ಮಂಗಳೂರು: ಎಸ್ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನ ರಿವರ್‌ಸೈಡ್ ಕ್ಯಾಂಪಸ್‌ನಲ್ಲಿ 25 ಮಾರ್ಚ್ 2026 ಬುಧವಾರದಂದು ಆಯೋಜಿಸಲಾದ ಅಂತರ ಕಾಲೇಜು ಮಟ್ಟದ ಮಹೋತ್ಸವ “ಸಂಗಮ 2ಕೆ26” ಸಮಾರೋಪ ಸಮಾರಂಭವು ಸಂಜೆ 4:00 ಗಂಟೆಗೆ ಭವ್ಯವಾಗಿ ನಡೆಯಿತು. ಈ ಮಹೋತ್ಸವವು “ಪ್ರತಿಭೆಗಳ ಸಂಗಮ– ನಿಮ್ಮ ಪ್ರತಿಭೆಯನ್ನು ಆಚರಿಸಿ” ಎಂಬ ಘೋಷವಾಕ್ಯದೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿ.ಎ. ಕಿರಣ್ ವಸಂತ್ ಅವರು ಮಾತನಾಡಿ, ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಹೇಳಿದರು. ಇಂತಹ ಅಂತರ ಕಾಲೇಜು ಮಟ್ಟದ ಮಹೋತ್ಸವಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಅವರಲ್ಲಿರುವ ಸೃಜನಶೀಲತೆ, ನಾಯಕತ್ವ ಗುಣ ಮತ್ತು ಸಂಘಟನೆ ಕೌಶಲ್ಯಗಳನ್ನು ಹೊರತರುತ್ತವೆ ಎಂದು ಹೇಳಿದರು. ಸೋಲು ಮತ್ತು ಗೆಲುವು ಜೀವನದ ಒಂದು ಭಾಗವಾಗಿದ್ದು, ಸೋಲಿನಿಂದ ಪಾಠ ಕಲಿದು ಮುಂದೆ ಸಾಗುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. “ವಿಕಸಿತ ಭಾರತ @ 2047” ಎಂಬ ಮಹತ್ತರ ಕನಸನ್ನು ನನಸು ಮಾಡಲು ಇಂದಿನ ಯುವಜನರು ಜ್ಞಾನ, ಕೌಶಲ್ಯ ಮತ್ತು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಯು.ಕೆ. ಖಾಲಿದ್ ಅವರು ಮಾತನಾಡಿ, ಎಸ್ ಸಿ ಎಸ್ ಸಂಸ್ಥೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ತಾಂತ್ರಿಕ ಮತ್ತು ನಿರ್ವಹಣಾ ಕೌಶಲ್ಯಗಳು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ತಿಳಿಸಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ತಂಡದ ಮನೋಭಾವ, ನಾಯಕತ್ವ ಗುಣ, ಸಮಯಪಾಲನೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತವೆ ಎಂದು ಹೇಳಿದರು. ಎಲ್ಲಾ ಕಾಲೇಜುಗಳಿಂದ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅವರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್ ಅವರು ಆಗಮಿಸಿದ ಅತಿಥಿಗಳು ಮತ್ತು ಗಣ್ಯ ವ್ಯಕ್ತಿಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ದೀಕ್ಷಿತ್ ಆರ್ ಅವರು ಕಾರ್ಯಕ್ರಮದ ವರದಿಯನ್ನು ವಾಚಿಸಿದರು ಮತ್ತು ಮಹೋತ್ಸವದ ಉದ್ದೇಶ, ವಿವಿಧ ಸ್ಪರ್ಧೆಗಳು ಮತ್ತು ಕಾರ್ಯಕ್ರಮದ ಯಶಸ್ಸಿನ ಕುರಿತು ವಿವರಿಸಿದರು.
ಈ ಮಹೋತ್ಸವದಲ್ಲಿ ವಿವಿಧ ಕಾಲೇಜುಗಳ ಅನೇಕ ವಿದ್ಯಾರ್ಥಿಗಳು ಭಾಗವಹಿಸಿ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ವಾಣಿಜ್ಯ, ನಿರ್ವಹಣಾ ಹಾಗೂ ಸಾಂಸ್ಕೃತಿಕ ವಿಭಾಗಗಳಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಎಲ್ಲಾ ಸ್ಪರ್ಧೆಗಳ ಒಟ್ಟು ಫಲಿತಾಂಶದಲ್ಲಿ ಮಿಲಾಗ್ರೀಸ್ ಕಾಲೇಜು ಮಂಗಳೂರು ತಂಡವು ಪ್ರಥಮ ಚಾಂಪಿಯನ್ ಸ್ಥಾನವನ್ನು ಪಡೆದುಕೊಂಡಿತು. ಎಸ್ ಡಿ ಎಂ ಕಾಲೇಜು ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ವಿಜೇತರಿಗೆ ಮುಖ್ಯ ಅತಿಥಿಗಳು ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಿದರು. ಅತಿಥಿಗಳಿಗೆ ಅಧ್ಯಕ್ಷರು ನೆನಪಿನ ಕಾಣಿಕೆಯನ್ನು ಕೊಟ್ಟು ಗೌರವಿಸಿದರು.
ಕಾರ್ಯಕ್ರಮದಲ್ಲಿ ಎಸ್ ಸಿ ಎಸ್ ರಿವರ್‌ಸೈಡ್ ಪ್ರಿ ಸ್ಕೂಲ್‌ನ ಪ್ರಾಂಶುಪಾಲರಾದ ವಿನಯ ಡಿಸೋಜ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದೀಪ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ಜಾಯ್ಲಿನ್ ಪಿಂಟೊ ಅವರು ಅತಿಥಿಗಳು ಮತ್ತು ಗಣ್ಯ ವ್ಯಕ್ತಿಗಳಿಗೆ ವಂದನಾರ್ಪಣೆಯನ್ನು ಸಲ್ಲಿಸಿದರು. ಸಾನ್ವಿ ದ್ವಿತೀಯ ಬಿ.ಎಸ್ಸಿ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಮತ್ತು ನಾಯಕತ್ವ ಗುಣಗಳನ್ನು ಬೆಳಗಿಸುವ ಮಹತ್ವದ ವೇದಿಕೆಯಾಗಿದ್ದು, ಎಲ್ಲರ ಮನಸ್ಸಿನಲ್ಲಿ ಸ್ಮರಣೀಯವಾಗಿ ಉಳಿಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

