ನಿವೃತ್ತ ಶಿಕ್ಷಕ ರಾಜಗೋಪಾಲ ಜೋಶಿ ಎಸ್ ಅವರಿಗೆ ಬೀಳ್ಕೊಡುಗೆ, ಸನ್ಮಾನ

Upayuktha
0


ಅಡ್ಯನಡ್ಕ: ಇಲ್ಲಿನ ಜನತಾ ಪ್ರೌಢಶಾಲೆಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ವಯೋ ನಿವೃತ್ತರಾದ ಹಿರಿಯ ಶಿಕ್ಷಕ ರಾಜಗೋಪಾಲ ಜೋಶಿ ಎಸ್ ಅವರಿಗೆ ಅಡ್ಯನಡ್ಕ ಎಜುಕೇಶನಲ್ ಸೊಸೈಟಿ(ರಿ), ಜನತಾ ವಿದ್ಯಾಸಂಸ್ಥೆಗಳು ಅಡ್ಯನಡ್ಕ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಮಾರ್ಚ್ 7ರಂದು ವಾರಣಾಶಿ ಕೃಷ್ಣ ಸಭಾಭವನದಲ್ಲಿ ನಡೆಯಿತು.


ರಾಜಗೋಪಾಲ ಜೋಶಿ ಎಸ್. ಹಾಗೂ ಉಷಾ ಆರ್ ಜೋಶಿ ದಂಪತಿಯನ್ನು ಫಲಪುಷ್ಪ, ಸ್ಮರಣಿಕೆ ನೀಡಿ, ಹಾರಾರ್ಪಣೆಗೈದು ಸನ್ಮಾನಿಸಲಾಯಿತು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ ಸಾಯ ಅವರು ಅಧ್ಯಕ್ಷತೆ ವಹಿಸಿದ್ದರು. ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ, ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿ ರಮೇಶ ಎಂ. ಬಾಯಾರು, ಕೋಶಾಧಿಕಾರಿ ಕೇಶವ ಭಟ್ ಚವರ್ಕಾಡು ಶುಭ ಹಾರೈಸಿದರು. ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್ ಪ್ರಸ್ತಾವನೆಗೈದರು. ಆಡಳಿತ ಮಂಡಳಿಯ ಸದಸ್ಯರಾದ ಜನಾರ್ದನ ಭಟ್ ಅಮೈ, ಜನತಾ ಪ್ರೌಢಶಾಲೆಯ ವಿಜ್ಞಾನ ಸಹಶಿಕ್ಷಕಿ ಕುಸುಮಾವತಿ, ಸಹಶಿಕ್ಷಕಿ ಹಾಗೂ ಹಳೆ ವಿದ್ಯಾರ್ಥಿನಿ ಭವ್ಯಾ ಆರ್. ಶೆಟ್ಟಿ ಮಾತನಾಡಿದರು. ವಿದ್ಯಾರ್ಥಿಗಳಾದ ತೃಪ್ತಿ, ಮೊಹಮ್ಮದ್ ಸಿರಾಜ್, ಸೌಮ್ಯ, ಮೊಹಮ್ಮದ್ ಅನಾಸ್, ರಾಕೇಶ, ಅನನ್ಯ, ಅಜ್ಮೀನಾ ಅನಿಸಿಕೆ ವ್ಯಕ್ತಪಡಿಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜಗೋಪಾಲ ಜೋಶಿ ಎಸ್. ಅವರು ವೃತ್ತಿ ಬದುಕಿನ ವಿವಿಧ ಮಜಲುಗಳನ್ನು ನೆನಪಿಸಿಕೊಂಡರು. ಜನತಾ ಪ್ರೌಢಶಾಲೆಯ ಗಣಿತ ಸಹಶಿಕ್ಷಕಿ ಗೀತಾ ಎಚ್. ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ವಿದ್ಯಾರ್ಥಿಗಳು ಕಿರುಕಾಣಿಕೆಗಳನ್ನು ಸಮರ್ಪಿಸಿ ನಿವೃತ್ತ ಗುರುಗಳಿಗೆ ನಮನ ಸಲ್ಲಿಸಿದರು.


ಇದೇ ಸಂದರ್ಭದಲ್ಲಿ, ಜನತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಶಾಲೆಯ ಖ್ಯಾತಿಯನ್ನು ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಉನ್ನತ ಮಟ್ಟಕ್ಕೇರಿಸುವಲ್ಲಿ ಶ್ರಮಿಸಿದ ಸಹಶಿಕ್ಷಕಿ ಕು. ಚೈತ್ರಾ ಅಮೈ ಅವರನ್ನು ಆಡಳಿತ ಮಂಡಳಿ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು. ಪ್ರೌಢಶಾಲಾ ಉಸ್ತುವಾರಿ ಗೋವಿಂದರಾಯ ಶೆಣೈ ಅಡ್ಯನಡ್ಕ, ಹರಿಕೃಷ್ಣ ವಿ.ಎಂ., ಆಡಳಿತ ಮಂಡಳಿ ಸದಸ್ಯರಾದ ಕೆ. ಸದಾಶಿವ ಹೊಳ್ಳ, ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ, ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ ಎಂ. ಮತ್ತಿತರರು ಉಪಸ್ಥಿತರಿದ್ದರು.


ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕನ್ನಡ ಸಹಶಿಕ್ಷಕರಾದ ಶಿವಕುಮಾರ್ ಸಾಯ ಕಾರ್ಯಕ್ರಮ ನಿರೂಪಿಸಿ, ವಿಜ್ಞಾನ ಸಹಶಿಕ್ಷಕಿ ಕುಸುಮಾವತಿ ವಂದಿಸಿದರು. ಆಡಳಿತ ಮಂಡಳಿಯ ಸದಸ್ಯರು, ಬೋಧಕ- ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಜರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top