂದಿಗೂ ಸಮಾಜದಲ್ಲಿರುವ ಮುಜುಗರ, ರೋಗದ ಬಗೆಗಿನ ಅಜ್ಞಾನ ಮತ್ತು ಚಿಕಿತ್ಸೆಯನ್ನು ಅರ್ಧ ಹಾದಿಯಲ್ಲೇ ಬಿಡುವ ನಿರ್ಲಕ್ಷ್ಯದಿಂದಾಗಿ ಅನೇಕ ಜೀವಗಳು ಬಲಿಯಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕ್ಷಯ ರೋಗಕ್ಕೆ ವಾರ್ಷಿಕವಾಗಿ 1.5 ಮಿಲಿಯನ್ ಗಳಿಗಿಂತಲೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ.
ಮಾ. 24ರ ‘ವಿಶ್ವ ಕ್ಷಯರೋಗ ದಿನ’ ಕೇವಲ ಒಂದು ದಿನದ ಆಚರಣೆಯಲ್ಲ; ಇದು ಪ್ರತಿಯೊಬ್ಬರಿಗೂ ಆರೋಗ್ಯದ ಅರಿವು ಮೂಡಿಸುವ, ರೋಗಿಗಳಿಗೆ ಧೈರ್ಯ ತುಂಬುವ ಮತ್ತು ‘ಕ್ಷಯ ಮುಕ್ತ ಭಾರತ’ದ ಸಂಕಲ್ಪವನ್ನು ಬಲಪಡಿಸುವ ಸಮಯ. ಹಸಿವು, ಪೌಷ್ಟಿಕಾಂಶದ ಕೊರತೆ ಮತ್ತು ಮಾಲಿನ್ಯದ ನಡುವೆ ನಲುಗುತ್ತಿರುವ ಶ್ವಾಸಕೋಶಗಳಿಗೆ ಹೊಸ ಚೇತನ ನೀಡಲು ನಾವೆಲ್ಲರೂ ಕೈಜೋಡಿಸಬೇಕಿದೆ.
ಆಚರಣೆ ಯಾಕೆ?
ಪ್ರತಿ ವರ್ಷ ಮಾ. 24ರಂದು ಜಗತ್ತಿನಾದ್ಯಂತ ವಿಶ್ವ ಕ್ಷಯರೋಗ ದಿನವನ್ನು ಆಚರಿಸಲಾಗುತ್ತದೆ. 1882ರಲ್ಲಿ ಡಾ| ರಾಬರ್ಟ್ ಕೋಚ್ ಅವರು ಕ್ಷಯರೋಗಕ್ಕೆ ಕಾರಣವಾಗುವ 'ಮೈಕೋಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೋಸಿಸ್' ಎಂಬ ಬ್ಯಾಕ್ಟೀರಿಯಾವನ್ನು ಪತ್ತೆಹಚ್ಚಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.
ಈ ಬಾರಿಯ ಥೀಮ್
‘ಹೌದು! ನಾವು ಕ್ಷಯರೋಗವನ್ನು ಕೊನೆಗಾಣಿಸಬಹುದು: ದೇಶಗಳ ಮುಂದಾಳುತ್ವದಲ್ಲಿ, ಜನರ ಶಕ್ತಿಯೊಂದಿಗೆ’ (Yes! We Can End TB: Led by countries, powered by people). 2026ರ ವಿಶ್ವ ಕ್ಷಯರೋಗ ದಿನದ ಥೀಮ್. ಇದು ಕ್ಷಯರೋಗವನ್ನು ಹೋಗಲಾಡಿಸಲು ಕೇವಲ ಸರಕಾರ ಮಾತ್ರವಲ್ಲದೆ, ಸಮುದಾಯದ ಸಹಭಾಗಿತ್ವವೂ ಮುಖ್ಯ ಎಂಬುದನ್ನು ಸಾರುತ್ತದೆ.
ಕ್ಷಯರೋಗದ ಲಕ್ಷಣಗಳು
ಕ್ಷಯರೋಗವು ಕೇವಲ ಶ್ವಾಸಕೋಶಕ್ಕೆ ಮಾತ್ರ ಸೀಮಿತವಲ್ಲ, ಇದು ದೇಹದ ಯಾವುದೇ ಭಾಗಕ್ಕೂ ಬರಬಹುದು. ಮುಖ್ಯವಾಗಿ ಇತರ ಭಾಗದ ಟಿಬಿ ಎಂದರೆ; ಕುತ್ತಿಗೆಯಲ್ಲಿ ಗಡ್ಡೆಗಳು (ದುಗ್ಧರಸ ಗ್ರಂಥಿಗಳ ಟಿಬಿ), ಬೆನ್ನುಮೂಳೆ ನೋವು (ಎಲುಬಿನ ಟಿಬಿ), ತಲೆನೋವು ಮತ್ತು ವಾಂತಿ (ಮೆದುಳಿನ ಟಿಬಿ).
ಶ್ವಾಸಕೋಶದ ಟಿಬಿ: 2 ವಾರಗಳಿಗಿಂತ ಹೆಚ್ಚು ಕಾಲ ನಿರಂತರ ಕೆಮ್ಮು, ಕಫದಲ್ಲಿ ರಕ್ತ ಬರುವುದು, ಎದೆ ನೋವು. ಸಾಮಾನ್ಯ ಲಕ್ಷಣಗಳು: ಸಂಜೆ ವೇಳೆ ಬರುವ ಜ್ವರ, ಹಸಿವು ಇಲ್ಲದಿರುವುದು, ತೂಕದಲ್ಲಿ ಭಾರೀ ಇಳಿಕೆ, ರಾತ್ರಿ ವೇಳೆ ವಿಪರೀತ ಬೆವರುವಿಕೆ, ವಿಪರೀತ ಸುಸ್ತು.
ರೋಗ ಹರಡಲು ಕಾರಣವಾಗುವ ಅಂಶ
ಗಾಳಿಯ ಮೂಲಕ ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಸೂಕ್ಷ್ಮ ಹನಿಗಳ ಮೂಲಕ ಹರಡುತ್ತದೆ. ಅಪೌಷ್ಟಿಕತೆ, ಮಧುಮೇಹ, ಎಚ್.ಐ.ವಿ. ಸೋಂಕಿತರಲ್ಲಿ ಈ ರೋಗ ಬೇಗ ಆವರಿಸುತ್ತದೆ. ಧೂಮಪಾನ ಮತ್ತು ಮದ್ಯಪಾನ ಶ್ವಾಸಕೋಶದ ಸಾಮರ್ಥ್ಯವನ್ನು ಕುಗ್ಗಿಸಿ ಟಿಬಿ ಹರಡಲು ದಾರಿ ಮಾಡಿಕೊಡುತ್ತದೆ. ಜನನಿಬಿಡ ಪ್ರದೇಶ, ಕಿರಿದಾದ ಅಥವಾ ಗಾಳಿ-ಬೆಳಕಿಲ್ಲದ ಮನೆಗಳಲ್ಲಿ ವಾಸಿಸುವುದು.
ಕ್ಷಯರೋಗದ ವಿಧಗಳು
ಸುಪ್ತ ಕ್ಷಯ
ಬ್ಯಾಕ್ಟೀರಿಯಾ ದೇಹದಲ್ಲಿರುತ್ತದೆ ಆದರೆ ರೋಗ ಲಕ್ಷಣಗಳಿರುವುದಿಲ್ಲ. ಇದು ಇತರರಿಗೆ ಹರಡುವುದಿಲ್ಲ, ಆದರೆ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಸಕ್ರಿಯವಾಗಬಹುದು.
ಸಕ್ರಿಯ ಕ್ಷಯ
ಬ್ಯಾಕ್ಟೀರಿಯಾ ವೇಗವಾಗಿ ವೃದ್ಧಿಯಾಗಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಸಾಂಕ್ರಾಮಿಕ.
ಔಷಧ ನಿರೋಧಕ ಕ್ಷಯ
ರೋಗಿಯು ಚಿಕಿತ್ಸೆಯನ್ನು ಅರ್ಧಕ್ಕೆ ಬಿಟ್ಟರೆ ಅಥವಾ ಸರಿಯಾಗಿ ಔಷಧ ತೆಗೆದುಕೊಳ್ಳದಿದ್ದರೆ ಬ್ಯಾಕ್ಟೀರಿಯಾ ಪ್ರಬಲವಾಗಿ ಸಾಮಾನ್ಯ ಔಷಧಗಳಿಗೆ ಮಣಿಯುವುದಿಲ್ಲ.
-----------
ರಾಜ್ಯದ ಅಂಕಿಅಂಶಗಳು
ವರ್ಷ ರಾಜ್ಯಾದ್ಯಂತ ಪತ್ತೆಯಾದ ಅಂದಾಜು ಪ್ರಕರಣ
2021 72,000
2022 80,000
2023 82,000
2024 78,000 (ಸುಧಾರಿತ ಚಿಕಿತ್ಸೆಯಿಂದ ಇಳಿಕೆ)
2025 75,000
ಕರಾವಳಿ ಜಿಲ್ಲೆಗಳ ಮಾಹಿತಿ
ದಕ್ಷಿಣ ಕನ್ನಡದಲ್ಲಿ ವಾರ್ಷಿಕ ಸರಾಸರಿ 3,500ರಿಂದ 4,000 ಪ್ರಕರಣಗಳು ವರದಿಯಾಗುತ್ತಿವೆ. ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವಇಲ್ಲಿ ಹೆಚ್ಚಿದೆ.
ಉಡುಪಿಯಲ್ಲಿ ವಾರ್ಷಿಕ ಸರಾಸರಿ 1,500ರಿಂದ 2,000 ಪ್ರಕರಣಗಳು ಪತ್ತೆಯಾಗುತ್ತಿವೆ.
-------------------------
ತಡೆಗಟ್ಟುವ, ಮುನ್ನೆಚ್ಚರಿಕೆ ಕ್ರಮ
* ಮಕ್ಕಳಿಗೆ ಹುಟ್ಟಿದ ಕೂಡಲೇ ಬಿಸಿಜಿ ಲಸಿಕೆ ಹಾಕಿಸುವುದು ಅತ್ಯಗತ್ಯ.
* ಪ್ರೋಟೀನ್ ಯುಕ್ತ ಆಹಾರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿ.
*ಕ್ಷಯರೋಗ ಪತ್ತೆಯಾದ ಅನಂತರ ವೈದ್ಯರು ಸೂಚಿಸಿದ 6ರಿಂದ 9 ತಿಂಗಳ ಚಿಕಿತ್ಸೆಯನ್ನು ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸಬಾರದು.
*ಮನೆಯಲ್ಲಿ ಓರ್ವರಿಗೆ ಟಿಬಿ ಇದ್ದರೆ ಉಳಿದವರೆಲ್ಲರೂ ತಪಾಸಣೆ ಮಾಡಿಸಿಕೊಳ್ಳಬೇಕು.
*ಸರಕಾರದ ‘ನಿಕೋತ್ಸವ’ ಯೋಜನೆಯಡಿ ರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ಮಾಸಿಕ 500 ರೂ. ಸಹಾಯಧನ ನೀಡಲಾಗುತ್ತದೆ.
*ಕ್ಷಯರೋಗವು ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಮುಚ್ಚುಮರೆ ಮಾಡದೆ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಜೀವ ಉಳಿಸಲು ಇರುವ ಏಕೈಕ ದಾರಿ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


