ಕಥೆ: ಸಿಂಹ ರಾಶಿ

Upayuktha
0


ವಳಿಗೆ ಮದುವೆಯ ಪ್ರಾಯ, ಬಂದ ಸಂಬಂಧ ಯಾವುದೂ ಸರಿ ಹೊಂದುತ್ತಿರಲಿಲ್ಲ. ಕೊನೆಗೂ ಒಬ್ಬ ಸಿಕ್ಕಿದ ಎನ್ನುವಷ್ಟರಲ್ಲಿ ತಿಳಿಯಿತು ಅವನು ಸಿಂಹ ರಾಶಿ ಎಂದು. 


ಇಪ್ಪತ್ತು ವರ್ಷದ ಹಿಂದೆ ಅವಳಿಗೆ ಐದು ವರ್ಷ ವಯಸ್ಸು. ಅವಳಿಗೆ ಪಕ್ಕದ ಮನೆಯ ಗೆಳೆಯ ಗೆಳತಿಯರೊಂದಿಗೆ ಆಡುವುದೊಂದೇ ಧ್ಯೇಯ. ಅವಳ ಗೆಳತಿ ಒಬ್ಬಳು ಒಂದು ದಿನ ಮನೆಗೆ ಬಾ ಎಂದು ಕರೆದೊಯ್ದಳು. ಮೊದಲ ಬಾರಿಗೆ ಚಿಕ್ಕ ಮಗು ಇನ್ನೊಬ್ಬರ ಮನೆಗೆ ಹೋಗಿತ್ತು. ಅಲ್ಲಿ ಗೆಳತಿಯ ಅಮ್ಮ ಇದ್ದಳು. ಇಬ್ಬರೂ ಆಡುತ್ತಿದ್ದಂತೆ ಅಪರಾಹ್ನ ಎರಡೂವರೆ, ಮನೆಯ ಬಾಗಿಲ ಸದ್ದು ಆಯಿತು. 


ಇಬ್ಬರೂ ಚಿಕ್ಕ ಮಕ್ಕಳು ಬೆಡ್ ರೂಮ್ ನಿಂದ ಹಾಲ್ ಗೆ ಬಂದರು. ಬಾಗಿಲು ಎರಡು ಮೂರು ಸಲ ಸದ್ದಾಗಲು ನಿದ್ದೆ ಮಾಡಿದ್ದ ಇವಳ ಗೆಳತಿಯ ಅಮ್ಮ ಎದ್ದು ಬಂದು ಬಾಗಿಲು ತೆಗೆದರು. ಇವಳು ಮತ್ತು ಗೆಳತಿ ಆಟದಲ್ಲಿ ತಲ್ಲೀನರಾಗಿ ಇದ್ದರು.


ಛಟ್ಟೀರ್ ಸದ್ದು ಕೇಳಲು ಇಬ್ಬರೂ ಮಕ್ಕಳು ತಲೆಯೆತ್ತಿ ನೋಡಿದರು. ಬಂದ ಆಸಾಮಿ ಇವಳ ಗೆಳತಿಯ ಅಮ್ಮನಿಗೆ ಕಪಾಳಕ್ಕೆ ಒಂದೇಟು ಕೊಟ್ಟಿದ್ದರು. 

ಬೆಳಗ್ಗಿನಿಂದ ಮನೆಯ ಎಲ್ಲಾ ಕೆಲಸಗಳನ್ನು ಮಾಡಿ ಬಸವಳಿದು ಬೆಂಡಾಗಿ ಅಲ್ಲೆ ಕಣ್ಣು ಮಂಪರಿನಿಂದ ನಿದ್ದೆ ಹಿಡಿದ ಆ ತಾಯಿಗೆ ಬಂದ ಗಂಡ ಆದವನು ಬಾಗಿಲು ತೆರೆಯಲು ಯಾಕಿಷ್ಟು ತಡ ಎಂದು ಕೊಟ್ಟ ಪೆಟ್ಟು ಅದು.


ಮಕ್ಕಳಿಬ್ಬರು ಅವಾಕ್ಕಾಗಿ ನಿಂತರು. ಒಳಗೆ ಬಂದ ಗಂಡ “ಲೇ ಊಟಕ್ಕಿನ್ನೂ ಆಗಿಲ್ವಾ, ಎಲ್ಲಿ ಸಾಯೋಕೆ ಹೋಗಿದ್ದೆ ಬೇಗ ಕೊಡು” ಎನ್ನಲು ಗಡ ಗಡ ನಡುಗಿದ ಆ ತಾಯಿ ಬಟ್ಟಲಿಟ್ಟಳು, ನೀರು ಗ್ಲಾಸ್ ಗೆ ಹಾಕುವಷ್ಟರಲ್ಲಿ ಮಂಪರಿದ ಕಣ್ಣಿಗೆ ಸ್ವಲ್ಪ ಎಡವಟ್ಟಾಗಿ ನೀರು ಗಂಡ ನ ಮೇಲೆ ಸ್ವಲ್ಪ ಬಿತ್ತು. ಅಷ್ಟು ಸಾಕಿತ್ತು ಆ ಮೂರ್ಖನಿಗೆ, ಎದುರಿದ್ದ ತಟ್ಟೆಯನ್ನು ತೆಗೆದು ಅವಳ ಮಂಡೆಗೆ ಬಡಿದ. ಬಡಿದ ರಭಸಕ್ಕೆ ಕೆಳಕ್ಕೆ ಬಿದ್ದಳು ಅತ್ತಳು, ಗೋಗರೆದಳು, ಅಂಗಲಾಚಿ ಬೇಡಿದಳು, ಗಂಡ ಎಂದವ ರಾಕ್ಷಸ, ಬೆಲ್ಟ್ ತೆಗೆದು ನಾಯಿಗೆ ಹೊಡೆದಂತೆ ರಪ ರಪ ರಪನೇ ಹೊಡೆದ. ಆ ತಾಯಿಯ ಮೈ ಪೂರ್ತಿ ಬೆಲ್ಟ್‌ನಲ್ಲಿ ಹೊಡೆದ ಕೆಂಪು ಕಲೆಗಳು. ತಲೆಯಲ್ಲೊಂದು ಬೊಬ್ಬೆ (ಬಟ್ಟಲಿನಲ್ಲಿ ಬಡಿದದ್ದು). ಗಂಡ ಅವಳನ್ನು ಕುತ್ತಿಗೆ ಹಿಡಿದು ಎಬ್ಬಿಸಿದ “ನೀನೊಂದ್ ಅನಿಷ್ಟ, ನಿನ್ನಿಂದ ನಾನಿವತ್ತು ಈ ರೀತಿ ಆಗಲು ಕಾರಣ, ನಿನ್ನ ಮತ್ತು ನಿನ್ನ ಮಗಳನ್ನು ಕರೆದುಕೊಂಡು ಹೋಗಿ ಸಾಯಿ” ಎಂದು ಅರಚಿದ, ಅಷ್ಟು ಸಾಲದೆಂಬಂತೆ ಅವಳನ್ನು ಬಲವಾಗಿ ದೂಡಿ ಬಚ್ಚಲು ಮನೆಗೆ ಎಳೆದೊಯ್ದು ಅಲ್ಲಿದ್ದ ಬಿಸಿಯಾದ ನೀರನ್ನು ದೊಳ್ಳನೆ ಅವಳ ಮೇಲೆ ಸುರಿದ. ಹೊಡೆತದ ನೋವು, ಅದರ ಮೇಲೆ ಬಿಸಿಯಾದ ನೀರು ಸಹಿಸಲಾಗದೆ ಕಿಟಾರೆಂದು ಕಿರುಚಿದಳು ಆ ತಾಯಿ.


ಗಂಡ ಎದ್ದುಕೊಂಡು ಧಡಲ್ಲನೇ ಬಾಗಿಲು ಹಾಕಿ ಹೊರಟು ಹೋದ. ಇವಳಿಗಿದೆಲ್ಲಾ ಸಂಪೂರ್ಣ ಹೊಸತು. ಅದೊಂದು ದೊಡ್ಡ ಶಾಕ್. ಅವಳ ಗೆಳತಿ ಹೇಳಿದಳು “ಇದೆಲ್ಲ ಮಾಮೂಲಿ ನಮ್ಮನೇಲಿ, ಇದು ಕಮ್ಮಿನೇ ಕೆಲವೊಮ್ಮೆ ಇನ್ನೂ ಜಾಸ್ತಿ ಇರುತ್ತೆ, ನಮ್ಮಜ್ಜಿ ಹೇಳ್ತಿದ್ಲು, ಅಪ್ಪಂದು ಸಿಂಹ ರಾಶಿ ಅಂತೆ, ಅದಕ್ಕೆ ಈ ರೀತಿ ಸಿಂಹದಂತೆ ಇರುವುದಂತೆ” ಎಂದು.

.

ಅಂದು ತಲೆಗೆ ಹೊಕ್ಕ ವಿಷಯ ಅವಳಿಗೊಂದು ಆಘಾತದಂತೆ ಉಳಿದ ಇಪ್ಪತ್ತು ವರ್ಷ ಜೀವನ ಕಾಡುತ್ತಿತ್ತು. ಇಂದು ಒಬ್ಬ ಸಿಂಹ ರಾಶಿ ಸಂಬಂಧ ಬರುವಲ್ಲಿವರೆಗೆ ಸುಪ್ತವಾಗಿ ಇದ್ದ ಗಾಯ ಮತ್ತೆ ಹಸಿಯಾಯಿತು.


ಹುಡುಗ, ಹುಡುಗಿ ನೋಡಲು ಬಂದ, ಮನೆಯವರಿಗೆ ಒಪ್ಪಿಗೆ ಆಯಿತು, ಹುಡುಗ ಹುಡುಗಿ ಮಾತನಾಡಿ ಎಂದು ಪಕ್ಕಕ್ಕೆ ಕಳುಹಿಸಿ ಕೊಟ್ಟರು, ಇವಳು ಭಯದಿಂದ ಬೆವತು ಹೋದಳು, ಅವನು ಕೈ ಅದುಮಿದ, ಏನಾಯಿತು ಎಂದು ಪ್ರೀತಿಯಿಂದ ಕೇಳಿದ, ಅವಳು ಸಂಪೂರ್ಣವಾಗಿ ಘಟನೆ ವಿವರಿಸಿದಳು, ಅವನು ಹಿತವಾಗಿ ಕೇಳಿದ. ಅವಳ ಮಾತು ಮುಗಿದ ನಂತರ ಕೈ ಹಿಡಿದುಕೊಂಡವನು ಸನಿಹಕ್ಕೆ ಎಳೆದು “ಸಿಂಹ ಯಾವತ್ತೂ ಸಿಂಹಿಣಿಯನ್ನು ರಾಣಿಯಂತೆ ನೋಡಿಕೊಳ್ಳುತ್ತದೆ, ನೀನು ಕಂಡ ಸಿಂಹ ನಿಜವಾದ ಸಿಂಹವೇ ಅಲ್ಲ” ಎಂದ. ಮುಗುಳ್ನಕ್ಕ ಅವಳ ನಗುವೇ “ಅಸ್ತು” ಎಂದಂತಿತ್ತು.


-ಸಚಿನ್ ಕುಳಮರ್ವ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top