ಮಲೇಷಿಯಾ ಪ್ರವಾಸ – ನಿಸರ್ಗ ಸೌಂದರ್ಯ ಮತ್ತು ನವೀನತೆಯ ಅದ್ಭುತ ಅನುಭವ

Upayuktha
0


ಚ್ಚಹಸಿರು ಪ್ರಕೃತಿ, ಸ್ವಚ್ಛತೆ, ಶಿಸ್ತಿನ ಜೀವನಶೈಲಿ ಹಾಗೂ ಆಧುನಿಕ ಅಭಿವೃದ್ಧಿಯ ಅದ್ಭುತ ಸಮನ್ವಯವನ್ನು ಕಂಡು ಮನಸ್ಸು ಮೋಡಿ ಮಾಡುವ ದೇಶವೇ ಮಲೇಷಿಯಾ. ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಈ ನಿಸರ್ಗ ರಮಣೀಯ ದೇಶ ಹಾಗೂ ಅದರ ರಾಜಧಾನಿ ಕೌಲಾಲಂಪೂರ ಪ್ರವಾಸಿಗರಿಗೆ ನಿಜಕ್ಕೂ ಮರೆಯಲಾರದ ಅನುಭವವನ್ನು ನೀಡುತ್ತದೆ.


ಸದಾಕಾಲ ಹಸಿರು ವಾತಾವರಣದಿಂದ ಕಂಗೊಳಿಸುವ ಈ ದೇಶದಲ್ಲಿ ಧೂಳು, ಹೊಗೆ ಅಥವಾ ಟ್ರಾಫಿಕ್ ಜಾಮ್ ಬಹಳ ವಿರಳ. ಕಸಕಡ್ಡಿ, ಪ್ಲಾಸ್ಟಿಕ್ ಹಾವಳಿ, ಬೀದಿನಾಯಿಗಳು ಅಥವಾ ಪಶು ಸಂಚಾರ ಕಂಡುಬರುವುದಿಲ್ಲ. ಇಕ್ಕೆಲಗಳಲ್ಲಿ ಮುಗಿಲೆತ್ತರಕ್ಕೆ ಬೆಳೆದ ಮರಗಳ ಸಾಲು, ಸ್ಪಟಿಕದಂತೆ ಹೊಳೆಯುವ ನುಣುಪಾದ ರಸ್ತೆಗಳು ಹಾಗೂ ಸುವ್ಯವಸ್ಥಿತ ನಗರ ವಿನ್ಯಾಸವು ಪ್ರವಾಸಿಗರಲ್ಲಿ ವಿಶೇಷ ಮೆಚ್ಚುಗೆಯನ್ನು ಮೂಡಿಸುತ್ತದೆ.


ಮಲೇಷಿಯಾ 13 ರಾಜ್ಯಗಳು ಮತ್ತು 3 ಫೆಡರಲ್ ಪ್ರಾಂತ್ಯಗಳನ್ನು ಒಳಗೊಂಡ ರಾಷ್ಟ್ರ. ಕೌಲಾಲಂಪೂರ ಸಮೀಪದಲ್ಲಿರುವ ವಿಶ್ವಪ್ರಸಿದ್ಧ ಬಾಟು ಕೇವ್ಸ್ ಮುರುಗನ್ ದೇವಾಲಯ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಸುಮಾರು 272 ವರ್ಣರಂಜಿತ ಮೆಟ್ಟಿಲುಗಳನ್ನು ಏರಿ ತಲುಪುವ ಈ ದೇವಾಲಯದ ಬಳಿ ಸುಮಾರು 140 ಅಡಿ ಎತ್ತರದ ಭವ್ಯ ಮುರುಗನ್ ವಿಗ್ರಹವು ಬಂಗಾರದ ಹೊಳಪಿನಿಂದ ಕಂಗೊಳಿಸುತ್ತಿದ್ದು ಭಕ್ತರನ್ನು ಸೆಳೆಯುತ್ತದೆ.


ಮಲೇಷಿಯಾದ ಪೆಟ್ರೋನಸ್ ಅವಳಿ ಗೋಪುರಗಳು, ರಾಜರ ಅರಮನೆ, ಪುತ್ರಜಯ ಆಡಳಿತಾತ್ಮಕ ಸಂಕೀರ್ಣ, ಜೆಂಟಿಂಗ್ ಹೈಲ್ಯಾಂಡ್‌ನ ಕೇಬಲ್ ಕಾರ್ ಪ್ರಯಾಣ ಹಾಗೂ ಮನರಂಜನಾ ಕೇಂದ್ರಗಳು ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುವಂತಿವೆ. ಅಲ್ಲಿನ ಚಾಕಲೇಟ್ ಕಾರ್ಖಾನೆಗಳಲ್ಲಿ ತಯಾರಾಗುವ ಎಳ್ಳು, ಕೊಬ್ಬರಿ, ಹನಿಮೂನ್ ಸೇರಿದಂತೆ ಹಲವು ವಿಧದ ಚಾಕಲೇಟ್‌ಗಳು ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗಿವೆ.


ನಮ್ಮ ತಂಡದಲ್ಲಿ ಹೆಚ್ಚಿನವರು ಆರೋಗ್ಯವಂತ ಹಿರಿಯ ನಾಗರಿಕರಾಗಿದ್ದರೂ ಈ ಪ್ರವಾಸ ಯಾವುದೇ ಪ್ರಯಾಸವಾಗದೆ ಸುಖಕರವಾಗಿ ನೆರವೇರಿತು. ಟಿಸಿಎಸ್ ಡ್ರೀಮ್ ಹಾಲಿಡೇಸ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸುರೇಶ್ ಎಸ್.ಎಂ. ಅವರ ಸಮರ್ಪಕ ಸಂಘಟನೆಯಿಂದ ಈ ಪ್ರವಾಸ ಸುಗಮವಾಗಿ ನಡೆದಿತು. ಎರಡು ನೂರಕ್ಕೂ ಅಧಿಕ ಚಲನಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದ ನಟಿ ಶ್ರೀಮತಿ ಭವ್ಯಾ ಸೇರಿದಂತೆ ಅನೇಕ ಗಣ್ಯರು ಈ ಪ್ರವಾಸದಲ್ಲಿ ಭಾಗವಹಿಸಿದ್ದರು.


ಮಲೇಷಿಯಾದ ಎಂಸಿಆರ್ ಸಭಾಂಗಣದಲ್ಲಿ ಪರಮಪೂಜ್ಯ ಸಾಣೆಹಳ್ಳಿ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ನಡೆದ ಬಸವತತ್ವ ಚಿಂತನ ಗೋಷ್ಠಿ ಈ ಪ್ರವಾಸಕ್ಕೆ ವಿಶೇಷ ಮೆರಗು ನೀಡಿತು. ವಲಸಿ ಕನ್ನಡಿಗರ ಸಹಕಾರದಿಂದ ಬಸವತತ್ವದ ಸಂದೇಶವನ್ನು ವಿದೇಶದಲ್ಲಿಯೂ ಹಂಚಿಕೊಳ್ಳುವ ಅವಕಾಶ ದೊರೆತದ್ದು ಗಮನಾರ್ಹ ಸಂಗತಿಯಾಯಿತು.


ಪ್ರವಾಸದುದ್ದಕ್ಕೂ ತಂಡದ ಸದಸ್ಯರಿಂದ ವಚನ ಗಾಯನ, ಏಕಪಾತ್ರಾಭಿನಯ, ಚುಟುಕುಗಳು, ಹಾಸ್ಯ ಚಟಾಕಿಗಳು, ನೃತ್ಯ ಹಾಗೂ ಪರಸ್ಪರ ಸಾಧನೆಗಳ ಪರಿಚಯ ಕಾರ್ಯಕ್ರಮಗಳು ಎಲ್ಲರಿಗೂ ಮನರಂಜನೆಯ ಜೊತೆಗೆ ಪ್ರೇರಣೆಯೂ ನೀಡಿದವು. ವಿವಿಧ ದೇಶಗಳ ಆಹಾರ ಪದ್ಧತಿಗಳನ್ನು ಪರಿಚಯಿಸುವ ಬಗೆಬಗೆಯ ತಿಂಡಿ-ತಿನಿಸುಗಳು ಹಾಗೂ ಪಾನೀಯಗಳು ಪ್ರವಾಸದ ರಸಾಸ್ವಾದವನ್ನು ಮತ್ತಷ್ಟು ಹೆಚ್ಚಿಸಿವೆ. ಆಕರ್ಷಕ ಶಾಪಿಂಗ್ ಮಾಲ್‌ಗಳು ಪ್ರವಾಸಿಗರನ್ನು ಆಯಸ್ಕಾಂತದಂತೆ ಸೆಳೆಯುತ್ತವೆ.


ಪುತ್ರಜಯಾ, ಬಾಟು ಕೇವ್ಸ್, ಪೆಟ್ರೋನಸ್ ಟ್ವಿನ್ ಟಾವರ್, ಕೌಲಾಲಂಪೂರ ಅಕ್ವೇರಿಯಂ, ಕೌಲಾಲಂಪೂರ ಟವರ್, ಚೈನಾ ಟೌನ್, ರಾಜರ ಅರಮನೆ ಮುಂತಾದ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮನದಾಳದಲ್ಲಿ ಅಚ್ಚೊತ್ತಿದಂತಾಗಿದೆ. ವಿಶಾಲ ಅಕ್ವೇರಿಯಂನಲ್ಲಿ ವಿವಿಧ ಸಮುದ್ರ ಜೀವಿಗಳನ್ನು ಸಮೀಪದಿಂದ ನೋಡುವ ಅನುಭವ ಪ್ರವಾಸಿಗರಿಗೆ ಅಚ್ಚರಿ ಮೂಡಿಸುತ್ತದೆ. ಸುಮಾರು 421 ಮೀಟರ್ ಎತ್ತರದ ಕೌಲಾಲಂಪೂರ ಟವರ್ ಒಳಗೆ ಸುತ್ತುತ್ತಲೇ ಇರುವ ರೆಸ್ಟೋರೆಂಟ್ ವ್ಯವಸ್ಥೆ ವಿಶೇಷ ಆಕರ್ಷಣೆಯಾಗಿದೆ.


ಮಲಕ್ಕ ಎಂಬ ಐತಿಹಾಸಿಕ ನಗರದಲ್ಲಿರುವ ಹಿಂದೂ ದೇವಾಲಯ, ಚೈನೀಸ್ ಮಂದಿರ ಹಾಗೂ ಕ್ಯಾಥೊಲಿಕ್ ಚರ್ಚ್ ಮುಂತಾದ ತಾಣಗಳು ಧರ್ಮಸೌಹಾರ್ದತೆಯ ಸಂಕೇತಗಳಾಗಿ ಕಾಣಿಸುತ್ತವೆ. ಸುಮಾರು 42,000 ಹಿಂದೂ ದೇವಾಲಯಗಳನ್ನು ಹೊಂದಿರುವ ಮಲೇಷಿಯಾ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಮಲಯ ಭಾಷೆ ಮುಖ್ಯವಾದರೂ ಇಂಗ್ಲಿಷ್ ಭಾಷೆಯ ಬಳಕೆ ವ್ಯಾಪಕವಾಗಿದೆ.


1957ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಕೆಲವೇ ದಶಕಗಳಲ್ಲಿ ಮಲೇಷಿಯಾ ಅಭಿವೃದ್ಧಿಯ ಪಥದಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿದೆ. ಸ್ವಚ್ಛತೆ, ಶಿಸ್ತು ಹಾಗೂ ದುಡಿಮೆಯ ಮನೋಭಾವದಿಂದ ಸಮೃದ್ಧ ರಾಷ್ಟ್ರವಾಗಿ ಬೆಳೆಯುತ್ತಿರುವ ಈ ದೇಶ ಪ್ರವಾಸಿಗರಿಗೆ ಪ್ರೇರಣೆಯೂ ನೀಡುತ್ತದೆ.


- ಪ್ರೊ. ಶಕುಂತಲಾ ಚನ್ನಪ್ಪ ಸಿಂಧೂರ

ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಗದಗ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top