ಕೆನರಾ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ; “ಮಹಿಳಾ ಮಾರ್ಕೆಟ್” ವಿನೂತನ ಕಾರ್ಯಕ್ರಮ

Upayuktha
0


ಮಂಗಳೂರು: ಕೆನರಾ ಕಾಲೇಜು (ಸ್ವಾಯತ್ತ), ಮಂಗಳೂರು ಇದರ ಆಂತರಿಕ ಗುಣಮಟ್ಟ ಖಾತರಿ ಘಟಕ ಹಾಗೂ ಮಹಿಳಾ ಸಬಲೀಕರಣ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ– 2026 ಕಾರ್ಯಕ್ರಮವು ಕೆನರಾ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು.


ಕೆನರಾ ಆಡಳಿತ ಮಂಡಳಿಯ ಸದಸ್ಯೆ ಅಶ್ವಿನಿ ಕಾಮತ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, "ಇದು ಕೇವಲ ಮಹಿಳಾ ದಿನಾಚರಣೆ ಕಾರ್ಯಕ್ರಮವಲ್ಲ; ಮಹಿಳೆಯರ ಸಾಮರ್ಥ್ಯ, ಸಫಲತೆ ಮತ್ತು ಸಾಧನೆಯ ಅನಾವರಣ. ಇಂದು ಮಹಿಳೆ ಶಿಕ್ಷಣ, ಉದ್ಯೋಗ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿ ಸಾಧನೆ ಮಾಡಿದ್ದಾಳೆ. ಬಾಹ್ಯಾಕಾಶ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮ ಅಮೋಘ ಸಾಧನೆಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಮಹಿಳೆಯರು ತಮ್ಮ ಅವಕಾಶಗಳನ್ನು ತಾವೇ ಸೃಷ್ಟಿಸಿಕೊಂಡು, ಸಣ್ಣ ಉದ್ಯಮಗಳಿಂದ ಹಿಡಿದು ಬೃಹತ್ ಉದ್ದಿಮೆಗಳವರೆಗೆ ತಮ್ಮ ಸಾಧನೆಯ ಪಥದಲ್ಲಿ ಮುನ್ನಡೆಯುತ್ತಿರುವುದು ಸಂತಸದ ವಿಷಯ. ಇಂದಿನ ಮಹಿಳೆ ಬೇರೆಯವರನ್ನು ಅವಲಂಬಿಸದೆ ತನ್ನ ಹೊಸ ಹಾದಿಯನ್ನು ತಾನೇ ಹುಡುಕಿಕೊಂಡು ಮುನ್ನಡೆಯುತ್ತಿರುವುದು ಸಮಾಜದ ಬೆಳವಣಿಗೆಯ ಸಂಕೇತವಾಗಿದೆ" ಎಂದು ಅಭಿಪ್ರಾಯಪಟ್ಟರು.


ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಕ್ಲಬ್ ಮಂಗಳೂರು ಮೆಟ್ರೋ ಇದರ ಅಧ್ಯಕ್ಷೆ ಶ್ರೀಮತಿ ಸುರೇಖಾ ಇವರು ಮಾತನಾಡುತ್ತಾ, "ತಾನು ವಿದ್ಯಾಭ್ಯಾಸ ಮಾಡಿದ್ದ ಶಿಕ್ಷಣ ಸಂಸ್ಥೆಯಲ್ಲೇ ಮತ್ತೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಹೆಮ್ಮೆಯ ಸಂಗತಿ. ಈ ಶಿಕ್ಷಣ ಸಂಸ್ಥೆಯೊಂದಿಗೆ ತನ್ನ ಅನೇಕ ನೆನಪುಗಳ ಸಂಭ್ರಮ ಜೋಡಿಸಿಕೊಂಡಿದ್ದು, ಇಂದು ತಾನು ಸಾಧಿಸಿರುವ ಸ್ಥಾನಮಾನಕ್ಕೆ ಈ ವಿದ್ಯಾಸಂಸ್ಥೆಯೇ ಕಾರಣ "ಎಂದು ಅವರು ಕೃತಜ್ಞತೆಯಿಂದ ಸ್ಮರಿಸಿದರು. ಮಹಿಳಾ ಸಬಲೀಕರಣವು ಹೆಣ್ಣುಮಕ್ಕಳ ಬಾಲ್ಯದಿಂದಲೇ ಆರಂಭವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕೆನರಾ ಕಾಲೇಜಿನ ಸಂಚಾಲಕ ಸಿ.ಎ. ಎಂ. ಜಗನ್ನಾಥ್ ಕಾಮತ್ ಮಾತನಾಡುತ್ತಾ, "ಇದು ಕೇವಲ ಮಹಿಳಾ ಸಬಲೀಕರಣದ ಕಾರ್ಯಕ್ರಮವಲ್ಲ; ಯಾಕೆಂದರೆ ಮಹಿಳೆ ಈಗಾಗಲೇ ಸಬಲಗೊಂಡಿದ್ದಾಳೆ. ಇಂದಿನ ಪ್ರಪಂಚವೇ ಮಹಿಳೆಯ ಸುತ್ತ ಆವರಿಸಿಕೊಂಡಿದೆ. ಯಾವ ಕ್ಷೇತ್ರವನ್ನೇ ನೋಡಿದರೂ ಮಹಿಳೆಯರು ತಮ್ಮ ಸಾಮರ್ಥ್ಯದಿಂದ ಅವಕಾಶಗಳನ್ನು ಪಡೆದು ಸಾಧನೆ ಮಾಡುತ್ತಿದ್ದಾರೆ" ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಸಾಧನೆಗೈಯುತ್ತಿರುವ ಮಹಿಳೆಯರಿಗೆ ಶುಭಾಶಯಗಳನ್ನು ಕೋರಿದರು.


ಈ ಕಾರ್ಯಕ್ರಮದ ಅಂಗವಾಗಿ ಮಹಿಳೆಯರ ಸ್ವ ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬಿತ್ವವನ್ನು ಉತ್ತೇಜಿಸುವ ಉದ್ದೇಶದಿಂದ 'ಮಹಿಳೆಯರ ಸಬಲೀಕರಣ-ವ್ಯವಹಾರದ ಶಕ್ತಿ' ಎಂಬ ಧ್ಯೇಯದೊಂದಿಗೆ 'ಮಹಿಳಾ ಮಾರ್ಕೆಟ್' ವಿನೂತನ ಮಾರುಕಟ್ಟೆಯನ್ನು ನಿರ್ಮಿಸಲಾಗಿತ್ತು.  ಈ ಮಾರ್ಕೆಟ್‌ನಲ್ಲಿ 34 ಸ್ಟಾಲ್‌ಗಳ ಮೂಲಕ ಮಹಿಳಾ ಉದ್ಯಮಿಗಳು ಆರಂಭಿಸಿದ ವಿವಿಧ ಉದ್ಯಮಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಮಾರ್ಕೆಟ್‌ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿತು.


ಈ ಸಂದರ್ಭದಲ್ಲಿ ಕಾಲೇಜಿನ ವ್ಯವಸ್ಥಾಪಕರಾದ ಶ್ರೀ ಶಿವಾನಂದ ಶೆಣೈ, ಕಾಲೇಜಿನ ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್, ರೋಟರಿ ಕ್ಲಬ್ ಮಂಗಳೂರು ಮೆಟ್ರೋ ಸದಸ್ಯೆ ರಜನಿ ಭಟ್, ಕಾಲೇಜಿನ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ ದಿವ್ಯ ರೈ, ಕಾಲೇಜಿನ ಪ್ರಾಧ್ಯಾಪಕರು, ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ. ಸವಿತಾ ವಂದಿಸಿದರು. ಉಪನ್ಯಾಸಕಿ ಶ್ರೀಮತಿ ಶ್ವೇತಾ ಪೈ  ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top