ಮಂಗಳೂರು: “ಮನುಷ್ಯನ ನಡೆ, ನುಡಿ, ಗುಣ ಸರಿಯಿದ್ದಲ್ಲಿ ಜೀವನ ಚೆನ್ನಾಗಿರುತ್ತದೆ. ಹೃದಯದಲ್ಲಿ ಮೃದುತ್ವ, ಶಾಂತತ್ವ, ಕರುಣೆ ಹೊಂದಿರಬೇಕು. ಪರಸ್ಪರ ವಿಶ್ವಾಸ, ಪ್ರೀತಿ ಮತ್ತು ಗೌರವ ಇರುವ ಸಮಾದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ, ಸಮಸ್ಯೆ ಇರುವುದಿಲ್ಲ” ಎಂದರು.
ಚೊಕ್ಕಬೆಟ್ಟುವಿನ ಮೊಹಿಯುದ್ದೀನ್ ಜುಮಾ ಮಸ್ಜಿದ್‍ನ ಧರ್ಮಗುರುಗಳಾದ ಮೌಲಾನಾ ಯು.ಕೆ. ಅಬ್ದುಲ್ ಅಜೀಜ್ ದಾರಿಮಿ. ಸಂತ ಮದರ್ ತೆರೆಸಾ ವಿಚಾರ ವೇದಿಕೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಅವರು ಸಂದೇಶ ನೀಡಿದರು.
ದ್ವೇಷ, ಕೋಪ ಬರುವ ಸನ್ನಿವೇಶದಲ್ಲಿ ಪ್ರೀತಿ ಮೂಡುವಂತಾಗಬೇಕು. ನಮ್ಮವರ ಜೊತೆ ನಾವು ಪ್ರೀತಿಯನ್ನು ತೋರಬೇಕು. ಆಗ ಬೇರೆಯವರ ಜೊತೆಯೂ ಪ್ರೀತಿ ತೋರಿಸಲು ಸಾಧ್ಯವೆಂದವರು ಪ್ರತಿಪಾದಿಸಿದರು. ಸಂತ ಎಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದ ಆವರಣದಲ್ಲಿ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಹ ಕುಲಪತಿ ಫಾ. ಮೆಲ್ವಿನ್ ಡಿಕುನ್ಹಾ ಎಸ್.ಜೆ. ಮಾತನಾಡಿ, “ಮನುಷ್ಯನ ನಡೆ ಮತ್ತು ನುಡಿ ಹೇಗಿದೆಯೆಂಬುದು ಮುಖ್ಯ. ಕೇವಲ ತೋರ್ಪಡಿಕೆಯ ನಡವಳಿಕೆ ವ್ಯರ್ಥ. ಸಮಾಜದಲ್ಲಿ ಬಂಧುತ್ವ, ಶಾಂತಿ ಬೆಳೆಯಲಿ” ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, “ಕಳೆದ 8 ವರ್ಷಗಳಿಂದ ಜಿಲ್ಲೆಯಲ್ಲಿ ಸೌಹಾರ್ದತೆ, ಸಹಬಾಳ್ವೆಯ ಅಗತ್ಯವನ್ನು ಮನಗಂಡು ಅದಕ್ಕಾಗಿ ವೇದಿಕೆ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ವೈವಿಧ್ಯತೆಗಳನ್ನು ಸಂಭ್ರಮಿಸಬೇಕು. ಎಲ್ಲರೊಡನೆ ಪ್ರೀತಿ ಹಂಚುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ” ಎಂದು ವೇದಿಕೆಯ ಧ್ಯೇಯೋದ್ದೇಶಗಳ ಬಗ್ಗೆ ಬೆಳಕು ಚೆಲ್ಲಿದರು.
ಖ್ಯಾತ ಸಾಹಿತಿ, ನಿವೃತ್ತ ಶಿಕ್ಷಕಿ ಬಿ.ಎಂ. ರೋಹಿಣಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಬೆಥನಿ ಮುಖ್ಯಸ್ಥೆ ಸಿಸ್ಟರ್ ರೋಸ್ ಮೇರಿ, ಬಾವುಟಗುಡ್ಡ ಝೀನತ್ ಭಕ್ಷ್ ಜುಮಾ ಮಸ್ಜಿದ್‍ನ ಉಪಾಧ್ಯಕ್ಷ ಕೆ. ಅಶ್ರಫ್ ಮಾತನಾಡಿ ಸೌಹಾರ್ದತೆಯ ಅಗತ್ಯ ಮತ್ತು ಮಹತ್ವವನ್ನು ಸಾರಿದರು.
ವೇದಿಕೆಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿ, ಪ್ರೀತಿಯನ್ನು ಹಂಚುವ ವೇದಿಕೆಯ ಉದ್ದೇಶಗಳನ್ನು ವಿವರಿಸಿದರು. ಸಾಮರಸ್ಯ ಮಂಗಳೂರು ಮುಖ್ಯಸ್ಥೆ ಮಂಜುಳಾ ನಾಯಕ್ ವೇದಿಕೆಯಲ್ಲಿದ್ದರು. ರೆಹಮಾನ್ ಖಾನ್ ಕುಂಜತ್ತಬೈಲ್ ನಿರೂಪಿಸಿ, ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

