ತನ್ನದೇ ಕಾಯಿದೆಗಳನ್ನು ಉಲ್ಲಂಘಿಸುತ್ತಿರುವ ಸರಕಾರದ ಯೋಜನೆಗಳು: ಪರಿಸರ ತಜ್ಞೆ ನಿರ್ಮಲಾ ಗೌಡ

Upayuktha
0


ಉಡುಪಿ: “ಪರಿಸರ ಸೂಕ್ಮ ಪ್ರದೇಶವಾದ ಪಶ್ಚಿಮಘಟ್ಟಗಳು ಕೇವಲ ಕರ್ನಾಟಕ ಅಥವಾ ಭಾರತಕ್ಕೆ ಸೇರಿದಲ್ಲ, ಅದು ಪಾಕೃತಿಕವಾಗಿ ಇಡೀ ಪ್ರಪಂಚಕ್ಕೆ ಸೇರಿದ ಅಮೂಲ್ಯ ಸೊತ್ತು. ಅದರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ” ಎಂದು ಖ್ಯಾತ ಪರಿಸರ ತಜ್ಞೆ ನಿರ್ಮಲಾ ಗೌಡ ಹೇಳಿದರು.


ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ, ಉಡುಪಿ ಹಾಗೂ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ಪರಿಸರ ರಕ್ಷಣಾ ಕಾರ್ಯಾಗಾರದಲ್ಲಿ ದಿಕ್ಸೂಚಿ ಉಪನ್ಯಾಸ ನೀಡಿದರು.


ಅಮೂಲ್ಯ ಪ್ರಾಕೃತಿಕ ಸಂಪತ್ತು

ಉತ್ತರದ ಗುಜರಾತಿನ ತಾಪಿಯಿಂದ ದಕ್ಷಿಣದ ಕನ್ಯಾಕುಮಾರಿವರೆಗೆ ಹರಡಿರುವ ಪಶ್ಚಿಮ ಘಟ್ಟಗಳಲ್ಲಿ ಈಗಾಗಲೇ, 59ಕ್ಕೂ ಹೆಚ್ಚಿನ ಅಪರೂಪದ ಪ್ರಾಣಿ ಹಾಗೂ ಸಸ್ಯ ಪ್ರಭೇದಗಳು ವಿನಾಶದ ಅಂಚಿನಲ್ಲಿವೆ ಎಂದು ಈಗಾಗಲೇ ಘೋಷಿಸಲಾಗಿದೆ. ಅವುಗಳಲ್ಲಿ ಕಾಳಿಂಗ, ಪೆಂಗೋಲಿನ್‌, ಹುಲಿ ಮುಂತಾದವುಗಳು ಪ್ರಮುಖವಾಗಿವೆ. ಇಡೀ ಜಗತ್ತಿನಲ್ಲಿ ಸಿಂಗಳೀಕ (Lion tailed macaque)ಗಳು ಇನ್ನೂ ಉಳಿದಿವೆ ಎಂದಾದಲ್ಲಿ ಉತ್ತರಕನ್ನಡದ ಶರಾವತಿ ನದಿ ಪಾತ್ರದಲ್ಲಿ ಮಾತ್ರ. ಇವೆಲ್ಲವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.


1972ರಲ್ಲಿ ಜ್ಯಾರಿಗೆ ಬಂದಿರುವ ವನ್ಯಜೀವಿ ರಕ್ಷಣಾ ಕಾಯಿದೆಯ 29ನೇ ಕಲಂನಂತೆ ಈ ಪ್ರದೇಶದಲ್ಲಿ ಯಾವುದೇ ವನ್ಯ ಜೀವಿಧಾಮಗಳಲ್ಲಿ ಯಾವುದೇ ಮಾನವ ನಿರ್ಮಿತ ಕಟ್ಟಡ ರಚನಾ ಕಾರ್ಯನಡೆಯುವಂತಿಲ್ಲ. ಕೇವಲ ವನ್ಯ ಜೀವಿಗಳ ರಕ್ಷಣೆಗಾಗಿ ಅಗತ್ಯವಿರುವ ಯೋಜನೆಗಳನ್ನೂ ಮಾತ್ರ ಜ್ಯಾರಿಗೊಳಿಸಬಹುದಾಗಿದೆ ಎಂದು ತಿಳಿಸಿದರು.


ಬೃಹತ್‌ ಸ್ಥಾವರಗಳು ಅವಶ್ಯವೇ?

ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆಯ ಕಾಂಕ್ರೀಟ್‌ ಸ್ಥಾವರವು ಮೂರು ಫೂಟ್ಬಾಲ್‌ ಸ್ಟೇಡಿಯಂನಷ್ಟು ಉದ್ದವಾಗಿ, 18 ಮಳಿಗೆಯ ಕಟ್ಟಡದಷ್ಟು ಎತ್ತರವಾಗಿದೆ ಎಂದು ಸರಕಾರಕ್ಕೆ ಸಲ್ಲಿಸಿರುವ ಯೋಜನಾ ವರದಿಯಲ್ಲೇ ಸೂಚಿಸಲಾಗಿದೆ. ಈ ಯೋಜನೆಗಾಗಿ ಬೇಕಾಗಿರುವ ಟ್ರಾನ್ಸ್‌ಫಾರ್ಮರ್ 20 ಮಳಿಗೆಯ ಕಟ್ಟಡದಷ್ಟು ಎತ್ತರ ಎಂದು ಹೇಳಲಾಗಿದೆ. ಜಗತ್ತಿನ 22 ಪರಿಸರ ಸೂಕ್ಮಪ್ರದೇಶದಲ್ಲಿ ಒಂದೆನಿಸಿರುವ ಈ ತಾಣದಲ್ಲಿ ಇವೆಲ್ಲ ಅವಶ್ಯವೇ ಎಂದು ಪ್ರಶ್ನಿಸಿದರು.


ನೆಲೆ ಕಳೆದುಕೊಳ್ಳಲಿರುವ ನಾಗರೀಕರು

ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಉಪಯೋಗಿಸಲಾಗುವ ಭಾರಿ ಸ್ಫೋಟಕಗಳನ್ನು ಇಲ್ಲಿ ಬಳಸಲು ಯೋಜಿಸಲಾಗಿದ್ದು ಇದರಿಂದಾಗಿ ಮುಂದೆ ಪಶ್ಚಿಮಘಟ್ಟದಾದ್ಯಂತ ಭೂಕುಸಿತದಂತಹ ಅನಾಹುತಗಳು ನಡೆಯಲಿವೆ. ನದಿ ಉಗಮದಲ್ಲಿರುವ ನೀರಿನ ಒಸರೆಗಳು ಮಾಯವಾಗಿ ನದಿಗಳೇ ಬತ್ತಿಹೋಗಲಿವೆ. ನದಿ ಪಾತ್ರದದಲ್ಲಿರುವ ನಾಗರೀಕರು ತಮ್ಮ ನೆಲೆಗಳನ್ನೆಲ್ಲಾ ಕಳೆದುಕೊಳ್ಳಲಿರುವ ಸ್ಥಿತಿ ಬಂದೊದಗಬಹುದು ಎಂದು ತಿಳಿಸಿದರು.


ಕೇಂದ್ರ ಸರಕಾರ ಇನ್ನೂ ಅನುಮತಿ ನೀಡಿಲ್ಲ.

ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆಯ ವಿರುದ್ಧ ಈಗಾಗಲೇ ಹೂಡಿರುವ ದಾವೆಯಲ್ಲಿ ಕರ್ನಾಟಕದ ಉಚ್ಚನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದ್ದಾರೆ. ಕೇಂದ್ರ ಸರಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ ಕಾಮತ್‌ ಈ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಸಿಕ್ಕಿಲ್ಲ, ಯೋಜನೆ ಬಗೆಗಿ ಆತಂಕಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.


ಭೌಗೋಳಿಕ ರಚನೆಗಳು ನದಿಪಾತ್ರಗಳ ವಿವರಣೆ ಹಾಗೂ ಮಾನವ ಚಟುವಟಿಕೆಗಳಿಂದಾಗಿ ಉಂಟಾಗುತ್ತಿರುವ ಪರಿಸರ ಪರಿಣಾಮಗಳನ್ನು ಕಾಣಲು ಯಾವುದೇ ಸಂಶೋಧನೆಯ ಅಗತ್ಯವಿಲ್ಲ. ಸರಕಾರಿ ಪ್ರಾಯೋಜಿತ 12ಕ್ಕೂ ಹೆಚ್ಚಿನ ಜಾಲತಾಣಗಳಲ್ಲಿ ಈ ವಿವರಗಳು ಸಿಗುತ್ತವೆ. ಅವುಗಳನ್ನು ಗುರುತಿಸಿ ನ್ಯಾಯಾಲಯಗಳ ಗಮನಕ್ಕೆ ತರುವ ಕೆಲಸಗಳನ್ನು ನ್ಯಾಯಾವಾದಿಗಳು ಮಾಡಬೇಕಾಗಿದೆ ಎಂದರು.


ಶರಾವರಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದವರಲ್ಲಿ ಒಬ್ಬರಾದ ಡಾ. ರವೀಂದ್ರನಾಥ್‌ ಶಾನುಭಾಗರು ಪ್ರಾಸ್ತವಿಕವಾಗಿ ಮಾತನಾಡಿ, ತಾವೇ ರೂಪಿಸಿರುವ ಪರಿಸರ ರಕ್ಷಣಾ ಕಾಯಿದೆಗಳನ್ನು ಅವೈಜ್ಞಾನಿಕ ಯೋಜನೆಗಳ ಮೂಲಕ ಸರಕಾರಿ ಸಂಸ್ಥೆಗಳೇ ಉಲ್ಲಂಘಿಸುವುದು ವಿಪರ್ಯಾಸ ಎಂದರು.


ಕಾಲೇಜಿನ ಪ್ರಾಂಶುಪಾಲೆಯಾಗಿರುವ ಪ್ರೊ. ಸುರೇಖಾ ರವರು ಅಧ್ಯಕ್ಷತೆ ವಹಿಸಿದ್ದರು ಹಾಗೂ ಕಾಲೇಜಿನ ವಿದ್ಯಾರ್ಥಿನಿ ಕು. ಕವಿತಾ ಅತಿಥಿಗಳನ್ನು ಪರಿಚಯಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top